ಪ್ಲಾಂಕ್ಟನ್‌ಗಳು ಇಲ್ಲವಾದರೆ...?

Update: 2021-06-26 19:30 GMT

ಭೂಮಿಯ ಬಹುಭಾಗ ನೀರಿನಿಂದ ಆವೃತ್ತವಾಗಿದ್ದು, ಈ ನೀರು ಅಸಂಖ್ಯಾತ ಜೀವಿಗಳಿಗೆ ಆಸರೆಯಾಗಿದೆ. ಭೂಮಿಯನ್ನು ಆವರಿಸಿರುವ ಮುಕ್ಕಾಲು ಭಾಗ ನೀರು ಸಾಗರಗಳಲ್ಲಿದೆ. ಏಕಕೋಶೀಯ ಜೀವಿಗಳಿಂದ ಬೃಹದಾಕಾರದ ತಿಮಿಂಗಿಲಗಳವರೆಗಿನ ಜೀವಿಗಳು ಸಾಗರಗಳಲ್ಲಿವೆ. ಎಲ್ಲಾ ಸಾಗರ ಜೀವಿಗಳಿಗೆ ಪರೋಕ್ಷ ಅನ್ನದಾತರು ಎಂದರೆ ಪ್ಲಾಂಕ್ಟನ್(ಪ್ಲಾವಕ)ಗಳು. 10,000ಕ್ಕೂ ಹೆಚ್ಚು ಪ್ರಭೇದದ ಸಸ್ಯಪ್ಲಾವಕಗಳು ಹಾಗೂ ಅಷ್ಟೇ ಸಂಖ್ಯೆಯ ಪ್ರಾಣಿಪ್ಲಾವಕ ಪ್ರಭೇದಗಳಿವೆ. ಹೆಚ್ಚಿನ ಜನರು ಈ ಸಣ್ಣ ಜೀವಿಗಳನ್ನು ನೋಡಿರಲಿಕ್ಕಿಲ್ಲ. ಏಕೆಂದರೆ ಗಾತ್ರದಲ್ಲಿ ಇವು ಚಿಕ್ಕವು. ಅವು ಮಾನವರ ಕೂದಲಿನ ವ್ಯಾಸಕ್ಕಿಂತಲೂ ಚಿಕ್ಕದಾಗಿರುತ್ತವೆ. ಇಷ್ಟು ಚಿಕ್ಕ ಗಾತ್ರದ ಪ್ಲಾಂಕ್ಟನ್‌ಗಳು ಇದ್ದಕ್ಕಿದ್ದಂತೆ ಸಾಗರಗಳಿಂದ ಕಣ್ಮರೆಯಾದರೆ ಏನಾಗುತ್ತೆ? ಗಾತ್ರದಲ್ಲಿ ಚಿಕ್ಕದಾಗಿರುವ ಕಾರಣ ಇವು ಕಣ್ಮರೆಯಾದರೆ ಏನೂ ಆಗುವುದಿಲ್ಲ ಎಂಬುದು ನಿಮ್ಮ ಅನಿಸಿಕೆಯಾಗಿದ್ದರೆ ಅದು ತಪ್ಪು. ಪ್ಲಾಂಕ್ಟನ್‌ಗಳು ಜೀವಿಗಳಿಗೆ ಹೇಗೆ ಉಪಯುಕ್ತ? ಅವು ಇಲ್ಲದಿದ್ದರೆ ಏನಾಗುತ್ತದೆ? ಎಂಬುದನ್ನು ನಾವಿಂದು ತಿಳಿಯುವ ಪ್ರಯತ್ನ ಮಾಡೋಣ.

 ಪ್ಲಾಂಕ್ಟನ್‌ಗಳು ಸಾಗರ ಜೀವಿಗಳ ಆಹಾರ ಸರಪಳಿಯ ಒಂದು ಭಾಗವಾಗಿವೆ. ಆಹಾರ ಸರಪಳಿಯಲ್ಲಿ ಇವು ಕಳಚಿದರೆ ಉಳಿದ ಜೀವಿಗಳು ಆಹಾರ ದೊರೆಯದೆ ಸಾಯುತ್ತವೆ. ಆಗ ಇಡೀ ಜೀವ ಸಂಕುಲ ಕ್ರಮೇಣವಾಗಿ ನಾಶವಾಗುತ್ತದೆ. ಬೇರೆ ಬೇರೆ ಕಾರಣಗಳಿಗೆ 1950ರಿಂದ ಇಲ್ಲಿನವರೆಗೆ ಶೇಕಡಾ 30ರಷ್ಟು ಪ್ಲಾಂಕ್ಟನ್‌ಗಳು ನಾಶಹೊಂದಿವೆ. ಇದರಿಂದ ಸಮುದ್ರ ಆಹಾರ ಸರಪಳಿಯಲ್ಲಿ ದೊಡ್ಡ ಏರುಪೇರುಗಳು ಆಗುತ್ತಿವೆ. ಪ್ಲಾಂಕ್ಟನ್‌ಗಳ ಅಳಿವು ಕೇವಲ ಸಮುದ್ರ ಜೀವಿಗಳಿಗೆ ಅಪಾಯ ತರುವುದಿಲ್ಲ. ಭೂವಾಸಿಗಳಿಗೂ ಅದರ ಸಮಸ್ಯೆ ತಪ್ಪಿದ್ದಲ್ಲ. ನಮ್ಮ ದೈನಂದಿನ ಆಹಾರಕ್ಕಾಗಿ ಹಾಗೂ ತಾಜಾ ಗಾಳಿಗೆ ಪ್ಲಾಂಕ್ಟನ್‌ಗಳು ಹೆಚ್ಚು ಉಪಯುಕ್ತವಾಗಿವೆ. ಇವುಗಳೇ ಇಲ್ಲದಿದ್ದರೆ ಜೀವನ ಹೇಗೆ? ಹಾಗಾದರೆ ನಮ್ಮ ಜೀವನದಲ್ಲಿ ಪ್ಲಾಂಕ್ಟನ್‌ಗಳು ಏಕೆ ಮುಖ್ಯ? ಅವುಗಳು ಹೇಗೆ ಉಪಯುಕ್ತ? ಎಂಬುದರ ಕುರಿತು ಒಂದಿಷ್ಟು ತಿಳಿದುಕೊಳ್ಳೋಣ. ಸಾಗರ ಜೀವಿಗಳಾದ ಪ್ಲಾಂಕ್ಟನ್‌ಗಳು ನೀರಿನ ಮೇಲ್ಪದರದ 400ಮೀ. ವರೆಗೆ ತೇಲುತ್ತಿರುತ್ತವೆ. ಇವು ಅಲೆಮಾರಿ ಜೀವಿಗಳಾಗಿದ್ದು ಸಸ್ಯಪ್ಲಾವಕ (ಫೈಟೋಪ್ಲ್ಯಾಂಕ್ಟನ್) ಮತ್ತು ಪ್ರಾಣಿಪ್ಲಾವಕಗಳಾಗಿವೆ. ಸಸ್ಯಪ್ಲಾವಕಗಳನ್ನು ಸಮುದ್ರದ ಹುಲ್ಲು ಎಂದು ಕರೆಯಲಾಗುತ್ತದೆ. ಇವು ನೀರಿನಲ್ಲಿರುವ ಕಾರ್ಬನ್ ಡೈ ಆಕ್ಸೈಡ್ ಉಪಯೋಗಿಸಿಕೊಂಡು ದ್ಯುತಿ ಸಂಶ್ಲೇಷಣೆ ಕ್ರಿಯೆಯ ಮೂಲಕ ಆಹಾರ ತಯಾರಿಸುತ್ತವೆ. ಹಾಗಾಗಿ ಇವುಗಳನ್ನು ಸಮುದ್ರ ಆಹಾರ ಸರಪಳಿಯ ಪ್ರಾಥಮಿಕ ಉತ್ಪಾದಕಗಳು ಎಂದು ಗುರುತಿಸಲಾಗಿದೆ.

ಸಮುದ್ರದ ಬಹುತೇಕ ಪರಭಕ್ಷಕಗಳಿಗೆ ಪ್ಲ್ಯಾಂಕ್ಟನ್‌ಗಳು ಪ್ರಾಥಮಿಕ ಆಹಾರದ ಮೂಲವಾಗಿವೆ. ಪ್ರಾಣಿಪ್ಲಾವಕಗಳಿಗೆ ಸಸ್ಯಪ್ಲಾವಕ, ಮೀನುಗಳಿಗೆ ಪ್ರಾಣಿಪ್ಲಾವಕ, ತಿಮಿಂಗಿಲಗಳಿಗೆ ಮೀನು, ಹೀಗೆ ಆಹಾರ ಸರಪಳಿಯಲ್ಲಿ ಪ್ಲಾವಕಗಳು ಮಹತ್ವದ ಕೊಂಡಿಯಾಗಿವೆ. ಶಾರ್ಕ್ ಪ್ರತಿದಿನ ಒಂದು ಟನ್ ಆಹಾರ ಸೇವಿಸುತ್ತದೆ. ಅದರ ಪ್ರತಿ ಟನ್ ಆಹಾರದಲ್ಲಿ ಪರೋಕ್ಷವಾಗಿ 1,000 ಟನ್ ಸಸ್ಯಪ್ಲಾವಕಗಳು ಇರಬೇಕಾಗುತ್ತದೆ. ಒಂದು ಶಾರ್ಕ್‌ಗೆ ಇಷ್ಟು ಪ್ರಮಾಣದ ಸಸ್ಯಪ್ಲಾವಕಗಳು ಬಳಕೆಯಾದರೆ ಸಮುದ್ರದ ಲಕ್ಷಾಂತರ ಶಾರ್ಕ್‌ಗಳಿಗೆ ಎಷ್ಟು ಪ್ರಮಾಣದ ಸಸ್ಯಪ್ಲಾವಕಗಳು ಬೇಕಾಗಬಹುದು?. ಅತ್ಯಧಿಕ ಬೆಳಕು ಮತ್ತು ಸಮೃದ್ಧಿಯಾದ ಪೋಷಕ ದ್ರವ್ಯಗಳಿರುವ ಸ್ಥಳಗಳಲ್ಲಿ ಒಂದು ದಿನದ ಅವಧಿಯಲ್ಲಿ ಶೇ.300ರಷ್ಟು ಸಸ್ಯಪ್ಲಾವಕಗಳು ವೃದ್ಧಿಯಾಗುತ್ತವೆ. ಸಮುದ್ರದ ಪರಭಕ್ಷಕಗಳಿಗೆ ಪ್ರಾಥಮಿಕ ಆಹಾರವೇ ಇಲ್ಲವಾದರೆ ದೊಡ್ಡ ಜೀವಿಗಳಿಗೂ ತಿನ್ನಲು ಏನೂ ಇರುವುದಿಲ್ಲ. ಆದ್ದರಿಂದ ಮೀನು, ಡಾಲ್ಫಿನ್, ಶಾರ್ಕ್, ತಿಮಿಂಗಿಲಗಳಂತಹ ಪ್ರಾಣಿಗಳು ಕೂಡಲೇ ನಾಶವಾಗುತ್ತವೆ. ಈ ವಿನಾಶಕಾರಿ ಆಹಾರದ ಸರಪಳಿಯ ಕೊಂಡಿ ಕಳಚಿ ಇಡೀ ಸಮುದ್ರ ಜೀವಿಗಳಿಗೆ ಆಹಾರ ಇಲ್ಲದಂತಾಗಿ ಸಾವು ಉಂಟಾಗುತ್ತದೆ. ಇದು ಕೇವಲ ಸಮುದ್ರ ಜೀವಿಗಳಿಗೆ ಕಂಟಕವಲ್ಲ. ಭೂವಾಸಿಗಳಾದ ನಮಗೂ ತೊಂದರೆಯನ್ನುಂಟು ಮಾಡುತ್ತದೆ.

ಮಾನವ ಜನಸಂಖ್ಯೆಯ ಶೇಕಡಾ 55-70ರಷ್ಟು ಜನರು ಕರಾವಳಿ ಪ್ರದೇಶದ 60 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ. ಇವರೆಲ್ಲರ ಮುಖ್ಯ ಆಹಾರ ಮೀನು. ಅವರು ವಾರ್ಷಿಕವಾಗಿ 80 ದಶಲಕ್ಷ ಟನ್ ಮೀನುಗಳನ್ನು ಆಹಾರಕ್ಕಾಗಿ ಬಳಸುತ್ತಾರೆ. ಮೀನುಗಳಿಗೆ ಪ್ಲಾಂಕ್ಟನ್‌ಗಳು ಆಹಾರ. ಪ್ಲಾವಕಗಳು ಇಲ್ಲದೇ ಹೋದರೆ ಇಷ್ಟು ಜನರಿಗೆ ಆಹಾರದ ಕೊರತೆ ಉಂಟಾಗುತ್ತದೆ. ಪ್ಲಾಂಕ್ಟನ್‌ಗಳು ಸಮುದ್ರದ ಮುಖ್ಯ ಆಹಾರ ಉತ್ಪಾದಕಗಳು. ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಅವು ಆಹಾರ ಉತ್ಪಾದನೆ ಮಾಡುತ್ತವೆ. ಈ ವೇಳೆ ನೀರಿನಲ್ಲಿ ಕರಗಿದ ಇಂಗಾಲದ ಡೈ ಆಕ್ಸೈಡ್ ಹೀರಿಕೊಂಡು ಆಮ್ಲಜನಕ ಬಿಡುಗಡೆ ಮಾಡುತ್ತವೆ. ಎಡಿನ್‌ಬರ್ಗ್ ಮೂಲದ ಸಮುದ್ರ ಜೀವಶಾಸ್ತ್ರಜ್ಞ ಡಾ.ಹೋವರ್ಡ್‌ ಡ್ರೈಡನ್ ಒಂದು ವಿಭಿನ್ನ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಅದೇನೆಂದರೆ ಮಹಿಳೆಯರು ಬಳಸುವ ಪ್ರಸಾಧನಗಳು(ಮೇಕಪ್ ಸಾಧನಗಳು) ಹಾಗೂ ಮನೆ ಶುಚಿಗೊಳಿಸಲು ಬಳಸುವ ಕೆಲ ರಾಸಾಯನಿಕಗಳಲ್ಲಿನ ವಿಷವು ಪ್ಲಾಂಕ್ಟನ್‌ಗಳಿಗೆ ಕಂಟಕವಾಗಿದ್ದು, ಕಳೆದ 40 ವರ್ಷಗಳಲ್ಲಿ ಅರ್ದದಷ್ಟು ಪ್ಲಾಂಕ್ಟನ್‌ಗಳು ನಾಶವಾಗಿವೆ ಎನ್ನುತ್ತಾರೆ. ನಾಸಾದ ಸಮೀಕ್ಷೆಯ ಪ್ರಕಾರ ಅವುಗಳ ಸಂಖ್ಯೆ ವರ್ಷಕ್ಕೆ ಶೇ.1ರಷ್ಟು ಕಡಿಮೆಯಾಗುತ್ತಿದೆ. ಇದು ಆತಂಕಕಾರಿ. ಏಕೆಂದರೆ ಭೂಮಿಯ ಮೇಲಿನ ಜೀವಿಗಳೂ ಸೇರಿದಂತೆ ಆಹಾರಕ್ಕಾಗಿ ಇವುಗಳನ್ನು ಅವಲಂಬಿಸಿವೆ ಮತ್ತು ಅವು ಶೇ.70ರಷ್ಟು ಆಮ್ಲಜನಕ ಉತ್ಪಾದನೆ ಮಾಡುತ್ತವೆ ಎಂದು ನಾಸಾ ಹೇಳಿದೆ. ಪ್ಲಾಂಕ್ಟನ್‌ಗಳ ಅವನತಿ ಕೈಗಾರಿಕಾ ಕ್ರಾಂತಿಯಿಂದ ಪ್ರಾರಂಭವಾಗಲಿಲ್ಲ. ಬದಲಾಗಿ 1940ರ ನಂತರ ರಾಸಾಯನಿಕ ಕ್ರಾಂತಿಯಿಂದ ಪ್ರಾರಂಭವಾಯಿತು. ಸಸ್ಯನಾಶಕಗಳು, ಕೀಟನಾಶಕಗಳು, ಕಳೆನಾಶಕಗಳು, ಪ್ರತಿಜೀವಕಗಳು, ಔಷಧಗಳು, ವಿಷಕಾರಿ ಸೌಂದರ್ಯ ವರ್ಧಕಗಳು, ಕೈಗಾರಿಕಾ ತ್ಯಾಜ್ಯ, ಪ್ಲಾಸ್ಟಿಕ್ ಮುಂತಾದ ಮಾನವ ನಿರ್ಮಿತ ವಿಷಕಾರಿ ರಾಸಾಯನಿಕಗಳು ಪ್ಲಾಂಕ್ಟನ್‌ಗಳ ಜೀವಕ್ಕೆ ಕುತ್ತು ತಂದವು. ಪ್ರತಿದಿನ ನಾವು ಉಪಯೋಗಿಸುವ ಸುಮಾರು 15,000 ವಿಭಿನ್ನ ರಾಸಾಯನಿಕಗಳು ಪ್ಲಾವಕಗಳ ಸಂತತಿಯನ್ನು ನಾಶ ಮಾಡುತ್ತಿವೆ.

1940ರಲ್ಲಿ ಸಾಗರಗಳ ಆಮ್ಲೀಯತೆ(ಪಿ.ಎಚ್.) ಮಟ್ಟ 8.24ರಷ್ಟಿತ್ತು. ಈಗ ಅದು 8.04ಕ್ಕೆ ಇಳಿದಿದೆ ಮತ್ತು ಮುಂದಿನ 25 ವರ್ಷಗಳಲ್ಲಿ ಅದು 7.95ಕ್ಕೆ ಇಳಿಯಲಿದೆ ಎಂದು ಸಾಗರ ಜೀವಶಾಸ್ತ್ರಜ್ಞರು ಹೇಳಿದ್ದಾರೆ. ಇದರಿಂದ ಸಮುದ್ರದ ನೀರು ಕ್ರಮೇಣವಾಗಿ ಹೆಚ್ಚು ಆಮ್ಲೀಯ ಮತ್ತು ವಿಷಕಾರಿಯಾಗುತ್ತದೆ. ಒಂದು ವೇಳೆ ಇದು 7.95ಕ್ಕೆ ಇಳಿದರೆ ಕಾರ್ಬೋನೇಟ್ ಜೀವರೂಪಗಳು ಕರಗಲು ಪ್ರಾರಂಭಿಸುತ್ತವೆ. ಒಂದು ವೇಳೆ ಪ್ಲಾಂಕ್ಟನ್‌ಗಳು ಕಣ್ಮರೆಯಾದರೆ ಸಮುದ್ರದ ಇಂಗಾಲದ ಡೈ ಆಕ್ಸೈಡ್‌ನ ಪ್ರಮಾಣ ಹೆಚ್ಚಾಗಿ, ಜಲಚರ ಜೀವಿಗಳು ಆಮ್ಲಜನಕದ ಕೊರತೆಯಿಂದ ಉಸಿರಾಡಲು ತೊಂದರೆ ಪಡುತ್ತವೆ. ಇವುಗಳನ್ನೇ ಆಹಾರವಾಗಿ ನಂಬಿದ್ದ ಮಾನವ ಸೇರಿದಂತೆ ಇತರೆ ಉನ್ನತ ವರ್ಗದ ಪ್ರಾಣಿಗಳೂ ಸಹ ಆಹಾರವಿಲ್ಲದೆ ಸಾಯಬಹುದು.

ಒಂದು ವೇಳೆ ನಾವು ವಿಷಕಾರಿ ರಾಸಾಯನಿಕಗಳ ಉತ್ಸರ್ಜನೆಯನ್ನು ನಿಲ್ಲಿಸಿದರೆ ಸಾಗರ ಪರಿಸರ ವ್ಯವಸ್ಥೆ ಚೇತರಿಸಿಕೊಳ್ಳಬಹುದು. ಪ್ಲಾಂಕ್ಟನ್ ಉತ್ಪಾದನೆಯು ಮತ್ತೆ ಹೆಚ್ಚುತ್ತದೆ ಮತ್ತು ಅವು ಹೆಚ್ಚಿನ ಇಂಗಾಲದ ಡೈ ಆಕ್ಸೈಡ್ ಬಳಸಲು ಪ್ರಾರಂಭಿಸುತ್ತವೆ. ವಾಸ್ತವವಾಗಿ ಪ್ಲಾಂಕ್ಟನ್‌ಗಳ ಆಮ್ಲಜನಕ ಉತ್ಪಾದನೆಯು ಮರಗಳಿಗಿಂತ ವೇಗವಾಗಿರುತ್ತದೆ. ಆದ್ದರಿಂದ ಒಮ್ಮೆ ಸಮುದ್ರ ಪರಿಸರ ವಿಷಕಾರಿ ವ್ಯವಸ್ಥೆಗೆ ಬ್ರೇಕ್ ಹಾಕಿದರೆ ಹವಾಮಾನ ಬದಲಾವಣೆಯನ್ನು ಹಿಮ್ಮುಖಗೊಳಿಸಬಹುದು. ಪ್ಲಾಂಕ್ಟನ್ ಉತ್ಪಾದನೆಯ ನಷ್ಟವನ್ನು ನಾವು ಕಳೆದುಕೊಳ್ಳದಿದ್ದರೆ ಸಾಗರಗಳು 24 ಸಾವಿರ ಟನ್ ಇಂಗಾಲದ ಡೈ ಆಕ್ಸೈಡ್ ಹೀರಿಕೊಳ್ಳುತ್ತಿದ್ದವು ಮತ್ತು ನಾವು ಈಗಿನಷ್ಟು ಹವಾಮಾನ ಬದಲಾವಣೆಯ ಭೀಕರತೆಯನ್ನು ಅನುಭವಿಸುತ್ತಿರಲಿಲ್ಲ.

ಗಾತ್ರದಲ್ಲಿ ಚಿಕ್ಕದಾದ ಈ ಜೀವಿಗಳು ಪರಿಸರ ಮತ್ತು ಹವಾಮಾನ ಬದಲಾವಣೆಯಲ್ಲಿ ಬಹುದೊಡ್ಡ ಪರಿಣಾಮ ಬೀರುತ್ತವೆ. ಇವು ಇಂಗಾಲದ ಡೈ ಆಕ್ಸೈಡನ್ನು ಬಳಸುವುದರಿಂದ ವಾತಾವರಣದಲ್ಲಿ ಅದರ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ಆ ಮೂಲಕ ಹಸಿರುಮನೆ ಅನಿಲ ಕಡಿಮೆಯಾಗಿ ವಾತಾವರಣ ಸ್ವಚ್ಛವಾಗಿರಲು ಸಹಾಯಕವಾಗುತ್ತದೆ. ಸರಿಯಾದ ಪ್ರಮಾಣದಲ್ಲಿ ಸೂರ್ಯನ ಬೆಳಕು ಪ್ಲಾಂಕ್ಟನ್‌ಗಳಿಗೆ ದೊರೆತರೆ ದಿನವೊಂದಕ್ಕೆ ಅವುಗಳ ಸಂಖ್ಯೆ ದ್ವಿಗುಣವಾಗುತ್ತದೆ. ಪ್ಲಾಂಕ್ಟನ್‌ಗಳ ಸಂಖ್ಯೆಯ ಆಧಾರದ ಮೇಲೆ ಹವಾಮಾನ ಮತ್ತು ಪರಿಸರದ ಪರಿಸ್ಥಿತಿಗಳನ್ನು ತಿಳಿಯಬಹುದು ಎಂದು ವಿಜ್ಞಾನಿಗಳು ಲೆಕ್ಕಾಚಾರ ಮಾಡಿದ್ದಾರೆ. ಹಾಗಾಗಿ ಪ್ಲಾಂಕ್ಟನ್‌ಗಳು ಹವಾಮಾನ ಮತ್ತು ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಸ್ಥಾನ ಪಡೆದಿವೆ.

Writer - ಆರ್.ಬಿ.ಗುರುಬಸವರಾಜ

contributor

Editor - ಆರ್.ಬಿ.ಗುರುಬಸವರಾಜ

contributor

Similar News