ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸೌದಿ ಆಡಳಿತದ ಉಪಕ್ರಮ:ಹಜ್ ಯಾತ್ರೆಯ ವೇಳೆ ʼಝಂಝಂʼ ಜಲ ವಿತರಣೆಗೆ ರೋಬೋಟ್ ಗಳ ನಿಯೋಜನೆ
ರಿಯಾದ್, ಜೂ.17: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿಯ ಹಜ್ ಯಾತ್ರೆಯನ್ನು ಸುಗಮವಾಗಿ ನೆರವೇರಿಸಲು ಪಣತೊಟ್ಟಿರುವ ಸೌದಿ ಅರೆಬಿಯಾ ಆಡಳಿತ, ಝಂಝಂ ಜಲದ ವಿತರಣೆಗೆ ರೋಬೊಟ್ ಗಳನ್ನು ನಿಯೋಜಿಸುವುದಾಗಿ ಘೋಷಿಸಿದೆ. ಇಸ್ಲಾಮ್ ನ ಪ್ರಮುಖ ಐದು ಕರ್ತವ್ಯಗಳಲ್ಲಿ ಹಜ್ ಯಾತ್ರೆಯೂ ಒಂದಾಗಿದೆ.
2019ರಲ್ಲಿ ವಿಶ್ವದಾದ್ಯಂತದ ಸುಮಾರು 2.5 ಮಿಲಿಯನ್ ಮುಸ್ಲಿಮರು ಹಜ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸತತ ದ್ವಿತೀಯ ವರ್ಷವೂ, ಲಸಿಕೆ ಪಡೆದ ಸೌದಿ ಅರೆಬಿಯಾದ ಪ್ರಜೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೊರೋನ ವೈರಸ್ ಸೋಂಕಿನ ವಿರುದ್ಧದ ಲಸಿಕೆ ಪಡೆದಿರುವ 60,000 ಪ್ರಜೆಗಳಿಗೆ ಮಾತ್ರ ಜುಲೈಯಲ್ಲಿ ನಡೆಯಲಿರುವ ಹಜ್ ಯಾತ್ರೆಗೆ ಅವಕಾಶ ನೀಡಲಾಗಿದೆ ಎಂದು ಸೌದಿ ಅರೆಬಿಯಾದ ಆಡಳಿತ ಶನಿವಾರ ಘೋಷಿಸಿದೆ.
ಕೊರೋನ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ, ಝಂಝಂ ಜಲ ವಿತರಣೆಗೆ ರವಿವಾರ ಸಣ್ಣ ಕಪ್ಪು-ಬಿಳಿ ರೊಬೊಟ್ಗಳನ್ನು ನಿಯೋಜಿಸಲಾಗಿದೆ. ಸುರಕ್ಷಿತ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸುವ ಪ್ರತೀ ರೊಬೊಟ್ ನಲ್ಲೂ 3 ಶೆಲ್ಫ್ ಗಳಲ್ಲಿ ನೀರಿನ ಬಾಟಲಿ ಇರಿಸಲಾಗಿದೆ. ಮನುಷ್ಯರ ಸಂಪರ್ಕವಿಲ್ಲದೆ ವೈಯಕ್ತಿಕ ಸೇವೆ ಒದಗಿಸುವ ಉದ್ದೇಶದಿಂದ ಇವುಗಳನ್ನು ನಿಯೋಜಿಸಲಾಗಿದೆ ಎಂದು ಬದರ್ ಅಲ್-ಲುಕ್ಮಾನಿ ಹೇಳಿದ್ದಾರೆ.
ಲುಕ್ಮಾನಿ ಮೆಕ್ಕಾದ ಪವಿತ್ರ ಮಸೀದಿಯ ಬಾವಿಯಿಂದ (ಝಂಝಂ) ಹೊರಹೊಮ್ಮುವ ಪವಿತ್ರ ನೀರಿನ ಬುಗ್ಗೆಯಿಂದ ಜಲ ಸಂಗ್ರಹಿಸುವ ಕೆಲಸ ನಿರ್ವಹಿಸುತ್ತಿದ್ದಾರೆ. ಹಜ್ ಯಾತ್ರೆಯಲ್ಲಿ ಸಂದರ್ಶಕರಿಗೆ ಮತ್ತು ಯಾತ್ರಿಗಳಿಗೆ ನೆರವಾಗಲು ಸುಮಾರು 20 ರೊಬೊಟ್ ಗಳನ್ನು ನಿಯೋಜಿಸಲಾಗಿದೆ. ಅಗತ್ಯಬಿದ್ದರೆ ಇನ್ನಷ್ಟು ರೊಬೊಟ್ಗಳನ್ನು ನಿಯೋಜಿಸಲಾಗುವುದು ಎಂದವರು ಹೇಳಿದ್ದಾರೆ.
ಝಂಝಂ ಬುಗ್ಗೆಯಿಂದ ಒಸರುವ ಜಲವನ್ನು ಕುಡಿಯಲು ಶತಮಾನಗಳಿಂದಲೂ ಯಾತ್ರಿಗಳು ಒಟ್ಟು ಸೇರುತ್ತಾರೆ. ಝಂಝಂನ ಲಕ್ಷಾಂತರ ಬಾಟಲಿಗಳನ್ನು ಸಾಮಾನ್ಯವಾಗಿ ಪ್ರತೀ ವರ್ಷ ಯಾತ್ರಿಗಳಿಗೆ ಹಂಚಲಾಗುತ್ತದೆ.