ಮರಾಠರಿಗೆ ಮೀಸಲಾತಿ ಆಗ್ರಹಿಸಿ ಚಳವಳಿಗೆ ಕೊಲ್ಹಾಪುರದಲ್ಲಿ ಚಾಲನೆ
ಮುಂಬೈ, ಜೂ.17: ಮರಾಠಾ ಸಮುದಾಯದವರಿಗೆ ಮೀಸಲಾತಿಗೆ ಆಗ್ರಹಿಸಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಚಳವಳಿಗೆ ಕೊಲ್ಹಾಪುರದಲ್ಲಿ ಬುಧವಾರ ಚಾಲನೆ ನೀಡಲಾಗಿದೆ. ಬಿಜೆಪಿಯ ರಾಜ್ಯಸಭೆ ಸದಸ್ಯ ಸಂಭಾಜಿರಾಜೆ ನೇತೃತ್ವದಲ್ಲಿ ಛತ್ರಪತಿ ಸಾಹು ಮಹಾರಾಜ್ ಸ್ಮಾರಕದಲ್ಲಿ ಮೌನ ಧರಣಿ ಮುಷ್ಕರದೊಂದಿಗೆ ಚಳವಳಿಗೆ ಸಾಂಕೇತಿಕ ಚಾಲನೆ ದೊರೆತಿದೆ ಎಂದು ಮೂಲಗಳು ಹೇಳಿವೆ.
ಚಳವಳಿಗೆ ಚಾಲನೆ ದೊರೆತೊಡನೆ ಕೆಲವು ಜನಪ್ರತಿನಿಧಿಗಳು ಭಾಷಣ ಮಾಡಿದರು. ಈ ಸಂದರ್ಭ ಅಲ್ಲಿ ಸೇರಿದವರು ಘೋಷಣೆ ಕೂಗಲಾರಂಭಿಸಿದಾಗ ಅವರನ್ನು ತಡೆದ ಸಂಭಾಜಿರಾಜೆ, ದಯವಿಟ್ಟು ಮೌನವಾಗಿ ಪ್ರತಿಭಟಿಸಿ ಎಂದು ವಿನಂತಿಸಿದರು. ಪಕ್ಷಬೇಧ ಮರೆತು ರಾಜ್ಯದ ಹಲವು ಶಾಸಕರು, ಮುಖಂಡರು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯದ ಹಲವು ಮರಾಠಾ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ‘ವಂಚಿತ್ ಬಹುಜನ ಅಘಾಡಿ(ವಿಬಿಎ)’ ಮುಖಂಡ ಪ್ರಕಾಶ್ ಅಂಬೇಡ್ಕರ್, ಕಾಂಗ್ರೆಸ್ ಮುಖಂಡ ಹಾಗೂ ಸಚಿವ ಸತೇಜ್ ಪಾಟೀಲ್, ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಮುಂತಾದ ಮುಖಂಡರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
ಕೆಲ ವಾರಗಳ ಹಿಂದೆ ಕೋವಿಡ್ ಸೋಂಕಿಗೆ ಒಳಗಾಗಿದ್ದ ಶಿವಸೇನೆಯ ಸಂಸದ ಧೈರ್ಯಶೀಲ್ ಮಾನೆ ಔಷಧದ ಬಾಟಲ್ ಸಹಿತ ಪಾಲ್ಗೊಂಡಿದ್ದರು. ಸೋಂಕಿನಿಂದ ಚೇತರಿಸಿಕೊಂಡಿದ್ದರೂ ಕೆಲ ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದರು. ಆದರೆ ಚಳವಳಿಗೆ ಬೆಂಬಲ ಸೂಚಿಸಲು ಮನೆಯಿಂದ ಹೊರಗೆ ಬಂದಿದ್ದೇನೆ ಎಂದು ಮಾನೆ ಹೇಳಿದರು. ದ್ವಿತೀಯ ಅವಧಿಗೆ ರಾಜ್ಯಸಭಾ ಸದಸ್ಯತ್ವ ಬಯಸಿರುವುದರಿಂದ ಸಂಭಾಜಿರಾಜೆ ಚಳವಳಿಯ ನೇತೃತ್ವ ವಹಿಸಿದ್ದಾರೆಯೇ? ಎಂದು ಕಳೆದವಾರ ಪ್ರಶ್ನಿಸಿದ್ದ ಚಂದ್ರಕಾಂತ್ ಪಾಟೀಲ್, ಬುಧವಾರ ಚಳವಳಿಗೆ ಸಂಪೂರ್ಣ ಬೆಂಬಲ ಸೂಚಿಸುವ ಪತ್ರವನ್ನು ಸಂಭಾಜಿರಾಜೆಗೆ ಹಸ್ತಾಂತರಿಸಿದರು.