ಒಂದು ದೇಶ ಒಂದು ಶಿಕ್ಷಣ ವ್ಯವಸ್ಥೆ ಇರಲಿ
ಮಾನ್ಯರೇ,
ಸರಕಾರ ಒಂದು ದೇಶ ಒಂದು ಪಡಿತರ ವ್ಯವಸ್ಥೆ ಜಾರಿಗೊಳಿಸಲು ಯೋಚಿಸಿದಂತೆ, ಒಂದು ದೇಶ ಒಂದೇ ರೀತಿಯ ಶಿಕ್ಷಣ ವ್ಯವಸ್ಥೆಯನ್ನೂ ಜಾರಿಗೊಳಿಸುವುದು ತುರ್ತು ಅಗತ್ಯವಾಗಿದೆ. ಇವತ್ತು ದೇಶದಲ್ಲಿ ಅಂತರ್‌ರಾಷ್ಟ್ರೀಯ ಶಾಲಾ-ಕಾಲೇಜುಗಳು ಮತ್ತು ಅದಕ್ಕೊಂದು ಪಠ್ಯಕ್ರಮ, ನ್ಯಾಷನಲ್ ಶಾಲಾ-ಕಾಲೇಜುಗಳು, ರಾಜ್ಯ ಮಟ್ಟದ ಶಾಲಾ-ಕಾಲೇಜುಗಳು ಮತ್ತು ಅವುಗಳಿಗೆ ಪ್ರತ್ಯೇಕವಾದ ಪಠ್ಯಕ್ರಮ ಇರುವುದನ್ನು ಗಮನಿಸಬಹುದು. ಇದು ದೇಶದ ಸಮಸ್ತ ಜನರಿಗೆ ಸಮಾನ ಶಿಕ್ಷಣ ಸಿಗಬೇಕು ಅನ್ನುವ ಸಂವಿಧಾನ ಆಶಯದ ವಿರುದ್ಧವಾದ ನಡಾವಳಿಯಾಗಿದೆ.
ಈ ವ್ಯವಸ್ಥೆ ಹೇಗಿದೆಯೆಂದರೆ ಅತಿ ಶ್ರೀಮಂತರಿಗೆ ಒಂದು ರೀತಿಯ ಶಿಕ್ಷಣ, ಮಧ್ಯಮ ಶ್ರೀಮಂತರಿಗೆ ಒಂದು ರೀತಿಯ ಶಿಕ್ಷಣ ಮತ್ತು ಬಡವರಿಗೆ ಇನ್ನೊಂದು ರೀತಿಯ ಶಿಕ್ಷಣ ವ್ಯವಸ್ಥೆ ಎಂದು ಆರ್ಥಿಕ ಪರಿಸ್ಥಿತಿಗಳ ಅನುಸಾರ ಹಂಚಿಕೆ ಮಾಡಿದಂತಿದೆ. ಇಲ್ಲಿ ದೇಶ ಭೌಗೋಳಿಕವಾಗಿ ವೈವಿಧ್ಯವನ್ನು ಹೊಂದಿರುವ ಒಂದು ಪ್ರಶ್ನೆ ಏಳಬಹುದು, ಆದರೆ ಒಂದು ದೇಶ ಒಂದು ಶಿಕ್ಷಣ ವ್ಯವಸ್ಥೆ ಅಳವಡಿಸುವುದರಿಂದ ದೇಶದ ಸಮಸ್ತ ವೈವಿಧ್ಯವನ್ನು ದೇಶದ ಎಲ್ಲರೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬಹುದು. ಇದರಿಂದ ವಿವಿಧತೆಯಲ್ಲೂ ಏಕತೆಯನ್ನು ಸಾಧಿಸುವ ಸಂವಿಧಾನದ ಆಶಯ ಎಲ್ಲರಲ್ಲೂ ಬೆಳೆಸಬಹುದಾಗಿದೆ. ಇದು ಶಿಕ್ಷಣ ವ್ಯವಸ್ಥೆ ತಾರತಮ್ಯವನ್ನು ಹೋಗಲಾಡಿಸಲು ಅನುವು ಮಾಡಿಕೊಡುತ್ತದೆ. ಜೊತೆಗೆ ಎಲ್ಲರೂ ಒಂದೇ ರೀತಿಯ ಶಿಕ್ಷಣ ಪಡೆಯುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿಜವಾದ ಪ್ರತಿಭೆಯನ್ನು ಗುರುತಿಸಿ ಆಯ್ಕೆ ಮಾಡಲು ಅವಕಾಶ ಸಿಕ್ಕಂತಾಗುತ್ತದೆ.