ದಿಲೀಪ್ ಕುಮಾರ್- ಕಳಚಿಕೊಂಡ ನೆಹ್ರೂವಿಯನ್ ಕೊಂಡಿ

Update: 2021-07-08 05:28 GMT

ತಮ್ಮ 98ರ ಮುಪ್ಪಿನಲ್ಲಿ ದಿಲೀಪ್ ಕುಮಾರ್ ನಮ್ಮನ್ನು ಅಗಲಿದ್ದಾರೆ. ಕಳೆದ ಹತ್ತು ವರ್ಷಗಳ ಕಾಲ ಕಾಯಿಲೆಯಿಂದ ನರಳುತ್ತಿದ್ದ ಯೂಸುಫ್ ಖಾನ್ ಸಾಬ್‌ಗೆ ಇನ್ನು ನಿರ್ಗಮಿಸಬೇಕಾದ ಅನಿವಾರ್ಯತೆಯಿತ್ತು. ಈ ಭವದ ಹಂಗು ಮುಗಿದಿತ್ತು. ನೆಹ್ರೂವಿಯನ್ ಕಾಲದ ಕೊಂಡಿಯಾಗಿ ಜಗ್ಗಿಕೊಂಡಿದ್ದ ಯೂಸುಫ್ ಸಾಬ್ ಕೊನೆಗೂ ಕಳಚಿಕೊಂಡರು. ಅವರೊಬ್ಬ ಲೆಜೆಂಡ್, ಒಂದು era ಎಲ್ಲವೂ ನಿಜ.

ಅದರಾಚೆಗೂ ವ್ಯಕ್ತಿತ್ವ ಮತ್ತು ಕಲೆ ಪರಸ್ಪರ ಬೆರೆತ ಸೊಬಗಿನ ಪ್ರತೀಕವಾಗಿದ್ದರು. ಮೇಲಾ, ಜುಗ್ನೂ, ಅಂದಾಝ್, ಜೋಗನ್, ಫುಟ್ ಪಾತ್, ದಾಗ್, ಆನ್, ಪೈಗಾಮ್, ಆಝಾದ್, ಅಮರ್, ಮದುಮತಿ, ನಯಾ ದೌರ್, ಗಂಗಾ ಜಮುನಾ, ಮೊಘಲ್ ಎ ಅಝಮ್, ಶಹೀದ್, ರಾಮ್ ಔರ್ ಶ್ಯಾಮ್, ಕೊಹಿನೂರ್, ದೀದಾರ್ ಯೂಸುಫ್ ಸಾಬ್ ರ ಮನೋಜ್ಞ ಅಭಿನಯದ ಸಿನೆಮಾಗಳು. 1922ರಲ್ಲಿ ಪೇಶಾವರದಲ್ಲಿ (ಈಗ ಪಾಕಿಸ್ತಾನದಲ್ಲಿದೆ) ಹುಟ್ಟಿದ ಯೂಸುಫ್ ಖಾನ್ 1943ರಲ್ಲಿ ತಂದೆಯ ಹಣ್ಣು ವ್ಯಾಪಾರ ಮುಂದುವರಿಸಲು ಇಷ್ಟವಿಲ್ಲದೆ ಮನೆ ಬಿಟ್ಟು ಓಡಿಬಂದು ಆಕಸ್ಮಿಕವಾಗಿ ಆಗಿನ ಬಾಂಬೆ ಟಾಕೀಸ್ ಒಡತಿ ದೇವಿಕಾ ರಾಣಿ ಕಣ್ಣಿಗೆ ಬಿದ್ದರು. ಈ ಯುವಕನಲ್ಲಿ ಪ್ರತಿಭೆಯ ಚುಂಬಕತೆ ಇದೆ ಎಂದು ಗ್ರಹಿಸಿದ ದೇವಿಕಾ ಅವರು ಖಾನ್ ಗೆ ತಿಂಗಳಿಗೆ 1,250 ರೂ. ವೇತನ ನೀಡಿ ನಟನಾಗಿ ಪಾತ್ರಗಳನ್ನು ಕೊಟ್ಟರು. ಅಲ್ಲಿಂದ ಯೂಸುಫ್ ಖಾನ್ ನಂತರ ದಿಲೀಪ್ ಕುಮಾರ್ ಆಗಿ ಬೆಳೆದುಬಂದ ಇತಿಹಾಸ ಇಡೀ ಭಾರತೀಯ ಸಿನೆಮಾರಂಗದ ಕಥನವೂ ಹೌದು. ಆಗ ಸ್ವಾತಂತ್ರಪೂರ್ವದ ಕಾಲ ಅಥವಾ ಸ್ವಾತಂತ್ರ ಇನ್ನೇನು ದೊರಕುವ ದಿನಗಳು. 1947ರಲ್ಲಿ ನೂರ್ ಜಹಾನ್ ಜೊತೆಗೆ ನಟಿಸಿದ ‘ಜುಗ್ನೂ’ ಸಿನೆಮಾ ಹದಿಹರೆಯದ ದಿಲೀಪ್ ಕುಮಾರ್‌ಗೆಖ್ಯಾತಿ ತಂದುಕೊಟ್ಟಿತು. ಮುಂದೆ ಅಮೆರಿಕದ ನಟ ಪೌಲ್ ಮುನಿಯಿಂದ ಪ್ರಭಾವಿತರಾಗಿ ನಟನೆಯಲ್ಲಿ ವಾಸ್ತವತೆಯನ್ನು ಬೆರೆಸುವ ಕಲೆಯನ್ನು ಕರಗತ ಮಾಡಿಕೊಂಡರು ಮತ್ತು ಎಂತಹ ಬಾವೋದ್ರೇಕ ದೃಶ್ಯಗಳಲ್ಲಿಯೂ ಅದು ಕೊಂಚವೂ ಮೆಲೋಡ್ರಾಮವಾಗದಂತೆ ಎಚ್ಚರ ವಹಿಸಿದರು. ಉದಾಹರಣೆಗೆ 1948ರಲ್ಲಿ ಬಿಡುಗಡೆಯಾದ ಮೆಹಬೂಬ್ ಖಾನ್ ನಿರ್ದೇಶನದ ‘ಅಂದಾಝ್’ ಸಿನೆಮಾದಲ್ಲಿ ದಿಲೀಪ್ ಕುಮಾರ್ ಮತ್ತು ರಾಜ್‌ಕಪೂರ್ ಮುಖಾಮುಖಿಯಾದ ದೃಶ್ಯಗಳನ್ನು ನೋಡಿ. ಅಲ್ಲಿ ದಿಲೀಪ್ ಸಾಬ್ ಸಂಯಮದ ಮೆಥಡ್ ನಟನೆಯ ಪ್ರಯೋಗ ಮಾಡುತ್ತಿದ್ದರೆ ರಾಜಕಪೂರ್ ಟಿಪಿಕಲ್ ಭಾರತೀಯ ಶೈಲಿಯ ಎಡಬಿಡಂಗಿತನ ಪ್ರದರ್ಶಿಸುತ್ತಿದ್ದರು. ಐವತ್ತರ ದಶಕದಲ್ಲಿ ನಟನೆ ಎಂಬುದು ಮೆಲೋಡ್ರಾಮಭರಿತವಾಗಿದ್ದಾಗ ಅದು ಹಾಗಲ್ಲ ಅದು ಹೀಗೆ ಎಂದು ಭಾರತ ಸಿನೆಮಾರಂಗಕ್ಕೆ ಮೆಥಡ್ ಆಕ್ಟಿಂಗ್ ನ್ನು ಪರಿಚಯಿಸಿದ ಯೂಸುಫ್ ಸಾಬ್ ಇಡೀ ನಟನೆ ಎನ್ನುವ ಕಲೆಗೆ ಒಂದು ಘನತೆ ಮತ್ತು ವೃತ್ತಿಪರತೆ ತಂದುಕೊಟ್ಟವರು ದಿಲೀಪ್ ಕುಮಾರ್.

ಯೂಸುಫ್ ಸಾಬ್ ಉದ್ದೇಶಪೂರ್ವಕವಾಗಿ ರೂಢಿಸಿಕೊಂಡ ಮೆಥಡ್ ಆಕ್ಟಿಂಗ್ ಎಂದಿಗೂ ಕೃತಕವಾಗಿರಲಿಲ್ಲ ಮತ್ತು ಪೇಲವವಾಗಿರಲಿಲ್ಲ. ಐವತ್ತರ ದಶಕದ ಆ ಮೆಲೋಡ್ರಾಮ ಅತಿ ಭಾವುಕತೆಯ ದಿನಗಳಲ್ಲಿ ಶಹೀದ್ ಸಿನೆಮಾದ ಕ್ರಾಂತಿಕಾರಿ, ಪೈಗಾಮ್ ಸಿನೆಮಾದ ಟ್ರೇಡ್ ಯೂನಿಯನ್ ನಾಯಕ, ಅಮರ್ ಸಿನೆಮಾದ ಅರಾಜಕ, ವಿಕ್ಷಿಪ್ತ ವ್ಯಕ್ತಿ, ಫುಟ್ ಪಾತ್ ಸಿನೆಮಾದ ಬ್ಲಾಕ್ ಮಾರ್ಕೆಟರ್, ಜೋಗನ್ ಸಿನೆಮಾದ ನಾಸ್ತಿಕ, ದಾಗ್ ಸಿನೆಮಾದ ಹಳ್ಳಿಗಾಡಿನ ನಿರುದ್ಯೋಗಿ ಮುಂತಾದ ಪಾತ್ರಗಳಿಗೆ ತನ್ನ ಸಂಯಮದ ಮೆಥಡ್ ನಟನೆಯ ಮೂಲಕ ದಿಲೀಪ್ ಕುಮಾರ್ ಮತ್ತೊಂದು ಆಯಾಮವನ್ನು ಸೃಷ್ಟ್ಟಿಸಿದರು. ನಟನೆಯ ಕಲೆಯನ್ನು ಮರುವ್ಯಾಖ್ಯಾನಿಸಿದ ಯೂಸುಫ್ ಸಾಬ್ ಜನಪ್ರಿಯ ಸಿನೆಮಾಗಳಲ್ಲಿಯೂ ಸಂಕೀರ್ಣ ಸಂಗತಿಗಳನ್ನು ಅಡ್ರೆಸ್ ಮಾಡುತ್ತಿದ್ದರು. ಆ ಐವತ್ತರ ದಶಕದಲ್ಲಿ ವಿಭಜನೆಪೂರ್ವ ಭಾರತದ ನೆನಪುಗಳನ್ನು ಮತ್ತೆ ಮತ್ತೆ ಮರುಕಳಿಸುವಂತಹ ಕಥನಗಳನ್ನು ಸಮರ್ಥವಾಗಿ ಬಳಸಿಕೊಂಡ ದಿಲೀಪ್ ಕುಮಾರ್ ಆ ನಿರೂಪಣೆಗೆ ಹೊಸ ತಿರುವುಗಳನ್ನು ಕೊಡಬಲ್ಲವರಾಗಿದ್ದರು. ‘ನಟ ಮತ್ತು ನಕ್ಷತ್ರ’ (actor and star) ಎರಡೂ ಅಗಬಲ್ಲೆ ಎನ್ನುವ ಎದೆಗಾರಿಕೆ ಯೂಸುಫ್ ಸಾಬ್ ಗಿತ್ತು. ಏಕೆಂದರೆ ನಟನೆಗೆ ವಿಮರ್ಶಾತ್ಮಕ ಸ್ಪರ್ಶ ಕೊಟ್ಟ ದಿಲೀಪ್ ಕುಮಾರ್ ಅದನ್ನು ಮತ್ತೊಂದು ಸ್ತರಕ್ಕೆ ಒಯ್ಯಬಲ್ಲವರಾಗಿದ್ದರು. ಯಾವುದೇ ಅಭಿನಯದ ತರಬೇತಿ ಇಲ್ಲದೇ ಈ ಕೌಶಲ್ಯವನ್ನು ಮೈಗೂಡಿಸಿಕೊಂಡ ದಿಲೀಪ್ ಕುಮಾರ್ ರ ನಟನೆಯ ಆ ಅನನ್ಯತೆ ಇಂದಿಗೂ ಒಂದು ಅಚ್ಚರಿ. ಈ ನೆಲೆಯಲ್ಲಿ ತಮ್ಮ ಸಮಕಾಲೀನ ನಟರಾದ ರಾಜ್ ಕಪೂರ್, ದೇವ್ ಆನಂದ್ ಗಿಂತ ತುಂಬಾ ಭಿನ್ನವಾಗಿ ಕಾಣುತ್ತಾರೆ ಮತ್ತು ಮುಖ್ಯವಾಗಿ ಮೆಹಬೂಬ್ ಖಾನ್, ನಿತಿನ್ ಭೋಸ್, ಬಿಮಲ್ ರಾಯ್‌ರಂತಹ ನಿರ್ದೇಶಕರು ದೊರಕಿದ್ದು ಯೂಸುಫ್ ಸಾಬ್‌ರ ಅದೃಷ್ಟ್ಟವೂ ಹೌದು. ದಿಲೀಪ್ ಕುಮಾರ್ ಕೇವಲ ಚಾರಿತ್ರಿಕ ನಟ ಮಾತ್ರವಲ್ಲ. ಅವರು ಸ್ವಾತಂತ್ರಾ ನಂತರದ 1950-60ರ ದಶಕದ ಸೌಹಾರ್ದ ಮತ್ತು ಸೆಕ್ಯುಲರಿಸಂನ ಕೊನೆಯ ಕೊಂಡಿಯಾಗಿದ್ದರು. ಹಿಂದಿ, ಉರ್ದು, ಪಾಶ್ತೋ ಭಾಷೆಯನ್ನು ಸರಾಗವಾಗಿ ಮಾತನಾಡಬಲ್ಲ ಯೂಸುಫ್ ಸಾಬ್ ಉರ್ದು ಕೇವಲ ಭಾಷೆಯಲ್ಲ ಅದು ಸಂಸ್ಕೃತಿ, ಬದುಕು ಎಂದು ಅಥೆಂಟಿಕ್ ಆಗಿ ಹೇಳಬಹುದಾಗಿದ್ದರು. ಇಂದು ಭಾಷೆಯೂ ಮತೀಯವಾದಕ್ಕೆ ಬಲಿಯಾಗುತ್ತಿರುವಾಗ ಒಂದು ಕಾಲದಲ್ಲಿ ಅದನ್ನು ಸುರಕ್ಷಿತವಾಗಿ ಕಾಪಾಡಬಲ್ಲಂತಹ ಛಾತಿ ಹೊಂದಿದ್ದರು. ಆಗಿನ ದಿಲೀಪ್ ಕುಮಾರ್ ಸಿನೆಮಾಗಳಿಗೆ ಶಕೀಲ್ ಬದಾನಿ ಹಾಡುಗಳು, ನೌಶಾದ್ ಸಂಗೀತ, ಮುಹಮ್ಮದ್ ರಫಿ, ತಲಾತ್ ಮೆಹಮೂದ್ ಗಾಯನ ಸಾಮಾನ್ಯವಾಗಿರುತ್ತಿತ್ತು. ಇದರ ನಿಜದ ಮಹತ್ವವನ್ನು ಈ ತಲೆಮಾರಿಗೆ ಹೇಗೆ ಗೊತ್ತು ಮಾಡಿಸುವುದು?

ಭಾರತದಂತಹ ಬಹುಸಂಸ್ಕೃತಿಯ, ಸಂಕೀರ್ಣ ದೇಶದ ನಾಡಿ ಮಿಡಿತ ಅರಿತವರಂತೆ ತಮ್ಮ ನಟನೆಯನ್ನು ರೂಪಿಸಿಕೊಂಡ ಯೂಸುಫ್ ಖಾನ್ ಒಂದು ಮಾನವೀಯತೆ ಪರಂಪರೆಯ ಕೊಂಡಿಯಾಗಿದ್ದರು.Now we lost it.  ಕ್ರಮೇಣ ಯೂಸುಫ್ ಖಾನ್‌ಗೆ ಸಿನೆಮಾರಂಗವು ಕೈಗಾರೀಕರಣಗೊಂಡಿದ್ದು ಖೇದವನ್ನುಂಟು ಮಾಡಿತ್ತು. ಅದು ಕಲಾವಿದರನ್ನು ಸಂಕುಚಿತರನ್ನಾಗಿಸಿತು ಎಂದೇ ನಂಬಿದ್ದರು. ಅಭಿವೃದ್ಧಿ ಮತ್ತು ನಾಗರಿಕತೆ ಎರಡೂ ಬೇರೆ ಬೇರೆ ಎಂದು ಹೇಳುತ್ತಿದ್ದರು. ದಿಲೀಪ್ ಕುಮಾರ್ ವಿವಾದಗಳಿಂದ ಹೊರತಾಗಿರಲಿಲ್ಲ. 1998ರಲ್ಲಿ ಪಾಕಿಸ್ತಾನ ಸರಕಾರವು ದಿಲೀಪ್ ಕುಮಾರ್ ಗೆ ‘ನಿಶಾನೆ ಎ ಇಮ್ತಿಯಾಝ್’ ಪ್ರಶಸ್ತಿ ನೀಡಿ ಗೌರವಿಸಿತು. ಆದರೆ 1999ರಲ್ಲಿ ಕಾರ್ಗಿಲ್ ಯುದ್ಧ ಶುರುವಾದ ಸಂದರ್ಭದಲ್ಲಿ ಶಿವಸೇನೆಯ ಬಾಳಾ ಠಾಕ್ರೆ ಆ ಪ್ರಶಸ್ತಿಯನ್ನು ಹಿಂದಿರುಗಿಸಬೇಕೆಂದು ಒತ್ತಾಯಿಸಿದರು. ಆದರೆ ದಿಲೀಪ್ ಕುಮಾರ್ ಈ ಒತ್ತಡಕ್ಕೆ ಮಣಿಯಲಿಲ್ಲ.

ಮೊಘಲ್ ಎ ಅಝಮ್ ಸಿನೆಮಾದಲ್ಲಿ ಸಲೀಂ(ದಿಲೀಪ್ ಕುಮಾರ್) ತನ್ನ ತಂದೆ ಅಕ್ಬರ್ ಗೆ (ಪೃಥ್ವಿರಾಜ್ ಕಪೂರ್) ಹೇಳುತ್ತಾನೆ

‘ನನ್ನ ಹೃದಯದ ಮೇಲೆ ಅಧಿಕಾರ ಚಲಾಯಿಸಲು ಅದು ನಿಮ್ಮ ಹಿಂದು ಸ್ತಾನವಲ್ಲ.....’

ಇಂದು ಈ ರೀತಿಯ ಮುಸ್ಲಿಂ ಪಾತ್ರಗಳು ಈ ರೀತಿಯ ಡೈಲಾಗ್ ಹೇಳಲು ಸಾಧ್ಯವಿಲ್ಲದಂತಹ ಅಸಹಿಷ್ಣುತೆಯ ಭಾರತವನ್ನು ನಿರ್ಮಾಣ ಮಾಡಿದ್ದೇವೆ. ಯೂಸುಫ್ ಖಾನ್ ನೆಹ್ರೂವಿಯನ್ ಕಾಲದವರು. ಆಗ ನೆಹರೂ ಅವರ ಅಚ್ಚುಮೆಚ್ಚಿನ ಹುಡುಗ. ಯೂಸುಫ್ ಸಾಬ್ ಗೆ ಸೆಕ್ಯುಲರಿಸಂ ಎನ್ನುವುದು ಸಹಜವಾದ ಬದುಕಾಗಿತ್ತು. ನಮ್ಮಂತೆ ಪ್ರಜ್ಞಾಪೂರ್ವಕವಾಗಿ ವರ್ತಿಸುವ ದರ್ದು ಇರಲಿಲ್ಲ. ದಿಲೀಪ್ ಕುಮಾರ್ ಸಾವಿನಿಂದ ಆ ನೆಹ್ರೂವಿಯನ್ ಸೆಕ್ಯುಲರಿಸಂನ ಕೊಂಡಿಯೂ ಕಳಚಿಕೊಂಡಿತು. ಹೋಗಿ ಬನ್ನಿ ಯೂಸುಫ್ ಸಾಬ್

 ಐ ಮೇರೆ ದಿಲ್ ಕಹೀ ಔರ್ ಚಲ್

ಗಮ್ ಕಿ ದುನಿಯಾ ಸೆ ದಿಲ್ ಭರ್ ಗಯಾ

ಡೂಂಡಲೆ ಅಬ್ ಕೋಯಿ ಘರ್ ನಯಾ

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News