ಕಬಿನಿ ಪ್ರವಾಹದಿಂದ ಮನೆಗಳು ಕೊಚ್ಚಿ ಹೋಗಿ 2 ವರ್ಷ
ಮೈಸೂರು : ಕಬಿನಿ ಪ್ರವಾಹದಿಂದ ಮನೆ ಕಳೆದುಕೊಂಡು ಎರಡು ವರ್ಷ ಕಳೆದರೂ, ಸ್ಥಳೀಯ ಶಾಸಕ, ತಹಶೀಲ್ದಾರ್ ಸೇರಿದಂತೆ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿ ಚಲುವಿ ಆರೋಪಿಸಿದ್ದಾರೆ.
ರಾಜ್ಯ ಸರಕಾರ ಮನೆ ಕಟ್ಟಿಸಿಕೊಡದೆ ನಮಗೆ ನಿರಂತರ ವಂಚಿಸುತ್ತಿದೆ ಎಂದು ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಬಿದರಹಳ್ಳಿ ಸರ್ಕಲ್ ಗ್ರಾಮದ ನಿರಾಶ್ರಿತ ಕುಟುಂಬಗಳು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದಿನ ನೀರಾವರಿ ಸಚಿವರಿಗೂ ಮನವಿ ಸಲ್ಲಿಸಲಾಗಿದೆ. ಕಬಿನಿಗೆ ಬಾಗಿನ ಅರ್ಪಿಸಲು ಬಂದಿದ್ದ ಮುಖ್ಯಮಂತ್ರಿಗೂ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಅನುಕೂಲಗಳು ದೊರೆಯದೆ ಬೀದಿ ಪಾಲಾಗಿದ್ದೇವೆ ಎಂದು ನಿವಾಸಿ ಚಲುವಿ ಅಳಲು ತೋಡಿಕೊಂಡಿದ್ದಾರೆ.
ಕಪಿಲಾ ನದಿ ದಡದ ಅಂಚಿನಲ್ಲಿರುವ ಸುಮಾರು 42 ಕುಟುಂಬದ ಮನೆಗಳು 2019ರ ಆಗಸ್ಟ್‌ನಲ್ಲಿ ಬಂದ ಪ್ರವಾಹದಿಂದಾಗಿ ಜಲಾವೃತಗೊಂಡು ಕೊಚ್ಚಿಹೋಗಿದ್ದು, ಅವರ ಬದುಕು ಮೂರಾಬಟ್ಟೆಯಾಗಿದೆ. ಮಕ್ಕಳು, ವೃದ್ಧರು ಸೇರಿದಂತೆ ಕುಟುಂಬದ ಸದಸ್ಯರು ಜೀವನ ನಡೆಸಲು ಸಾಧ್ಯವಾಗದೆ ಸಂಬಂಧಿಕರ ಮನೆ, ವಿವಿಧೆಡೆಗೆ ಅಲೆದಾಡುತ್ತಿದ್ದೇವೆ ಎಂದು ಅವರು ಅಳಲು ತೋಡಿಕೊಂಡರು.
ಅಂದಿನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ ನಿರಾಶ್ರಿತರ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಗಳನ್ನು ಸ್ಥಳಾಂತರಿಸಿ 3 ತಿಂಗಳ ಒಳಗಾಗಿ ಹೊಸ ಮನೆಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಅದು ಕಾರ್ಯರೂಪಕ್ಕೆ ಬಾರದಿರುವುದಕ್ಕೆ ನೊಂದ ಕುಟುಂಬಗಳು ಅಸಮಾಧಾನ ವ್ಯಕ್ತಪಡಿಸಿದೆ.
ರಾಜ್ಯ ಸರಕಾರ ಎರಡು ವರ್ಷಗಳ ಸಾಧನೆ ಬಗ್ಗೆ ಜು.26ರಂದು ಪತ್ರಿಕೆಗಳಿಗೆ ಜಾಹೀರಾತು ನೀಡಿದ್ದು, ಅದರಲ್ಲಿ ಬಿದರಹಳ್ಳಿ ಗ್ರಾಮದ ಜನರಿಗೂ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಪ್ರಕಟವಾಗಿದೆ. ಇದುವರೆಗೂ ಒಂದು ಕಡ್ಡಿ ಕೆಲಸವನ್ನು ಇವರು ಮಾಡಿಲ್ಲ. ಈ ರೀತಿಯ ಜಾಹೀರಾತು ನೋಡಿ ನಮಗೆ ದಿಗ್ಭ್ರಮೆಯಾಗಿದೆ. ಇಂತಹ ಸುಳ್ಳುಗಳನ್ನು ಹೇಳಿ ರಾಜ್ಯ ಸರಕಾರ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ನೊಂದ ಕುಟುಂಬಗಳು ಅಸಮಾಧಾನ ವ್ಯಕ್ತಪಡಿಸಿದೆ.
ಮತ್ತೆ ಪ್ರವಾಹದ ಬೀತಿ ಎದುರಾಗಿದೆ. ಮನೆಗಳು ಪ್ರವಾಹಕ್ಕೆ ಬಿದ್ದು ಹೋಗಿದ್ದು, ಅಳಿದುಳಿದವರು ಶೆಡ್‌ಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದೇವೆ. ಕೆಲವರು ಸಂಬಂಧಿಕರ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಇದೇ ರೀತಿ ನಾವು ಎಷ್ಟು ದಿನ ಕಾಲ ಕಳೆಯುವುದು, ನಮ್ಮ ಮಕ್ಕಳು ಅಮ್ಮ, ನಾವು ಇಲ್ಲಿಂದ ಬೇರೆ ಎಲ್ಲಿಗಾದರೂ ಹೋಗೋಣವೇ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ನಮಗೆ ಈ ಊರು ಬಿಟ್ಟರೆ ಬೇರೆ ದಾರಿಯಿಲ್ಲ ನಾವು ಎಲ್ಲಿಗೆ ಹೋಗುವುದು ಎಂದು ಅವರು ಪ್ರಶ್ನಿಸಿದರು.
ಸರಗೂರು ತಾಲೂಕು ಬಿದರಹಳ್ಳಿ ಗ್ರಾಮದಿಂದ ಗುರುವಾರ ಮೈಸೂರಿಗೆ ಆಗಮಿಸಿದ ನಿರಾಶ್ರಿತ ಕಟುಂಬದ ಸದಸ್ಯರಾದ ಚೆಲುವಿ, ಪದ್ಮಾ, ಸತ್ಯ ಮೂರ್ತಿ, ಮಂಜುಳಾ, ಕಾಳಮ್ಮ, ಶಾಂತಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಪುನರ್ವಸತಿ ಕಲ್ಪಿಸಿ ಜೀವನ ನಡೆಸಲು ಅವಕಾಶ ನೀಡಬೆಕು ಎಂದು ಮನವಿ ಸಲ್ಲಿಸಿದ್ದಾರೆ.
ಒಂದು ತಿಂಗಳ ಒಳಗೆ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಬೇಕು. ಇಲ್ಲದಿದ್ದರೆ ಎಸ್.ಯು.ಸಿ.ಐ. ಕಮ್ಯೂನಿಷ್ಟ್ ಪಕ್ಷದೊಂದಿಗೆ ನೊಂದ ಕುಟುಂಬಗಳ ಸಮೇತ ಜಿಲ್ಲಾಧಿಕಾರಿ ಕಚೇರಿಯ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು.
-ಬಿ.ರವಿ, ಕಮ್ಯೂನಿಷ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ
ಹಲವು ಬಾರಿ ಹೋರಾಟ ಮಾಡಿದ್ದರೂ ನಿರಾಶ್ರಿತರ ಬಗ್ಗೆ ರಾಜ್ಯ ಸರಕಾರ ಗಮನ ಹರಿಸುತ್ತಿಲ್ಲ, ಆದರೆ ಸರಕಾರದ ಎರಡು ವರ್ಷಗಳ ಸಾಧನೆಯಲ್ಲಿ ಬಿದರಹಳ್ಳಿ ಸರ್ಕಲ್ ನಿರಾಶ್ರಿತರಿಗೆ ಮನೆ ಕಟ್ಟಿಕೊಟ್ಟಿರುವುದಾಗಿ ಸುಳ್ಳು ಜಾಹಿರಾತು ನೀಡಲಾಗಿದೆ.
- ಟಿ.ಆರ್. ಸುನಿಲ್, ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯ
ಮಹಿಳೆಯರು ಸೇರಿದಂತೆ ಸಣ್ಣ ಮಕ್ಕಳು ಮನೆ ಇಲ್ಲದೆ ಶೆಡ್‌ಗಳಲ್ಲಿ ವಾಸ ಮಾಡುತ್ತಿದ್ದಾರೆ. ಅವರ ಬದುಕನ್ನು ಕಂಡರೆ ಕರುಳು ಹಿಂಡುತ್ತದೆ. ದಯಮಾಡಿ ರಾಜ್ಯ ಸರಕಾರ ಇವರತ್ತ ಗಮನಹರಿಸಬೇಕಿದೆ. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು.
- ಸೀಮಾ, ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯೆ