ಯುಎಇಯಲ್ಲಿ ಕೋವಿಡ್ ಸೋಂಕಿನ ಕೆಟ್ಟ ಅಧ್ಯಾಯ ಮುಗಿದಿದೆ: ಉಪಾಧ್ಯಕ್ಷರ ಘೋಷಣೆ
ಅಬುಧಾಬಿ, ಆ.29: ಕೊರೋನ ಸಾಂಕ್ರಾಮಿಕದ ವಿರುದ್ಧ ಒಂದು ತಂಡವಾಗಿ ಯುಎಇ ಕಾರ್ಯಕರ್ತರು ಕಾರ್ಯ ನಿರ್ವಹಿಸಿರುವುದರಿಂದ ಕೊರೋನ ವಿರುದ್ಧದ ಹೋರಾಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ದೇಶಗಳಲ್ಲಿ ಯುಎಇ ಕೂಡಾ ಸೇರುವಂತಾಗಿದೆ ಎಂದು ಯುಎಇ ಉಪಾಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್ ಹೇಳಿದ್ದಾರೆ.
ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿದ್ದರು. ಆಗಸ್ಟ್ 24ರಿಂದ ಯುಎಇಯಲ್ಲಿ ದೈನಂದಿನ ಸೋಂಕು ಪ್ರಕರಣ 1000ಕ್ಕಿಂತ ಕೆಳಗಿದೆ ಮತ್ತು ಈ ವರ್ಷಾಂತ್ಯದೊಳಗೆ ಸಂಪೂರ್ಣ ಲಸಿಕೀಕರಣದ ಗುರಿ ಸಾಧಿಸಲಾಗುವುದು. ಆಗಸ್ಟ್ 28ರವರೆಗಿನ ಅಂಕಿಅಂಶದ ಪ್ರಕಾರ, ಸುಮಾರು 87% ನಿವಾಸಿಗಳು ಕನಿಷ್ಟ 1 ಡೋಸ್ ಲಸಿಕೆ ಪಡೆದಿದ್ದರೆ 76% ನಿವಾಸಿಗಳು ಎರಡೂ ಲಸಿಕೆ ಪಡೆದಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ದೇಶದಲ್ಲಿ ಔಷಧ ಮತ್ತು ಔಷಧಗಳಿಗೆ ಸಂಬಂಧಿಸಿದ ವಸ್ತುಗಳ ಉತ್ಪಾದನೆಯ ಕುರಿತ ಕೆಲವು ನಿಯಮಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿತು. ದೇಶದ ಎಲ್ಲಾ ಪ್ರದೇಶಗಳಲ್ಲೂ ವರ್ಷವಿಡೀ ಅತ್ಯುತ್ತಮ ಗುಣಮಟ್ಟದ ಔಷಧ ಪೂರೈಸುವುದು ನಮ್ಮ ಉದ್ದೇಶವಾಗಿದೆ ಎಂದು ಶೇಖ್ ಮುಹಮ್ಮದ್ ಹೇಳಿದ್ದಾರೆ.