ರಾಕೇಶ್ ಅಸ್ತಾನರ ನಿಯೋಜನೆಯನ್ನು ಸಮರ್ಥಿಸಿಕೊಂಡ ಕೇಂದ್ರ
Update: 2021-09-16 18:22 GMT
ಹೊಸದಿಲ್ಲಿ, ಸೆ. 16: ದಿಲ್ಲಿ ಪೊಲೀಸ್ ಆಯುಕ್ತರನ್ನಾಗಿ ಐಪಿಎಸ್ ಅಧಿಕಾರಿ ರಾಕೇಶ್ ಅಸ್ತಾನ ಅವರನ್ನು ನೇಮಕ ಮಾಡಿರುವುದನ್ನು ಗುರುವಾರ ಸಮಥಿಸಿರ್ಕೊಂಡಿರುವ ಕೇಂದ್ರ ಸರಕಾರ, ದಿಲ್ಲಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ನೇಮಕ ಮಾಡಲಾಗಿದೆ ಎಂದು ಹೇಳಿದೆ.
ಅಸ್ತಾನ ಅವರ ನಿಯೋಜನೆ, ಅಂತರ್ ಕೇಡರ್ ನಿಯೋಜನೆ ಹಾಗೂ ಸೇವೆಯ ವಿಸ್ತರಣೆ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್)ಗೆ ಪ್ರತಿಕ್ರಿಯೆಯಾಗಿ ಸಲ್ಲಿಸಲಾದ ಲಿಖಿತ ಹೇಳಿಕೆಯಲ್ಲಿ ಕೇಂದ್ರ ಸರಕಾರ ಈ ಪ್ರತಿಪಾದನೆ ಮಾಡಿದೆ. ರಾಷ್ಟ್ರೀಯ ಭದ್ರತೆಗೆ ಸಂಬಂದಿಸಿದ ಮಾತ್ರವಲ್ಲದೆ, ಅಂತಾರಾಷ್ಟ್ರೀಯ, ಗಡಿಯಾಚೆಗಿನ ವಿಷಯಕ್ಕೆ ಸಂಬಂಧಿಸಿದ ಸಾರ್ವಜನಿಕ ವ್ಯವಸ್ಥೆ, ಕಾನೂನು ಸುವ್ಯವಸ್ಥೆ, ಕಾನೂನು ವಿಷಯಗಳ ಕುರಿತು ವಿಭಿನ್ನ ಹಾಗೂ ತೀವ್ರ ಸವಾಲಿನ ಪರಿಸ್ಥಿತಿಗೆ ದಿಲ್ಲಿ ಸಾಕ್ಷಿಯಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ.