ಆಗಸ್ಟ್ ನಲ್ಲಿ ನೂರಕ್ಕೂ ಹೆಚ್ಚು ಚೀನಿ ಸೈನಿಕರು ಉತ್ತರಾಖಂಡದಲ್ಲಿ ಐದು ಕಿ.ಮೀ.ಒಳಗೆ ಪ್ರವೇಶಿಸಿದ್ದರು: ಮಾಧ್ಯಮ ವರದಿ

Update: 2021-09-28 18:34 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಸೆ.28: ನೂರಕ್ಕೂ ಅಧಿಕ ಚೀನಿ ಸೈನಿಕರು ಆ.30ರಂದು ಉತ್ತರಾಖಂಡದ ಬಾರಾಹೋತಿ ಪರ್ವತಶ್ರೇಣಿಯ ಗಡಿ ಕೇಂದ್ರದ ಮೂಲಕ ಭಾರತೀಯ ಭೂಪ್ರದೇಶದಲ್ಲಿ ಐದು ಕಿ.ಮೀ.ಗೂ ಹೆಚ್ಚು ಒಳಗೆ ಅತಿಕ್ರಮಿಸಿದ್ದರು ಎಂದು ಅನಾಮಿಕ ಸರಕಾರಿ ಮತ್ತು ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿ ಆಂಗ್ಲ ದೈನಿಕವೊಂದು ಮಂಗಳವಾರ ವರದಿಯನ್ನು ಮಾಡಿದೆ. ಸರಕಾರವಿನ್ನೂ ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಬೇಕಿದೆ.

ಚೀನಿ ಸೈನಿಕರು ಸೇತುವೆಯೊಂದು ಸೇರಿದಂತೆ ಪ್ರದೇಶದಲ್ಲಿನ ಕೆಲವು ಮೂಲಸೌಕರ್ಯಗಳಿಗೆ ಹಾನಿಯನ್ನುಂಟು ಮಾಡಿದ್ದರು ಮತ್ತು ಸ್ಥಳೀಯರು ನೀಡಿದ್ದ ಮಾಹಿತಿಯ ಮೇರೆಗೆ ಭಾರತೀಯ ಸೇನೆ ಹಾಗೂ ಐಟಿಬಿಪಿಯ ಗಸ್ತು ತಂಡಗಳು ಸ್ಥಳಕ್ಕೆ ತಲುಪುವ ಮೊದಲೇ ಅಲ್ಲಿಂದ ಮರಳಿದ್ದರು. ಅವರು ತಮ್ಮೆಂದಿಗೆ 55 ಕುದುರೆಗಳನ್ನೂ ತಂದಿದ್ದು,ಸುಮಾರು ಮೂರು ಗಂಟೆಗಳ ಕಾಲ ಭಾರತೀಯ ಭೂಪ್ರದೇಶದಲ್ಲಿದ್ದರು ಎಂದು ವರದಿಯು ಹೇಳಿದೆ.
ಬಾರಾಹೋತಿ ಪರ್ವತ ಶ್ರೇಣಿಯು ಉತ್ತರಾಖಂಡದಲ್ಲಿನ ನಂದಾದೇವಿ ರಾಷ್ಟ್ರೀಯ ಉದ್ಯಾನವನದ ಪೂರ್ವದಲ್ಲಿದ್ದು, ಜೋಶಿಮಠ ಜಿಲ್ಲೆಯನ್ನು ಸಂಪರ್ಕಿಸಿದೆ. 

ಉತ್ತರಾಖಂಡದಲ್ಲಿ ಸುಮಾರು 350 ಕಿ.ಮೀ.ಉದ್ದದ ಭಾರತ-ಚೀನಾ ನಡುವಿನ ಗಡಿಯ ಮೇಲೆ ಐಟಿಬಿಪಿ ನಿಗಾ ಇರಿಸುತ್ತದೆ. ಬಾರಾಹೋತಿ ವಿಸೇನೀಕೃತ (ಮಿಲಿಟರಿರಹಿತ) ವಲಯವಾಗಿರುವುದರಿಂದ ಚೀನಿ ಸೈನಿಕರ ಈ ಒಳನುಸುಳುವಿಕೆ ಭದ್ರತಾ ಕಳವಳಗಳನ್ನು ಮೂಡಿಸಿದೆ.
ಹಿಂದೆಯೂ ಚೀನಿ ಸೈನಿಕರಿಂದ ಬಾರಾಹೋತಿ ಪ್ರದೇಶದಲ್ಲಿ ಒಳನುಸುಳಲು ಪ್ರಯತ್ನಗಳು ನಡೆದಿದ್ದವು ಎಂದು ಅನಾಮಿಕ ಸರಕಾರಿ ಅಧಿಕಾರಿಯೋರ್ವರು ಹೇಳಿದ್ದನ್ನು ವರದಿಯು ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News