ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಕರ್ನಾಟಕದ ಈಜುಗಾರ ಶ್ರೀಹರಿ ನಟರಾಜನ್‌ಗೆ ಅಧಿಕೃತ ಅನುಮತಿ
ಹೊಸದಿಲ್ಲಿ, ಜೂ. 30: ಕರ್ನಾಟಕದ ಈಜುಗಾರ ಶ್ರೀಹರಿ ನಟರಾಜ್ ಬುಧವಾರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅಧಿಕೃತ ಅರ್ಹತೆ ಪಡೆದುಕೊಂಡಿದ್ದಾರೆ. ರೋಮ್‌ನಲ್ಲಿ ನಡೆದ ಸೆಟ್ ಕೋಲಿ ಟ್ರೋಫಿಯಲ್ಲಿ ಪುರುಷರ 100 ಮೀಟರ್ ಬ್ಯಾಕ್‌ಸ್ಟ್ರೋಕ್ ಟೈಮ್ ಟ್ರಯಲ್‌ನಲ್ಲಿ ಅವರು ಪಡೆದಿರುವ ‘ಎ’ ದರ್ಜೆಯ ಅರ್ಹತಾ ಹೊತ್ತುಗಾರಿಕೆಗೆ ಈಜುಗಾರಿಕೆಯ ಜಾಗತಿಕ ಆಡಳಿತ ಮಂಡಳಿ ಫಿನ ಅಂಗೀಕಾರ ನೀಡಿದ ಬಳಿಕ ಅವರಿಗೆ ಅರ್ಹತೆ ಪ್ರಾಪ್ತವಾಗಿದೆ.
‘‘ಸೆಟ್ ಕೋಲಿ ಟ್ರೋಫಿಯ ಟೈಮ್ ಟ್ರಯಲ್‌ನಲ್ಲಿ ಶ್ರೀಹರಿ ನಟರಾಜ್ 53.77 ಸೆಕೆಂಡ್‌ಗಳಲ್ಲಿ ಈಜಿರುವುದನ್ನು ಫಿನ ಖಚಿತಪಡಿಸಿದೆ. ಇದಕ್ಕೆ ಸಂಬಂಧಿಸಿದ ಅರ್ಜಿಯನ್ನು ಭಾರತೀಯ ಕ್ರೀಡಾ ಪ್ರಾಧಿಕಾರ ಫಿನಕ್ಕೆ ಸಲ್ಲಿಸಿತ್ತು. ಈಗ ಶ್ರೀಹರಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ‘ಎ’ ದರ್ಜೆಯ ಅರ್ಹತಾ ಪ್ರವೇಶ ಲಭಿಸಿದೆ. ಅವರು ಈಗ ಸಾಜನ್ ಪ್ರಕಾಶ್‌ರನ್ನು ಸೇರಿಕೊಳ್ಳಲಿದ್ದಾರೆ’’ ಎಂದು ಭಾರತೀಯ ಈಜುಗಾರಿಕೆ ಒಕ್ಕೂಟ ಟ್ವೀಟ್ ಮಾಡಿದೆ.
ಈ ಸಾಧನೆಯನ್ನು ಶ್ರೀಹರಿ ರವಿವಾರ ಮಾಡಿದ್ದಾರೆ. ಅವರ 53.77 ಸೆಕೆಂಟ್‌ಗಳ ಹೊತ್ತುಗಾರಿಕೆ ರಾಷ್ಟ್ರೀಯ ದಾಖಲೆಯೂ ಆಗಿದೆ.