ವಿಶ್ವದಲ್ಲೇ ಅತ್ಯಂತ ಬೃಹತ್ ಪದಕ: ಅಬುದಾಭಿ ವಿದ್ಯಾರ್ಥಿಗಳ ಗಿನ್ನೆಸ್ ದಾಖಲೆ
ಅಬುದಾಭಿ,ಜೂ.26: ಜಗತ್ತಿನ ಅತಿ ದೊಡ್ಡ ಪದಕವನ್ನು ನಿರ್ಮಿಸುವ ಮೂಲಕ ಇಲ್ಲಿನ ಇಂಟರ್ನ್ಯಾಶನಲ್ ಇಂಡಿಯನ್ ಸ್ಕೂಲ್ ನ ವಿದ್ಯಾರ್ಥಿಗಳು ಗಿನ್ನೆಸ್ ದಾಖಲೆ ಸೃಷ್ಟಿಸಿದ್ದಾರೆ. 45 ಕೆ.ಜಿ.ಭಾರದ ಈ ಪದಕವು ಉಕ್ಕಿನಿಂದ ನಿರ್ಮಿಸಲ್ಪಟ್ಟಿದ್ದು, 5.93 ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ.
ಶಾಲಾ ಕಟ್ಟಡದ ಹಜಾರದಲ್ಲಿ ಇರಿಸಲಾಗಿರುವ ಬೃಹತ್ ಪದಕದ ವಿಸ್ತೀರ್ಣವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯ ತೀರ್ಪುಗಾರರು ಶನಿವಾರ ಮಾಪನ ನಡೆಸಿದರು. ಶಾಲಾ ಪ್ರಾಂಶುಪಾಲ ಡಾ. ಬೆನೊ ಕುರಿಯನ್ ಹಾಗೂ ಶಾಲಾ ಆಡಳಿತ ನಿರ್ದೇಶಕ ಮುನೀರ್ ಅನ್ಸಾರಿ,ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ, ಸಿಬ್ಬಂದಿ ಮತ್ತಿತರರು ಕೋವಿಡ್ ಶಿಷ್ಟಾಚಾರಗಳ ಪಾಲನೆಯೊಂದಿಗೆ ಉಪಸ್ಥಿತರಿದ್ದರು.
ಯುಎಇ ಸಾಧನೆಳಿಗೆ ಶ್ಲಾಘನೆಯಾಗಿ ವಿದ್ಯಾರ್ಥಿಗಳು ಅಪಾರಶ್ರಮ ವಹಿಸಿ ವಿಶ್ವದ ಅತಿ ದೊಡ್ಡ ಪದಕವನ್ನು ರಚಿಸಿದ್ದಾರೆಂದು ಶಾಲಾ ಪ್ರಾಂಶುಪಾಲ ಡಾ.ಕುರಿಯನ್ ತಿಳಿಸಿದರು.
ಈ ಮೊದಲು ಗಿನ್ನೆಸ್ ದಾಖಲೆ ನಿರ್ಮಿಸಿದ್ದ ಪದಕವು 68.5 ಕೆ.ಜಿ. ಭಾರದ್ದಾಗಿತ್ತು ಹಾಗೂ 2.56 ಚ.ಕಿ.ಮೀ. ವಿಸ್ತೀರ್ಣವಿತ್ತು ಮತ್ತು ಅದನ್ನು ಕೂಡಾ ಅಬುದಾಭಿಯಲ್ಲೇ ನಿರ್ಮಿಸಲಾಗಿತ್ತು.