ಸೌದಿ ಅರೆಬಿಯಾದ ಮಾನವೀಯ ಪಾತ್ರಕ್ಕೆ ವಿಶ್ವಸಂಸ್ಥೆ ಶ್ಲಾಘನೆ
ರಿಯಾದ್, ಜು.6: ಯೆಮೆನ್ ನ ಅತ್ಯಂತ ದುರ್ಬಲ ವರ್ಗದವರಿಗೆ ತುರ್ತು ಆಹಾರ ಪೂರೈಸಲು ನೆರವಾದ ಸೌದಿ ಅರೆಬಿಯಾದ ಮಾನವೀಯ ಉಪಕ್ರಮ ಶ್ಲಾಘನೀಯ ಎಂದು ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಯೋಜನೆ(ಡಬ್ಲ್ಯೂಎಫ್ಪಿ)ಯ ಕಾರ್ಯನಿರ್ವಾಹಕ ನಿರ್ದೇಶಕ ಡೇವಿಡ್ ಬೆಸ್ಲೇ ಹೇಳಿದ್ದಾರೆ.
ಕಿಂಗ್ ಸಲ್ಮಾನ್ ಹ್ಯುಮಾನಿಟೇರಿಯನ್ ಎಯ್ಡಾ ಆ್ಯಂಡ್ ರಿಲೀಫ್ ಸೆಂಟರ್(ಕೆಎಸ್ರಿಲೀಫ್) ಮೂಲಕ 60 ಮಿಲಿಯನ್ ಡಾಲರ್ ನೆರವು ನೀಡಲಾಗಿದ್ದು ಇದು ಯೆಮೆನ್ ಗೆ ಆಹಾರ ಒದಗಿಸಲು ನೆರವಾಗಿದೆ ಎಂದು ಬೆಸ್ಲೇ ಹೇಳಿದ್ದಾರೆ. ಈ ನೆರವಿನಿಂದ ಮುಂದಿನ ಕೆಲ ತಿಂಗಳವರೆಗೆ ಯೆಮೆನ್ನಲ್ಲಿ ಕಷ್ಟದಲ್ಲಿ ಸಿಲುಕಿದವರಿಗೆ ಆಹಾರ ಪೂರೈಸಬಹುದಾಗಿದೆ. ಗೋಧಿ ಹಿಟ್ಟು, ಖಾದ್ಯ ತೈಲ ಹಾಗೂ ಇತರ ಆಹಾರ ಉತ್ಪನ್ನಗಳು ಸಂಕಷ್ಟದಲ್ಲಿರುವ ಕುಟುಂಬಕ್ಕೆ ಪೂರೈಸುವ ಆಹಾರದ ಕಿಟ್ನಲ್ಲಿ ಇರುತ್ತವೆ. ಯೆಮೆನ್ ನ ಸುಮಾರು 4.9 ಮಿಲಿಯನ್ ತುರ್ತು ಆಹಾರದ ಅಗತ್ಯವಿರುವ ಕುಟುಂಬಗಳಿಗೆ ಆಹಾರ ಒದಗಿಸಲು ಈ ನೆರವಿನಿಂದ ಸಾಧ್ಯವಾಗಲಿದೆ. ಸಕಾಲದಲ್ಲಿ ಈ ನೆರವು ಒದಗಿಸಿದ್ದಕ್ಕೆ ಕೆಎಸ್ ರಿಲೀಫ್ ಗೆ ಅಭಿನಂದನೆಗಳು ಎಂದವರು ಟ್ವೀಟ್ ಮಾಡಿದ್ದಾರೆ.
2018ರಿಂದ ಸೌದಿ ಅರೆಬಿಯಾ ವಿಶ್ವ ಆರೋಗ್ಯ ಯೋಜನೆಯ ಯೆಮನ್ ಪರಿಹಾರ ಕಾರ್ಯಕ್ಕೆ 858 ಮಿಲಿಯನ್ ಡಾಲರ್ ಒದಗಿಸಿದೆ. ಈ ಮೂಲಕ ಯೆಮೆನ್ ಅನ್ನು ಕ್ಷಾಮದ ದವಡೆಯಿಂದ ತಪ್ಪಿಸಿ ಅಲ್ಲಿನ ಜನರನ್ನು ರಕ್ಷಿಸಲಾಗಿದೆ ಎಂದು ಬೆಸ್ಲೆ ಶ್ಲಾಘಿಸಿದ್ದಾರೆ.