ಹೌದಿ ಡ್ರೋನ್ ಹೊಡೆದುರುಳಿಸಿದ ಅರಬ್ ಮೈತ್ರಿಪಡೆ
ರಿಯಾದ್, ಜು.2: ಯೆಮೆನ್ ನಿಂದ ಹೌದಿ ಬಂಡುಕೋರರು ಸೌದಿಯ ನಗರವನ್ನು ಗುರಿಯಾಗಿಸಿ ಹಾರಿಬಿಟ್ಟಿದ್ದ ಸ್ಪೋಟಕಗಳು ತುಂಬಿದ್ದ ಡ್ರೋನ್ ಅನ್ನು ಯೆಮೆನ್ ಸರಕಾರವನ್ನು ಬೆಂಬಲಿಸುತ್ತಿರುವ ಅರಬ್ ಮೈತ್ರಿಪಡೆ ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೌದಿ ಅರೆಬಿಯಾ ಶಾಂತಿಮಾತುಕತೆಯ ಪ್ರಸ್ತಾವನೆ ಮುಂದಿರಿಸಿದ್ದಕ್ಕೆ ಪ್ರತಿಯಾಗಿ ಹೌದಿ ಬಂಡುಕೋರರು ಸೌದಿಯನ್ನು ಗುರಿಯಾಗಿಸಿ ಕ್ಷಿಪಣಿ, ರಾಕೆಟ್ ಮತ್ತು ಡ್ರೋನ್ ದಾಳಿ ನಡೆಸುತ್ತಿದ್ದಾರೆ ಎಂದು ಅರಬ್ ದೇಶಗಳು ಹೇಳಿವೆ. ಯೆಮೆನ್ ವಿರುದ್ಧ ಹೌದಿ ಬಂಡುಕೋರರ ಉದ್ದೇಶಪೂರ್ವಕ ಮತ್ತು ವ್ಯವಸ್ಥಿತ ಆಕ್ರಮಣ ಯುದ್ಧಾಪರಾಧವಾಗಿದ್ದು, ದಾಳಿಯಿಂದ ನಾಗರಿಕರನ್ನು ರಕ್ಷಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅರಬ್ ಮೈತ್ರಿಪಡೆ ಹೇಳಿದೆ.
ಯೆಮೆನ್ನಲ್ಲಿ ಕದನವಿರಾಮಕ್ಕೆ ಅಮೆರಿಕ, ವಿಶ್ವಸಂಸ್ಥೆ, ಸೌದಿ ಅರೆಬಿಯಾ ಕರೆ ನೀಡಿದ್ದರೂ ಇರಾನ್ ಬೆಂಬಲಿತ ಹೌದಿಗಳು ಸ್ಫೋಟಕ ತುಂಬಿರುವ ಡ್ರೋನ್ ಮೂಲಕ ಸೌದಿಯ ಮೇಲೆ ನಿರಂತರ ದಾಳಿ ಮುಂದುವರಿಸಿದೆ ಎಂದು ಮೂಲಗಳು ಹೇಳಿವೆ.