ಭಾರತದಿಂದ ಆಗಮಿಸುವ ಯುಎಇ ನಿವಾಸಿಗಳಿಗೆ 10 ದಿನದ ಕ್ವಾರಂಟೈನ್

Update: 2021-08-05 15:54 GMT

ಅಬುಧಾಬಿ, ಆ.5: ಭಾರತದಿಂದ ವಿಮಾನದ ಮೂಲಕ ಅಬುಧಾಬಿ ಮತ್ತು ರಾಸ್ ಅಲ್ ಖೈಮಾಕ್ಕೆ ಆಗಮಿಸುವ ಯುಎಇ ನಿವಾಸಿಗಳಿಗೆ 10 ದಿನದ ಕ್ವಾರಂಟೈನ್ ಕಡ್ಡಾಯಗೊಳಿಸಿ ಯುಎಇ ಪ್ರಧಾನ ವಿಮಾನಯಾನ ಪ್ರಾಧಿಕಾರ ಆದೇಶ ಜಾರಿಗೊಳಿಸಿದೆ ಎಂದು ‘ಖಲೀಜ್ ಟೈಮ್ಸ್’ ವರದಿ ಮಾಡಿದೆ.

   ಭಾರತ, ಪಾಕ್, ಶ್ರೀಲಂಕಾ, ನೇಪಾಳ, ನೈಜೀರಿಯಾ ಮತ್ತು ಉಗಾಂಡಾದಿಂದ ಆಗಮಿಸುವ ಪ್ರಯಾಣಿಕರಿಗೆ 10 ದಿನದ ಕ್ವಾರಂಟೈನ್‌ನ ಜೊತೆಗೆ ಅವರು ಕ್ವಾರಂಟೈನ್‌ನ 4 ಮತ್ತು 8ನೇ ದಿನದಲ್ಲಿ ಪಿಸಿಆರ್ ಪರೀಕ್ಷೆ ನಡೆಸಬೇಕು ಎಂದು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಎರಡು ವಿಮಾನ ನಿಲ್ದಾಣಗಳಲ್ಲಿ ಇಳಿದುಕೊಳ್ಳುವ ಪ್ರಯಾಣಿಕರು, ಕ್ವಾರಂಟೈನ್ ಅವಧಿಯಲ್ಲಿ ಜಾಡು ಅನುಸರಿಸುವ ಸಾಧನ(ಟ್ರ್ಯಾಕಿಂಗ್ ಡಿವೈಸ್) ಧರಿಸುವಂತೆ ಸೂಚಿಸಿ ಏರಿಂಡಿಯಾ ಮತ್ತು ಏರಿಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಗಳು ಎಲ್ಲಾ ಟ್ರಾವೆಲ್ ಏಜೆಂಟರಿಗೆ ಸಲಹೆಯನ್ನು ರವಾನಿಸಿದೆ.

ದುಬೈ ಮತ್ತು ಶಾರ್ಜಾಕ್ಕೆ ಪ್ರಯಾಣಿಸುವವರಿಗೆ 10 ದಿನದ ಕ್ವಾರಂಟೈನ್ ಅಗತ್ಯವಿಲ್ಲ. ಆದರೆ ಅವರು ಅಲ್ಲಿಗೆ ತಲುಪಿದ ಬಳಿಕ ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ನೆಗೆಟಿವ್ ವರದಿ ಬರುವವರೆಗೆ ಕ್ಯಾರಂಟೈನ್‌ನಲ್ಲಿ ಇರುವಂತೆ ಪ್ರಯಾಣಿಕರಿಗೆ ಸಲಹೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಆಗಸ್ಟ್ 5ರಿಂದ ಎಮಿರೇಟ್ಸ್ ವಿಮಾನದ ಮೂಲಕ ದುಬೈಗೆ ಆಗಮಿಸುವ ಪ್ರಯಾಣಿಕರಿಗಿದ್ದ ಕೆಲವು ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಅರ್ಹ ಪ್ರಯಾಣಿಕರು ಜನರಲ್ ಡೈರೆಕ್ಟರೇಟ್ ಆಫ್ ರೆಸಿಡೆನ್ಸಿ ಆ್ಯಂಡ್ ಫಾರಿನರ್ಸ್ ಅಫೇರ್ಸ್(ದುಬೈಯಲ್ಲಿ ನೀಡಲಾದ ವೀಸಾ ಹೊಂದಿರುವವರು) ಅಥವಾ ಫೆಡರಲ್ ಅಥಾರಿಟಿ ಆಫ್ ಐಡೆಂಟಿಟಿ ಮತ್ತು ಸಿಟಿಝನ್‌ಶಿಪ್(ಇತರ ಎಮಿರೇಟ್ಸ್‌ಗಳಲ್ಲಿ ನೀಡಲಾದ ವೀಸಾಗಳಿಗೆ) ನಿಂದ ಅನುಮೋದನೆ ಪಡೆಯಬೇಕು. ಪ್ರಯಾಣದ 48 ಗಂಟೆ ಮುನ್ನ ನಡೆಸಿದ ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಪ್ರಮಾಣಪತ್ರ ಕಡ್ಡಾಯ. ಈ ಪರೀಕ್ಷೆಯನ್ನು ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ನಡೆಸಿರಬೇಕು ಎಂದು ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News