ಸಾಮಾಜಿಕ ಮತ್ತು ಸಮಾನತೆಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ;ಡಾ. ಬಿ. ಆರ್. ಅಂಬೇಡ್ಕರ್

Update: 2021-08-15 06:20 GMT

ಹತ್ತೊಂಬತ್ತನೆಯ ಶತಮಾನದಲ್ಲಿ ಜನಿಸಿ, ಸ್ವತಂತ್ರ ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಮತ್ತು ರಾಷ್ಟ್ರದ ಜೀವನದ ಮೇಲೆ ಮತ್ತು ರಾಜ್ಯ ವ್ಯವಸ್ಥೆಯ ಮೇಲೆ ಅಳಿಸಲಾಗದ ಮುದ್ರೆಯನ್ನು ಒತ್ತಿದ ಮಹಾನುಭಾವರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರಮುಖರು. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಎಲ್ಲರೂ ಕೇವಲ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರೆ ಅಂಬೇಡ್ಕರ್ ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಸ್ವಾತಂತ್ರ್ಯವನ್ನು ಪಡೆಯಲು ಪ್ರಯತ್ನಗಳನ್ನು ನಡೆಸಿದರು ಮತ್ತು ಆ ದಿಕ್ಕಿನಲ್ಲಿ ಯಶಸ್ಸನ್ನೂ ಸಾಧಿಸಿದರು.

 ಬ್ರಿಟಿಷರ ಪ್ರಾಬಲ್ಯವನ್ನು ಮಣಿಸಲು ಅವರು ವಸಾಹತು ಶಾಹಿಗಳ ನೈತಿಕ ಹಕ್ಕನ್ನು ಪ್ರಶ್ನಿಸಲು ಬೌದ್ಧಿಕ ಸಾಧನಗಳನ್ನು ಬಳಸಿದರು. ಸ್ವರಾಜ್ಯದ ತತ್ವಗಳನ್ನು ಎತ್ತಿಹಿಡಿದರು ಮತ್ತು ಅದೇ ಸಮಯದಲ್ಲಿ ಬ್ರಿಟಿಷರ ಆಳ್ವಿಕೆಯನ್ನು ಪ್ರಶ್ನಿಸಿದರು. ವಿಶಾಲ ಅರ್ಥದ ಸ್ವಾತಂತ್ರ್ಯವನ್ನು ಅವರು ಬಯಸಿದ್ದರು. ಸ್ವಾತಂತ್ರ್ಯವನ್ನು ಸಮಾನತೆಯಿಂದ, ಸಮಾನತೆಯನ್ನು ಸ್ವಾತಂತ್ರದಿಂದ ಪ್ರತ್ಯೇಕಿಸಲಾಗದು. ಸಮಾನತೆಯಿಲ್ಲದ ಸ್ವಾತಂತ್ರ ಬಹುಸಂಖ್ಯಾತರ ಮೇಲೆ ಕೆಲವೇ ಕೆಲವರ ದಬ್ಬಾಳಿಕೆಯಾಗಿ ಪರಿಣಮಿಸುತ್ತದೆ. ಸ್ವಾತಂತ್ರವಿಲ್ಲದ ಸಮಾನತೆ ಸ್ಫೂರ್ತಿಯ ಚಿಲುಮೆಯನ್ನು ಬತ್ತಿಸುತ್ತದೆ. ಸೋದರತ್ವವಿಲ್ಲದ ಸಮಾನತೆಗೆ ಅರ್ಥವಿಲ್ಲ. ಸೋದರತ್ವವಿಲ್ಲದ ಸಮಾನತೆ ಮತ್ತು ಸ್ವಾತಂತ್ರಗಳು ಸಹಜವಾಗಿ ಯಶಸ್ವಿಯಾಗುವುದಿಲ್ಲ ಎಂದು ಪ್ರತಿಪಾದಿಸಿದರು.

ಬ್ರಿಟಿಷ್ ಸಾಮ್ರಾಜ್ಯವು ಪರಮಾಧಿಕಾರವನ್ನು ಭಾರತ ಸರಕಾರಕ್ಕೆ ವರ್ಗಾಯಿಸುವುದಿಲ್ಲ ಎಂಬ ಕ್ಯಾಬಿನೆಟ್ ಮಿಷನ್‌ನ ಹೇಳಿಕೆಯನ್ನು ಅಂಬೇಡ್ಕರ್ ಅವರು ‘‘ರಾಜ್ಯಗಳ ಮೇಲಿನ ಪರಮಾಧಿಕಾರವನ್ನು ಭಾರತ ಸರಕಾರಕ್ಕೆ ವರ್ಗಾಯಿಸಲು ಸಾಧ್ಯವಿಲ್ಲವೆಂಬ ಹೇಳಿಕೆ ಅತ್ಯಂತ ಕುಟಿಲತನದಿಂದ ಕೂಡಿದೆ ಮತ್ತು ಸಮಸ್ಯೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇರುವುದರಿಂದ ಉದ್ಭವಿಸಿದೆ’’ ಎಂದು ಕಟುವಾಗಿ ಟೀಕಿಸಿದ್ದರು.

ಭಾರತದ ಸ್ವಾತಂತ್ರ ಹೋರಾಟದ ಹಲವು ಬಗೆಯ ಚಳವಳಿಗಳಲ್ಲಿ ಹಲವಾರು ಸ್ವಾತಂತ್ರ ಹೋರಾಟಗಾರರು ಮತ್ತು ನಾಯಕರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಂಬೇಡ್ಕರ್ ಅವರು ತಮ್ಮ ಸ್ವಾತಂತ್ರ ಹೋರಾಟದ ತಂತ್ರವನ್ನು ಸಾಮಾಜಿಕ ಸುಧಾರಣೆಯ ಸವಲತ್ತುಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟಿಸಲು ಬಳಸಿಕೊಂಡರು. ಲಂಡನ್‌ನಲ್ಲಿ ವಿದ್ಯಾರ್ಥಿಯಾಗಿದ್ದಾಗಿನಿಂದ ಹಿಡಿದು ಭಾರತ ಸ್ವಾತಂತ್ರ ಪಡೆಯುವ ದಿನದವರೆಗೂ ಭಾರತದಲ್ಲಿ ಸಾಮಾಜಿಕ ಮತ್ತು ಸಮಾನತೆಯ ಸ್ವಾತಂತ್ರಕ್ಕಾಗಿ ಅವರು ನಡೆಸಿದ ಹೋರಾಟ ಅವಿಸ್ಮರಣೀಯ. ಸಾಮಾಜಿಕ ಪರಿವರ್ತನೆಯಾಗದೆ ರಾಜಕೀಯ ಪರಿವರ್ತನೆ ಸಾಧ್ಯವಿಲ್ಲ ಎಂದು ಗಾಂಧೀಜಿಯವರಿಗೆ ಮತ್ತು ಕಾಂಗ್ರೆಸ್‌ಗೆ ಮನವರಿಕೆ ಮಾಡಿಕೊಡುತ್ತಲೇ ಇದ್ದರು. ಅನ್ಯಾಯ, ಅಸಮಾನತೆ, ಹಾಗೂ ಶೋಷಣೆಗಳ ವಿರುದ್ಧದ ಎಲ್ಲಾ ಚಳವಳಿಗಳಿಗೂ ಇಂದಿಗೂ ಅಂಬೇಡ್ಕರ್ ಅವರ ಚಿಂತನೆಗಳೇ ಕಾರಣೀಭೂತವಾಗಿವೆ. ಅಂಬೇಡ್ಕರ್ ನೇತೃತ್ವದ ಭಾರತದ ಸ್ವಾತಂತ್ರ ಹೋರಾಟವು ತುಳಿತಕ್ಕೆ ಒಳಗಾದ ವರ್ಗಗಳಿಗೆ ರಾಜಕೀಯ ಶಕ್ತಿಯ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣವನ್ನು ತರುವ ಪ್ರಮುಖ ಉದ್ದೇಶವನ್ನು ಒಳಗೊಂಡಿತ್ತು.

1885ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಜನನವಾಯಿತು. 1887ರಲ್ಲಿ ಸಾಮಾಜಿಕ ಸುಧಾರಣೆಯ ಮೂಲಕ ರಾಜಕೀಯ ಸ್ವಾತಂತ್ರವನ್ನು ಪಡೆದುಕೊಳ್ಳಬಹುದು ಮತ್ತು ಉಳಿಸಿಕೊಳ್ಳಬಹುದು ಎಂಬ ದೃಷ್ಟಿಯಿಂದ ಒಂದು ಸಮ್ಮೇಳನವೂ ನಡೆಯಿತು. ಸಾಮಾಜಿಕ ಹಿತಾಸಕ್ತಿಗಳನ್ನು ಸೃಷ್ಟಿಸುವ ಮತ್ತು ಸಾಮಾಜಿಕ ಏಕತೆಯನ್ನು ರಾಜಕೀಯವಾಗಿ ಭಾಷಾಂತರಿಸುವ ಮೂಲಕ ಎಲ್ಲಾ ವರ್ಗಗಳಿಗೂ ಸಾಮಾನ್ಯ ಹಿತಾಸಕ್ತಿ ಲಭಿಸಬೇಕು. ಎಲ್ಲರಿಗೂ ಸ್ವಾತಂತ್ರವನ್ನು ಪಡೆಯುವ ಶಕ್ತಿ ಮತ್ತು ಸಾಮಾಜಿಕವಾಗಿ ಸುಧಾರಣೆಗಳನ್ನು ತರುವ ಮೂಲಕ ಸಮಾಜದ ಅಡಿಪಾಯಗಳು ರಾಜಕೀಯ ಸ್ವಾತಂತ್ರದ ಫಲವನ್ನು ಖಾತ್ರಿ ಪಡಿಸಬಹುದು ಎಂಬ ಹಲವು ಚರ್ಚೆಗಳು ನಡೆದವು. ದುರದೃಷ್ಟಕರವೆಂದರೆ ಒಂದು ದಶಕದ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಾಮಾಜಿಕ ಸುಧಾರಣೆಯ ಕಲ್ಪನೆಯನ್ನು ಕೈಬಿಟ್ಟಿತು. ಸಂಪ್ರದಾಯವಾದಿಗಳು ಉದಾರವಾದಿಗಳ ಮೇಲೆ ಮೇಲುಗೈ ಸಾಧಿಸಿದರು. ಅವರು ಇಷ್ಟಕ್ಕೆ ಸುಮ್ಮನಾಗದೆ ಸಾಮಾಜಿಕ ಸುಧಾರಣೆಯು ರಾಜಕೀಯ ಸುಧಾರಣೆಗಿಂತ ಮುಂಚಿತವಾಗಿ ಅಗತ್ಯವಿಲ್ಲ ಎಂದು ವಾದಿಸಿದರು. ನಿಮ್ನ ವರ್ಗಗಳ ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾಮಾಣಿಕವಾದ ಪ್ರಯತ್ನಗಳನ್ನು ನಡೆಸಲು ವಿಫಲವಾಯಿತು. ಇದನ್ನು ಅಂಬೇಡ್ಕರ್ ತೀವ್ರವಾಗಿ ವಿರೋಧಿಸಿದರು.

ಸಾಮಾಜಿಕ ಸಮಸ್ಯೆಗಳು ರಾಜಕೀಯ ಶಕ್ತಿಯ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತವೆ ಎಂಬುದನ್ನು ಅಂಬೇಡ್ಕರ್ ಬಲವಾಗಿ ನಂಬಿದ್ದರು. ನೈಸರ್ಗಿಕ ನ್ಯಾಯದ ತತ್ವವೆಂದರೆ ರಾಜಕೀಯ ಮತ್ತು ಸಾಮಾಜಿಕವಾಗಿ ಎಲ್ಲಾ ಬಗೆಯ ಗುಂಪುಗಳಿಗೆ ಅವಕಾಶಗಳನ್ನು ಕಲ್ಪಿಸುವುದು. ಆದ್ದರಿಂದ ಅವರು ಸಮಾನವಾದ ರಾಜಕೀಯ ಶಕ್ತಿಯ ಪಾಲನ್ನು ಬಯಸಿದ್ದರು. 1939ರಲ್ಲಿ ಫೆಡರೇಶನ್ ವರ್ಸಸ್ ಫ್ರೀಡಂನ ಮೂಲಕ ಭಾರತೀಯ ರಾಜಕೀಯದಲ್ಲಿ ಹೊಸ ಆಲೋಚನೆಗಳನ್ನು ಹುಟ್ಟು ಹಾಕಿದರು.

ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಭಾರತೀಯ ಸಮಾಜದ ಬಹುಪಾಲು ಇರುವ ತುಳಿತಕ್ಕೊಳಗಾದ ವರ್ಗಗಳಿಗೆ ಅಧಿಕಾರ ನೀಡುವ ಗುರಿಯೊಂದಿಗೆ ಅಂಬೇಡ್ಕರ್ ಅವರು ಭಾರತದ ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಿದರು. ಅವರು ಬ್ರಿಟಿಷರು ಮತ್ತು ಕಾಂಗ್ರೆಸ್‌ನ್ನು ಸೈದ್ಧಾಂತಿಕವಾಗಿ ವೈರಿಗಳು ಎಂದೇ ಭಾವಿಸಿದ್ದಲ್ಲದೆ, ಇವರಲ್ಲಿ ಒಬ್ಬರು ಬಾಹ್ಯ ಇನ್ನೊಬ್ಬರು ಆಂತರಿಕ ವೈರಿಗಳು ಎಂದು ಕರೆದರು. ಕೇವಲ ರಾಜಕೀಯ ಸ್ವಾತಂತ್ರವನ್ನು ಪಡೆಯುವುದರಿಂದ ಭಾರತೀಯ ಸಮಾಜದ ಕಟ್ಟಕಡೆಯ ಜನರು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಿಂದ ವಂಚಿತರಾಗುತ್ತಾರೆ ಎಂದು ಅವರು ಭಾವಿಸಿದ್ದರು.

ಹಿಂಸೆ ಮತ್ತು ಅಹಿಂಸೆ ಎರಡೂ ಅಪೇಕ್ಷಿತ ಫಲಿತಾಂಶಗಳನ್ನು ತರುವುದಿಲ್ಲ ಎಂದು ಅಭಿಪ್ರಾಯಪಟ್ಟ ಅಂಬೇಡ್ಕರ್ ಸ್ವಾತಂತ್ರ ಚಳವಳಿ ಯಲ್ಲಿ ಮಧ್ಯದ ಮಾರ್ಗವನ್ನು ಅಳವಡಿಸಿಕೊಂಡರು ಮತ್ತು ಒಂದು ಹೆಜ್ಜೆಯನ್ನು ವ್ಯವಸ್ಥೆಯ ಒಳಗೆ ಮತ್ತು ಇನ್ನೊಂದು ಹೆಜ್ಜೆಯನ್ನು ಹೊರಗೆ ಹಾಕಿದರು. ಅವರು ಎಂದಿಗೂ ಅಧಿಕಾರ ಅಥವಾ ಸರಕಾರಿ ಉದ್ಯೋಗದ ಆಕಾಂಕ್ಷೆಯನ್ನು ಹೊಂದಿರಲಿಲ್ಲ. ಅವರು ಜಗತ್ತಿನ ಪ್ರಮುಖ ವಿಶ್ವವಿದ್ಯಾನಿಲಯಗಳಿಂದ ಉನ್ನತ ಶಿಕ್ಷಣ ಪಡೆದಿದ್ದರೂ ಆರ್ಥಿಕವಾಗಿ ಹೆಚ್ಚು ನಿರ್ಬಂಧಿತ ಜೀವನವನ್ನು ನಡೆಸುತ್ತಿದ್ದರು. ಯಾವ ನಾಯಕರೂ ಸ್ವಾತಂತ್ರ ಚಳವಳಿಯ ಸಂದರ್ಭದಲ್ಲಿ ಬ್ರಿಟಿಷರೊಂದಿಗೆ ನಡೆಸಿದ ಸಭೆಗಳಲ್ಲಿ ದಲಿತರ ಪರವಾಗಿ ಮಾತನಾಡಲಿಲ್ಲ. ಜನವರಿ 27, 1919ರಲ್ಲಿ ಸೌತ್‌ಬ್ಯುರೋ ಸಮಿತಿಯ ಮುಂದೆಯೂ ಕೂಡ ದಲಿತರ ಪ್ರಶ್ನೆಗಳನ್ನು ಯಾರೂ ಎತ್ತಲಿಲ್ಲ. ಆಗ ಸಮಿತಿಯ ಮುಂದೆ ಹಾಜರಾಗಿ ಸಾಕ್ಷ ನೀಡಿದ್ದಲ್ಲದೆ ದಲಿತರಿಗೆ ಪ್ರತ್ಯೇಕ ಮೀಸಲು ಕ್ಷೇತ್ರಗಳನ್ನು ನೀಡಬೇಕು ಮತ್ತು ಎಲ್ಲಾ ವಯಸ್ಕರಿಗೂ ಮತದಾನದ ಹಕ್ಕನ್ನು ನೀಡಬೇಕು ಎಂದು ಒತ್ತಾಯಿಸಿದರು. ಏಕೆಂದರೆ ಅಂದಿನ ಸಂದರ್ಭದಲ್ಲಿ ಮತದಾನದ ಹಕ್ಕು ಇದ್ದದ್ದು ಬ್ರಿಟಿಷ್ ಸರಕಾರಕ್ಕೆ ತೆರಿಗೆ ಪಾವತಿಸುತ್ತಿದ್ದ ಶ್ರೀಮಂತ ಜಮಿನ್ದಾರರಿಗೆ, ಪದವೀಧರರಿಗೆ ಹಾಗೂ ಸ್ಥಳೀಯ ರಾಜರು ಮತ್ತು ಬ್ರಿಟಿಷರಿಗೆ ಮಾತ್ರ. ಕೇವಲ ಪ್ರಬಲ ವರ್ಗಗಳಿಂದ ಆಯ್ಕೆ ಆಗುವ ಜನಪ್ರತಿನಿಧಿಗಳು ಉಳ್ಳವರಿಗೆ ಮಾತ್ರವೇ ಅನುಕೂಲ ಮಾಡುತ್ತಾರೆ. ಆದರೆ ಜನಸಾಮಾನ್ಯರ ಕಷ್ಟಗಳು ಪರಿಹಾರವಾಗಬೇಕಾದರೆ ಅವರಿಗೂ ಮತದಾನದ ಹಕ್ಕು ಇರಬೇಕೆಂದು ಅಂಬೇಡ್ಕರ್ ಪ್ರತಿಪಾದಿಸಿದರು. ಆಯೋಗದ ಮುಂದೆ ಶತಮಾನಗಳಿಂದ ಇನ್ನಿಲ್ಲದ ದಮನಕ್ಕೆ ಒಳಗಾಗಿರುವ ಅಸ್ಪಶ್ಯರಿಗೆ ಮೀಸಲು ಕ್ಷೇತ್ರಗಳ ಅಗತ್ಯವಿದೆ ಎಂದೂ ಒತ್ತಾಯಿಸಿದರು.

ಸ್ವಾತಂತ್ರಕ್ಕಾಗಿ ಹೋರಾಡಿದ ಮುಂಚೂಣಿ ಹೋರಾಟಗಾರರಲ್ಲಿ ಯಾರೂ ನಿಮ್ನ ವರ್ಗದವರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲಿಲ್ಲ. ಆದರೆ ಅಂಬೇಡ್ಕರ್ ಸ್ವಾತಂತ್ರ ಹೋರಾಟದಲ್ಲಿ ದಲಿತರ ಕಾರಣವನ್ನು ಪ್ರತಿಪಾದಿಸುವ ಮೂಲಕ ಸ್ವಾತಂತ್ರ ಚಳವಳಿಯಲ್ಲಿ ಮಹತ್ವದ ಭೂಮಿಕೆಯನ್ನು ನಿರ್ವಹಿಸಿದರು. ಎಲ್ಲಾ ಸ್ವಾತಂತ್ರ ಪ್ರತಿಪಾದಕರಂತೆ ಅಂಬೇಡ್ಕರ್ ಕೂಡ ಭಾರತಕ್ಕೆ ಸ್ವಾತಂತ್ರವನ್ನು ಬಯಸಿದ್ದರು. ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ ಪಡೆಯುವುದೆಂದರೆ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಅಭಿವೃದ್ಧಿ ಹೊಂದಲು ಸಮಾನ ಅವಕಾಶಗಳನ್ನು ಪಡೆಯುವ ಮತ್ತು ಹೊಂದಿರುವ ಮುಕ್ತ ಭಾರತೀಯ ರಾಷ್ಟ್ರವಾಗಬೇಕು ಎಂದು ಆಗ್ರಹಿಸಿದರು.

ಸ್ವಾತಂತ್ರ್ಯಾನಂತರದ ಭಾರತದ ರಾಜಕೀಯ ವ್ಯವಸ್ಥೆಯ ಕುರಿತಾದ ಅಂಬೇಡ್ಕರ್ ಅವರ ಚಿಂತನೆಗಳು ಅತ್ಯಂತ ಗಂಭೀರ ಸ್ವರೂಪದಿಂದ ಕೂಡಿದ್ದವು. ಭಾರತದ ರಾಜಕೀಯ ವ್ಯವಸ್ಥೆಯ ಕುರಿತು ಮತ್ತು ಯಾವ ರೀತಿಯ ಪ್ರಭುತ್ವವನ್ನು ಅಳವಡಿಸಿಕೊಳ್ಳಬೇಕು ಮತ್ತು ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡರೆ ಯಾವ ರೀತಿಯ ತೊಡಕುಗಳು ಎದುರಾಗಬಹುದು ಎಂಬುದರ ಬಗ್ಗೆ ಅತ್ಯಂತ ವೈಜ್ಞಾನಿಕವಾದ ವಿಶ್ಲೇಷಣೆಯನ್ನು ಅವರು ನಡೆಸಿದ್ದರು. ಪ್ರಜಾಪ್ರಭುತ್ವ ಕೇವಲ ರಾಜಕೀಯ ಯಂತ್ರವಲ್ಲ. ಅದು ಸಾಮಾಜಿಕ ವ್ಯವಸ್ಥೆಗೂ ಮೀರಿದ್ದು, ಇದು ನಮ್ಮ ಮನೋವೃತ್ತಿ ಮತ್ತು ಜೀವನದ ತತ್ವ ಮತ್ತು ಇಂತಹ ಪ್ರಜಾಪ್ರಭುತ್ವ ಉಳಿಯಬೇಕಾದರೆ ಸಮಾಜದಲ್ಲಿನ ಮನುಷ್ಯರ ಮನಸ್ಸುಗಳು ಸಾಮಾಜೀಕರಣಕ್ಕೆ ಒಳಗಾಗಬೇಕು ಎಂದು ಅಂಬೇಡ್ಕರ್ ವಾದಿಸಿದರು.

ಕೇವಲ ರಾಜಕೀಯ ಪ್ರಜಾಪ್ರಭುತ್ವದಿಂದ ನಾವು ತೃಪ್ತಿಪಟ್ಟುಕೊಳ್ಳಬಾರದು. ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾಪ್ರಭುತ್ವ ವನ್ನಾಗಿ ಪರಿವರ್ತಿಸಲು ಪ್ರಯತ್ನಿಸಬೇಕು. ಸಾಮಾಜಿಕ ಪ್ರಜಾಪ್ರಭುತ್ವವೆಂದರೆ ಸ್ವಾತಂತ್ರ, ಸಮಾನತೆ ಮತ್ತು ಭ್ರಾತೃತ್ವದ ತತ್ವಗಳನ್ನು ಒಪ್ಪುವ ಪದ್ಧತಿ ಎಂದು ಅಂಬೇಡ್ಕರ್ ಪ್ರತಿಪಾದಿಸಿದರು. ಅಂಬೇಡ್ಕರ್ ದಲಿತರು ಮತ್ತು ಶೂದ್ರರ ನಡುವೆ ಮೈತ್ರಿಯನ್ನು ಬಯಸಿದ್ದರು ಏಕೆಂದರೆ ಇಬ್ಬರೂ ಸಾಮಾಜಿಕವಾಗಿ ವಂಚಿತರಾಗಿದ್ದರು. ಆರ್ಥಿಕವಾಗಿ ಕುಗ್ಗಿದ ವರ್ಗಗಳಾಗಿದ್ದವು. ಅಂಬೇಡ್ಕರ್ ಅವರು ದಲಿತರನ್ನು ಪ್ರತಿನಿಧಿಸಿದರೆ ಕೊಲ್ಹಾಪುರ ಶಾಹು ಮಹಾರಾಜರು ಶೂದ್ರರನ್ನು ಪ್ರತಿನಿಧಿಸಿದರು. ಭಾರತದ ಇತಿಹಾಸದಲ್ಲಿ ಇಬರಿಬ್ಬರು ಸಮಾಜ ಸುಧಾರಕರ ನೇತೃತ್ವದಲ್ಲಿ ಮೊದಲ ಬಾರಿಗೆ ದಲಿತ ಮತ್ತು ಶೂದ್ರರ ಒಕ್ಕೂಟವನ್ನು ರಚಿಸಲಾಯಿತು. ಮಾರ್ಚ್ 20, 1920ರಂದು ಸಮ್ಮೇಳನವೊಂದನ್ನು ಕೂಡ ನಡೆಸಲಾಯಿತು.

ಲಂಡನ್‌ನಲ್ಲಿ ಅಧ್ಯಯನ ಮಾಡುವಾಗ ಭಾರತದ ಯಾವ ನಾಯಕನೂ ಬ್ರಿಟಿಷ್ ಸರಕಾರವನ್ನು ಟೀಕಿಸುವ ಧೈರ್ಯ ಮಾಡಿರಲಿಲ್ಲ. ಆದರೆ ಅಂಬೇಡ್ಕರ್ ಲಂಡನ್‌ನಲ್ಲಿ ವಿದ್ಯಾರ್ಥಿಯಾಗಿದ್ದಾಗ ಎಪ್ರಿಲ್ 1921ರಲ್ಲಿ ಲಂಡನ್‌ನ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ‘ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ವಿಕೇಂದ್ರೀಕರಣದ ಸಾಮ್ರಾಜ್ಯಶಾಹಿ ಹಣಕಾಸು’ ಎಂಬ ಪ್ರಬಂಧವನ್ನು ಮಂಡಿಸುವ ಮೂಲಕ ಬ್ರಿಟಿಷರ ತಪ್ಪುಹಣಕಾಸು ನೀತಿಗಳನ್ನು ಟೀಕಿಸಿದ್ದರು. ಅವರ ಪ್ರಬಂಧದ ಸ್ವರೂಪವು ಅತ್ಯಂತ ಕ್ರಾಂತಿಕಾರಿಯಾಗಿತ್ತು.

 ಅಂಬೇಡ್ಕರ್ ಅವರು ಎಂದಿಗೂ ಅಧಿಕಾರ ಕ್ಕಾಗಿ ಜೋತು ಬೀಳಲಿಲ್ಲ. ಸ್ವಾತಂತ್ರ್ಯಾನಂತರ ಅವರು ಯಾವ ಹುದ್ದೆಯಲ್ಲಿದ್ದರೂ ರಾಜೀನಾಮೆ ಪತ್ರವನ್ನು ತಮ್ಮ ಜೀಬಿನಲ್ಲಿ ಇಟ್ಟುಕೊಂಡಿರುತ್ತಿದ್ದರು. ಯಾವುದೇ ಅಧಿಕಾರ ಅಥವಾ ಹುದ್ದೆಗೆ ಅಂಟಿಕೊಳ್ಳದೆ ಜನರ ಪ್ರಜಾಪ್ರಭುತ್ವದ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ಕೆಲಸ ಮಾಡಿದ ಏಕೈಕ ನಾಯಕ ಅಂಬೇಡ್ಕರ್. ಸ್ವಾತಂತ್ರ ಪಡೆದು ಏಳು ದಶಕಗಳು ಕಳೆದಿದ್ದರೂ ಜಾತೀಯತೆಯ ಅನಿಷ್ಠವನ್ನು ತೊಡೆದು ಹಾಕಲು ನಮಗಿನ್ನೂ ಸಾಧ್ಯವಾಗಿಲ್ಲ. ಸಾಮಾಜಿಕ ಮತ್ತು ಸಮಾನತೆಯ ಸ್ವಾತಂತ್ರ ಇನ್ನೂ ಕನಸಿನ ಮಾತಾಗಿಯೇ ಉಳಿದಿವೆ. ಇಂದಿಗೂ ಈ ದೇಶದ ಮೂರನೇ ಒಂದು ಭಾಗದಷ್ಟು ಜನರು ಹೊಟ್ಟೆತುಂಬಾ ಊಟವಿಲ್ಲದೆ, ಕುಡಿಯಲು ಸ್ವಚ್ಛ ನೀರು ಸಿಗದೆ, ಬಡತನ ರೇಖೆಯ ಕೆಳಗೆ ಅದಕ್ಕಿಂತ ಹೆಚ್ಚಾಗಿ ಹಸಿವಿನಿಂದ ಬದುಕುತ್ತಿದ್ದಾರೆ. ಏನೇ ಮೂಲಸೌಕರ್ಯಗಳು ಬಂದಿದ್ದರೂ, ರಸ್ತೆ, ಗಗನ ಚುಂಬಿ ಮಹಲುಗಳು, ವಿಶಾಲವಾದ ಮಾಲುಗಳು ಮೇಲೆದ್ದಿರುವುದು ಭಾರತ ಅಭಿವೃದ್ಧಿ ಹೊಂದಿದೆ ಎಂಬ ಭ್ರಮಾಲೋಕವನ್ನು ಹುಟ್ಟಿಸಿದ್ದರೂ ಬಡವರ ಬದುಕು ದುಸ್ತರವಾಗಿದೆ. ಸಾಮಾಜಿಕ ಶೋಷಣೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಅದಕ್ಕಾಗಿಯೇ ಅಂಬೇಡ್ಕರ್ ರಾಜಕೀಯ ಸ್ವಾತಂತ್ರಕ್ಕಿಂತ ಸಾಮಾಜಿಕ ಸ್ವಾತಂತ್ರ ಮುಖ್ಯ ಎಂದು ಪ್ರತಿಪಾದಿಸಿದ್ದರು. ಸ್ವಾತಂತ್ರಕ್ಕಾಗಿ ಹೋರಾಡಿದ ಮುಂಚೂಣಿ ಹೋರಾಟಗಾರರಲ್ಲಿ ಯಾರೂ ನಿಮ್ನ ವರ್ಗದವರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲಿಲ್ಲ. ಆದರೆ ಅಂಬೇಡ್ಕರ್ ಸ್ವಾತಂತ್ರ ಹೋರಾಟದಲ್ಲಿ ದಲಿತರ ಕಾರಣವನ್ನು ಪ್ರತಿಪಾದಿಸುವ ಮೂಲಕ ಸ್ವಾತಂತ್ರ ಚಳವಳಿಯಲ್ಲಿ ಮಹತ್ವದ ಭೂಮಿಕೆಯನ್ನು ನಿರ್ವಹಿಸಿದರು.

ಸ್ವಾತಂತ್ರಕ್ಕಾಗಿ ಹೋರಾಡಿದ ಮುಂಚೂಣಿ ಹೋರಾಟಗಾರರಲ್ಲಿ ಯಾರೂ ನಿಮ್ನ ವರ್ಗದವರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲಿಲ್ಲ. ಆದರೆ ಅಂಬೇಡ್ಕರ್ ಸ್ವಾತಂತ್ರ ಹೋರಾಟದಲ್ಲಿ ದಲಿತರ ಕಾರಣವನ್ನು ಪ್ರತಿಪಾದಿಸುವ ಮೂಲಕ ಸ್ವಾತಂತ್ರ ಚಳವಳಿಯಲ್ಲಿ ಮಹತ್ವದ ಭೂಮಿಕೆಯನ್ನು ನಿರ್ವಹಿಸಿದರು.

Writer - ಡಾ. ಅಮ್ಮಸಂದ್ರ ಸುರೇಶ್

contributor

Editor - ಡಾ. ಅಮ್ಮಸಂದ್ರ ಸುರೇಶ್

contributor

Similar News