ದುಬೈ ಪ್ರಮುಖ ವಿಮಾನ ನಿಲ್ದಾಣದಲ್ಲಿ 2 ವಿಮಾನಗಳ ಮಧ್ಯೆ ಢಿಕ್ಕಿ: ಅಪಾಯದಿಂದ ಪಾರಾದ ಪ್ರಯಾಣಿಕರು
ದುಬೈ: ದುಬೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಮುಂಜಾನೆ ಟ್ಯಾಕ್ಸಿ ವೇಯಲ್ಲಿ ಫ್ಲೈ ದುಬೈ ಹಾಗೂ ಬಹ್ರೈನ್ ಮೂಲದ ಗಲ್ಫ್ ಏರ್ ನ ಎರಡು ಪ್ರಯಾಣಿಕ ಜೆಟ್ ಗಳ ನಡುವೆ ಢಿಕ್ಕಿ ಸಂಭವಿಸಿದೆ. ಆದರೆ ಘಟನೆಯಲ್ಲಿ ಯಾವುದೇ ಸಾವು-ನೋವಾಗಿಲ್ಲ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.
ಕಿರ್ಗಿಸ್ತಾನ್‌ಗೆ ತೆರಳುತ್ತಿರುವ ತಮ್ಮ ಸಂಸ್ಥೆಯ ಬೋಯಿಂಗ್ 737-800 ವಿಮಾನವು ಸಣ್ಣ ಘಟನೆಯಿಂದಾಗಿ ಸ್ಟ್ಯಾಂಡ್‌ಗೆ ಮರಳಬೇಕಾಯಿತು. ಪ್ರಯಾಣಿಕರು ಆರು ಗಂಟೆಗಳ ನಂತರ ನಿರ್ಗಮಿಸಿರುವ ಮತ್ತೊಂದು ವಿಮಾನದಲ್ಲಿ ಪ್ರಯಾಣ ಬೆಳೆಸಿದರು ಎಂದು ಫ್ಲೈ ದುಬೆ ತಿಳಿಸಿದೆ.
"ಫ್ಲೈ ದುಬೈ ಈ ಘಟನೆಯ ಕುರಿತು ತನಿಖೆಗಾಗಿ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತದೆ" ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ತನ್ನ ಸಂಸ್ಥೆಯ ಒಂದು ವಿಮಾನವು ಮತ್ತೊಂದು ವಿಮಾನಕ್ಕೆ ಢಿಕ್ಕಿಯಾಗಿದೆ ಎಂದು ಗಲ್ಫ್ ಏರ್ ತಿಳಿಸಿದೆ. ಆದರೆ ಢಿಕ್ಕಿಯಾಗಿರುವ ವಿಮಾನವನ್ನು ಗಲ್ಫ್ ಏರ್ ಗುರುತಿಸಿಲ್ಲ.
ಗಲ್ಫ್ ಏರ್ ವಿಮಾನವು ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಕರನ್ನು ಹೊತ್ತುಕೊಂಡು ಬಹರೈನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು.
ಎರಡು ವಿಮಾನಗಳ ನಡುವೆ ಢಿಕ್ಕಿಯಾದ ಬಳಿಕ ದುಬೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಎರಡು ರನ್‌ವೇಗಳಲ್ಲಿ ಒಂದನ್ನು ಎರಡು ಗಂಟೆಗಳ ಕಾಲ ಸ್ಥಗಿತಗೊಳಿಸಬೇಕಾಯಿತು. ಮುಚ್ಚುವಿಕೆಯಿಂದ ಕಾರ್ಯಾಚರಣೆಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಅದು ಹೇಳಿದೆ.