ಅಬುಧಾಬಿಯ ಉನ್ನತ ಸರ್ಕಾರಿ ಉದ್ಯಮ ಸಂಸ್ಥೆಯ ಉಪಾಧ್ಯಕ್ಷರಾಗಿ ಭಾರತೀಯ ಉದ್ಯಮಿ ಯೂಸುಫ್ ಅಲಿ ನೇಮಕ
ಅಬುದಾಭಿ,ಜು.25: ಖ್ಯಾತ ಎನ್ಆರ್ಐ ಉದ್ಯಮಿ ಹಾಗೂ ಲುಲು ಉದ್ಯಮಸಮೂಹದ ಆಡಳಿತ ನಿರ್ದೇಶಕ ಎಂ.ಎ.ಯೂಸುಫ್ ಅಲಿ ಅವರು ಅಬುದಾಭಿ ವಾಣಿಜ್ಯ ಹಾಗೂ ಕೈಗಾರಿಕಾ ಮಂಡಳಿ(ಎಡಿಸಿಸಿಐ)ಯ ಆಡಳಿತ ಮಂಡಳಿಗೆ ನೇಮಕಗೊಂಡಿದ್ದಾರೆ.
ಅಬುದಾಭಿಯ ಯುವರಾಜಹಾಗೂ ಯುಎಇ ಸಶಸ್ತ್ರ ಪಡೆಗಳ ಉಪ ಸರ್ವೋನ್ನತ ಕಮಾಂಡರ್ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ರವಿವಾರ ಅಬುದಾಭಿ ವಾಣಿಜ್ಯ ಮಂಡಳಿಯ ನೂತನ ನಿರ್ದೇಶಕರ ಮಂಡಳಿ ರಚಿಸಿ ಆದೇಶ ಹೊರಡಿಸಿದ್ದು ಅಧ್ಯಕ್ಷರಾಗಿ ಅಬ್ದುಲ್ಲಾ ಮುಹಮ್ಮದ್ ಅಲ್ ಮರೆಝ್ರಿಯಿ ಹಾಗೂ ಪ್ರಮುಖ ಎನ್ಆರ್ಐ ಉದ್ಯಮಿ ಯೂಸುಫ್ ಅಲಿ ಎಂ.ಎ. ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ.
ಎಡಿಸಿಸಿಐ ಅಬುದಾಭಿಯ ಎಲ್ಲಾ ಉದ್ಯಮಸಂಸ್ಥಾಪನೆಗಳ ಸರ್ವೋನ್ನತ ಸರಕಾರಿ ಸಂಸ್ಥೆಯಾಗಿದೆ. ಸರಕಾರ ಹಾಗೂ ಉದ್ಯಮವಲಯದ ನಡುವೆ ಸೇತುವೆಯಾಗಿ ಅದು ಕಾರ್ಯನಿರ್ವಹಿಸುತ್ತದೆ. ಅತ್ಯಂತ ಶ್ರೀಮಂತ ಹಾಗೂ ಪ್ರಭಾವಿ ಆರ್ಥಿಕ ವಲಯಗಳಲ್ಲೊಂದಾದ ಅಬುದಾಬಿ ಪ್ರಾಂತದಲ್ಲಿ ಸ್ಥಾಪನೆಯಾಗುವ ಪ್ರತಿಯೊಂದು ಉದ್ಯಮ ಸಂಸ್ಥಾಪನೆಯೂ ಎಡಿಸಿಸಿಐನಿಂದ ಪರವಾನಿಗೆಯನ್ನು ಪಡೆಯುವುದು ಕಡ್ಡಾಯವಾಗಿದೆ.
ಯೂಸುಫ್ ಅಲಿ ಅವರು ಎಡಿಸಿಐನ 29 ಸದಸ್ಯರ ಮಂಡಳಿಯಲ್ಲಿರುವ ಏಕೈಕ ಭಾರತೀಯರಾಗಿದ್ದಾರೆ.