ಉ.ಪ್ರದೇಶದ ಹಿರಿಯ ಐಎಎಸ್ ಅಧಿಕಾರಿ ವಿರುದ್ಧ ‘ಮತಾಂತರ’ ಬೋಧನೆ ಆರೋಪ: ತನಿಖೆಗೆ ಆದೇಶ
ಲಕ್ನೋ,ಸೆ.28: ಹಿರಿಯ ಐಎಎಸ್ ಅಧಿಕಾರಿ ಮುಹಮ್ಮದ್ ಇಫ್ತಿಕಾರುದ್ದೀನ್ ಅವರು ತನ್ನ ಅಧಿಕೃತ ನಿವಾಸದಲ್ಲಿ ‘ಧಾರ್ಮಿಕ ಮತಾಂತರ’ದ ಬಗ್ಗೆ ಬೋಧಿಸಿದ್ದರು ಎಂದು ಆರೋಪಿಸಿರುವ ವೀಡಿಯೊಗಳು ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರಕಾರವು ಅವರ ವಿರುದ್ಧ ರಾಜ್ಯ ಪೊಲೀಸ್ ವಿಶೇಷ ತನಿಖಾ ತಂಡ(ಸಿಟ್)ದಿಂದ ತನಿಖೆಗೆ ಆದೇಶಿಸಿದೆ.
ವೀಡಿಯೊಗಳನ್ನು ಕಾನ್ಪುರದಲ್ಲಿ ಚಿತ್ರೀಕರಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಆರೋಪಿಸಿದ್ದಾರೆ.
1995ರ ತಂಡದ ಐಎಎಸ್ ಅಧಿಕಾರಿಯಾಗಿರುವ ಇಫ್ತಿಕಾರುದ್ದೀನ್ ಅವರನ್ನು 2007 ಮತ್ತು 2018ರ ನಡುವೆ ಕಾನ್ಪುರದಲ್ಲಿ ವಿವಿಧ ಹುದ್ದೆಗಳಲ್ಲಿ ನಿಯೋಜಿಸಲಾಗಿತ್ತು. ಈಗ ಲಕ್ನೋದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯಸ್ಥರಾಗಿರುವ ಅವರು,ತನ್ನ ಮಾತುಗಳನ್ನು ತಪ್ಪು ವ್ಯಾಖ್ಯಾನಿಸಲಾಗಿದೆ ಎಂದು ಹೇಳಿದ್ದಾರೆ.
ರಾಜಸ್ಥಾನದ ಅಜ್ಮೇರ್ ಮಹಾನಗರ ಪಾಲಿಕೆಯ ಉಪ ಮಹಾಪೌರ ನೀರಜ್ ಜೈನ್ ಮತ್ತು ಸುದರ್ಶನ ನ್ಯೂಸ್ ಸೇರಿದಂತೆ ಹಲವರು ಟ್ವಿಟರ್ನಲ್ಲಿ ಈ ವೀಡಿಯೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ತಾನು ಬಿಜೆಪಿ ಯುವ ಮೋರ್ಚಾದ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಆರೆಸ್ಸೆಸ್ ಕಾರ್ಯಕರ್ತ ಎಂದು ಜೈನ್ ತನ್ನ ಟ್ವಿಟರ್ ಪ್ರೊಫೈಲ್ ನಲ್ಲಿ ಹೇಳಿಕೊಂಡಿದ್ದರೆ,ಸುದರ್ಶನ ನ್ಯೂಸ್ ಟಿವಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ದ್ವೇಷವನ್ನು ಹರಡುತ್ತಿದೆ ಎಂದು ಈ ಹಿಂದೆ ಆರೋಪಿಸಲಾಗಿತ್ತು.
ಡಿಜಿಪಿ ಅಥವಾ ಸಮಾನ ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ಸಿಟ್ ತನಿಖೆ ನಡೆಯಲಿದೆ ಮತ್ತು ಅದು ಏಳು ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಉ.ಪ್ರ.ಸರಕಾರದ ಗೃಹ ಇಲಾಖೆಯು ಮಂಗಳವಾರ ಬೆಳಿಗ್ಗೆ ಟ್ವೀಟಿಸಿದೆ.
ಸರಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ವಿಚಾರಣೆಯ ಬಳಿಕ ಇಫ್ತಿಕಾರುದ್ದೀನ್ ತಪ್ಪಿತಸ್ಥರು ಎಂದಾದರೆ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಉ.ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ವೌರ್ಯ ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದರು.
ಇಫ್ತಿಕಾರುದ್ದೀನ್ ಕೋಣೆಯೊಂದರಲ್ಲಿ ಖುರ್ಚಿಯಲ್ಲಿ ಮತ್ತು ಇತರ 10-15 ಜನರು ನೆಲದಲ್ಲಿ ಆಸೀನರಾಗಿರುವುದನ್ನು ವೀಡಿಯೊಗಳು ತೋರಿಸಿವೆ. ಇಸ್ಲಾಮಿನ ಗುಣಲಕ್ಷಣಗಳ ಬಗ್ಗೆ ಅವರು ಬೋಧಿಸುತ್ತಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿರುವ 106 ಸೆಕೆಂಡ್ಗಳ ವೀಡಿಯೊ ತೋರಿಸುತ್ತಿದೆ. ಇತರ ಎರಡು ವೀಡಿಯೊಗಳು ಸಭೆಯನ್ನುದ್ದೇಶಿಸಿ ಇತರ ಇಬ್ಬರು ವ್ಯಕ್ತಿಗಳು ಮಾತನಾಡುತ್ತಿರುವುದನ್ನು ತೋರಿಸಿವೆ.
ವೀಡಿಯೊಗಳು ಅಸಲಿಯೇ ಮತ್ತು ಯಾವುದಾದರೂ ಅಪರಾಧವನ್ನು ಅವು ತೋರಿಸುತ್ತಿವೆಯೇ ಎನ್ನುವುದನ್ನು ತಾವು ಪರಿಶೀಲಿಸುತ್ತಿದ್ದೇವೆ ಎಂದು ಕಾನ್ಪುರ ಪೊಲೀಸರು ಸೋಮವಾರ ಸಂಜೆ ಟ್ವೀಟ್ ನ್ನುಲ್ಲಿ ತಿಳಿಸಿದ್ದರು.