ದ.ಕ.ದಲ್ಲಿ ನೂರಕ್ಕೂ ಅಧಿಕ ಹೊಟೇಲುಗಳಿಗೆ ಬೀಗ!
► ಲಾಕ್ ಡೌನ್ ಅನಂ(ವಾಂ)ತರ..!
ಮಂಗಳೂರು, ಸೆ.27: ದ.ಕ. ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸಣ್ಣ ಮತ್ತು ಮಧ್ಯಮ ಸಹಿತ ಸುಮಾರು 2,500ರಿಂದ 3,000 ಹೊಟೇಲುಗಳಿವೆ ಎಂದು ಅಂದಾಜಿಸಲಾಗಿದೆ. ಆ ಪೈಕಿ ಕೋವಿಡ್ ಮೊದಲ ಮತ್ತು ದ್ವಿತೀಯ ಅಲೆಯ ಹೊಡೆತಕ್ಕೆ ಸಿಲುಕಿ ನೂರಕ್ಕೂ ಅಧಿಕ ಹೊಟೇಲುಗಳು ಮುಚ್ಚಲ್ಪಟ್ಟಿವೆ ಎಂದು ಹೊಟೇಲ್ ಮಾಲಕರು ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅಡುಗೆ ಅನಿಲ, ರಿಫೈಂಡ್ ಆಯಿಲ್ ಸಹಿತ ದಿನಸಿ ಸಾಮಗ್ರಿಗಳ ಬೆಲೆ ಏರಿಕೆ, ಕಟ್ಟಡದ ಬಾಡಿಗೆ, ಅಡುಗೆಯಾಳು, ಸಪ್ಲೈಯರ್, ಕ್ಲೀನರ್‌ಗಳ ಸಹಿತ ಕಾರ್ಮಿಕರ ಕೊರತೆ ಇತ್ಯಾದಿ ಕೂಡ ಹೊಟೇಲುಗಳು ಬಾಗಿಲು ಎಳೆಯಲು ಪ್ರಮುಖ ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಮುಂಚಿನ ದಿನಗಳಲ್ಲಿ ಕೆಲವರಿಗೆ ಹೊಟೇಲ್ ಉದ್ಯಮ ನಿರೀಕ್ಷಿತ ಲಾಭ ತಂದುಕೊಡದಿದ್ದರೂ ಕೂಡ ಹಿರಿಯರು ನಡೆಸಿಕೊಂಡು ಬಂದ ಕಾರಣಕ್ಕೋ, ನಿರುದ್ಯೋಗ ಸಮಸ್ಯೆಯಿಂದ ತಪ್ಪಿಸಲೋ ಕೆಲವರು ಹೆಚ್ಚಿನ ಲಾಭವನ್ನು ನಿರೀಕ್ಷಿಸದೆ, ಭಾರೀ ನಷ್ಟವೂ ಆಗದಂತೆ ಸರಿದೂಗಿಸಿಕೊಂಡು ಹೊಟೇಲ್ ವ್ಯವಹಾರ ನಡೆಸುತ್ತಿದ್ದರು. ಆದರೆ, ಕೋವಿಡ್ ಮೊದಲ ಮತ್ತು ದ್ವಿತೀಯ ಅಲೆಯ ಬಳಿಕ ಕೆಲವರಿಗೆ ಹೊಟೇಲ್ ಮುನ್ನಡೆಸುವುದು ಸವಾಲಾಗಿ ಪರಿಣಮಿಸಿದೆ. ಹಾಗಾಗಿ ನಷ್ಟ ಭರಿಸಲಾಗದೆ ಅನೇಕ ಮಂದಿ ಹೊಟೇಲುಗಳಿಗೆ ಬಾಗಿಲು ಎಳೆದಿದ್ದಾರೆ. ಮಂಗಳೂರು ನಗರದಲ್ಲೇ ಹಲವು ಹೊಟೇಲುಗಳಿಗೆ ಬೀಗ ಬಿದ್ದಿದೆ. ಗ್ರಾಮಾಂತರ ಪ್ರದೇಶದಲ್ಲೂ ಕೂಡ ಈ ಸಮಸ್ಯೆ ಬಿಗಡಾಯಿಸಿದೆ.
ಸಾಮಾನ್ಯವಾಗಿ ಪ್ರತಿಯೊಂದು ಹೊಟೇಲುಗಳಲ್ಲಿ ಕನಿಷ್ಠ 3ರಿಂದ ಗರಿಷ್ಠ 15 ಮಂದಿ ಕೆಲಸಗಾರರು ಬೇಕು. ಕೆಲವರಿಗೆ ಮಾಸಿಕ ಸಂಬಳ ನೀಡಲಾಗುತ್ತಿದ್ದರೆ ಇನ್ನು ಕೆಲವರಿಗೆ ದಿನಗೂಲಿ ನೀಡಲಾಗುತ್ತದೆ. ಊಟ, ವಸತಿ ನೀಡಿ ಅಡುಗೆಯಾಳುಗಳಿಗೆ ಕನಿಷ್ಠ ಮಾಸಿಕ 25 ಸಾವಿರ ರೂ. ಮತ್ತು ಉಳಿದ ಇತರ ಕೆಲಸಗಾರರಿಗೆ ಕನಿಷ್ಠ 15ರಿಂದ 20 ಸಾವಿರ ರೂ.ವರೆಗೆ ನೀಡಬೇಕಾಗುತ್ತದೆ. ಹಾಗಾಗಿ ದಿನಬಳಕೆ ವಸ್ತುಗಳ ಏರಿಕೆಯಲ್ಲದೆ ಕಾರ್ಮಿಕರಿಗೆ ವೇತನ ನೀಡುವುದು ಕೂಡ ಭಾರೀ ಹೊರೆಯಾದ ಕಾರಣ ವ್ಯವಹಾರ ಮುನ್ನೆಡಸಲಾಗದೆ ಬಂದ್ ಮಾಡುವುದು ಅನಿವಾರ್ಯ ಎಂದು ಹೊಟೇಲ್ ಮಾಲಕರು ಅಭಿಪ್ರಾಯಪಡುತ್ತಾರೆ.
ಮುಂಜಾನೆ 4ರಿಂದ ರಾತ್ರಿ 12ರವರೆಗೆ ಹೊಟೇಲುಗಳನ್ನು ತೆರೆದು ವ್ಯವಹಾರ ನಡೆಸಿದರೂ ಕೂಡ ಹೆಚ್ಚೇನೂ ಆದಾಯ ಬರುತ್ತಿರಲಿಲ್ಲ. ಕೋವಿಡ್-19 ಸಾಂಕ್ರಾಮಿಕ ರೋಗದ ಬಳಿಕ ಹೊಟೇಲುಗಳನ್ನು ತೆರೆಯುವುದಕ್ಕೆ ಸಂಬಂಧಿಸಿ ಕೆಲವೊಂದು ಮಾರ್ಗಸೂಚಿಯನ್ನು ಜಿಲ್ಲಾಡಳಿತ ಹೊರಡಿಸಿದ್ದರಿಂದ ಅನೇಕ ಹೊಟೇಲ್ ಮಾಲಕರಿಗೆ ಸಮಸ್ಯೆಯ ಮೇಲೆ ಸಮಸ್ಯೆ ಎದುರಾಗಿರುವುದು ಗುಟ್ಟಾಗಿ ಉಳಿದಿಲ್ಲ. ಹೊಟೇಲ್‌ಗಳಲ್ಲಿ ಕುಳಿತು ತಿನ್ನುವಂತಿಲ್ಲ, ಪಾರ್ಸಲ್‌ಗಳಿಗೆ ಮಾತ್ರ ಅವಕಾಶ ಇತ್ಯಾದಿ ಸೂಚನೆಯಲ್ಲದೆ, ಚಹಾ, ಕಾಫಿ, ಊಟು-ತಿಂಡಿ ತಿನಿಸುಗಳ ಬೆಲೆ ಏರಿಕೆಯು ಕೂಡ ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಹಾಗಾಗಿ ಬಹುತೇಕ ಮಂದಿ ಮನೆಯ ಬುತ್ತಿಗೆ ಮೊರೆ ಹೋಗಿದ್ದಾರೆ. ಇದರಿಂದ ಹೊಟೇಲುಗಳಲ್ಲಿ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗಿದೆ ಎನ್ನಲಾಗಿದೆ.
ಈ ಹಿಂದೆ ಸಾಮಾನ್ಯವಾಗಿ ದ.ಕ.ಜಿಲ್ಲೆಯ ಧಾರ್ಮಿಕ ಕೇಂದ್ರಗಳಿಗೆ, ಕಡಲ ಕಿನಾರೆ, ಪಿಲಿಕುಳ ಸಹಿತ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿ ಗಳು ಅಧಿಕ ಸಂಖ್ಯೆ ಯಲ್ಲಿ ಭೇಟಿ ನೀಡುತ್ತಿದ್ದರು. ಹಾಗೇ ಬಂದ ಪ್ರವಾಸಿಗಳು ಹೊಟೇಲು ಗಳನ್ನು ಆಶ್ರಯಿಸು ವುದು ಕೂಡ ಸ್ವಾಭಾವಿಕ. ಆದರೆ ಕೋವಿಡ್‌ನಿಂದಾಗಿ ಪ್ರವಾ ಸೋದ್ಯಮಕ್ಕೂ ಹೊಡೆತ ಬಿದ್ದ ಕಾರಣ ಹೊಟೇಲ್ ವ್ಯವ ಹಾರದ ಮೇಲೂ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಕೆಲವರು ಹೊಟೇಲ್‌ಗಳನ್ನು ಮುನ್ನೆಡೆಸಲು ಬ್ಯಾಂಕ್, ಫೈನಾನ್ಸ್, ಸೊಸೈಟಿಯ ಸಾಲ ಪಡೆದಿದ್ದರೆ, ಇನ್ನು ಕೆಲವರು ಮನೆ ಮಂದಿಯ ಚಿನ್ನಾಭರಣ ಅಡವಿಟ್ಟು ಸಾಲ ಪಡೆದದ್ದೂ ಇದೆ. ಇದೀಗ ಸಾಲದ ಕಂತು ಪಾವತಿಸಲಾಗದೆ, ಅಡವಿಟ್ಟ ಚಿನ್ನಾಭರಣ ಬಿಡಿಸಲಾಗದೆ ಕೆಲವರು ಹೊಟೇಲ್‌ಗಳನ್ನು ಮುಚ್ಚಿದ್ದರೆ ಇನ್ನು ಕೆಲವರು ಸರಕಾರ ನಮಗೂ ಪ್ಯಾಕೇಜ್ ಘೋಷಿಸಿದರೆ ಹೊಟೇಲ್ ವ್ಯವಹಾರ ಮುಂದುವರಿಸಬಹುದು. ಇಲ್ಲದಿದ್ದರೆ ಬಾಗಿಲು ಎಳೆಯದೆ ನಿರ್ವಾಹವಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಊಟವೂ ಸ್ಥಗಿತ: ಅಡುಗೆ ಅನಿಲ ಬೆಲೆ, ದಿನಬಳಕೆಯ ಆಹಾರ ಸಾಮಗ್ರಿಗಳಲ್ಲದೆ ತರಕಾರಿಗಳ ಬೆಲೆಯೂ ವಿಪರೀತವಾಗಿ ಹೆಚ್ಚಿ ವೆ. ಒಂದು ಊಟಕ್ಕೆ 50 ರೂ. ವೆಚ್ಚ ತಗಲುತ್ತದೆ. 50 ರೂ.ಗೆ ಊಟ ನೀಡಿದರೆ ನಾವು ನಷ್ಟ ಅನುಭವಿಸಬೇಕಾಗುತ್ತದೆ. ತರಕಾರಿ ಊಟಕ್ಕೆ 60 ಅಥವಾ 70 ರೂ. ನಿಗದಿಪಡಿಸಿದರೆ ಗ್ರಾಹಕರು ನಮ್ಮತ್ತ ಸುಳಿಯುವುದಿಲ್ಲ. ಹಾಗಾಗಿ ನಾವು ಮಧ್ಯಾಹ್ನ/ರಾತ್ರಿಯ ಊಟವನ್ನೇ ಸ್ಥಗಿತಗೊಳಿಸಿದ್ದೇವೆ. ಚಹಾ, ತಿಂಡಿ ತಿನಿಸು ಮೂಲಕ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ನಗರದ ತರಕಾರಿ ಹೊಟೇಲೊಂದರ ಮಾಲಕರು ಹೇಳಿದರು.
ಮಾಲಕರ ಮಧ್ಯೆಯೂ ಒಗ್ಗಟ್ಟಿಲ್ಲ: ಜಿಲ್ಲೆಯಲ್ಲಿ ಸಸ್ಯಹಾರಿ, ಮಾಂಸಹಾರಿ ಹೊಟೇಲ್‌ಗಳಿದ್ದು, ಈ ಮಾಲಕರ ಮಧ್ಯೆ ಒಗ್ಗಟ್ಟಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಸಮಸ್ಯೆಯನ್ನು ಎದುರಿಸಲು ಅಥವಾ ಅಧಿಕಾರಿಗಳು-ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಅಹವಾಲು ಮಂಡಿಸಲು ಹೊಟೇಲ್ ಮಾಲಕರು ಒಗ್ಗಟ್ಟು ಪ್ರದರ್ಶಿಸುತ್ತಿಲ್ಲ. ಸಸ್ಯಹಾರಿ ಮತ್ತು ಮಾಂಸಹಾರಿ ಹೊಟೇಲ್ ಮಾಲಕರು ವಿರುದ್ಧ ಧಿಕ್ಕಿನಲ್ಲಿ ಸಾಗುತ್ತಿದ್ದಾರೆ. ಸಣ್ಣ ಮತ್ತು ಅತಿ ಸಣ್ಣ ಹೊಟೇಲ್ ಮಾಲಕರನ್ನು ಮಧ್ಯಮ ಸ್ತರದ ಹೊಟೇಲ್ ಮಾಲಕರು ವಿಶ್ವಾಸಕ್ಕೆ ತೆಗೆಯುತ್ತಿಲ್ಲ. ಸ್ಟಾರ್ ಹೊಟೇಲ್‌ಗಳ ಮಾಲಕರು ತಮ್ಮದೇ ಆದ ದಿಕ್ಕಿನಲ್ಲಿ ಸಾಗಿದ್ದಾರೆ. ಒಗ್ಗಟ್ಟಿನ ಕೊರತೆಯು ಹೊಟೇಲ್ ಉದ್ಯಮದ ಮೇಲೆ ಭಾರೀ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.
ಕೋವಿಡ್ ಸಾಂಕ್ರಾಮಿಕ ರೋಗವು ಹೊಟೇಲ್ ಉದ್ಯಮದ ದಿಕ್ಕು ತಪ್ಪಿಸಿದೆ. ಈಗ ಲಾಕ್‌ಡೌನ್ ತೆರವುಗೊಳಿಸಿದರೂ ಉದ್ಯಮದಲ್ಲಿ ಚೇತರಿಕೆ ಕಂಡು ಬಂದಿಲ್ಲ. ಎರಡೂ ಲಾಕ್‌ಡೌನ್ ವೇಳೆ ದಿನಬಳಕೆಯ ಸಾಮಗ್ರಿಗಳು ಹಾಳಾಗಿ ಅಪಾರ ನಷ್ಟವಾಗಿದೆ. ಹೊರ ರಾಜ್ಯ, ಹೊರ ಜಿಲ್ಲೆಯವರು ಅಧಿಕ ಸಂಖ್ಯೆಯಲ್ಲಿ ಪ್ರವಾಸ ಬಂದರೆ ಮಾತ್ರ ನಮಗೆ ಹೆಚ್ಚು ವ್ಯಾಪಾರವಾಗುತ್ತದೆ. ಈಗಿನ ತಿಂಡಿತಿನಿಸುಗಳ ಬೆಲೆಯು ಕೆಲವರಿಗೆ ಹೆಚ್ಚಾಗಿ ಕಾಣಬಹುದು. ಆದರೆ ಗ್ಯಾಸ್, ಕರೆಂಟ್, ತರಕಾರಿ, ರಿಫೈಂಡ್ ಆಯಿಲ್‌ಗಳ ಬೆಲೆ ಹೆಚ್ಚಳಕ್ಕೆ ಹೋಲಿಸಿದರೆ ನಮಗೆ ಊಟ, ತಿಂಡಿತಿನಿಸುಗಳಿಗೆ ಅಷ್ಟು ಬೆಲೆ ನಿಗದಿಪಡಿಸದೆ ನಿರ್ವಾಹವಿಲ್ಲ. ಕೋವಿಡ್‌ನಿಂದ ಜನಸಾಮಾನ್ಯರು ಮಾತ್ರವಲ್ಲ ನಾವು ಕೂಡ ಕಷ್ಟದಲ್ಲಿದ್ದೇವೆ. ಎಲ್ಲರ ಬದುಕು ಶೋಚನೀಯವಾಗಿದೆ. ಈಗಲೇ ಹಲವಾರು ಹೊಟೇಲುಗಳು ವ್ಯವಹಾರ ನಡೆಸಲಾಗದೆ ಮುಚ್ಚಲ್ಪಟ್ಟಿವೆ. ಮುಂದಿನ ದಿನಗಳಲ್ಲಿ ಹೊಟೇಲ್ ಉದ್ಯಮದ ಸ್ಥಿತಿ ಏನಾಗಲಿದೆಯೋ?
ಹರಿಕೃಷ್ಣ ಪುನರೂರು, ಮಾಜಿ ಅಧ್ಯಕ್ಷರು, ಹೊಟೇಲ್ ಮಾಲಕರ ಸಂಘ, ದ.ಕ.ಜಿಲ್ಲೆ
ನಾವು ನಮ್ಮ ಹೊಟೇಲಲ್ಲಿ ಅತ್ಯಂತ ಕಡಿಮೆ ಬೆಲೆಗೆ ಊಟ, ಚಹಾ, ತಿಂಡಿತಿನಿಸುಗಳನ್ನು ಗ್ರಾಹಕರಿಗೆ ನೀಡುತ್ತಿದ್ದೇವೆ. ಗ್ರಾಹಕರು ಕೂಡ ಅಷ್ಟೆ, ಕಡಿಮೆ ಬೆಲೆಗೆ ಯಾವ ಆಹಾರ ಸಿಗುತ್ತವೆ ಎಂದು ಕೇಳಿಕೊಂಡೇ ತಿನ್ನುತ್ತಾರೆ. ನಮ್ಮದು ಜನನಿಬಿಡ ಪ್ರದೇಶದಲ್ಲಿರುವ ಹೊಟೇಲ್. ಮುಂಜಾನೆ 5ರಿಂದ ರಾತ್ರಿ 11ರವರೆಗೆ ತೆರೆದಿರುತ್ತದೆ. ಹಾಗಾಗಿ ಗ್ರಾಹಕರ ಸಂಖ್ಯೆ ಹೆಚ್ಚಿ ದೆ. ಆದರೆ ನಿರೀಕ್ಷಿಸಿದಷ್ಟು ವ್ಯಾಪಾರವಿಲ್ಲ. ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ತರಕಾರಿ, ಮಾಂಸದ ಬೆಲೆ ಏರಿಕೆ, ಗ್ಯಾಸ್ ಬೆಲೆ ಏರಿಕೆ, ದುಪ್ಪಟ್ಟು ವಿದ್ಯುತ್ ಬಿಲ್, ಸುಮಾರು 14 ಮಂದಿ ಕೆಲಸಗಾರರಿಗೆ ದಿನಗೂಲಿ... ಹೀಗೆ ಎಲ್ಲವನ್ನೂ ಸರಿದೂಗಿಸಬೇಕು. ಕೋವಿಡ್-19ಗಿಂತ ಮುಂಚೆ ನಾವು ಅದನ್ನೆಲ್ಲಾ ನಿಭಾಯಿಸುತ್ತಿದ್ದೆವು. ಈಗ ಸಾಧ್ಯವಾಗುತ್ತಿಲ್ಲ.
- ಬಿ.ಕೆ. ಇಮ್ತಿಯಾಝ್, ಮಾಲಕರು, ಹೊಟೇಲ್ ಮಾಹಿ, ಸುರತ್ಕಲ್-ಕಾನ
ನಾನು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ಹೊಟೇಲನ್ನು ಆಶ್ರಯಿಸಿರುವೆ. ಕೆಲವು ಹೊಟೇಲ್‌ಗಳಲ್ಲಿ ಚಹಾಕ್ಕೆ 15 ರೂ. ಇದ್ದರೆ ಇನ್ನು ಕೆಲವೆಡೆ 10 ರೂ. ಇೆ.ಊಟ, ಗಂಜಿಗೂ ಅಷ್ಟೆ. ಒಂದೊಂದು ಹೊಟೇಲ್‌ಗಳಲ್ಲಿ ಒಂದೊಂದು ರೀತಿಯ ದರ ನಿಗದಿಪಡಿಸಲಾಗಿದೆ. ದಿನನಿತ್ಯ ಒಂದೇ ಹೊಟೇಲ್‌ಗೆ ಹೋದರೆ ನಾಲಗೆ ರುಚಿ ಸಿಗುವುದಿಲ್ಲ. ಅದಕ್ಕಾಗಿ ಹೊಟೇಲ್‌ಗಳನ್ನು ಬದಲಾಯಿಸುತ್ತಲೇ ಇರುತ್ತೇನೆ. ದುಡಿದ ಶೇ.35ರಷ್ಟು ಹಣವನ್ನು ಹೊಟೇಲ್‌ಗಳಿಗೆ ಮೀಸಲಿಡಬೇಕು. ಇಂದಿರಾ ಕ್ಯಾಂಟೀನ್‌ಗೆ ಹೋಗೋಣ ಅಂದರೆ ಅದು ನಾನು ಕೆಲಸ ಮಾಡುತ್ತಿರುವ ಸಂಸ್ಥೆಯ ಬಳಿ ಇಲ್ಲ. ನಮ್ಮ ಸಮಸ್ಯೆಗೆ ಸ್ಪಂದಿಸುವವರೇ ಇಲ್ಲವಾಗಿದೆ.
- ರೋಶನ್, ದೇರಳಕಟ್ಟೆ