ಕೊರಗುತ್ತಿರುವ ಕೊರಗರ ಬದುಕು

Update: 2021-09-07 07:14 GMT

ಮಂಗಳೂರು, ಸೆ.7: ಕರಾವಳಿಯ ಮೂಲನಿವಾಸಿಗಳಾದ ಆದಿವಾಸಿ ಕೊರಗರ ಅಭಿವೃದ್ಧಿಗಾಗಿ ಸರಕಾರದಿಂದ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಆದರೆ ಅವುಗಳಲ್ಲಿ ಬಹುತೇಕ ಯೋಜನೆಗಳು ಇನ್ನೂ ಸಮರ್ಪಕವಾಗಿ ಕೊರಗರ ಮನೆ ಬಾಗಿಲಿಗೆ ತಲುಪಿಲ್ಲ. ಕಾಡಿನ ಸಹವಾಸಿಗಳಾದ ಕೊರಗರು ಇದೀಗ ಮೂಲ ಕಸುಬಿಗೂ ತೊಡಕುಂಟಾಗಿ ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಕೊರಗರ ಬದುಕು ಕೊರಗುತ್ತಲೇ ಸಾಗುತ್ತಿದೆ.

ಕೊರಗರ ಸರ್ವತೋಮುಖ ಅಭಿವೃದ್ಧಿಯ ನಿಟ್ಟಿನಲ್ಲಿ ತಯಾರು ಗೊಂಡಿರುವ ಡಾ.ಮುಹಮ್ಮದ್ ಪೀರ್ ವರದಿ ಸಮರ್ಪಕವಾಗಿ ಜಾರಿಗೊಂಡಿದ್ದಲ್ಲಿ ಇಂದು ಕೊರಗರ ಬದುಕಿಗೊಂದು ಉತ್ತಮ ನೆರಳು ಸಿಗುತ್ತಿತ್ತು. ಡಾ.ಮುಹಮ್ಮದ್ ಪೀರ್ ವರದಿಯಲ್ಲಿ ಪ್ರತಿ ಯೊಂದು ಕೊರಗ ಕುಟುಂಬಕ್ಕೂ ಕನಿಷ್ಠ 2.50 ಎಕರೆ ಕೃಷಿ ಯೋಗ್ಯ ಜಮೀನು ನೀಡಬೇಕು. ಅದರೊಂದಿಗೆ ಅಲ್ಲಿ ಕೃಷಿ ಕಾರ್ಯ ನಡೆಸಲು ಪೂರಕವಾಗಿ ಕೆರೆ, ಬಾವಿ ನಿರ್ಮಾಣ, ಪಂಪ್‌ಸೆಟ್ ಅಳವಡಿಕೆ ಸೇರಿದಂತೆ ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಇದರಿಂದಾಗಿ ಬದುಕಿಗಾಗಿ ನಿಂತಲ್ಲಿ ನಿಲ್ಲದೆ ವಲಸೆ ಹೋಗುತ್ತಿರುವ ಕೊರಗ ಕುಟುಂಬಗಳಿಗೆ ಆರ್ಥಿಕ ಚೈತನ್ಯ ನೀಡುವುದರೊಂದಿಗೆ ಅವರಲ್ಲಿ ಸ್ವಾವಲಂಬನೆ ಮೂಡಿಸಬೇಕು ಎಂದು ತಿಳಿಸಲಾಗಿತ್ತು.

ಈ ವರದಿಯನ್ನು ಪಡೆದುಕೊಂಡಿರುವ ಸರಕಾರವು ಅದಕ್ಕೆ ಪೂರಕವಾಗಿ ಒಂದಷ್ಟು ಯೋಜನೆಗಳನ್ನು ರೂಪಿಸಿ ದ್ದರೂ, ಅದು ಕೊರಗರ ಮನೆ ಬಾಗಿಲಿಗೆ ಇನ್ನೂ ಸಮರ್ಪಕವಾಗಿ ತಲುಪಿಲ್ಲ.

ವೃತ್ತಿ ಬದುಕಿಗೂ ಕುತ್ತು:  ಕೊರಗರು ಕಾಡನ್ನೇ ಅವಲಂಬಿಸಿ ಬದುಕುವ ಜನಾಂಗ. ಅನಾದಿ ಕಾಲದಿಂದಲೂ ಕಾಡಿನಲ್ಲಿ ಸಿಗುವ ಬೀಳುಗಳಿಂದ ಬುಟ್ಟಿ ತಯಾರಿಸಿ ಅದನ್ನು ಮಾರಾಟ ಮಾಡಿ ಬರುವ ಅಲ್ಪ ಅದಾಯದಿಂದಲೇ ಅವರ ಜೀವನ ರಥ ಸಾಗುತ್ತಿದೆ. ಆದರೆ ಇತ್ತೀಚೆಗೆ ಮಾರ್ಕೆಟ್‌ಗಳಿಗೆ ಲಗ್ಗೆ ಯಿಟ್ಟಿರುವ ಪ್ಲಾಸ್ಟಿಕ್ ಬುಟ್ಟಿಗಳು ಕೊರಗರ ವೃತ್ತಿ ಬದುಕಿಗೆ ಕುತ್ತು ತಂದಿದೆ.

ಮೂಲಭೂತ ಸೌಲಭ್ಯ ವಂಚಿತರು: ಸುಳ್ಯ ತಾಲೂಕಿನಲ್ಲಿ 30 ಹಾಗೂ ಕಡಬ ತಾಲೂಕಿನ ನೆಟ್ಟಣದ ಬಿಳಿನೆಲೆಯಲ್ಲಿ 12ರಷ್ಟು ಕೊರಗ ಕುಟುಂಬಗಳಿವೆ. ಇಲ್ಲಿನ ಬಹುತೇಕ ಮಂದಿಗೆ ಬುಟ್ಟಿ ಹೆಣೆಯುವುದೇ ಕಾಯಕ. ದಿನಬೆಳಗಾದರೆ ಅರಣ್ಯದಿಂದ ಕಾಡ ಬಳ್ಳಿಗಳನ್ನು ತಂದು ಅದನ್ನು ಬುಟ್ಟಿ ಮಾಡುವ ಕಾಯಕದಲ್ಲಿ ತೊಡಗುತ್ತಾರೆ. ಬಳಿಕ ಅವುಗಳನ್ನು ಪಟ್ಟಣಕ್ಕೆ ಕೊಂಡೊಯ್ದು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಕೈಯಲ್ಲಿ ನೇಯುವ ಬುಟ್ಟಿಗಳಿಗೆ ಬೇಡಿಕೆ ಕಡಿಮೆಯಾಗಿದ್ದು, ಅವುಗಳ ಸ್ಥಾನವನ್ನು ಪ್ಲಾಸ್ಟಿಕ್ ಬುಟ್ಟಿಗಳು ಆಕ್ರಮಿಸಿಕೊಂಡಿವೆ. ಇದರಿಂದ ಕೊರಗರ ಮೂಲ ಕಸುಬಿಗೆ ಸಂಕಷ್ಟ ಎದುರಾಗಿದೆ. ಜೀವನ ದುಸ್ತರವಾಗಿದೆ.

ಸುಳ್ಯ ಹಾಗೂ ಕಡಬ ತಾಲೂಕುಗಳ ಬಹುತೇಕ ಕೊರಗ ಕುಟುಂಬಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಕೆಲವರು ಮನೆಯಿಲ್ಲದೆ ಚಿಕ್ಕ ಗುಡಿಲುಗಳಲ್ಲಿ ವಾಸವಾಗಿದ್ದಾರೆ. ಇನ್ನೂ ಕೆಲವು ಮನೆಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಹಲವಾರು ಮನೆಗಳಿಗೆ ಸಮರ್ಪಕ ಶೌಚಾಲಯಗಳಿಲ್ಲ. ಸಮರ್ಪಕವಾದ ರಸ್ತೆಗಳ ಕೊರತೆ ಇದೆ.

‘‘ನಾವು ಕಳೆದ 20 ವರ್ಷಗಳಿಂದ ಕಡಬ ತಾಲೂಕಿನ ನೆಟ್ಟಣದ ಬಿಳಿನೆಲೆಯ ರಕ್ಷಿತಾರಾಣ್ಯದಲ್ಲಿ ನೆಲೆಸಿದ್ದೇವೆ. ಇಲ್ಲಿ 12ರಷ್ಟು ಕೊರಗ ಕುಟುಂಬಗಳಿದ್ದು, ಆರಂಭದಲ್ಲಿ ಆರಣ್ಯ ಇಲಾಖೆಯವರು ಸಮಸ್ಯೆ ಮಾಡುತ್ತಿದ್ದರು. ಅದನ್ನು ಸಮಾಜ ಕಲ್ಯಾಣ ಇಲಾಖೆ, ಐಟಿಡಿಪಿ ಹಾಗೂ ಸ್ಥಳೀಯ ಪಂಚಾಯತ್‌ನವರು ಸೇರಿ ಬಗೆಹರಿಸಿ ಎಲ್ಲ ಕೊರಗ ಕುಟುಂಬಗಳಿಗೆ ಸಣ್ಣ ಸಣ್ಣ ಮನೆಯ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ. ಎಲ್ಲ ಕುಟುಂಬಗಳಿಗೂ ಅರಣ್ಯ ಹಕ್ಕು ಪತ್ರವನ್ನು ನೀಡಿದ್ದಾರೆ. ಇದು ಶಾಶ್ವತವಾಗಿ ಇಲ್ಲಿ ನೆಲೆಸಲು ಅನುಕೂಲ ಮಾಡಿ ಕೊಟ್ಟಿದೆ. ಆದರೆ ಸರಕಾರಿ ಸೌಲಭ್ಯಗಳನ್ನು ಪಡೆಯಲು ಈ ಹಕ್ಕು ಪತ್ರದಿಂದ ಸಾಧ್ಯವಾಗುತ್ತಿಲ್ಲ. ಯಾವುದೇ ಸರಕಾರಿ ಸೌಲಭ್ಯ ಪಡೆಯಲು ಆರ್‌ಟಿಸಿ ಕೇಳುತ್ತಿದ್ದಾರೆ. ಆದ್ದರಿಂದ ಸರಕಾರ ನಮ್ಮ ಮೇಲೆ ಅನುಕಂಪ ತೋರಿಸಿ ಆರ್‌ಟಿಸಿ ನೀಡಬೇಕು’’ ಕೊರಗ ಕಾಲನಿ ನಿವಾಸಿ ಶ್ರೀನಾಥ್ ಒತ್ತಾಯಿಸಿದ್ದಾರೆ.

‘‘ನಮ್ಮ ಮೂಲ ಕಸುಬನ್ನು ಮಾಡುವವರ ಸಂಖ್ಯೆ ಕಡಿಮೆ ಯಾಗುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಬುಟ್ಟಿ ಹೆಣೆಯಲು ಅವಶ್ಯಕ ವಾದ ಬೀಳು ಮತ್ತು ಕಾಡಬಳ್ಳಿಗಳು ಸಿಗುತ್ತಿಲ್ಲ. ಅಲ್ಲದೆ 5-6 ಕೀ.ಮೀ ದೂರದರಿಂದ ಬುಟ್ಟಿ ಮಾಡಲು ಬಳ್ಳಿಗಳನ್ನು ತಲೆಹೊರೆಯಲ್ಲೇ ತರಬೇಕಾಗುತ್ತದೆ. ಇದರಿಂದ ಮೂಲ ಕಸುಬನ್ನು ಮಾಡುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಭವಿಷ್ಯದಲ್ಲಿ ಮೂಲ ಕಸುಬು ಸಂಪೂರ್ಣವಾಗಿ ಅಳಿದುಹೋಗಬಹುದು ಎಂದು ಆತಂಕ ವ್ಯಕ್ತಪಡಿಸುತ್ತಾರೆ’’ ಶ್ರೀನಾಥ್.

ಪೌಷ್ಟಿಕ ಆಹಾರದ ಕೊರತೆ: ಕೊರಗ ಸಮುದಾಯ ಜನಸಂಖ್ಯೆ ವಿವಿಧ ಕಾರಣಗಳಿಂದಾಗಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಈ ಸಮುದಾಯದ 80 ಶೇಕಡ ಜನರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ 15 ವರ್ಷಗಳಿಂದ ಪೌಷ್ಟಿಕ ಆಹಾರಕ್ಕಾಗಿ ನಡೆಸಿದ ಹಕ್ಕೊತ್ತಾಯದ ಪರಿಣಾಮವಾಗಿ 2009ರಿಂದ ಸಮುದಾಯ ಜನರಿಗೆ ಸರಕಾರ ಪೌಷ್ಟಿಕ ಆಹಾರ ವಿತರಿಸುತ್ತಿದೆ. ಆದರೆ ಈ ಪೌಷ್ಟಿಕ ಆಹಾರ ತೀರಾ ಕಳಪೆ ಗುಣಮಟ್ಟಾದ್ದಾಗಿದೆ. ಮಾತ್ರವಲ್ಲ ಸಮಯಕ್ಕೆ ಸರಿಯಾಗಿ ಸಿಗುವುದೂ ಇಲ್ಲ ಎಂಬುದು ಕೊರಗರ ಆರೋಪ.

ಈ ರೀತಿ ಕೊರಗ ಸಮುದಾಯವು ಸಂಕಷ್ಟಕರ ಬದುಕು ಸಾಗಿಸು ತ್ತಿದೆ. ಜನಪ್ರತಿನಿಧಿಗಳು, ಸರಕಾರ ಅವರ ಬಗ್ಗೆ ದಿವ್ಯ ನಿರ್ಲಕ್ಷವನ್ನು ಮುಂದುವರಿಸಿದೆ. ಮೂಢನಂಬಿಕೆ, ಅಜ್ಞಾನ, ಅಂಧಶ್ರದ್ಧೆ ಹಾಗೂ ಅಸ್ಪಶ್ಯತೆ ಕಾರಣದಿಂದ ಮಾನವ ಹಕ್ಕುಗಳಿಂದಲೇ ವಂಚನೆಗೊಳಗಾಗಿರುವ ಕೊರಗರಲ್ಲಿ ಶಕ್ತಿ ತುಂಬುವ ಕೆಲಸವನ್ನು ಸರಕಾರ ಇನ್ನಾದರೂ ಮಾಡಬೇಕಿದೆ. ಅವರಿಗೆ ಸ್ವಾಭಿಮಾನಿ ಬದುಕು ಕಟ್ಟಿಕೊಡುವ ಬಗ್ಗೆ ಸರಕಾರ ಮತ್ತು ಜನಪ್ರತಿನಿಧಿಗಳು ಆಸಕ್ತಿ ತೋರಬೇಕಿದೆ.

ಕಳೆದ ಹಲವಾರು ವರ್ಷಗಳಿಂದ 12 ಕೊರಗ ಕುಟುಂಬಗಳು ಇಲ್ಲಿನ ರಕ್ಷಿತಾರಣ್ಯದಲ್ಲಿ ಸಣ್ಣಪುಟ್ಟ ಮನೆಗಳನ್ನು ನಿರ್ಮಿಸಿ ವಾಸವಾಗಿವೆ. ಆದರೆ ನಾವು ನೆಲೆಸಿದ ಜಮೀನಿಗೆ ಯಾವುದೇ ಆರ್‌ಟಿಸಿ ಇಲ್ಲ. ಇದರಿಂದ ಸರಕಾರದಿಂದ ನಮಗೆ ಸಿಗುವ ಯಾವುದೇ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಬಹುತೇಕ ಜನರಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್ ಸೌಲಭ್ಯ ಕೂಡಾ ಇಲ್ಲ. ಇದರಿಂದ ನಮ್ಮ ಮಕ್ಕಳಿಗೆ ಐಟಿಡಿಪಿ ಅಥವಾ ಇನ್ಯಾವುದೇ ಇಲಾಖೆಯಿಂದ ಸಿಗುವ ವಿದ್ಯಾರ್ಥಿ ವೇತನವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇವೆಲ್ಲವನ್ನು ಪರಿಗಣಿಸಿ ನಮಗೆ ಸಂಬಂಧಪಟ್ಟ ಸರಕಾರ ಅಥವಾ ಅಧಿಕಾರಿಗಳು ಒಂದು ಅದಾಲತ್ ಮೂಲಕ ಸರಿಪಡಿಸಿದಲ್ಲಿ ಭವಿಷ್ಯದಲ್ಲಿ ನಮ್ಮ ಮಕ್ಕಳಾದರೂ ನೆಮ್ಮದಿಯಾಗಿ ಜೀವನ ನಡೆಸಬಹುದಾಗಿದೆ.

ಶ್ರೀನಾಥ್, ಕೊರಗ ಕಾಲನಿ ಬಳಿನೆಲೆ

ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಈ ತಿಂಗಳ ಕೊನೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಎಲ್ಲ ತಾಲೂಕುಗಳ ತಹಶೀಲ್ದಾರ್‌ಗಳು ಹಾಗೂ ಕೊರಗ ಸಮುದಾಯದ ಕೆಲವು ಮುಖಂಡರನ್ನು ಕರೆಸಿ ಸಭೆ ನಡೆಸಲಾಗುವುದು. ಅದರಲ್ಲಿ ಕೊರಗರ ಹಕ್ಕುಪತ್ರ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು. ಕೊರಗರ ಮೂಲಭೂತ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಇಲಾಖೆಯ ಮೂಲಕ ಕ್ರಮ ಕೈಗೊಳ್ಳಲಾಗುವುದು.

ಹೇಮಲತಾ, ಯೋಜನಾ ಸಮನ್ವಯ ಅಧಿಕಾರಿ, ಕೊರಗ ಕಲ್ಯಾಣ ಇಲಾಖೆ ದ.ಕ. ಜಿಲ್ಲೆ

ಮೂಲ ಕಸುಬಿಗೆ ಬೇಡಿಕೆ ಕಡಿಮೆಯಾಗಿದ್ದು, ಕೆಲಸ ಮಾಡುವವರ ಸಂಖ್ಯೆ ಕೂಡಾ ಗಣನೀಯವಾಗಿ ಇಳಿಕೆಯಾಗಿದೆ. ಇದರಿಂದ ಮೂಲ ಕಸುಬನ್ನೇ ನಂಬಿ ಜೀವನ ನಡೆಸುವುದು ಕಷ್ಟದ ಮಾತು. ಅದಕ್ಕಾಗಿ ನಾನು ಟ್ಯಾಕ್ಸಿ ಚಾಲಕನಾಗಿ ದುಡಿಯುತ್ತಿದ್ದೇನೆ. ಭವಿಷ್ಯದಲ್ಲಿ ನಮ್ಮ ಮಕ್ಕಳು ವಿದ್ಯಾವಂತರಾಗಿ ಸಾಮಾನ್ಯ ಜನರಂತೆ ಮುಖ್ಯವಾಹಿನಿಗೆ ಬರುವಂತಾಗಬೇಕು. ಅದಕ್ಕಾಗಿ ಸರಕಾರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ.

 ಚಂದ್ರಶೇಖರ್ ನೆಟ್ಟಣ, ಟ್ಯಾಕ್ಸಿ ಚಾಲಕ

Writer - ಸಂಶುದ್ದೀನ್ ಎಣ್ಮೂರು

contributor

Editor - ಸಂಶುದ್ದೀನ್ ಎಣ್ಮೂರು

contributor

Similar News