ಅತ್ಯಾಚಾರ, ಕೊಲೆ ಆರೋಪಿ ಸಾವು ಪ್ರಕರಣ: 100% ಆತ್ಮಹತ್ಯೆ ಎಂದ ಪೊಲೀಸರು; ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

Update: 2021-09-18 11:02 GMT
Photo: Indianexpress

ಹೈದರಾಬಾದ್ : ಹೈದರಾಬಾದ್‍ನಲ್ಲಿ ನಡೆದ ಅಪ್ರಾಪ್ತ ಬಾಲಕಿ ಅತ್ಯಾಚಾರ ಕೊಲೆ ಪ್ರಕರಣದ ಶಂಕಿತ ಆರೋಪಿ ಪಲ್ಲಕೊಂಡ ರಾಜು ಗುರುವಾರ ಜಂಗಾವ್ ಜಿಲ್ಲೆಯಲ್ಲಿ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಒಂದು ಆತ್ಮಹತ್ಯೆ ಪ್ರಕರಣ ಎಂದು ತೆಲಂಗಾಣ ಪೊಲೀಸರು ಹೇಳುತ್ತಿದ್ದಾರೆ.

ರಾಜು ಸಾವಿನ ಕುರಿತು ಯಾವುದೇ ಊಹಾಪೋಹಗಳಿಗೆ ಎಡೆಯಿಲ್ಲ ಎಂದು ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಡಿಜಿಪಿ ಎಂ ಮಹೇಂದರ್ ರೆಡ್ಡಿ ಹೇಳಿದ್ದಾರೆ. "ಇದು ಶೇ 100ರಷ್ಟು ಆತ್ಮಹತ್ಯೆಯ ಪ್ರಕರಣ,  ಎಲ್ಲಾ ಏಳು ಪ್ರತ್ಯಕ್ಷದರ್ಶಿ ಸಾಕ್ಷಿಗಳ ಹೇಳಿಕೆಗಳ ವೀಡಿಯೋ ಇದೆ ಹಾಗೂ ಈ ಕುರಿತು ಸುಳ್ಳು ಹೇಳುವ ಅಗತ್ಯ ಯಾರಿಗೂ ಇಲ್ಲ" ಎಂದು ಅವರು ಹೇಳಿದ್ದಾರೆ.

ಆದರೆ ತೆಲಂಗಾಣ ಸಿವಿಲ್ ಲಿಬರ್ಟೀಸ್ ಕಮಿಟಿ ಅಧ್ಯಕ್ಷ ಪ್ರೊ ಗದ್ದಮ್ ಲಕ್ಷ್ಮಣ್  ಶುಕ್ರವಾರ ಹೈಕೋರ್ಟಿನ ಮೊರೆ ಹೋಗಿ ರಾಜು ಸಾವಿನ ಕುರಿತು ಹಲವು ಸಂಶಯಗಳನ್ನು ವ್ಯಕ್ತಪಡಿಸಿದ್ದಾರೆ. ಶಂಕಿತನನ್ನು ಪೊಲೀಸರು ಸೆರೆಹಿಡಿದು ಆತನನ್ನು ರೈಲ್ವೆ ಹಳಿ ಬಳಿ ಕರೆದೊಯ್ದು ಅಲ್ಲಿ ಆತನ ಹತ್ಯೆಗೈದು ನಂತರ ಇದನ್ನು ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ ಎಂದು  ಲಕ್ಷ್ಮಣ್ ಅವರ ವಕೀಲ ಎಂ ವೆಂಕಣ್ಣ ನ್ಯಾಯಾಲಯದ ಮುಂದೆ ದೂರಿದ್ದಾರೆ.

ಶಂಕಿತನನ್ನು ಎನ್‍ಕೌಂಟರ್ ನಲ್ಲಿ ಸಾಯಿಸಬೇಕೆಂದು ರಾಜ್ಯ ಸಚಿವ  ಮಲ್ಲ ರೆಡ್ಡಿ ಈ ಹಿಂದೆ ಹೇಳಿದ್ದನ್ನೂ ಅವರು ನೆನಪಿಸಿದ್ದಾರೆ

ಈ ಘಟನೆ ಕುರಿತು ವಾರಂಗಲ್‍ನ ಮೂರನೇ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಹೈಕೋರ್ಟ್ ಹೇಳಿದೆಯಲ್ಲದೆ ವರದಿಯನ್ನು ನಾಲ್ಕು ವಾರಗಳೊಳಗಾಗಿ ಸಲ್ಲಿಸಬೇಕೆಂದೂ ತಿಳಿಸಿದೆ. ಮೃತನ ಪೋಸ್ಟ್ ಮಾರ್ಟಂ ವರದಿಯ ಪ್ರತಿಯೊಂದನ್ನೂ ನ್ಯಾಯಾಲಯವು ಪೊಲೀಸರಿಂದ ಕೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News