ವಿಶ್ವದ 2ನೇ ಸುರಕ್ಷಿತ ದೇಶ ಯುಎಇ: ಸಮೀಕ್ಷಾ ವರದಿ

Update: 2021-07-07 15:24 GMT

ಅಬುಧಾಬಿ, ಜು.7: ವಿಶ್ವದ ಅತ್ಯಂತ ಸುರಕ್ಷಿತ 134 ದೇಶಗಳ ಪಟ್ಟಿಯಲ್ಲಿ ಯುಎಇ 2ನೇ ಸ್ಥಾನದಲ್ಲಿದ್ದು ಐಸ್ಲ್ಯಾಂಡ್ ವಿಶ್ವದ ಅತ್ಯಂತ ಸುರಕ್ಷಿತ ನಗರವಾಗಿದೆ ಎಂದು ‘ಗ್ಲೋಬಲ್ ಫೈನಾನ್ಸ್ ಮ್ಯಾಗಝಿನ್ಸ್’ ಸೂಚ್ಯಂಕ ವರದಿ ಮಾಡಿದೆ. ಸುದೃಢ ಆರೋಗ್ಯ ಕ್ಷೇತ್ರ ಮತ್ತು ಕೋವಿಡ್ ಲಸಿಕೀಕರಣ ಅಭಿಯಾನದ ಯಶಸ್ಸು ಯುಎಇ ಸಾಧನೆಗೆ ಕಾರಣವಾಗಿದೆ. ‌

ವಿಶ್ವದ ಅತ್ಯಧಿಕ ಲಸಿಕೀಕರಣ ದೇಶವಾಗಿರುವ ಯುಎಇಯಲ್ಲಿ 64.3% ಜನತೆ ಸಂಪೂರ್ಣ ಲಸಿಕೆ ಪಡೆದಿದ್ದಾರೆ. ಐಸ್ಲ್ಯಾಂಡ್, ಯುಎಇ, ಖತರ್, ಸಿಂಗಾಪುರ, ಫಿನ್ಲ್ಯಾಂಡ್, ಮಂಗೋಲಿಯಾ, ನಾರ್ವೆ, ಡೆನ್ಮಾರ್ಕ್, ಕೆನಡಾ ಮತ್ತು ನ್ಯೂಝಿಲ್ಯಾಂಡ್ ಅಗ್ರ 10 ಸ್ಥಾನದಲ್ಲಿವೆ. ಆಸ್ಟ್ರೇಲಿಯಾ 11, ಬಹರೈನ್ 12, ಸ್ವಿಝರ್ಲ್ಯಾಂಡ್ 14, ಜಪಾನ್ 22, ಚೀನಾ 26, ಬ್ರಿಟನ್ 38, ಈಜಿಪ್ಟ್ 65, ಯುನೈಟೆಡ್ ಸ್ಟೇಟ್ಸ್ 71, ಭಾರತ 91, ಪಾಕಿಸ್ತಾನ 116 ಪಟ್ಟಿಯಲ್ಲಿರುವ ಇತರ ಪ್ರಮುಖ ದೇಶಗಳಾಗಿವೆ . ಫಿಲಿಪ್ಪೀನ್ಸ್, ಕೊಲಂಬಿಯಾ, ಗ್ವಾಟೆಮಾಲ, ನೈಜೀರಿಯಾ, ಬೋಸ್ನಿಯಾ ಮತ್ತು ಹೆರ್ಝೆಗೊವಿನಾ, ಬ್ರೆಝಿಲ್, ಮೆಕ್ಸಿಕೊ, ಪೆರು, ಯೆಮೆನ್ ಮತ್ತು ನಾರ್ತ್ ಮೆಸಿಡೋನಿಯಾ ದೇಶಗಳು ಪಟ್ಟಿಯ ತಳಮಟ್ಟದಲ್ಲಿವೆ.

ಯೆಮೆನ್ನ ಅಮಾನುಷ ಅಂತರ್ಯುದ್ಧ ಮತ್ತು ಎಲ್ ಸಾಲ್ವದೋರ್ನ ಅತ್ಯಧಿಕ ಹತ್ಯೆ ಪ್ರಮಾಣದಿಂದಾಗಿ ಈ ದೇಶಗಳು ಸುರಕ್ಷತೆಯ ಪಟ್ಟಿಯಲ್ಲಿ ಯಾವುದೇ ಸುಧಾರಣೆ ಸಾಧಿಸಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಮೂರು ಮಾನದಂಡಗಳು:
  
ಯುದ್ಧ ಮತ್ತು ಶಾಂತಿ, ವೈಯಕ್ತಿಕ ಭದ್ರತೆ ಮತ್ತು ಪ್ರಾಕೃತಿಕ ವಿಕೋಪ ಅಪಾಯ ಎಂಬ 3 ಮೂಲಭೂತ ವಿಷಯಗಳನ್ನು ಸೂಚ್ಯಂಕದಲ್ಲಿ ಪರಿಗಣಿಸಲಾಗಿದೆ. ಜೊತೆಗೆ ಕೊರೋನ ಸೋಂಕಿನಿಂದ ಉದ್ಭವಿಸಿರುವ ವಿಶಿಷ್ಟ ಅಪಾಯದ ವಿಷಯವನ್ನೂ ಪರಿಗಣಿಸಲಾಗಿದೆ. ತೀವ್ರ ಅಂತರ್ಯುದ್ಧದ ಜೊತೆಗೆ ಪ್ರಾಕೃತಿಕ ವಿಕೋಪದ ಅಪಾಯದಲ್ಲಿರುವ ದೇಶಗಳಾದ ಫಿಲಿಪ್ಪೀನ್ಸ್, ನೈಜೀರಿಯಾ, ಯೆಮೆನ್, ಎಲ್ ಸಲ್ವದೋರ್ ಇತ್ಯಾದಿ ದೇಶಗಳಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಕೊರೋನ ಸೋಂಕಿನಿಂದ ಕಡಿಮೆ ಸಾವು ಸಂಭವಿಸಿದೆ. ಆದರೆ ಒಟ್ಟಾರೆ ಸುರಕ್ಷತೆಯ ವಿಷಯದಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿವೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News