ಭಾರತ ಸೇರಿದಂತೆ ಹಲವು ದೇಶಗಳಿಂದ ಪ್ರಯಾಣ ನಿರ್ಬಂಧವನ್ನು ತೆರವುಗೊಳಿಸಿದ ಯುಎಇ: ಸಂಪೂರ್ಣ ವಿವರ ಇಲ್ಲಿದೆ
ಅಬುಧಾಬಿ: ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ಮಾಡಿರುವ ಕೋವಿಡ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದುಕೊಂಡಿರುವ ಭಾರತ, ಪಾಕಿಸ್ತಾನ ಮತ್ತು ಇತರ 13 ದೇಶಗಳ ನಿವಾಸಿಗಳು ಸೋಮವಾರದಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಮರಳಬಹುದಾಗಿದೆ.
ರಾಷ್ಟ್ರೀಯ ತುರ್ತುಸ್ಥಿತಿ ಮತ್ತು ಬಿಕ್ಕಟ್ಟು ನಿರ್ವಹಣಾ ಪ್ರಾಧಿಕಾರದ (NCEMA) ಪ್ರಕಾರ, ಸೆಪ್ಟೆಂಬರ್ 12 ರಿಂದ ಯುಎಇಗೆ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ವಿಯೆಟ್ನಾಂ, ನಮೀಬಿಯಾ, ಜಾಂಬಿಯಾ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಉಗಾಂಡ, ಸಿಯೆರಾ ಲಿಯೋನ್, ಲೈಬೀರಿಯಾ, ದಕ್ಷಿಣ ಆಫ್ರಿಕಾ, ನೈಜೀರಿಯಾ ಮತ್ತು ಅಫ್ಘಾನಿಸ್ತಾನದ ನಿವಾಸಿಗಳು ಮರಳಬಹುದಾಗಿದೆ.
"ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದಿತಗೊಂಡ ಲಸಿಕೆಗಳನ್ನು ಸಂಪೂರ್ಣವಾಗಿ ಪಡೆದವರು ಹಾಗೂ ಈ ಅಮಾನತು ನಿರ್ಧಾರ ಹೊರಡಿಸಿದ ಬಳಿಕ ಆರು ತಿಂಗಳಿನಿಂದ ಈ ದೇಶಗಳಲ್ಲಿ ವಾಸಿಸುತ್ತಿರುವವರು ನೂತನ ನಿಯಮದ ಪ್ರಕಾರ ಯುಎಇಗೆ ಮರಳಬಹುದಾಗಿದೆ. ಪ್ರವೇಶದ ಬಳಿಕ ಅವರಿಗೆ ಇನ್ನಿತರ ವಿಚಾರಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ" ಎಂದು ರಾಷ್ಟ್ರೀಯ ತುರ್ತುಸ್ಥಿತಿ ಮತ್ತು ಬಿಕ್ಕಟ್ಟು ನಿರ್ವಹಣಾ ಪ್ರಾಧಿಕಾರ ಹೇಳಿದೆ.
ಯುಎಇಯ ಏಳು ಎಮಿರೇಟ್‌ಗಳಲ್ಲಿ ಒಂದಾದ ದುಬೈ, ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಒಂದು ವರ್ಷದ ವಿಳಂಬದ ನಂತರ ಅಕ್ಟೋಬರ್ 1 ರಂದು ಎಕ್ಸ್‌ಪೋ 2020 ವಿಶ್ವ ಮೇಳವನ್ನು ತೆರೆಯಲು ತಯಾರಿ ನಡೆಸುತ್ತಿದೆ. ಪ್ರಾದೇಶಿಕ ವ್ಯಾಪಾರ ಮತ್ತು ಪ್ರವಾಸೋದ್ಯಮ ಕೇಂದ್ರವಾದ ಈ ದೇಶ ತನ್ನ ಆರ್ಥಿಕತೆಗೆ ಉತ್ತೇಜನ ನೀಡಲು ಮೇಳವನ್ನು ಅವಲಂಬಿಸಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಎಕ್ಸ್‌ಪೋ 2020 ರ ಸಮಯದಲ್ಲಿ ಕೊರೋನ ವೈರಸ್ ಹರಡುವುದನ್ನು ತಡೆಯಲು ಉಳಿದ ಯುಎಇ ವಿಮಾನ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಸಂಘಟಕರು ಹಿಂದೆ ಹೇಳಿದ್ದರು.
ಆಗಮನದ ವೇಳೆಯ ಅವಶ್ಯಕತೆಗಳು:
ನಿವಾಸಿಗಳು ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಅಂಡ್ ಸಿಟಿಜನ್‌ಶಿಪ್ (ಐಸಿಎ) ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು ಮತ್ತು ಯುಎಇಗೆ ಆಗಮಿಸುವ ವೇಳೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿತ ಲಸಿಕಾ ಪ್ರಮಾಣಪತ್ರವನ್ನು ನೀಡಬೇಕು.
ಅನುಮೋದಿತ ಪ್ರಯೋಗಾಲಯದಲ್ಲಿ ನಿರ್ಗಮನದ ೪೮ ಗಂಟೆಯೊಳಗಡೆ ನಡೆಸಿದ, ಕ್ಯೂ ಆರ್ ಕೋಡ್ ಹೊಂದಿರುವ ನೆಗಿವ್ ಪಿಸಿಆರ್ ಟೆಸ್ಟ್ ಫಲಿತಾಂಶವನ್ನು ನೀಡಬೇಕು.
ಪ್ರಯಾಣಿಕರು ವಿಮಾನ ಹತ್ತುವ ಮುನ್ನ ರ್ಯಾಪಿಡ್ ಪಿಸಿಆರ್ ಟೆಸ್ಟ್ ಹಾಗೂ ನಾಲ್ಕನೇ ಮತ್ತು ಎಂಟನೇ ದಿನದಂದು ಮತ್ತೊಂದು ಪಿಸಿಆರ್ ಪರೀಕ್ಷೆಯನ್ನು ಕೈಗೊಳ್ಳಬೇಕು ಹಾಗೂ ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು.
16 ವರ್ಷಕ್ಕಿಂತ ಕೆಳಗಿನ ಪ್ರಾಯದ ಮಕ್ಕಳಿಗೆ ಈ ಕಾರ್ಯ ವಿಧಾನಗಳಿಂದ ವಿನಾಯಿತಿ ನೀಡಲಾಗಿದೆ.