ಇಂಗ್ಲೆಂಡ್ ಕ್ರಿಕೆಟ್ ತಂಡದ 7 ಸದಸ್ಯರಿಗೆ ಕೊರೋನ ಪಾಸಿಟಿವ್
ಲಂಡನ್: ಮೂವರು ಆಟಗಾರರು ಹಾಗೂ ನಾಲ್ವರು ಸಿಬ್ಬಂದಿ ಸೇರಿದಂತೆ ಇಂಗ್ಲೆಂಡ್ ಕ್ರಿಕೆಟ್ ತಂಡದ 7 ಸದಸ್ಯರು ಕೋವಿಡ್ -19 ಪಾಸಿಟಿವ್ ಆಗಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮಂಗಳವಾರ ತಿಳಿಸಿದೆ.
ಬ್ರಿಸ್ಟಲ್ ನಲ್ಲಿ ನಿನ್ನೆ (ಸೋಮವಾರ) ನಡೆದ ಆರ್ ಟಿಪಿಸಿಆರ್ ಪರೀಕ್ಷೆಗಳ ನಂತರ ಇಂಗ್ಲೆಂಡ್ ಪುರುಷರ ಏಕದಿನ ತಂಡದ ಮೂವರು ಆಟಗಾರರು ಹಾಗೂ ನಾಲ್ವರು ಸಹಾಯಕ ಸಿಬ್ಬಂದಿ ಸಹಿತ 7 ಮಂದಿ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಖಚಿತಪಡಿಸಿದೆ ಎಂದು ಇಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ಇಸಿಬಿ ಕೋವಿಡ್ ಪಾಸಿಟಿವ್ ಆಗಿರುವ ಆಟಗಾರರ ಹೆಸರುಗಳನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ಈಗ ನಡೆಯುತ್ತಿರುವ ವೈಟಾಲಿಟಿ ಟಿ-20 ಬ್ಲಾಸ್ಟ್ ಹಾಗೂ ಪಾಕಿಸ್ತಾನದ ವಿರುದ್ಧ ಮುಂಬರುವ ಸೀಮಿತ ಓವರ್‌ಗಳ ಸರಣಿಯು ಯೋಜಿಸಿದಂತೆ ನಡೆಯಲಿದೆ ಎಂದು ಹೇಳಿದೆ. ಇಯಾನ್ ಮೋರ್ಗನ್ ಬದಲಿಗೆ ಮಂಗಳವಾರ ಘೋಷಿಸಲಿರುವ ಪಾಕಿಸ್ತಾನ ವಿರುದ್ಧದ ತಂಡದಲ್ಲಿ ಬೆನ್ ಸ್ಟೋಕ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.