ಅಬುಧಾಬಿ: ಮುಖದ ಸ್ಕ್ಯಾನಿಂಗ್ ನಡೆಸಿ ಕೊರೋನ ಪತ್ತೆಹಚ್ಚುವ ಸಾಧನ ಮಾಲ್ ಗಳಲ್ಲಿ ಬಳಸಲು ನಿರ್ಧಾರ
ಅಬುಧಾಬಿ, ಜೂ.28: ಅಬುಧಾಬಿಯ ಶಾಪಿಂಗ್ ಮಾಲ್ ಹಾಗೂ ವಿಮಾನನಿಲ್ದಾಣಗಳಲ್ಲಿ ಮುಖದ ಸ್ಕ್ಯಾನಿಂಗ್ ನಡೆಸಿ ಕೊರೋನ ಸೋಂಕು ಪತ್ತೆಹಚ್ಚುವ ಸಾಧನವನ್ನು ಸೋಮವಾರದಿಂದ ಬಳಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸುಮಾರು 20,000 ಜನರನ್ನು ಈ ಸಾಧನದ ಪರೀಕ್ಷೆಗೆ ಒಳಪಡಿಸಿದಾಗ ಉತ್ತಮ ಮಟ್ಟದ ಪರಿಣಾಮ ವ್ಯಕ್ತವಾಗಿದೆ. ಇಲೆಕ್ಟ್ರೋ ಈ ಯಂತ್ರ ಮ್ಯಾಗ್ನೆಟಿಕ್ ತರಂಗಗಳನ್ನು ಅಳೆಯುವ ಮೂಲಕ ಸೋಂಕನ್ನು ಪತ್ತೆಹಚ್ಚುತ್ತದೆ, ಸೋಂಕಿನ ಆರ್‌ಎನ್‌ಎ ಕಣ ದೇಹದಲ್ಲಿದ್ದರೆ ಮ್ಯಾಗ್ನೆಟಿಕ್ ತರಂಗದಲ್ಲಿ ವ್ಯತ್ಯಾಸವಾಗುತ್ತದೆ. ಅಬುಧಾಬಿಯ ಇಡಿಇ ರಿಸರ್ಚ್ ಇನ್ಸ್ಟಿಟ್ಯೂಟ್ ಈ ಸ್ಕ್ಯಾನರ್ ಅನ್ನು ಅಭಿವೃದ್ಧಿಗೊಳಿಸಿದೆ.
ವಿಶ್ವದಲ್ಲಿ ಅತ್ಯಧಿಕ ಪ್ರಮಾಣದ ಲಸಿಕೀಕರಣ ಪ್ರಕ್ರಿಯೆ ಪೂರ್ಣಗೊಳಿಸಿದ ದೇಶದಲ್ಲಿ ಯುಎಇಯೂ ಒಂದಾಗಿದೆ. ಆದರೆ ಮಾರ್ಚ್ ನಿಂದ ಈ ದೇಶದಲ್ಲಿ ದೈನಂದಿನ ಸೋಂಕು ಪ್ರಕರಣ 2000ಕ್ಕೂ ಅಧಿಕವಾಗಿದೆ. ದೇಶದಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಮೂರನೇ ಒಂದಂಶದಷ್ಟು ಪ್ರಕರಣ , ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ರೂಪಾಂತರಿತ ಸೋಂಕಿಗೆ ಸಂಬಂಧಿಸಿದ್ದು ಎಂದು ಯುಎಇಯ ರಾಷ್ಟ್ರೀಯ ತುರ್ತು ವಿಪತ್ತು ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರ ರವಿವಾರ ಹೇಳಿದೆ.