ಅಶಾಂತಿ ಹೆಚ್ಚಿಸುತ್ತಿರುವ ಕ್ಯೂಬಾದ ಬಿಕ್ಕಟ್ಟು

Update: 2021-08-16 19:30 GMT

ಸಮಾಜವಾದಿ ವ್ಯವಸ್ಥೆಯ ನಿರ್ಮಾಣ ಮೂಲಭೂತವಾಗಿ ಒಂದು ರಾಷ್ಟ್ರದ ಸ್ವಯಂ ಸಾಮರ್ಥ್ಯದಿಂದಲೇ ಸಾಧಿಸಬಹುದೇ ಹೊರತು ಪರಾವಲಂಬನೆ ಮೂಲಕ ಸಾಧ್ಯವಿಲ್ಲ ಎನ್ನುವುದಕ್ಕೆ ಕ್ಯೂಬಾ ಕೂಡ ಒಂದು ಉದಾಹರಣೆಯಾಗಿದೆ. ಉತ್ಪಾದನೆ, ಒಡೆತನ, ಹಂಚಿಕೆ ಹಾಗೂ ಸೇವೆಗಳಲ್ಲಿ ಸಾಮಾಜೀಕರಣ ಮತ್ತು ಅದರ ಮೂಲಕ ಹುಟ್ಟಿ ಬೆಳೆಯುವ ಜನಸಮೂಹದ ಸಾಮಾಜಿಕ ಪ್ರಜ್ಞೆ ಹಾಗೂ ಚೈತನ್ಯಗಳೇ ಸಮಾಜವಾದಿ ವ್ಯವಸ್ಥೆಯ ಬುನಾದಿಯಾಗಲು ಸಾಧ್ಯ ಎನ್ನುವುದಕ್ಕೆ ಇದೂ ಕೂಡ ಉದಾಹರಣೆಯಾಗಿದೆ.


ಲ್ಯಾಟಿನ್ ಅಮೆರಿಕದ ಪುಟ್ಟ ರಾಷ್ಟ್ರ ಕ್ಯೂಬಾ. ಇಲ್ಲಿ ಕಳೆದ ತಿಂಗಳು ಜುಲೈ 11ರಂದು ಭಾರೀ ಪ್ರತಿಭಟನೆಗಳು ನಡೆದವು. 1959ರ ಕ್ಯೂಬಾ ಕ್ರಾಂತಿಯ ನಂತರದ ಅತ್ಯಂತ ದೊಡ್ಡ ಮಟ್ಟದ ಪ್ರತಿಭಟನೆಗಳಲ್ಲಿ ಒಂದು ಎಂದು ಇದನ್ನು ಹೇಳಲಾಗುತ್ತಿದೆ. ಸ್ವಾತಂತ್ರ್ಯ ಮತ್ತು ಸರ್ವಾಧಿಕಾರದ ವಿರುದ್ಧದ ಪ್ರತಿಭಟನೆಗಳು ಇವಾಗಿವೆ ಎಂಬಂತೆಯೇ ಅಂತರ್‌ರಾಷ್ಟ್ರೀಯ ಮಾಧ್ಯಮಗಳು ಹೇಳಿದವು. ಜೊತೆಗೆ ವಿದೇಶಗಳಲ್ಲಿರುವ ಸಮಾಜವಾದಿ ವಿರೋಧಿ ನಿಲುವಿನ ಕ್ಯೂಬನ್ನರು ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಹಾಗೂ ಕೋವಿಡ್-19ರ ಆತಂಕಗಳನ್ನು ಹರಡುವ ಕಾರ್ಯ ಮಾಡಿದ್ದು ಕೂಡ ಪ್ರತಿಭಟನೆಯ ವ್ಯಾಪ್ತಿಗಳನ್ನು ಹೆಚ್ಚಿಸಿದವು.

ಕೆಲವು ಡಾಲರ್ ಸ್ಟೋರ್‌ಗಳನ್ನು ಲೂಟಿ ಮಾಡಲಾಯಿತು. ಈ ಡಾಲರ್ ಸ್ಟೋರ್‌ಗಳ ಬಗ್ಗೆ ಅಸಮಾಧಾನ ಮೊದಲಿನಿಂದಲೂ ಇದ್ದವು. ಇವುಗಳನ್ನು ನಡೆಸುವವರು ಉಳಿದವರಿಗಿಂತ ಹೆಚ್ಚಿನ ಆದಾಯ ಗಳಿಸುವ ಮೂಲಕ ಆರ್ಥಿಕ ಅಸಮಾನತೆ ಹೆಚ್ಚಿಸುತ್ತಿದ್ದಾರೆ ಎಂಬುದೇ ಅದಕ್ಕೆ ಪ್ರಧಾನ ಕಾರಣವಾಗಿದೆ. ಸರಕಾರಿ ಪಡೆಗಳೊಂದಿಗೆ ಜನರು ಹಲವಾರು ಕಡೆಗಳಲ್ಲಿ ಬೀದಿ ಕಾಳಗದಲ್ಲಿ ತೊಡಗಿದ್ದರು. ಲಾಟಿ ಚಾರ್ಜ್ ಹಾಗೂ ಟಿಯರ್ ಗ್ಯಾಸ್‌ಗಳ ಬಳಕೆಗಳು ಹಲವಾರು ಕಡೆಗಳಲ್ಲಿ ನಡೆದವು. ವ್ಯಾಪಕ ಬಂಧನಗಳು ನಡೆದವು. ಅದರಲ್ಲಿ ಒಬ್ಬ ಎಳೆಯ ಬಾಲಕಿಯ ಬಂಧನ ಭಾರೀ ಖಂಡನೆಗೆ ಒಳಗಾಯಿತು.

ಪ್ರತಿಭಟನೆಗಳಿಗೆ ಕಾರಣ ಕಮ್ಯುನಿಸ್ಟ್ ಆಡಳಿತದ ಸರ್ವಾಧಿಕಾರದ ನೀತಿಗಳು ಎಂಬ ಪ್ರಚಾರ ಜಾಗತಿಕವಾಗಿ ನಡೆಯಿತು. ಅಲ್ಲಿನ ಸರಕಾರ ಈ ಪ್ರತಿಭಟನೆಗಳನ್ನು ಕ್ರೂರವಾಗಿ ದಮನಿಸಿತು, ಮಾನವ ಹಕ್ಕುಗಳನ್ನು ನಿರಾಕರಿಸಿ ದಮನಕಾಂಡ ನಡೆಸಿತು ಎಂಬ ಪ್ರಚಾರವೂ ಅಂತರ್‌ರಾಷ್ಟ್ರೀಯ ಮಾಧ್ಯಮಗಳಲ್ಲಿ ಕಂಡಿತು. ಇವುಗಳಲ್ಲಿ ಪ್ರಧಾನವಾಗಿ ಅಮೆರಿಕ, ಬ್ರಿಟನ್ ಕೇಂದ್ರಿತ ಸುದ್ದಿಗಳೇ ಆಗಿದ್ದವು. ಹಾಗಾಗಿ ಈ ಸುದ್ದಿಗಳನ್ನು ಪೂರ್ಣವಾಗಿ ನಂಬಲು ಸಾಧ್ಯವಾಗದ ಸ್ಥಿತಿಯಿದೆ. ಯಾಕೆಂದರೆ ಕ್ಯೂಬಾ ಕ್ರಾಂತಿಯ ನಂತರದಿಂದ ಅಮೆರಿಕ ಮತ್ತದರ ಕೂಟ ನಿರಂತರವಾಗಿ ಕ್ಯೂಬಾಕ್ಕೆ ಕಿರುಕುಳ ಕೊಡುತ್ತಲೇ ಬರುತ್ತಿದೆ. ಅದರ ಅಧ್ಯಕ್ಷರನ್ನು ನೂರಾರು ಬಾರಿ ಕಗ್ಗೊಲೆ ಮಾಡಲು ಪ್ರಯತ್ನಿಸಿದೆ. ಅಮೆರಿಕದ ತನಿಖಾ ಸಂಸ್ಥೆ ಸಿಐಎ ಕ್ಯೂಬಾದ ವಿರುದ್ಧ ಅಂತರ್‌ರಾಷ್ಟ್ರೀಯ ಸಂಚುಗಳನ್ನು ನಡೆಸುತ್ತಲೇ ಬಂದಿದೆ. ಅಮೆರಿಕ ತನ್ನ ಆರ್ಥಿಕ ದಿಗ್ಭಂಧನಗಳ ಮೂಲಕ ಕ್ಯೂಬಾವನ್ನು ತನ್ನ ಆಣತಿಯಡಿ ಕಾರ್ಯ ನಿರ್ವಹಿಸಲು ಇನ್ನಿಲ್ಲದ ಪ್ರಯತ್ನ ಹಾಕುತ್ತಲೇ ಬರುತ್ತಿದೆ.

ಹನ್ನೊಂದು ಕೋಟಿ ಮೂವತ್ತಮೂರು ಲಕ್ಷದಷ್ಟು ಜನಸಂಖ್ಯೆಯಿರುವ ಕ್ಯೂಬಾದ ಒಟ್ಟು ವಾರ್ಷಿಕ ರಾಷ್ಟ್ರೀಯ ಉತ್ಪನ್ನ 2019ರ ಅಂಕಿ-ಅಂಶದ ಪ್ರಕಾರ 103.13 ಬಿಲಿಯನ್ ಅಮೆರಿಕನ್ ಡಾಲರ್‌ಗಳು. 2018ರ ಅಂಕಿ-ಅಂಶದ ಪ್ರಕಾರ ತಲಾವಾರು ಒಟ್ಟು ವಾರ್ಷಿಕ ರಾಷ್ಟ್ರೀಯ ಉತ್ಪನ್ನ 8,822 ಅಮೆರಿಕನ್ ಡಾಲರ್‌ಗಳು. 2018ರ ಅಂಕಿ-ಅಂಶದ ಪ್ರಕಾರ ರಾಷ್ಟ್ರೀಯ ಉತ್ಪನ್ನದಲ್ಲಿ 62ನೇ ಸ್ಥಾನವನ್ನು ಹೊಂದಿತ್ತು. ಕ್ಯೂಬಾದ ಜನರು ಬಹುತೇಕವಾಗಿ ಮೇಲ್ಮಧ್ಯಮ ವರ್ಗದ ಸಾಮಾಜಿಕ ಜೀವನವನ್ನು ಹೊಂದಿದ್ದಾರೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 189 ರಾಷ್ಟ್ರಗಳಲ್ಲಿ 70ನೇ ಸ್ಥಾನವನ್ನು ಕ್ಯೂಬಾ ಹೊಂದಿತ್ತು. ಕ್ಯೂಬಾದ ಒಟ್ಟು ಜನಸಂಖ್ಯೆಯ ಶೇ. 72ಕ್ಕಿಂತಲೂ ಹೆಚ್ಚು ಭಾಗ ಸರಕಾರಿ ರಂಗದ ಕಾರ್ಮಿಕರಾಗಿದ್ದಾರೆ. ಶೇ. 27ರಷ್ಟು ಜನರು ಸರಕಾರೇತರ ಕಾರ್ಮಿಕರಾಗಿದ್ದಾರೆ. 2017ರ ಅಂದಾಜಿನ ಪ್ರಕಾರ ಕ್ಯೂಬಾದ ನಿರುದ್ಯೋಗ ಪ್ರಮಾಣ ಶೇ. 2.6 ಆಗಿತ್ತು.

ಕ್ಯೂಬಾ ಪೆಟ್ರೋಲಿಯಂ, ನಿಕ್ಕಲ್, ವೈದ್ಯಕೀಯ ಉತ್ಪನ್ನಗಳು, ಸಕ್ಕರೆ, ತಂಬಾಕು, ಮೀನು, ಕಾಫಿಗಳನ್ನು ಮುಖ್ಯವಾಗಿ ರಫ್ತು ಮಾಡುತ್ತದೆ. ಚೀನಾ, ಸ್ಪೈನ್, ರಶ್ಯ, ಬ್ರೆಝಿಲ್, ಮೆಕ್ಸಿಕೋ, ಇಟಲಿ, ಯುನೈಟೆಡ್ ಸ್ಟೇಟ್ಸ್‌ಗಳಿಂದ ವ್ಯಾಪಾರ ವ್ಯವಹಾರ ನಡೆಸುತ್ತದೆ. ಆದರೆ ಕ್ಯೂಬಾ ಮೂಲಭೂತವಾಗಿ ಆಮದು ಆರ್ಥಿಕತೆಯಾಗಿದೆ. ರಫ್ತಿಗಿಂತಲೂ ಹತ್ತು ಪಟ್ಟು ಆಮದು ಮಾಡಿಕೊಳ್ಳುತ್ತದೆ. ಆಹಾರ ವಸ್ತುಗಳಲ್ಲಿ ಶೇ. 80ರಷ್ಟು ಭಾಗ ಹೊರಗಿನಿಂದಲೇ ತರಿಸಿಕೊಳ್ಳುತ್ತಿದೆ.

ಅಮೆರಿಕ ಹೇರುತ್ತಾ ಬಂದ ಆರ್ಥಿಕ ದಿಗ್ಬಂಧನಗಳು ಕ್ಯೂಬಾವನ್ನು ಘಾಸಿಗೊಳಿಸುತ್ತಲೇ ಇದೆ. ಸಕ್ಕರೆ ಮಾರುಕಟ್ಟೆಯ ಕುಸಿತಗಳು ತೊಂಭತ್ತರ ದಶಕದಲ್ಲಿ ಕ್ಯೂಬಾದ ಆರ್ಥಿಕತೆಯನ್ನು ಘಾಸಿ ಮಾಡಿತ್ತು. 2000ದ ವೇಳೆಗೆ ರಾಷ್ಟ್ರದ ಅರ್ಧಕ್ಕಿಂತಲೂ ಹೆಚ್ಚಿನ ಸಕ್ಕರೆ ಕಾರ್ಖಾನೆಗಳು ಮುಚ್ಚಲ್ಪಟ್ಟಿದ್ದವು. ಅದಕ್ಕಿಂತಲೂ ಹೆಚ್ಚಾಗಿ ಸೋವಿಯತ್ ರಶ್ಯದ ಕುಸಿತ ಕ್ಯೂಬಾವನ್ನು ಇನ್ನಿಲ್ಲದಂತೆ ಘಾಸಿ ಮಾಡಿತ್ತು. ಕ್ಯೂಬಾ ಸೋವಿಯತ್ ಒಕ್ಕೂಟದ ಹಣಕಾಸು ನೆರವು ಹಾಗೂ ಇನ್ನಿತರ ರಿಯಾಯಿತಿಗಳು ಹಾಗೂ ಅದು ಕ್ಯೂಬಾದಿಂದ ಕೊಳ್ಳುತ್ತಿದ್ದ ಸಕ್ಕರೆಯನ್ನು ನೆಚ್ಚಿಕೊಂಡಿತ್ತು. ಸಕ್ಕರೆ ಮಾರುಕಟ್ಟೆ ಕುಸಿದರೂ ಸೋವಿಯತ್ ರಶ್ಯ ಕ್ಯೂಬಾ ಸಕ್ಕರೆಗೆ ಮಾರುಕಟ್ಟೆ ಖಾತರಿ ನೀಡುತ್ತಾ ಬಂದಿತ್ತು. ಇಷ್ಟಲ್ಲದರ ನಡುವೆಯೂ ಕ್ಯೂಬಾ ಸರಕಾರ ತನ್ನ ಪ್ರಜೆಗಳಿಗೆ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳನ್ನು ಉಚಿತವಾಗಿ ಪೂರೈಸುತ್ತಾ ಬಂದಿದೆ. ಜಾಗತಿಕವಾಗಿ ವೈದ್ಯರ ಅನುಪಾತ ಹೆಚ್ಚಿರುವ ರಾಷ್ಟ್ರಗಳಲ್ಲಿ ಕ್ಯೂಬಾ ಮೂರನೇ ಸ್ಥಾನದಲ್ಲಿದೆ. ಮೊನಕೋ ಮತ್ತು ಖತರ್ ಉಳಿದ ಎರಡು ರಾಷ್ಟ್ರಗಳಾಗಿವೆ. ಎಲ್ಲಾ ಪ್ರಜೆಗಳಿಗೂ ನಿಗದಿತ ಪ್ರಮಾಣದ ಪಡಿತರ ಖಾತ್ರಿಯಾಗಿ ಪೂರೈಸುತ್ತಲೇ ಬರುತ್ತಿದೆ. ಹಸಿವಿನಿಂದ ನರಳುವವರು ಕ್ಯೂಬಾದಲ್ಲಿ ಇಲ್ಲವೆನ್ನಬಹುದು. ಬಡತನ ಜಾಗತಿಕ ಮಟ್ಟಕ್ಕೆ ಹೋಲಿಸಿದಲ್ಲಿ ಕ್ಯೂಬಾದಲ್ಲಿ ಬಹಳ ಕಡಿಮೆಯೆನ್ನಬಹುದು. ಆದರೆ ಆಫ್ರಿಕಾ ಮೂಲದ ಕ್ಯೂಬಾದವರು ಬಿಳಿಯ ಕ್ಯೂಬಾದವರಿಗಿಂತ ಕಡಿಮೆ ಜೀವನ ಮಟ್ಟ ಅನುಭವಿಸುತ್ತಿದ್ದಾರೆ. ಈ ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಲೇ ಬರುತ್ತಿದೆ. ಕ್ಯೂಬಾದ ಒಂದು ಪ್ರಧಾನ ಉದ್ದಿಮೆಯಾದ ಪ್ರವಾಸೋದ್ಯಮದಲ್ಲಿ ತೊಡಗಿಕೊಂಡಿರುವ ಖಾಸಗಿ ರೆಸ್ಟೋರೆಂಟ್‌ಗಳು ಹಾಗೂ ವಸತಿಗೃಹಗಳ ಮಾಲಕರೆಲ್ಲ ಹೆಚ್ಚಾಗಿ ಬಿಳಿಯರೇ ಆಗಿದ್ದಾರೆ.

ಸಮಾಜವಾದಿ ಆರ್ಥಿಕತೆ ಎಂದು ಬಿಂಬಿಸಿಕೊಂಡಿದ್ದ ಕ್ಯೂಬಾ 2011ರಲ್ಲಿ ಆರ್ಥಿಕ ಸುಧಾರಣೆ ಹೆಸರಿನಲ್ಲಿ ಮೊದಲಿದ್ದ ನೀತಿಯಲ್ಲಿ ಬದಲಾವಣೆಗೆ ಮೊದಲಿಟ್ಟಿತು. ಅದನ್ನು ಹೊಸ ಕ್ಯೂಬಾ ಆರ್ಥಿಕತೆ ಎನ್ನಲಾಯಿತು. ಟ್ಯಾಕ್ಸಿ ಚಾಲಕರು, ನಿರ್ಮಾಣ ಕಾರ್ಮಿಕರು, ಅಂಗಡಿ ಮಾಲಕರು ಮೊದಲಾದ ಖಾಸಗಿ ಕ್ಷೇತ್ರಗಳನ್ನು ತೆರೆಯಿತು. ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಭೂಮಿ ಆಸ್ತಿಗಳನ್ನು ಕೊಳ್ಳುವ, ಮಾರುವ ಅವಕಾಶ ಮುಕ್ತವಾಗಿಸಲಾಯಿತು. ಆದರೆ ನೀರು, ವಿದ್ಯುತ್, ಶಿಕ್ಷಣ, ಆರೋಗ್ಯ ಮೊದಲಾದ ಅಗತ್ಯ ಮೂಲಭೂತ ಕ್ಷೇತ್ರಗಳನ್ನು ಸರಕಾರಿ ಕ್ಷೇತ್ರದಲ್ಲೇ ಮೀಸಲಿರಿಸಿತ್ತು. 2019ರಲ್ಲಿ ಕ್ಯೂಬಾದ ಸಂವಿಧಾನಕ್ಕೆ ತಿದ್ದುಪಡಿ ತಂದು ಖಾಸಗಿ ಆಸ್ತಿ ಹೊಂದುವುದನ್ನು ಹಾಗೂ ಆರ್ಥಿಕತೆಯಲ್ಲಿ ಹೆಚ್ಚು ಮುಕ್ತತೆಯನ್ನು ಮಾನ್ಯ ಮಾಡಲಾಯಿತು. ವಿದೇಶಿ ಬಂಡವಾಳಕ್ಕೆ ಅವಕಾಶ ನೀಡಲಾಯಿತು. 2021ರಲ್ಲಿ ಕ್ಯೂಬಾದ ಸಚಿವ ಸಂಪುಟ 1,800ಕ್ಕೂ ಹೆಚ್ಚಿನ ಕ್ಷೇತ್ರಗಳನ್ನು ಖಾಸಗಿಯವರಿಗೆ ಮುಕ್ತಗೊಳಿಸಿತು. ಆದರೆ ಇದು ಕುಟುಂಬ ಸದಸ್ಯರು ನಡೆಸಬಹುದಾದ ರೆಸ್ಟೋರೆಂಟ್‌ಗಳು ಹಾಗೂ ಸಣ್ಣ ಅಂಗಡಿ, ಸಣ್ಣ ಉದ್ದಿಮೆ ವ್ಯವಹಾರಗಳಿಗೆ ಸೀಮಿತವಾಗಿದ್ದವೇ ಹೊರತು ದೊಡ್ಡ ಮಟ್ಟದ ಆರ್ಥಿಕ ವ್ಯವಹಾರಗಳಿಗೆ ಆಗಿರಲಿಲ್ಲ. ಆರಂಭದಲ್ಲಿ ಸರಕಾರಿ ಕ್ಷೇತ್ರಗಳಲ್ಲಿ ವಿದೇಶಿ ಬಂಡವಾಳವನ್ನು ನಿಗದಿತ ಪ್ರಮಾಣದಲ್ಲಿ ತೊಡಗಿಸಲು ಅವಕಾಶ ನೀಡಲಾಗಿತ್ತು.

ಸಂಪೂರ್ಣವಾಗಿ ವಿದೇಶಿ ಬಂಡವಾಳದ ಹಿಡಿತವಿರುವ ಕೆಲವು ಕಂಪೆನಿಗಳು ಕ್ಯೂಬಾದಲ್ಲಿ ಈಗ ಕಾರ್ಯ ನಿರ್ವಹಿಸಲಾರಂಭಿಸಿವೆ. ಕ್ಯೂಬಾದ ಶೇ. 96ರಷ್ಟು ವಿದ್ಯುತ್ ಉತ್ಪಾದನೆಯನ್ನು ಜೈವಿಕ ಇಂಧನಗಳಿಂದಲೇ ಉತ್ಪಾದಿಸಲಾಗುತ್ತದೆ. ಸೌರ ವಿದ್ಯುತ್ ಕೂಡ ಗ್ರಾಮೀಣ ಭಾಗಗಳಲ್ಲಿ ಬಳಕೆಯಲ್ಲಿದೆ. ಈ ಹಿಂದಿನ ರೌಲ್ ಕ್ಯಾಸ್ಟ್ರೋ ಅಧ್ಯಕ್ಷತೆಯ ಕಾಲದಲ್ಲಿ ಸಹಕಾರಿ ರಂಗಗಳನ್ನು ಉತ್ತೇಜಿಸುತ್ತಾ ಜನಸಮೂಹವನ್ನು ತೊಡಗಿಸಿ ಕೃಷಿ ಇನ್ನಿತರ ಉತ್ಪಾದನೆಗಳನ್ನು ಹೆಚ್ಚಿಸುವ ಕಾರ್ಯ ಮತ್ತಷ್ಟು ಬಿರುಸು ಪಡೆಯಿತು. ಇದರ ಮೂಲಕ ಪಾಳು ಬಿದ್ದ ಸರಕಾರಿ ಜಮೀನಿನ ಕೃಷಿಬಳಕೆಯಲ್ಲಿ ಒಂದು ಮಟ್ಟದ ಯಶಸ್ಸು ಕೂಡ ಸಾಧಿಸಲಾಗಿತ್ತು. ಆದರೆ ಈಗ ಈ ರಾಷ್ಟ್ರ ವೆನೆಜುವೇಲಾವನ್ನು ಹೆಚ್ಚಿನ ಮಟ್ಟದಲ್ಲಿ ಅವಲಂಬಿಸಿದೆ. ಕ್ಯೂಬಾ ರಾಷ್ಟ್ರಕ್ಕೆ ರಿಯಾಯಿತಿ ದರದಲ್ಲಿ ತೈಲವನ್ನು ಬಹುತೇಕವಾಗಿ ಪೂರೈಸುತ್ತಿರುವುದು ವೆನೆಜುವೇಲಾ. ಆದರೆ ಆ ರಾಷ್ಟ್ರ ಮೊದಲಿನಂತೆ ರಿಯಾಯಿತಿಯನ್ನು ನೀಡುವ ಸ್ಥಿತಿಯಲ್ಲಿ ಈಗ ಇಲ್ಲ.

ಕ್ಯೂಬಾ ರಾಷ್ಟ್ರ ತನ್ನ ಒಟ್ಟು ರಾಷ್ಟೀಯ ಉತ್ಪನ್ನದ ಶೇ. 34.6ರಷ್ಟು ಸಾಲವನ್ನು ಹೊಂದಿದೆ. ಇದು ಈಗ ಮತ್ತಷ್ಟು ಹೆಚ್ಚಾಗಿದೆ. ಇದು ಗಂಭೀರವಾದ ಸಮಸ್ಯೆ. ಹಿಂದೆ ಚೀನಾ, ರಶ್ಯ, ಮೆಕ್ಸಿಕೋ ಸೇರಿದಂತೆ ಹಲವು ರಾಷ್ಟ್ರಗಳು ಕ್ಯೂಬಾದ ಮನವಿಗೆ ಸ್ಪಂದಿಸಿ ನೀಡಿದ ದೊಡ್ಡ ಮೊತ್ತದ ಸಾಲಗಳನ್ನು ಮನ್ನಾ ಮಾಡಿದ್ದವು. ಆದರೂ ಸಾಲ ಮರುಪಾವತಿಯನ್ನು ಸಮಯಕ್ಕೆ ಸರಿಯಾಗಿ ಮಾಡದ ಸ್ಥಿತಿಯಲ್ಲಿದೆ ಕ್ಯೂಬಾ ಈಗ. 2021ನೇ ಸಾಲಿನಲ್ಲಿ ಶೇ. 7ರಷ್ಟು ಆರ್ಥಿಕ ಬೆಳವಣಿಗೆಯ ಗುರಿಯನ್ನು ಕ್ಯೂಬಾ ಸರಕಾರ ಹಾಕಿಕೊಂಡಿದೆ.

 ಕಳೆದ ಎರಡು ವರ್ಷಗಳಿಂದ ಕೊರೋನ ಮೂಲಕ ಮಾಡಿದ ಜಾಗತಿಕ ಆರ್ಥಿಕ ಹಾನಿಯು ಕ್ಯೂಬಾವನ್ನು ಭಾರೀ ಆಘಾತಗಳಿಗೆ ದೂಡಿತು. ಒಂದು ಪ್ರಧಾನ ಆಧಾಯವಾಗಿದ್ದ ಪ್ರವಾಸೋದ್ದಿಮೆ ನೆಲಕಚ್ಚಿತು. ಮತ್ತೊಂದು ಪ್ರಧಾನ ವರಮಾನ ಮೂಲವಾದ ಸಕ್ಕರೆಯ ಜಾಗತಿಕ ಬೇಡಿಕೆ ಕುಸಿಯಿತು. ಈಗ ರಾಷ್ಟ್ರದ ಆರ್ಥಿಕತೆ ಸಾಕಷ್ಟು ಕುಸಿತ ಕಂಡಿದೆ. ವೆನೆಜುವೇಲಾದಂತಹ ರಾಷ್ಟ್ರಗಳು ಕೂಡ ಹೆಚ್ಚಿನ ಸಹಾಯ ಮಾಡುವ ಸ್ಥಿತಿಯಲ್ಲಿ ಇಲ್ಲದಂತಾದವು. ಚೀನಾದ ಸಹಾಯ ಕೂಡ ಸಾಲದಾಯಿತು. ಹಣಕಾಸು ಕೊರತೆಯ ಕಾರಣದಿಂದಾಗಿ ಆಮದಿನ ಪ್ರಮಾಣ ಶೇಕಡಾ 40ರಷ್ಟು ಕುಸಿದುಹೋಯಿತು. ಸಾಲದ ಬಾಕಿ ತೀರಿಸದೆ ಇರುವುದರಿಂದಾಗಿ ಹೊಸ ಸಾಲಗಳು ದೊರೆಯದ ಸ್ಥಿತಿ ಬಂದಿದೆ. ಇದೀಗ ವಸತಿ ಸಮಸ್ಯೆ ಕೂಡ ಆರಂಭವಾಗಿದೆ.

ಅಗತ್ಯ ವಸ್ತುಗಳಿಗೆ ಬಹುತೇಕವಾಗಿ ಆಮದನ್ನೇ ನೆಚ್ಚಿಕೊಂಡಿದ್ದರಿಂದಾಗಿ ಕೊರತೆಯ ಮಟ್ಟ ಏರಿ ಅಗತ್ಯ ವಸ್ತುಗಳಿಗಾಗಿ ಜನರ ಸರತಿ ಸಾಲುಗಳು ರಾಷ್ಟ್ರದಾದ್ಯಂತ ಹೆಚ್ಚಿದವು. ಇದು ಜನರ ಮಧ್ಯೆ ಅಸಮಾಧಾನವನ್ನು ವ್ಯಾಪಕಗೊಳಿಸಿತು. ಸರಕಾರದ ಮೇಲಿನ ಭರವಸೆ ಕೂಡ ಕುಸಿಯತೊಡಗಿತು. ವಿಶ್ವಬ್ಯಾಂಕಿನ 2019ರ ಅಂಕಿ-ಅಂಶದ ಪ್ರಕಾರ ಕ್ಯೂಬಾದ ಆರ್ಥಿಕತೆಯ ಬೆಳವಣಿಗೆ ಶೇಕಡಾ -0.2 ಆಗಿದೆ. ಈ ಸಂದರ್ಭವನ್ನು ಬಳಸಿಕೊಳ್ಳುವ ಎಲ್ಲಾ ಪ್ರಯತ್ನಗಳನ್ನು ಅಮೆರಿಕ ಬೆಂಬಲಿತ ಶಕ್ತಿಗಳು ನಡೆಸಿದ್ದರಿಂದ ಪ್ರತಿಭಟನೆಯ ಕಾವು ಮತ್ತಷ್ಟು ಹೆಚ್ಚಿತು. ಆದರೆ ಈ ಪ್ರತಿಭಟನೆಗಳಿಗೆ ಮೂಲ ಕಾರಣ ಕ್ಯೂಬಾವನ್ನು ಮುನ್ನಡೆಸುತ್ತಿರುವ ಆಳುವ ಶಕ್ತಿಗಳೇ ಆಗಿದೆ ಎನ್ನುವುದು ಗಮನಾರ್ಹ. ರಾಷ್ಟ್ರದ ಬಹುಸಂಖ್ಯಾತ ಜನರು ಈಗ ಮೊದಲಿನ ಬದುಕಿನ ಭದ್ರತೆ ಹಾಗೂ ಸಾಮಾಜಿಕ ಭದ್ರತೆಯನ್ನು ಕಾಣುತ್ತಿಲ್ಲ. ಅಸಮಾನತೆಯ ಪ್ರಮಾಣ ಹೆಚ್ಚುತ್ತಾ ಅದು ಸಾಮಾಜಿಕ ಅಶಾಂತಿಗೆ ದಾರಿ ಮಾಡಿದೆ. ಇದಕ್ಕೆ ಹೊರಗಿನ ಕಾರಣಗಳಿದ್ದರೂ ಅದು ಪ್ರಧಾನವಲ್ಲ ರಾಷ್ಟ್ರದ ಒಳಗಿನ ಕಾರಣಗಳೇ ಪ್ರಧಾನ ಎನ್ನುವುದನ್ನು ಗ್ರಹಿಸದೆ ಹೋದರೆ ಸರಿಯಾದ ಪಾಠಗಳನ್ನು ಗ್ರಹಿಸಲು ಆಗದು.

ಸಮಾಜವಾದಿ ವ್ಯವಸ್ಥೆಯ ನಿರ್ಮಾಣ ಮೂಲಭೂತವಾಗಿ ಒಂದು ರಾಷ್ಟ್ರದ ಸ್ವಯಂ ಸಾಮರ್ಥ್ಯದಿಂದಲೇ ಸಾಧಿಸಬಹುದೇ ಹೊರತು ಪರಾವಲಂಬನೆ ಮೂಲಕ ಸಾಧ್ಯವಿಲ್ಲ ಎನ್ನುವುದಕ್ಕೆ ಕ್ಯೂಬಾ ಕೂಡ ಒಂದು ಉದಾಹರಣೆಯಾಗಿದೆ. ಉತ್ಪಾದನೆ, ಒಡೆತನ, ಹಂಚಿಕೆ ಹಾಗೂ ಸೇವೆಗಳಲ್ಲಿ ಸಾಮಾಜೀಕರಣ ಮತ್ತು ಅದರ ಮೂಲಕ ಹುಟ್ಟಿ ಬೆಳೆಯುವ ಜನಸಮೂಹದ ಸಾಮಾಜಿಕ ಪ್ರಜ್ಞೆ ಹಾಗೂ ಚೈತನ್ಯಗಳೇ ಸಮಾಜವಾದಿ ವ್ಯವಸ್ಥೆಯ ಬುನಾದಿಯಾಗಲು ಸಾಧ್ಯ ಎನ್ನುವುದಕ್ಕೆ ಇದೂ ಕೂಡ ಉದಾಹರಣೆಯಾಗಿದೆ. ಕ್ಯೂಬಾದ ಬಿಕ್ಕಟ್ಟಿಗೆ ಪ್ರಧಾನವಾಗಿ ಸಮಾಜವಾದಿ ಮುಸುಕಿನಲ್ಲಿ ಬೆಳೆದು ಬಂದ ಬಂಡವಾಳಶಾಹಿ ಸಂಬಂಧಗಳೇ ಕಾರಣವಾಗಿವೆ ಎನ್ನುವುದನ್ನು ಮರೆಯಬಾರದು. ಅಲ್ಲಿನ ನಾಯಕತ್ವ ತನ್ನ ರಾಷ್ಟ್ರದಲ್ಲಿ ಸಮಾಜವಾದಿ ವ್ಯವಸ್ಥೆಯನ್ನು ನಿರ್ಮಿಸುತ್ತೇವೆಂದು ಹೇಳಿ ಸೋವಿಯತ್ ರಶ್ಯ ಮೊದಲಾದ ರಾಷ್ಟ್ರಗಳ ಹಣಕಾಸು ಬೆಂಬಲ ಪಡೆಯಿತು. ರಾಷ್ಟ್ರದ ಜನರಿಗೆ ಮೇಲ್ಮಧ್ಯಮ ವರ್ಗದ ಅನುಕೂಲ ಭದ್ರತೆಗಳನ್ನು ಕಲ್ಪಿಸಿತು. ಇದು ಜನರಲ್ಲಿ ಸಮಾಜವಾದಿ ಪ್ರಜ್ಞೆಯನ್ನು ಬೆಳೆಸದೆ ಪುಟ್ಟಬಂಡವಾಳಶಾಹಿ ಪ್ರಜ್ಞೆಯನ್ನು ಬೆಳೆಸಿತು. ಎಲ್ಲಾ ಭದ್ರತೆಗಳು ಅನುಕೂಲಗಳು ಇದ್ದಾಗ ಜನರು ಸರಕಾರದ ಪರವಾಗಿ ನಿಂತರು. ಅದು ಹೋಗುತ್ತಲೇ ತಮ್ಮ ಜವಾಬ್ದಾರಿಗಳನ್ನು ಮರೆತು ವ್ಯವಸ್ಥೆಯನ್ನು ಹಳಿಯತೊಡಗಿದರು. ಜನಸಮೂಹವನ್ನು ಸಾಮಾಜಿಕ ಉತ್ಪಾದನೆಯಲ್ಲಿ ತೊಡಗಿಸುತ್ತಾ ಅದರ ಪ್ರತಿಫಲವಾಗಿ ಸಾಮಾಜಿಕ ಸಮಾನತೆ ಹಾಗೂ ಭದ್ರತೆಗಳನ್ನು ಖಾತ್ರಿಗೊಳಿಸುವ ಕಾರ್ಯವಾಗದೆ ಹೊಸರೀತಿಯ ಅಸಮಾನತೆ ಹಾಗೂ ವರ್ಣಭೇದಗಳಿಗೆ ಕಾರಣವಾಯಿತು. ರಾಷ್ಟ್ರದ ಸಮಾಜವಾದದ ಕಟ್ಟುವಿಕೆಯನ್ನು ಸರಿಯಾದ ವರ್ಗಹೋರಾಟಗಳ ಮೂಸೆಯಲ್ಲಿ ಬೆಳಸಿಕೊಂಡು ಬರದಿದ್ದರೆ ಅದು ಸಹಜವಾಗಿ ಬಂಡವಾಳಶಾಹಿ ಸಂಬಂಧಗಳ ಬೆಳವಣಿಗೆಗಳಿಗೆ ಭದ್ರ ಬುನಾದಿಯಾಗುತ್ತದೆ. ಇದು ಅಮೆರಿಕ ಬೆಂಬಲಿತ ಜಾಗತಿಕ ಬಂಡವಾಳಕ್ಕೆ ಸಮಾಜವಾದಿ ಬಣಗಳಲ್ಲಿ ಕೈಯಾಡಿಸಲು ಸಹಾಯ ಮಾಡಿತು. ಇದೇ ಪ್ರಧಾನವಾಗಿ ಸೋವಿಯತ್ ರಶ್ಯ ಸೇರಿದಂತೆ ಈಗಿನ ಚೀನಾದವರೆಗೂ ಸಂಭವಿಸಿದೆ.

ಮಿಂಚಂಚೆ: nandakumarnandana67@gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News