ದಲಿತ ಸಮುದಾಯದವಳು ಎಂಬ ಕಾರಣಕ್ಕೆ ಬಾಲಕಿಯ ಅತ್ಯಾಚಾರ, ಹತ್ಯೆಗೈದ ಅರ್ಚಕ, ಸಹಚರರು: ದಿಲ್ಲಿ ಪೊಲೀಸರ ಚಾರ್ಜ್‍ಶೀಟ್

Update: 2021-09-24 09:00 GMT

ಹೊಸದಿಲ್ಲಿ: ದಿಲ್ಲಿಯಲ್ಲಿ ಒಂಬತ್ತು ವರ್ಷದ ಬಾಲಕಿಯ ಅತ್ಯಾಚಾರ ಮತ್ತು  ಹತ್ಯೆ ಪ್ರಕರಣದಲ್ಲಿನ ಆರೋಪಿಗಳಾದ ರುದ್ರಭೂಮಿಯ ಒಬ್ಬ ಅರ್ಚಕ ಹಾಗೂ ಒಬ್ಬ ಫ್ಯಾಕ್ಟರಿ ಕಾರ್ಮಿಕ ತಮ್ಮ  ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಹಾಗೂ ಬಾಲಕಿ ದಲಿತೆ ಎಂಬ ಕಾರಣಕ್ಕಾಗಿ ಈ ಕೃತ್ಯವೆಸಗಿದ್ದಾಗಿ ಹೇಳಿದ್ದಾರೆಂದು ಸಾರ್ವಜನಿಕ ಸಾಕ್ಷಿಯ ಹೇಳಿಕೆಯೊಂದನ್ನಾಧರಿಸಿ ದಿಲ್ಲಿ ಪೊಲೀಸರು  ತಮ್ಮ ಚಾರ್ಜ್‍ಶೀಟ್‍ನಲ್ಲಿ ಹೇಳಿದ್ದಾರೆ.

ಸಾರ್ವಜನಿಕರೊಬ್ಬರು ಆಗಸ್ಟ್ 27ರಂದು ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದು ಇದನ್ನು ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದಲ್ಲಿ ರುದ್ರಭೂಮಿಯ ಅರ್ಚಕ ರಾಧೇ ಶ್ಯಾಮ್ (55), ಕುಲದೀಪ್ ಸಿಂಗ್ (63), ಲಕ್ಷ್ಮೀನಾರಾಯಣ್ (48) ಮತ್ತು ಸಲೀಂ ಅಹ್ಮದ್ (49) ಆರೋಪಿಗಳಾಗಿದ್ದಾರೆ.

ಬಾಲಕಿಯ ಕಳೇಬರಗಳನ್ನು ಶ್ಯಾಮ್ ಮತ್ತು ಕುಲದೀಪ್ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುತ್ತಿರುವುದನ್ನು ನೋಡಿದ್ದರೂ ಸಂಶಯವೇನೂ ಬಂದಿರಲಿಲ್ಲ ಆದರೆ ನಂತರ ಒಬ್ಬರು  ಫೋನ್ ಮೂಲಕ ದಲಿತ ಬಾಲಕಿ ಅತ್ಯಾಚಾರ ಹತ್ಯೆಯ ಬಗ್ಗೆ ಹೇಳಿದಾಗ ಘಟನೆ ಬಗ್ಗೆ ತಿಳಿದು ಬಂದಿತ್ತು, ಎಂದು ಮೊದಲ ಸಾಕ್ಷಿ ಹೇಳಿದಾರೆಂದು ದಾಖಲಾಗಿದೆ. ಅಲ್ಲಿಗೆ ಹೋದಾಗ ಆರೋಪಿಗಳು ತಾವೇ ಕೃತ್ಯವೆಸಗಿದ್ದು ಆಕೆ ದಲಿತೆ ಎಂಬ ಕಾರಣಕ್ಕಾಗಿ ಎಂದು ಹೇಳಿದ್ದಾರೆಂದು ಮೊದಲ ಸಾಕ್ಷಿ ತಿಳಿಸಿರುವುದು  ಹಾಗೂ ಎರಡನೇ ಸಾಕ್ಷಿ ಕೂಡ ತಾನು ರುದ್ರಭೂಮಿಗೆ ಹೋದಾಗ ಆರೋಪಿಗಳು ತಾವು ಆಕೆಯ ಮೇಲೆ ಅತ್ಯಾಚಾರಗೈದು ನಂತರ ತಪ್ಪಿ ಅಂತ್ಯಕ್ರಿಯೆ ನಡೆಸಿದ್ದಾಗಿ ಹೇಳಿದ್ದಾರೆ. ಆದರೆ ಆರೋಪಿಗಳು ಮಾತ್ರ ಬಾಲಕಿ ಅಲ್ಲಿನ ಕೂಲರ್‍ನಿಂದ ನೀರು ತರಲು ಹೋದ ಸಂದರ್ಭ ವಿದ್ಯುತ್ ಶಾಕ್‍ಗೊಳಗಾಗಿ ಸತ್ತಿದ್ದಾಳೆಂದು ವಾದಿಸುತ್ತಿದ್ದಾರೆ.

ಆರೋಪಿ ಶ್ಯಾಮ್ ಹೇಳಿಕೆಯನ್ನು ಉಲ್ಲೇಖಿಸಿದ ಚಾರ್ಜ್‍ಶೀಟ್ ಆಕೆಯ ಮೇಲೆ ಹಿಂದೆ ಕೂಡ ಲೈಂಗಿಕ ಹಲ್ಲೆ ನಡೆಸಲಾಗಿದೆ ಹಾಗೂ ಅವರು ಅತ್ಯಾಚಾರಗೈಯ್ಯುತ್ತಿದ್ದಾಗ ಆಕೆ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆಂದು  ತಿಳಿಸಿದೆ. ಆರೋಪಿಗಳು ಅಪರಾಧಕ್ಕೆ ಬಳಸಿದ ಬೆಡ್‍ಶೀಟ್ ಹಾಗೂ ಅಶ್ಲೀಲ ವೀಡಿಯೋಗಳನ್ನು ನೋಡಲು ಶ್ಯಾಮ್ ಬಳಸುತ್ತಿದ್ದ ಮೊಬೈಲ್ ಫೋನ್ ಹಾಗೂ ಬಾಲಕಿಯ ವಸ್ತುಗಳನ್ನು ನಾಶಪಡಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News