ಸೌದಿಯ ಮಹಿಳಾ ಹಕ್ಕುಗಳ ಹೋರಾಟಗಾರ್ತಿಯರಾದ ಸಮರ್ ಬದಾವಿ, ನಸ್ಸೀಮಾ ಅಲ್ ಸದಹ್ ಬಂಧಮುಕ್ತಿ
ರಿಯಾದ್,ಜೂ.27: ಕಳೆದ ಮೂರು ವರ್ಷಗಳಿಂದ ಬಂಧಿತರಾಗಿದ್ದ ಇಬ್ಬರು ಪ್ರಮುಖ ಮಹಿಳಾ ಹಕ್ಕುಗಳ ಹೋರಾಟಗಾರ್ತಿಯರಾದ ಸಮರ್ ಬದಾವಿ ಹಾಗೂ ನಸ್ಸೀಮಾ ಅಲ್-ಸದಾಹ್ ಅವರನ್ನು ಸೌದಿ ಆರೇಬಿಯ ಬಿಡುಗಡೆಗೊಳಿಸಿದೆಯೆಂದು ಮಾನವಹಕ್ಕುಗಳ ಸಂಘಟನೆಯೊಂದು ರವಿವಾರ ತಿಳಿಸಿದೆ.
‘‘ ಮಾನವಹಕ್ಕುಗಳ ಸಂರಕ್ಷಕಿಯರಾದ ಮಮರ್ ಬದಾವಿ ಹಾಗೂ ನಸ್ಸೀಮಾ ಅಲ್-ಸದಾಹ್ ಅವರ ಜೈಲು ಶಿಕ್ಷೆಯ ಅವಧಿ ಕೊನೆಗೊಂ ಹಿನ್ನೆಲೆಯಲ್ಲಿ ಅವರು ಬಿಡುಗಡೆಯಾಗಿದ್ದಾರೆ’’ ಎಂದು ‘ಎಎಲ್ಕ್ಯೂಎಸ್ಟಿ ಫಾರ್ ಹ್ಯೂಮನ್ರೈಟ್ಸ್’ ಸಂಘಟನೆಯು ರವಿವಾರ ಟ್ವೀಟ್ ಮಾಡಿದೆ.
ಆಡಳಿತ ವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಭಾಗವಾಗಿ ಸೌದಿ ಆಡಳಿತವು 2018ರ ಆಗಸ್ಟ್ ನಲ್ಲಿ ಈ ಇಬ್ಬರು ಮಹಿಳಾಹಕ್ಕುಗಳ ಕಾರ್ಯಕರ್ತೆಯರನ್ನು ಬಂಧಿಸಿತ್ತು. ಸೌದಿಯಲ್ಲಿ ಮಹಿಳೆಯರು ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಪುರುಷ ಸಂಬಂಧಿಯ ಒಪ್ಪಿಗೆಯನ್ನು ಕಡ್ಡಾಯವಾಗಿ ಪಡೆಯಬೇಕೆಂಬ ಕಾನೂನನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಚಳವಳಿಯ ಪ್ರಮಖ ಹೋರಾಟಗಾರ್ತಿಯರಲ್ಲಿ ಸಮರ್ ಬದಾವಿ ಹಾಗೂ ನಸ್ಸೀಮಾ ಅಲ್-ಸದಾಹ್ ಪ್ರಮುಖರಾಗಿದ್ದಾರೆ.
ಪುರುಷ ಪಾಲಕತ್ವ ವ್ಯವಸ್ಥೆಯ ವಿರುದ್ಧದ ಹೋರಾಟಕ್ಕಾಗಿ ಬದಾವಿ ಅವರಿಗೆ ಅಮೆರಿಕದ 2012ರ ಸಾಲಿನ ‘ಅಂತಾರಾಷ್ಟ್ರೀಯ ಮಹಿಳಾ ಧೈರ್ಯ ಪುರಸ್ಕಾರ ’ಲಭಿಸಿತ್ತು. ಸೌದಿ ಸರಕಾರವು ಮಹಿಳೆಯರಿಗೆ ವಾಹನ ಚಲಾಯಿಸಲು, ಮತದಾನ ಮಾಡಲು ಹಾಗೂ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ ನಡೆದ ಅಭಿಯಾನಕ್ಕೆ ಸಹಿಹಾಕಿದ ಮೊದಲಿಗೆ ಮಹಿಳೆಯರಲ್ಲಿ ಬದಾವಿ ಅವರೂ ಇದ್ದರು.
ಬಿಡುಗಡೆಗೊಂಡ ಇನ್ನೋರ್ವ ಹೋರಾಟಗಾರ್ತಿ ಅಲ್ ಸದಾಹ್ ಅವರು ಸೌದಿಯ ಖ್ವಾತಿಫ್ ಪ್ರಾಂತದವರಾಗಿದ್ದಾರೆ. ಮಹಿಳೆಯರಿಗೆ ವಾಹನ ಚಾಲನೆಯ ಹಕ್ಕು ಹಾಗೂ ಪುರುಷ ಪಾಲಕತ್ವ ವ್ಯವಸ್ಥೆಯ ರದ್ದತಿಗಾಗಿ ನಡೆದ ಚಳವಳಿಯಲ್ಲಿ ಮುಂಚೂಣಿಯ ಹೋರಾಟಗಾರ್ತಿಯಾಗಿದ್ದರು. ಮೊದಲ ಬಾರಿಗೆ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಲಾದ 2015ರ ಸ್ಥಳೀಯಾಡಳಿತ ಚುನಾವಣೆಯಲ್ಲಿ ಅವರು ಅಭ್ಯರ್ಥಿಯಾಗಿದ್ದರು. ಆದರೆ ಕಡೆಗಳಿಗೆಯಲ್ಲಿ ಆಕೆಗೆ ಅಧಿಕಾರಿಗಳು ಸ್ಪರ್ಧೆಗೆ ಅವಕಾಶ ನೀಡಿರಲಿಲ್ಲ.
ಆದರೆ ಈ ಮಹಿಳಾ ಹೋರಾಟಗಾರ್ತಿಯರ ಬಂಧನಗಳನ್ನು ಸೌದಿ ಆಡಳಿತವು ಸಮರ್ಥಿಸಿಕೊಂಡಿತ್ತು. ಈ ಹೋರಾಟಗಾರ್ತಿಯರು ವಿದೇಶಿ ಸಂಘಟನೆಗಳ ಜೊತೆ ಶಂಕಾಸ್ಪದ ನಂಟನ್ನು ಹೊಂದಿದ್ದಾರೆ ಹಾಗೂ ಸಾಗರೋತ್ತರ ದಶಗಳ ಶತ್ರುಗಳಿಗೆ ಆರ್ಥಿಕ ಬೆಂಬಲವನ್ನು ಒದಗಿಸುತ್ತಿದ್ದಾರೆಂದು ಆಪಾದಿಸಿತ್ತು.