ಭಾರತ-ದುಬೈ ವಿಮಾನ ಪ್ರಯಾಣ ಟಿಕೆಟ್ ದರದಲ್ಲಿ ಭಾರೀ ಏರಿಕೆ
ದುಬೈ, ಜೂ.20: ಭಾರತದಿಂದ ಬರುವ ವಿಮಾನ ಪ್ರಯಾಣದ ಮೇಲಿನ ನಿರ್ಬಂಧವನ್ನು ದುಬೈ ಶನಿವಾರ ಸಡಿಲಿಸಿದ ಬಳಿಕ ದುಬೈಗೆ ತೆರಳುವ ವಿಮಾನಗಳ ಟಿಕೆಟ್ ಬಗ್ಗೆ ಮಾಹಿತಿ ಕೋರಿ ಪ್ರಯಾಣಿಕರಿಂದ ಹೆಚ್ಚಿನ ಕರೆಗಳು ಬರುತ್ತಿವೆ. ಆದರೆ ಕೆಲವು ಮಂದಿ ಮಾತ್ರ ಟಿಕೆಟ್ ಬುಕ್ ಮಾಡಿದ್ದಾರೆ. ಟಿಕೆಟ್ ದರದಲ್ಲೂ ಭಾರೀ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಭಾರತದ ಕೆಲವು ನಗರದಿಂದ ದುಬೈಗೆ ತೆರಳುವ (ಒನ್ ವೇ) ಟಿಕೆಟ್ ದರ ಸುಮಾರು 1,400 ದಿರ್ಹಮ್ ಗೆ ಏರಿಕೆಯಾಗಿದೆ. ಆಸಕ್ತ ಪ್ರಯಾಣಿಕರು ಟಿಕೆಟ್ ಬಗ್ಗೆ ವಿಚಾರಿಸುತ್ತಿದ್ದಾರೆ. ಆದರೆ ಪ್ರಯಾಣಕ್ಕೆ ಸಂಬಂಧಿಸಿದ ಕಾನೂನು ವಿಧಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ಟಿಕೆಟ್ ಬುಕ್ ಮಾಡಲು ಹಿಂಜರಿಯುತ್ತಿದ್ದಾರೆ ಎಂದು ‘ಸ್ಮಾರ್ಟ್ ಟ್ರಾವೆಲ್ಸ್’ನ ಆಡಳಿತ ನಿರ್ದೇಶಕ ಅಫಿ ಅಹ್ಮದ್ ಹೇಳಿದ್ದಾರೆ.
ತಮ್ಮೊಂದಿಗೆ ಬರುವ ಮಕ್ಕಳೂ ಲಸಿಕೆ ಪಡೆದಿರಬೇಕೇ ಎಂಬ ಬಗ್ಗೆ ಹಲವರು ವಿಚಾರಿಸುತ್ತಿದ್ದಾರೆ. ಜೊತೆಗೆ, ಪ್ರಯಾಣಕ್ಕೂ ಮುನ್ನ ಜಿಡಿಆರ್ಎಫ್ಎ ಮತ್ತು ಐಸಿಎ ಅನುಮೋದನೆ ಪಡೆಯಬೇಕೇ , ಒಂದು ಡೋಸ್ ಲಸಿಕೆ ಪಡೆದರೆ ಸಾಕಾಗುತ್ತದೆಯೇ ಎಂಬ ಬಗ್ಗೆಯೂ ವಿಚಾರಿಸಲಾಗುತ್ತಿದೆ. ಯುಎಇ ಅನುಮೋದಿಸಿದ ಲಸಿಕೆಯ ಪಟ್ಟಿಯನ್ನೂ ಕೆಲವರು ವಿಚಾರಿಸುತ್ತಿದ್ದಾರೆ. ಕೆಲವರು 6 ತಿಂಗಳಿಗೂ ಹೆಚ್ಚು ಸಮಯದಿಂದ ಭಾರತದಲ್ಲಿದ್ದಾರೆ. ಅವರ ವೀಸಾದ ಅವಧಿ ಅಂತ್ಯವಾಗಿದ್ದರೂ ಪ್ರಯಾಣಿಸಬಹುದೇ ಎಂದೂ ಕೆಲವರು ವಿಚಾರಿಸುತ್ತಿದ್ದಾರೆ ಎಂದು ಅಹ್ಮದ್ ಹೇಳಿದ್ದಾರೆ.