ಫೆಲೆಸ್ತೀನ್ ಕೈದಿಗಳ ಬಗ್ಗೆ ಇಸ್ರೇಲ್ ದಮನಕಾರಿ ನೀತಿ: ಮಾನವ ಹಕ್ಕು ಸಂಘಟನೆ ಖಂಡನೆ
ಜಿದ್ದಾ, ಸೆ.12: ಫೆಲೆಸ್ತೀನಿಯನ್ ಕೈದಿಗಳ ವಿಷಯದಲ್ಲಿ ಇಸ್ರೇಲ್ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ)ಯ ಸ್ವತಂತ್ರ ಸ್ಥಾಯೀ ಮಾನವಹಕ್ಕು ಆಯೋಗ ಖಂಡಿಸಿದೆ.
ಉತ್ತರ ಇಸ್ರೇಲ್ ನ ಬಿಗಿಭದ್ರತಾ ವ್ಯವಸ್ಥೆಯಿದ್ದ ಜೈಲಿನಿಂದ ಪೆಲೆಸ್ತೀನ್ ಕೈದಿಗಳು ತಪ್ಪಿಸಿಕೊಂಡ ಬಳಿಕ ಮುಂದಿನ ದಿನದಲ್ಲಿ ಇಂತಹ ಕೃತ್ಯಗಳನ್ನು ನಡೆಸಬಾರದು ಎಂಬ ಉದ್ದೇಶದಿಂದ ಇಸ್ರೇಲ್ ಅಧಿಕಾರಿಗಳು ಫೆಲೆಸ್ತೀನ್ ಕೈದಿಗಳನ್ನು ಶಿಕ್ಷಿಸುತ್ತಿದ್ದಾರೆ. ಭದ್ರತೆ ಬಿಗಿಗೊಳಿಸುವ ನೆಪದಲ್ಲಿ ಸಾಮೂಹಿಕ ದೌರ್ಜನ್ಯ, ಹಿಂಸೆ, ಚಿತ್ರಹಿಂಸೆ ಮತ್ತು ಏಕಪಕ್ಷೀಯ ಬಂಧನ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಆಯೋಗ ಖಂಡಿಸಿದೆ.
ಅಮಾಯಕ ಫೆಲೆಸ್ತೀನಿಯನ್ ಪ್ರಜೆಗಳನ್ನು, ಅದರಲ್ಲೂ ಕೈದಿಗಳ ಕುಟುಂಬದವರನ್ನು ಗುರಿಯಾಗಿಸಿಕೊಂಡು ಮನೆಮನೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಈ ಪ್ರತೀಕಾರದ ಕ್ರಮಗಳಿಗೆ ಯಾವುದೇ ಕಾನೂನಿನ ಆಧಾರವಿಲ್ಲ. ಆದ್ದರಿಂದ ಇವು ಅಂತರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಮಾನವೀಯ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಮಾನವಹಕ್ಕು ಆಯೋಗದ ಹೇಳಿಕೆ ತಿಳಿಸಿದೆ.
ಭದ್ರತಾ ಅಪರಾಧ ಎಂಬ ಹುರುಳಿಲ್ಲದ ಆರೋಪದಲ್ಲಿ ಮಕ್ಕಳು, ಮಹಿಳೆಯರ ಸಹಿತ ಸಾವಿರಾರು ಅಮಾಯಕ ಪೆಲೆಸ್ತೀನಿಯನ್ನರನ್ನು ಇಸ್ರೇಲ್ ಬಂಧನದಲ್ಲಿರಿಸಿದೆ. ಯಾವುದೇ ಕಾನೂನುಪ್ರಕ್ರಿಯೆ ನಡೆಸದೆ ಅವರನ್ನು ದೀರ್ಘಾವಧಿಯಲ್ಲಿ ಬಂಧನದಲ್ಲಿಡುವ ಮೂಲಕ ಮುಕ್ತ ವಿಚಾರಣೆಯ ಹಕ್ಕನ್ನು ಪೂರ್ಣ ಉಲ್ಲಂಸಲಾಗಿದೆ . ಮಹಿಳೆಯರು ಮತ್ತು ಮಕ್ಕಳನ್ನು ಹೆಚ್ಚಾಗಿ ರಾತ್ರಿ ವೇಳೆ ಬಂಧಿಸಲಾಗುತ್ತಿದೆ ಮತ್ತು ಈ ಸಂದರ್ಭ ಅಸಮಾನ ಬಲ ಪ್ರಯೋಗಿಸಲಾಗುತ್ತಿದೆ ಮತ್ತು ಅವರ ಮೇಲೆ ಕಸ್ಟಡಿಯಲ್ಲಿ ದೈಹಿಕ ಹಿಂಸೆ ನೀಡಲಾಗುತ್ತಿದೆ ಎಂದು ಆಯೋಗ ಹೇಳಿದೆ.
ಫೆಲೆಸ್ತೀನ್ ಕೈದಿಗಳಿಗೆ ವಿಚಾರಣಾ ಪೂರ್ವ ಬಂಧನ ಮತ್ತು ಮುಕ್ತ ವಿಚಾರಣೆ ಹಕ್ಕು ಸೇರಿದಂತೆ ಅಂತರಾಷ್ಟ್ರೀಯ ಮಾನವಹಕ್ಕುಗಳು ಮತ್ತು ಮಾನವೀಯ ಕಾನೂನಿಗೆ ಸಂಬಂಧಿಸಿ ಇಸ್ರೇಲ್ನ ಮೇಲೆ ಹಲವು ಬಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಆರೋಗ್ಯರಕ್ಷಣೆ, ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆ, ನಿಯಮಿತವಾಗಿ ಕುಟುಂಬ ಸದಸ್ಯರ ಭೇಟಿಗೆ ಅವಕಾಶದಂತಹ ಕ್ರಮಗಳಿಗೆ ಇಸ್ರೇಲ್ ಆದ್ಯತೆ ನೀಡಬೇಕು ಎಂದು ಆಯೋಗ ಆಗ್ರಹಿಸಿದೆ.
ಚಿತ್ರಹಿಂಸೆ ಬಗ್ಗೆ 1,300 ದೂರು ದಾಖಲು
ಇಸ್ರೇಲ್ ನ ನ್ಯಾಯ ಇಲಾಖೆಯಲ್ಲಿ 2001ರಿಂದ 2020ರ ಅವಧಿಯಲ್ಲಿ ಚಿತ್ರಹಿಂಸೆಗೆ ಸಂಬಂಧಿಸಿದ ಸುಮಾರು 1,300 ದೂರುಗಳು ದಾಖಲಾಗಿವೆ ಎಂದು ಇಸ್ರೇಲ್ನ ಮಾನವಹಕ್ಕು ಸಂಘಟನೆ ‘ ಪಬ್ಲಿಕ್ ಕಮಿಟಿ ಎಗೈನ್ಸ್ಟ್ ಟಾರ್ಚರ್’ ವರದಿ ಮಾಡಿದೆ. ಈ ದೂರುಗಳ ಪೈಕಿ ಒಂದರ ಕ್ರಿಮಿನಲ್ ವಿಚಾರಣೆ ಮಾತ್ರ ನಡೆಸಲಾಗಿದ್ದು ಯಾವುದೇ ಕಾನೂನು ಕ್ರಮ ಜರುಗಿಸಲಾಗಿಲ್ಲ. ಇದು ಶಿಕ್ಷೆ ಮತ್ತು ನ್ಯಾಯದ ಕೊರತೆಯ ಸ್ಪಷ್ಟ ನಿದರ್ಶನವಾಗಿದೆ ಎಂದು ಸಂಸ್ಥೆ ಹೇಳಿದೆ.