ಸೌದಿ ಅರೆಬಿಯಾ: 37 ಮಿಲಿಯನ್ ವರ್ಷದ ಹಿಂದಿನ ತಿಮಿಂಗಿಲದ ಅವಶೇಷ ಪತ್ತೆ
ರಿಯಾದ್, ಜು.6: ಸುಮಾರು 37 ಮಿಲಿಯನ್ ವರ್ಷದ ಹಿಂದೆ ಅಳಿದುಹೋದ ಪ್ರಾಚೀನ ತಿಮಿಂಗಿಲದ ಅವಶೇಷಗಳನ್ನು ಸೌದಿ ಅರೇಬಿಯಾದ ಜಾಫ್ ಪ್ರದೇಶದಲ್ಲಿ ಕಂಡುಹಿಡಿಯಲಾಗಿದ್ದು ಈ ಆವಿಷ್ಕಾರವು ದೇಶದ ಭೂವಿಜ್ಞಾನ ಮತ್ತು ಪ್ರಾಚೀನ ಸಮುದ್ರ ಪರಿಸರದ ಕುರಿತ ರಹಸ್ಯಗಳನ್ನು ಬಹಿರಂಗಪಡಿಸಿದೆ ಎಂದು ವರದಿಯಾಗಿದೆ.
ಸ್ಥಳೀಯ ಮತ್ತು ಅಂತರಾಷ್ಟ್ರೀಯ ಭೂವಿಜ್ಞಾನಿಗಳು ಮತ್ತು ಪಳೆಯುಳಿಕೆ ಶಾಸ್ತ್ರಜ್ಞರನ್ನು ಒಳಗೊಂಡ 8 ಮಂದಿಯ ತಂಡವು ನಡೆಸಿದ ಆವಿಷ್ಕಾರದಲ್ಲಿ ತಿಮಿಂಗಿಲದ ಮೂಳೆಗಳಿದ್ದ ಸಮಾಧಿ ಸಹಿತ ಹಲವು ಅಮೂಲ್ಯ ವಸ್ತುಗಳು ಪತ್ತೆಯಾಗಿದ್ದು ಈ ಆವಿಷ್ಕಾರದ ಕುರಿತ ಮಾಹಿತಿಯನ್ನು ಜೂನ್ 29ರಂದು ಪ್ರಕಟಿಸಲಾಗಿದೆ.
ವೈಜ್ಞಾನಿಕವಾಗಿ ಅತ್ಯಂತ ಪ್ರಮುಖವೆಂದು ಹೇಳಲಾದ ಈ ಸಂಶೋಧನೆಯ ಶ್ರೇಯ ಸೌದಿಯ ಭೂಗರ್ಭಶಾಸ್ತ್ರ ಸರ್ವೆ (ಎಸ್ಜಿಎಸ್) ತಂಡಕ್ಕೆ ಸಲ್ಲುತ್ತದೆ. 37 ಮಿಲಿಯನ್ ವರ್ಷಕ್ಕೂ ಹಿಂದಿನ ಪ್ರಯಬೋನಿಯನ್ ಯುಗ (ಅಪ್ಪರ್ ಇಯೊಸಿನ್ ಯುಗ)ಕ್ಕೆ ಸೇರಿದ ಮರಳು ಮತ್ತು ಕಲ್ಲುಬಂಡೆಗಳ ಪರ್ವತಶ್ರೇಣಿಯಲ್ಲಿ ತಿಮಿಂಗಿಲದ ಅವಶೇಷಗಳಿದ್ದ ಸಮಾಧಿ ಪತ್ತೆಯಾಗಿದೆ.
ಈ ಆವಿಷ್ಕಾರವು ವಾಯವ್ಯ ಸೌದಿ ಅರೆಬಿಯಾದ ಪ್ರಾಚೀನ ಸಮುದ್ರ ಸಸ್ತನಿಗಳ ಭೌಗೋಳಿಕ ಹಂಚಿಕೆ ಬಗ್ಗೆ ಬೆಳಕು ಚೆಲ್ಲಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆವಿಷ್ಕರಿಸಿದ ಮೂಳೆಗಳು ಪುರಾತನ ತಿಮಿಂಗಿಲದ ಅಪರೂಪದ ತಳಿಗೆ ಸೇರಿದ್ದಾಗಿದೆ ಮತ್ತು ಬಾಲದ ತುದಿಯಿಂದ ಎದೆಯ ಮೇಲ್ಬಾಗದವರೆಗಿನ ಮೂಳೆಗಳು, ಮಂದಿನ ಕಾಲಿನ ಮೂಳೆ, ಭುಜದ ಅಲಗು, ಪಕ್ಕೆಲುಬು, ತಲೆಬುರುಡೆ ಮತ್ತು ಕೆಳದವಡೆಯ ಮೂಳೆ ಇದರಲ್ಲಿ ಸೇರಿದೆ ಎಂದು ಸೌದಿ ಭೂವಿಜ್ಞಾನ ಸರ್ವೆಯ ತಾಂತ್ರಿಕ ಸಲಹೆಗಾರ ಇಯಾದ್ ಝಲ್ಮೌಟ್ ‘ದಿ ಅರಬ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಹಿಂದೆ ಅನ್ವೇಷಿಸಿದ್ದಕ್ಕಿಂತ ಪುರಾತನ ತಿಮಿಂಗಿಲದ ಅವಶೇಷ ಇದಾಗಿದ್ದು ಹಿಂಗಾಲು ಕುಂಠಿತವಾಗಿದ್ದರೆ ಮುಂಗಾಲು ಚಪ್ಪಟೆಯಾಗಿದೆ. ಕಿರಿದಾದ ಕುತ್ತಿಗೆ, ಉದ್ದವಾದ ಬಾಲವನ್ನು ಹೊಂದಿದೆ. ಇದರ ತಲೆಬುರುಡೆಯಲ್ಲಿ ಅತ್ಯಂತ ಪ್ರಮುಖ ಲಕ್ಷಣವಿದೆ. ಇಲ್ಲಿ ಮೂಗಿನ ಮೂಳೆಗಳು ಹಣೆಯ ಕಡೆಗೆ ಹಿಂಜರಿದಿರುವುದನ್ನು ಕಾಣಬಹುದು. ಜೊತೆಗೆ ಕೆನ್ನೆಯ ಹಲ್ಲುಗಳ ಸಂಕೀರ್ಣತೆಯೂ ಕಿರಿದಾಗಿದೆ. ಈ ಹಿಂದೆ 1902 ಮತ್ತು 1991ರಲ್ಲಿ ಈಜಿಪ್ಟ್ನ ಪಶ್ಚಿಮ ಮರುಭೂಮಿಯಲ್ಲಿ ಪತ್ತೆಯಾದ ‘ಸ್ಟ್ರೋಮೆರಿಯಸ್ ನಿಡೆನ್ಸಿಸ್’ ಎಂದು ಹೆಸರಿಸಲಾದ ಸಣ್ಣ ತಿಮಿಂಗಿದ ಭಾಗಶಃ ಅಸ್ಥಿಪಂಜರದ ಗಾತ್ರ ಮತ್ತು ಆಕೃತಿಯನ್ನು ಇದು ಹೋಲುತ್ತದೆ. ಈ ತಿಮಿಂಗಿಲದ ತಳಿಯಲ್ಲಿ ಅತ್ಯಂತ ಸಣ್ಣಗಾತ್ರದ ತಿಮಿಂಗಿಲ ಇದಾಗಿದ್ದು ಡೊರುಡನ್ ತಳಿಯ ತಿಮಿಂಗಿಲದ ಅರ್ಧ ಅಥವಾ ಮೂರನೇ ಒಂದು ಭಾಗವಿದೆ ಎಂದವರು ಹೇಳಿದ್ದಾರೆ.