ಸೌದಿ: ಬೃಹತ್ ಕ್ರೀಡಾ ಅಕಾಡೆಮಿ ನಿರ್ಮಾಣಕ್ಕೆ ಚಾಲನೆ
ರಿಯಾದ್ (ಸೌದಿ ಅರೇಬಿಯ), ಜೂ. 16: ಪ್ರತಿಭಾವಂತ ಯುವಜನರನ್ನು ಪತ್ತೆಹಚ್ಚಿ ಅವರಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಸ್ಥಾಪಿಸಲಾಗಿರುವ ಕ್ರೀಡಾ ಅಕಾಡೆಮಿಗೆ ಸೌದಿ ಅರೇಬಿಯ ಸರಕಾರ ಮಂಗಳವಾರ ಅನುಮೋದನೆ ನೀಡಿದೆ.
ಮಹದ್ ಕ್ರೀಡಾ ಅಕಾಡೆಮಿಯು ಮುಂದಿನ ದಶಕದಲ್ಲಿ ಜಗತ್ತಿನ ಅತಿ ದೊಡ್ಡ ಕ್ರೀಡಾ ಅಕಾಡೆಮಿಯಾಗಿ ಬೆಳೆಯುವುದೆಂದು ನಿರೀಕ್ಷಿಸಲಾಗಿದೆ. ಈ ಅವಧಿಯಲ್ಲಿ ಸೌದಿ ಕ್ರೀಡಾಳುಗಳ ನೂತನ ಸುವರ್ಣಯುಗವೊಂದನ್ನು ಸೃಷ್ಟಿಸುವ ಗುರಿಯನ್ನು ಅದು ಹೊಂದಿದೆ.
ಅಕಾಡೆಮಿಗೆ 2020ರ ಜುಲೈಯಲ್ಲಿ ಚಾಲನೆ ನೀಡಲಾಗಿದ್ದು ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ, ಇಟಲಿಯ ರಾಷ್ಟ್ರೀಯ ಫುಟ್ಬಾಲ್ ತಂಡದ ಕೋಚ್ ರಾಬರ್ಟೊ ಮನ್ಸಿನಿ ಮತ್ತು ಖ್ಯಾತ ಫುಟ್ಬಾಲ್ ಮ್ಯಾನೇಜರ್ ಜೋಸ್ ಮೋರಿನೊ ಸೇರಿದಂತೆ ಹಲವಾರು ಅಂತರ್ರಾಷ್ಟ್ರೀಯ ಕ್ರೀಡಾ ಅಧಿಕಾರಿಗಳು ಮತ್ತು ಕ್ರೀಡಾಳುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘‘ಈ ಅಕಾಡೆಮಿಯು ಸೌದಿ ಅರೇಬಿಯದ ಪಾಲಿಗೆ ಕನಸಿನ ಹೆಜ್ಜೆಯಾಗಿದೆ. ಈಗ ಸೌದಿ ಅರೇಬಿಯ ಹೆಮ್ಮೆ ಪಡುವಂಥ ಜಾಗತಿಕ ದರ್ಜೆಯ ಸೌದಿ ಪ್ರತಿಭೆಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ದೇಶ ಗಮನ ಹರಿಸಿದೆ’’ ಎಂದು ಸೌದಿ ಅರೇಬಿಯದ ರಾಜಕುಮಾರ ಹಾಗೂ ಕ್ರೀಡಾ ಸಚಿವ ಅಬ್ದುಲಝೀಝ್ ಬಿನ್ ತುರ್ಕಿ ಅಲ್-ಫೈಸಲ್ ಹೇಳಿದ್ದಾರೆ.