ಭಾರತೀಯ ಪಾಸ್ ಪೋರ್ಟ್ ಹೊಂದಿದವರಿಗೆ ಪ್ರವಾಸಿ ವೀಸಾ ನೀಡಲು ಯುಎಇ ನಿರ್ಧಾರ

Update: 2021-08-22 15:34 GMT
ಸಾಂದರ್ಭಿಕ  ಚಿತ್ರ

ಹೊಸದಿಲ್ಲಿ ,ಆ.22: ಕೊರೋನವೈರಸ್ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಪಾಸ್ ಪೋರ್ಟ್ ಹೊಂದಿದವರಿಗೆ ಪ್ರವಾಸಿ ವೀಸಾಗಳನ್ನು ನೀಡಲು ಸಂಯುಕ್ತ ಅರಬ್ ಗಣರಾಜ್ಯ (ಯುಎಇ)ವು ನಿರ್ಧರಿಸಿದೆ. ಆದರೆ ಈ ವೀಸಾಗಳನ್ನು ಪಡೆಯಲು ಬಯಸುವವರು ಹಿಂದಿನ 14 ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡಿರಬಾರದು ಎಂಬ ಷರತ್ತನ್ನು ಅದು ವಿಧಿಸಿದೆ. ಅಂದರೆ ಭಾರತೀಯರು ನೇರವಾಗಿ ಯುಎಇಗೆ ತೆರಳುವಂತಿಲ್ಲ. 14 ದಿನಗಳ ಕಾಲ ಬೇರೆ ದೇಶಗಳಲ್ಲಿದ್ದು ಬಳಿಕ ಯುಎಇ ಪ್ರವೇಶಿಸಬಹುದು.

ನೇಪಾಳ, ನೈಜೀರಿಯಾ, ಪಾಕಿಸ್ತಾನ ಮತ್ತು ಉಗಾಂಡಾಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ ಎಂದು ಮಾಧ್ಯಮ ವರದಿಗಳು ರವಿವಾರ ತಿಳಿಸಿವೆ. ಸದ್ಯ ಯುಎಇ ಪ್ರಜೆಗಳು ಮತ್ತು ಯುಎಇ ಮೂಲಕ ಬೇರೆ ದೇಶಗಳಿಗೆ ಪ್ರಯಾಣಿಸುವವರಿಗೆ ಮಾತ್ರ ಸಂಯುಕ್ತ ಅರಬ್ ಗಣರಾಜ್ಯಕ್ಕೆ ತೆರಳಲು ಅವಕಾಶವಿದೆ. ಕೋವಿಡ್ ಸಾಂಕ್ರಾಮಿಕದ ಹರಡುವಿಕೆಯನ್ನು ನಿಯಂತ್ರಿಸಲು ಯುಎಇ ಆಡಳಿತವು ಈ ವರ್ಷದ ಆರಂಭದಲ್ಲಿ ಈ ಕ್ರಮವನ್ನು ಕೈಗೊಂಡಿತ್ತು. ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತಿರುವುದರಿಂದ ಅದು ಈಗ ನಿಧಾನವಾಗಿ ನಿರ್ಬಂಧಗಳನ್ನು ಸಡಿಲಿಸುತ್ತಿದೆ.

ಆದರೆ ಪ್ರಯಾಣಿಕರು ಯುಎಇ ತಲುಪಿದ ದಿನ ಮತ್ತು ತಲುಪಿದ ಬಳಿಕ ಒಂಭತ್ತನೇ ದಿನ ಪಿಸಿಆರ್ ಪರೀಕ್ಷೆಗೊಳಪಡಬೇಕಾಗುತ್ತದೆ.

ಪಾಕಿಸ್ತಾನದ ಇಸ್ಲಾಮಾಬಾದ್, ಕರಾಚಿ ಮತ್ತು ಲಾಹೋರ್ ವಿಮಾನ ನಿಲ್ದಾಣಗಳಿಂದ ಅಗಮಿಸುವ ಪ್ರಯಾಣಿಕರಿಗೆ ಪ್ರವೇಶಾವಕಾಶ ನೀಡುವುದಾಗಿ ಯುಎಇ ತಿಳಿಸಿದೆ. ಈ ಮೊದಲು ಪಾಕಿಸ್ತಾನದಿಂದ ಯುಎಇ ಮೂಲಕ ಬೇರೆ ದೇಶಗಳಿಗೆ ತೆರಳುವವರಿಗೆ ಮಾತ್ರ ಅವಕಾಶ ನೀಡಲಾಗುತ್ತಿತ್ತು.

ಯುಎಇಯಲ್ಲಿ ಈವರೆಗೆ 7,08,302 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು,2,018 ಜನರು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News