ಭಾರತ, ಪಾಕಿಸ್ತಾನಕ್ಕೆ ಪ್ರವಾಸ ನಿರ್ಬಂಧ ಹೇರಿದ ಯುಎಇ
ಯುಎಇ, ಜು.2: ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಾಗರಿಕರು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾಗೆ ಜುಲೈ 21ರವರೆಗೆ ಪ್ರಯಾಣ ಕೈಗೊಳ್ಳದಂತೆ ಅಲ್ಲಿನ ಸರಕಾರ ಸೂಚಿಸಿದೆ ಎಂದು ವರದಿಯಾಗಿದೆ.
ಎಮಿರೇಟ್ಸ್‌ನ ವಿದೇಶಾಂಗ ಸಚಿವಾಲಯ ಮತ್ತು ರಾಷ್ಟ್ರೀಯ ತುರ್ತು, ವಿಕೋಪ ಮತ್ತು ಅನಾಹುತ ನಿರ್ವಹಣಾ ಪ್ರಾಧಿಕಾರದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಪ್ರವಾಸ ಸೀಸನ್ ಆರಂಭದ ಹಿನ್ನೆಲೆಯಲ್ಲಿ ಕೋವಿಡ್-19 ಮುಂಜಾಗ್ರತೆ ಮತ್ತು ತಡೆಯಾತ್ಮಕ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಲಹೆ ಮಾಡಿದೆ. ಕೋವಿಡ್ ಹಿನ್ನೆಲೆಯಲ್ಲಿ 14 ದೇಶಗಳಿಗೆ ಪ್ರವಾಸ ಕೈಗೊಳ್ಳದಂತೆ ಯುಎಇ ಕಳೆದ ತಿಂಗಳು ಮಾಡಿದ್ದ ಆದೇಶದ ಬಳಿಕ ಗುರುವಾರ ಈ ಆದೇಶ ಹೊರಬಿದ್ದಿದೆ. ಲೈಬೀರಿಯಾ, ನಮೀಬಿಯಾ, ಸೀರಾಲಿಯಾನ್, ಕಾಂಗೊ ಗಣರಾಜ್ಯ, ಉಗಾಂಡ, ಜಾಂಬಿಯಾ, ವಿಯೆಟ್ನಾಂ, ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ನೈಜೀರಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಬರುವ ಎಲ್ಲ ವಿಮಾನಗಳನ್ನು ನಿಷೇಧಿಸಿ ಈ ಮೊದಲು ಆದೇಶ ಹೊರಡಿಸಲಾಗಿತ್ತು.
ಪ್ರಯಾಣದ ವೇಳೆ ಪಾಸಿಟಿವ್ ಕಂಡುಬಂದಲ್ಲಿ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಬೇಕು ಜತೆಗೆ ಆಯಾ ದೇಶಗಳ ಕೋವಿಡ್ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದೂ ಸೂಚಿಸಿದೆ. ಜತೆಗೆ ಆಯಾ ದೇಶಗಳಲ್ಲಿರುವ ಯುಎಇ ರಾಯಭಾರ ಕಚೇರಿಗಳಿಗೆ ಮಾಹಿತಿ ನೀಡಬೇಕು ಎಂದು ಸಲಹೆ ಮಾಡಿದೆ.