ನೋಟ್‌ ಬುಕ್‌ ನೊಂದಿಗೆ ತರಬೇತಿಗೆ ಹಾಜರಾಗುತ್ತಿದ್ದ ನೀರಜ್‌ ರನ್ನು ನೆನಪಿಸಿದ ಮಾಜಿ ಕೋಚ್‌ ನಸೀಮ್‌ ಅಹ್ಮದ್‌

Update: 2021-08-08 11:13 GMT
Photo: Indianexpress

ಹೊಸದಿಲ್ಲಿ: 2011ರಲ್ಲಿ ಒಂದು ಸಣ್ಣ ನೋಟ್‌ ಬುಕ್‌ ಹಿಡಿದುಕೊಂಡು ತಾವು ದೇವಿಲಾಲ್‌ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ ಗೆ ಮನೆಯಿಂದ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಪ್ರಯಾಣಿಸಿ ಆಗಮಿಸಿದ್ದ 13ರ ಹರೆಯದ ಬಾಲಕನ ಮುಖ ಈಗಲೂ ನನಗೆ ನೆನಪಿದೆ ಎನ್ನುತ್ತಾರೆ ಒಲಿಂಪಿಕ್ಸ್‌ ಸ್ವರ್ಣ ವಿಜೇತ ನೀರಾಜ್‌ ಚೋಪ್ರಾರವರ ತರಬೇತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಕೋಚ್‌ ನಸೀಮ್‌ ಅಹ್ಮದ್.‌ 

"ಆತ ಹಲವಾರು ನೆನಪುಗಳನ್ನು ಸೃಷ್ಟಿಸಿದ್ದಾನೆ. ಜೊತೆಗೆ ನಾನೂ ಕೂಡಾ" ಎನ್ನುತ್ತಾರೆ ನಸೀಂ ಅಹ್ಮದ್.‌ "ಆತ ತನ್ನ ನೋಟ್‌ ಬುಕ್‌ ನೊಂದಿಗೆ ಬಂದು ಕುಳಿತುಕೊಳ್ಳುತ್ತಿದ್ದ. ಯಾವತ್ತೂ ತರಬೇತಿಯಿಂದ ಹಿಂದೆ ಸರಿಯುತ್ತಿರಲಿಲ್ಲ. ಇವತ್ತು ಅತೀದೊಡ್ಡ ವೇದಿಕೆಯಲ್ಲಿ ಆತ ಬಂಗಾರದ ಪದಕವನ್ನು ಗೆದ್ದುಕೊಂಡು ನಿಂತಿರುವುದು ನಮ್ಮೆಲ್ಲರಲ್ಲೂ ಸಂತಸದ ಭಾವ ಸೃಷ್ಟಿಸಿದೆ. ಇಲ್ಲಿ ಆತ ತರಬೇತಿ ಪಡೆಯುತ್ತಿರುವ ಸಂದರ್ಭದಲ್ಲಿ ಸೀನಿಯರ್‌ ಗಳೊಂದಿಗೆ ಮತ್ತು ಸ್ನೇಹಿತರೊಂದಿಗೆ ಬೆರೆಯುತ್ತಿದ್ದ ರೀತಿಯಲ್ಲೇ ಆತ ಅಲ್ಲಿ ಇತರ ದೇಶದ ಸ್ಫರ್ಧಿಗಳೊಂದಿಗೆ ಕಾಲ ಕಳೆದಿರಬಹುದು" ಎಂದು ನಸೀಂ ಹೇಳುತ್ತಾರೆ.

ಚೋಪ್ರಾ ಮೊದಲು ಪಾಣಿಪತ್‌ನಲ್ಲಿ ತರಬೇತುದಾರ ಜೈವೀರ್ ಸಿಂಗ್ ಅವರಿಂದ ಜಾವೆಲಿನ್ ಎಸೆಯುವ ಕಲೆಯನ್ನು ಕಲಿತರು. ಬಳಿಕ ಪಂಚಕುಲದಲ್ಲಿ ನಸೀಂ ಅಹ್ಮದ್‌ ರ ಗರಡಿಯಲ್ಲಿ ಅವರು 2011 ರಿಂದ 2016 ರ ಆರಂಭದವರೆಗೆ ತರಬೇತಿ ಪಡೆದರು. ಶಿವಾಲಿಕ್‌ ಶ್ರೇಣಿಯ ತಪ್ಪಲಿನಲ್ಲಿ ಅವರು ಬೆಳಗ್ಗಿನ ಅವಧಿಯಲ್ಲಿ ಓಟಗಾರರೊಂದಿಗೆ ತರಬೇತಿ ನೀಡುತ್ತಿದ್ದರು. ಸಂಜೆಯ ವೇಳೆ ಜಾವೆಲಿನ್‌ ತರಬೇತಿ ನೀಡುತ್ತಾ ಶಿಸ್ತಿನಲ್ಲೇ ಅವರನ್ನು ಪಳಗಿಸಿದ್ದರು.

ಹಲವು ಆಟಗಾರರು ತಮ್ಮ ಬಿಡುವಿನ ಸಂದರ್ಭಗಳಲ್ಲಿ ತಮ್ಮ ಕಾರ್ಯಕ್ರಮದ ಕುರಿತ ಪುಸ್ತಕಗಳನ್ನು ಓದುವುದು, ಒಲಿಂಪಿಕ್ಸ್‌ ನ ಈ ಹಿಂದಿನ ವೀಡಿಯೋಗಳನ್ನು ನೋಡುತ್ತಾ ಕಾಲ ಕಳೆಯುತ್ತಿದ್ದರೆ ನೀರಜ್‌ ತಮ್ಮ ತರಬೇತಿಯ ಕಡೆಗೆ ಹೆಚ್ಚಿನ ಗಮನ ನೀಡಿದ್ದರು ಎಂದು ನಸೀಂ ಹೇಳುತ್ತಾರೆ. 

"ಆತ ನಮ್ಮ ಬಳಿ ಬಂದಿದ್ದಾಗ 55ಮೀ ತನಕ ಎಸೆಯುತ್ತಿದ್ದ. ಬಳಿಕ ಉತ್ತಮ ತರಬೇತಿ ಹಾಗೂ ಸೀನಿಯರ್‌ ಗಳೊಂದಿಗಿನ ಸ್ಫರ್ಧೆಯ ಪರಿಣಾಮ ಎಸೆತಗಾರಿಕೆ ಉತ್ತಮವಾಯಿತು. ಪ್ರತೀ ಸಂದರ್ಭ ಆತ 60,70,80 ಮೀಟರ್‌ ದಾಟುತ್ತಿದ್ದಾಗ ನಾವು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತಿದ್ದೆವು. ಈಗ ಆತನ ತನ್ನ ಹೆಸರನ್ನು ಇತಿಹಾಸದ ಪುಸ್ತಕದಲ್ಲೇ ಬರೆದಿದ್ದಾನೆ. ಇದಕ್ಕಿಂತ ಹೆಚ್ಚೇನು ಹೇಳಲಿ ಎಂದು ಅವರು ಪ್ರಶ್ನಿಸುತ್ತಾರೆ.

ಕೃಪೆ:  theindianexpress.com

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News