ನೀರು ಮಲಿನಗೊಳಿಸಿದರೆ 5 ಮಿಲಿಯನ್ ಡಾಲರ್ ದಂಡ: ಸೌದಿ ಅರೇಬಿಯಾ

Update: 2021-09-05 16:55 GMT

 ರಿಯಾದ್, ಸೆ.5: ಸೌದಿ ಅರೆಬಿಯಾದಲ್ಲಿ ನೀರನ್ನು ಮಲಿನಗೊಳಿಸುವ ಸಂಸ್ಥೆಗಳು ಹಾಗೂ ವ್ಯಕ್ತಿಗಳಿಗೆ 5.3 ಮಿಲಿಯನ್ ಡಾಲರ್ ವರೆಗೆ ದಂಡ ವಿಧಿಸಲಾಗುವುದು ಎಂದು ಸರಕಾರ ಹೇಳಿದೆ.

 ಸಮುದ್ರ ಪರಿಸರವನ್ನು ರಕ್ಷಿಸುವ ಹೊಸ ಅಭಿಯಾನದಡಿ ಹಲವೊಂದು ನಿಯಮಗಳನ್ನು ರೂಪಿಸಲಾಗಿದೆ. ಅದರಂತೆ, ತೈಲ ಮಾಲಿನ್ಯ, ಅಪಾಯಕಾರಿ ವಸ್ತುಗಳನ್ನು ನೀರಿಗೆ ಚೆಲ್ಲುವುದು, ಸೌದಿ ಅರೆಬಿಯಾದ ಆಂತರಿಕ ನೀರಿನ ವ್ಯಾಪ್ತಿ, ಪ್ರಾದೇಶಿಕ ನೀರಿನ ವ್ಯಾಪ್ತಿ ಮತ್ತು ಇದಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿನ ಸಮುದ್ರದಲ್ಲಿ, ವಿಶೇಷ ಆರ್ಥಿಕ ವಲಯ ಅಥವಾ ಭೂಖಂಡದ ವ್ಯಾಪ್ತಿಯಲ್ಲಿ ನೌಕೆಗಳ ಸರಕು ಚೆಲ್ಲುವುದು ಮುಂತಾದ ಕೃತ್ಯಗಳನ್ನು ಅಪರಾಧ ಎಂದು ಸೂಚಿಸಲಾಗಿದೆ.

 ಸಮುದ್ರದಲ್ಲಿನ ಬಂಡೆ, ಹರಳು, ಬೀಚ್ ನ ಮರಳು, ಹೂಳು ಇತ್ಯಾದಿಗಳನ್ನು ಹೊರತೆಗೆಯುವುದನ್ನು ನಿಷೇಧಿಸಲಾಗಿದೆ. ರಾಷ್ಟ್ರೀಯ ಪರಿಸರ ಅನುಸರಣೆ ಕೇಂದ್ರದ (ಎನ್ಸಿಇಸಿ) ಅನುಮತಿ ಪಡೆಯದೆ ಸಮುದ್ರದ ವ್ಯಾಪ್ತಿಗೆ ಮಣ್ಣು ತುಂಬಿಸುವುದು, ಬೀಚ್ ಗಳನ್ನು ಅಭಿವೃದ್ಧಿಗೊಳಿಸುವುದು, ಬ್ರೇಕ್ ವಾಟರ್ ಸ್ಥಾಪನೆ ಅಥವಾ ತೆಗೆದು ಹಾಕುವುದು, ಸಮುದ್ರದ ದಡದಲ್ಲಿ ಗೋಡೆ, ಕರಾವಳಿ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ಅಥವಾ ಉತ್ಖನನ ಕಾರ್ಯವನ್ನು ನಿಷೇಧಿಸಲಾಗಿದೆ.

ಎನ್ಸಿಇಸಿ ಅನುಮತಿ ಪಡೆಯದ ಅಥವಾ ಪರಿಸರ ಸ್ನೇಹೀ ರೀತಿಯಲ್ಲಿ ನಡೆಯದ ಜಲಕ್ರೀಡಾಕೂಟ ಮತ್ತು ಮುಳುಗು ಸ್ಪರ್ಧೆ ಕ್ರೀಡಾಕೂಟವನ್ನು ನಿಷೇಧಿಸಲಾಗಿದೆ.

ಪರಿಸರ, ನೀರು ಮತ್ತು ಕೃಷಿ ಇಲಾಖೆಯ ನಿರ್ಧಾರದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್ಸಿಇಸಿಯ ವಕ್ತಾರ ಅಬ್ದುಲ್ಲಾ ಅಲ್ಮುತೈರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News