ಮುಂದಿನ 5 ವರ್ಷಗಳಲ್ಲಿ ಶೇ10ರಷ್ಟು ಖಾಸಗಿ ಉದ್ಯೋಗಗಳು ಯುಎಇ ನಾಗರಿಕರಿಗೆ

Update: 2021-09-13 13:04 GMT
Photo: Britannica

ದುಬೈ: ಮುಂದಿನ ಐದು ವರ್ಷಗಳಲ್ಲಿ  ಸಂಯುಕ್ತ ಅರಬ್ ಸಂಸ್ಥಾನದ ಖಾಸಗಿ ವಲಯದ ಕಂಪೆನಿಗಳು ತಮ್ಮ ಶೇ 10ರಷ್ಟು ಹುದ್ದೆಗಳಲ್ಲಿ ಎಮಿರೇಟ್ ರಾಷ್ಟ್ರೀಯರನ್ನೇ ನೇಮಕಗೊಳಿಸಬೇಕು ಎಂದು ಅಲ್ಲಿನ ಆಡಳಿತ ತನ್ನ  ಆರ್ಥಿಕ ಸುಧಾರಣಾ ನೀತಿಗಳನ್ವಯ ರವಿವಾರ ಘೋಷಿಸಿದೆ.

ತನ್ನ ನಾಗರಿಕರು ಮುಂದಿನ ಐದು ವರ್ಷಗಳಲ್ಲಿ ದೇಶದ 75,000 ಖಾಸಗಿ ವಲಯದ  ಉದ್ಯೋಗಗಳನ್ನು ಪಡೆಯುವಂತಾಗಲು ತಾನು 24 ಬಿಲಿಯನ್ ದಿರ್ಹಂ (6.53 ಬಿಲಿಯನ್ ಡಾಲರ್) ವೆಚ್ಚ ಮಾಡುವುದಾಗಿಯೂ ಅಲ್ಲಿನ ಸರಕಾರ ಹೇಳಿದೆ.

ವೇತನದಲ್ಲಿ ಏರಿಕೆ, ತರಬೇತಿ  ಅನುದಾನ, ಪಿಂಚಣಿ ಮತ್ತು ಮಕ್ಕಳಿಗಾಗಿ ಸವಲತ್ತುಗಳು ಮುಂತಾದ ಪ್ರಯೋಜನಗಳು ಎಮಿರೇಟ್ಸ್ ನಾಗರಿಕರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಪಡೆದುಕೊಂಡರೆ ದೊರೆಯುವ ನಿರೀಕ್ಷೆಯಿದೆ.

ಆರಂಭಿಕ ವರ್ಷದಲ್ಲಿ ಸಂಯುಕ್ತ ಅರಬ್ ಸಂಸ್ಥಾನದ ಖಾಸಗಿ ವಲಯದ ಕಂಪೆನಿಗಳು ಶೇ2ರಷ್ಟು ಸ್ವದೇಶಿ ಉದ್ಯೋಗಿಗಳನ್ನು ಹೊಂದಬೇಕಿದೆ. ಮುಂದಿನ ಐದು ವರ್ಷಗಳಲ್ಲಿ ಆರೋಗ್ಯ ಸೇವಾ ಕಾರ್ಯಕರ್ತರ ಪೈಕಿ 10,000 ಮಂದಿ ಸ್ವದೇಶೀಯರಿರಬೇಕೆಂಬ ಗುರಿಯೂ ಸರಕಾರಕ್ಕಿದೆ.

ಸರಕಾರಿ ಉದ್ಯೋಗಗಳಲ್ಲಿರುವ ತಮ್ಮ ನಾಗರಿಕರಿಗೆ ತಮ್ಮದೇ ಸ್ವಂತ ಬಿಸಿನೆಸ್ ಆರಂಭಿಸಲು ರಜೆಯ ಸವಲತ್ತು ಹಾಗೂ ಆರರಿಂದ 12 ತಿಂಗಳುಗಳ ತನಕ ಶೇ 50ರಷ್ಟು ವೇತನ ಒದಗಿಸುವ ಉದ್ದೇಶವೂ ಸರಕಾರಕ್ಕಿದೆ.

ಜಗತ್ತಿನಲ್ಲಿ ತನ್ನ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಯುಎಇ ಸರಕಾರ ಈ ತಿಂಗಳು ಘೋಷಿಸಲಿರುವ 50 ಹೊಸ ಆರ್ಥಿಕ ಯೋಜನೆಗಳ ಭಾಗವಾಗಿ ಮೇಲಿನ ಘೋಷಣೆಯನ್ನು ರವಿವಾರ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News