ರಾತ್ರಿ ಹೊತ್ತು ದೇವಸ್ಥಾನ ಪ್ರವೇಶಿಸಲು ಮುಂದಾದ ಕಾನ್‍ಸ್ಟೇಬಲ್ ಗೆ ಗುಂಡಿಕ್ಕಿದ ಭದ್ರತಾ ಸಿಬ್ಬಂದಿ
ಜಮ್ಮು: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರ ಎಂಬಲ್ಲಿನ ದೇವಸ್ಥಾನವೊಂದಕ್ಕೆ ರಾತ್ರಿ ಹೊತ್ತು ಪ್ರವೇಶಿಸಲು ಯತ್ನಿಸಿದ ಪೊಲೀಸ್ ಕಾನ್‍ಸ್ಟೇಬಲ್ ಒಬ್ಬರನ್ನು ದಾಳಿಕೋರನೆಂದು ತಪ್ಪಾಗಿ ಗ್ರಹಿಸಿ ಅಲ್ಲಿನ ಭದ್ರತಾ ಸಿಬ್ಬಂದಿಗಳು ಗುಂಡಿಕ್ಕಿ ಸಾಯಿಸಿದ್ದಾರೆ.
ಮೃತ ಪೊಲೀಸ್ ಸಿಬ್ಬಂದಿಯನ್ನು ಲಂಗಟೆ ಹಂದ್ವಾರ ನಿವಾಸಿ ಅಜಯ್ ಧರ್ ಎಂದು ಗುರುತಿಸಲಾಗಿದೆ. ಆತ ರಾತ್ರಿ ಹೊತ್ತು ದೇವಸ್ಥಾನದೊಳಗೆ ಬಲವಂತವಾಗಿ ಪ್ರವೇಶಿಸಲು ಯತ್ನಿಸಿ ದೇವಸ್ಥಾನದ ಬಾಗಿಲು ಬಡಿಯಲು ಆರಂಭಿಸಿದಾಗ ಅವರನ್ನು ದಾಳಿಕೋರನೆಂದು ಶಂಕಿಸಿ ಅಲ್ಲಿನ ಭದ್ರತಾ ಸಿಬ್ಬಂದಿಯೊಬ್ಬರು ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಆದರೂ ಆತ ಬಾಗಿಲು ಬಡಿಯುವುದನ್ನು ಮುಂದುವರಿಸಿದ್ದರಲ್ಲದೆ ತನ್ನ ಗುರುತು ಬಹಿರಂಗಪಡಿಸಲು ನಿರಾಕರಿಸಿದಾಗ ಅಲ್ಲಿನ ಭದ್ರತಾ ಸಿಬ್ಬಂದಿ ಆತ ದಾಳಿಕೋರನೆಂದೇ ತಿಳಿಯುವಂತಾಗಿತ್ತು ಎಂದು ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರಲ್ಲದೆ ಇದೊಂದು ದುರದೃಷ್ಟಕರ ಘಟನೆ ಎಂದು ಬಣ್ಣಿಸಿದ್ದಾರೆ.
ಕಾಶ್ಮೀರದಲ್ಲಿರುವ ಎಲ್ಲಾ ದೇವಸ್ಥಾನಗಳಿಗೆ ಭದ್ರತೆ ಒದಗಿಸಲಾಗಿರುವುದರಿಂದ ಈ ಹಿಂದೆ ಕೂಡ ದೇವಸ್ಥಾನ ಸಮೀಪ ಕಾಣಿಸಿಕೊಂಡ ಅಮಾಯಕ ನಾಗರಿಕರೂ ಭದ್ರತಾ ಪಡೆಗಳ ತಪ್ಪಾದ ಗ್ರಹಿಕೆಯಿಂದ ಹತ್ಯೆಗೀಡಾಗಿದ ಕೆಲ ಘಟನೆಗಳು ನಡೆದಿದ್ದವು.