ಸೌದಿ ಅರೇಬಿಯಾದ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ: 8 ಮಂದಿಗೆ ಗಾಯ, ವಿಮಾನಕ್ಕೆ ಹಾನಿ
ನೈರುತ್ಯ ಸೌದಿ ಅರೇಬಿಯಾದ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ ನಡೆಸಿದ ಪರಿಣಾಮ ಎಂಟು ಮಂದಿ ಗಾಯಗೊಂಡಿದ್ದು, ವಿಮಾನವೊಂದಕ್ಕೆ ಹಾನಿ ಸಂಭವಿಸಿದೆ ಎಂದು ಸೌದಿಯ ಅಧಿಕೃತ ಮಾಧ್ಯಮ ವರದಿ ಮಾಡಿದೆ. ಅಭಾ ವಿಮಾನ ನಿಲ್ದಾಣದಲ್ಲಿ ಘಟನೆ ಸಂಭವಿಸಿದ್ದು, ಇದು ಎರಡನೇ ಡ್ರೋನ್ ದಾಳಿಯಾಗಿದೆ ಎಂದು ತಿಳಿದು ಬಂದಿದೆ. ಇದುವರೆಗೂ ದಾಳಿಯ ಹೊಣೆಯನ್ನು ಯಾವ ಸಂಘಟನೆಗಳೂ ಹೊತ್ತುಕೊಂಡಿಲ್ಲ ಎನ್ನಲಾಗಿದೆ.
ಯೆಮೆನ್ ನಲ್ಲಿ ಸೌದಿ ನೇತೃತ್ವದ ಸೇನಾ ಒಕ್ಕೂಟವು ಇರಾನ್ ಬೆಂಬಲಿತ ಶಿಯಾ ಬಂಡುಕೋರರ ವಿರುದ್ಧ ಹೋರಾಟ ನಡೆಸುತ್ತಿದ್ದು, ಈ ದಾಳಿಯ ಬಗ್ಗೆ ಹಾಗೂ ಸಂಭವಿಸಿದ ಸಾವು ನೋವುಗಳ ಕುರಿತು ಯಾವುದೇ ಮಾಹಿತಿ ನೀಡಲಿಲ್ಲ ಎನ್ನಲಾಗಿದೆ. ಒಕ್ಕೂಟವು, ತನ್ನ ಪಡೆಗಳು ಸ್ಫೋಟಕ ಡ್ರೋನ್ ಅನ್ನು ʼತಡೆದಿದೆʼ ಎಂದು ಮಾತ್ರ ಹೇಳಿಕೆ ನೀಡಿದೆ.
2015 ರಿಂದ, ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟದ ವಿರುದ್ಧ ಹೋರಾಡುತ್ತಿರುವ ಯೆಮೆನ್‌ನ ಹೌದಿ ಬಂಡುಕೋರರು ಸೌದಿ ಅರೇಬಿಯಾದಲ್ಲಿ ಮಿಲಿಟರಿ ಸ್ಥಾಪನೆಗಳು ಮತ್ತು ನಿರ್ಣಾಯಕ ತೈಲ ಮೂಲಸೌಕರ್ಯಗಳೊಂದಿಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡಿದ್ದಾರೆ.