ದ.ಕ.ಜಿಲ್ಲೆಯನ್ನು ಆಳುತ್ತಿರುವ ಅನೈತಿಕ ಪೊಲೀಸರು : ಈ ವರ್ಷ 12ಕ್ಕೂ ಅಧಿಕ ಪ್ರಕರಣ ದಾಖಲು
ಮಂಗಳೂರು, ಸೆ.30: ದ.ಕ. ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ಅನೈತಿಕ ಪೊಲೀಸ್‌ಗಿರಿ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಜನವರಿಯಿಂದ 12ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ರಾಜ್ಯದ ಅಭಿವೃದ್ಧಿಯ ಪ್ರಮುಖ ಕೇಂದ್ರವೆಂದು ಗುರುತಿಸಲ್ಪಟ್ಟಿರುವ ಮಂಗಳೂರಿನಲ್ಲಿ ಕ್ರಿಮಿನಲ್ ಆರೋಪಗಳನ್ನು ಹೊತ್ತ ದುಷ್ಕರ್ಮಿಗಳು ಕಾನೂನು ಕೈಗೆತ್ತಿಕೊಳ್ಳಲು ಹೊರಟಿರುವುದು, ಸಾರ್ಜನಿಕರ ಆತಂಕಕ್ಕೆ ಕಾರಣವಾಗಿದೆ.
ಅಧಿಕೃತವಾಗಿ 12 ಘಟನೆಗಳನ್ನು ಪೊಲೀಸ್ ಇಲಾಖೆ ಗುರುತಿಸಿದ್ದು, ಅವುಗಳು ಕೆಳಗಿನಂತಿವೆ:
ಘಟನೆ 1: 2021ರ ಫೆ.25ರಂದು ನಿರ್ದಿಷ್ಟ ಸಮುದಾಯದ ವಿದ್ಯಾರ್ಥಿ ಸೇರಿ ಒಟ್ಟು ಆರು ಮಂದಿ ವಿದ್ಯಾರ್ಥಿಗಳು ಎರ್ಮಾಯಿ ಫಾಲ್ಸ್‌ಗೆವಿಹಾರಕ್ಕೆ ತೆರಳುತ್ತಾರೆ. ಐದು ಮಂದಿ ಅಪರಿಚಿತರು ಅವರನ್ನು ಹಿಂಬಾಲಿಸಿಕೊಂಡು ಹೋಗಿ ಒಂದು ಸಮುದಾಯದ ವಿದ್ಯಾರ್ಥಿ ಜೊತೆ ಇನ್ನೋರ್ವ ವಿದ್ಯಾರ್ಥಿಗೂ ಹಲ್ಲೆ ನಡೆಸುತ್ತಾರೆ. ಅಲ್ಲದೆ ಆರೋಪಿಗಳು ಈ ಪೈಕಿ ವಿದ್ಯಾರ್ಥಿನಿಯರ ವಿಹಾರದ ಫೋಟೊ ತೆಗೆದು ಸಾಮಾಜಿಕ ಜಾಲತಾಣದಲ್ಲ್ಲಿ ಹರಿಯಬಿಡುತ್ತಾರೆ.
ವೀಡಿಯೊ ವೈರಲ್ ಆಗುತ್ತಿರುವಂತೆಯೇ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಮಹಿಳಾ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗುತ್ತದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 147, 341, 342, 354, 354 (D), 323, 504, 504, 506, 149 ಮತ್ತು ಐಟಿ ಕಾಯ್ದೆ 67ರಡಿ ಪ್ರಕರಣ ದಾಖಲಿಸಲಾಗುತ್ತದೆ. ಘಟನೆಗೆ ಸಂಬಂಧಿಸಿ ನಾಲ್ಕು ಮಂದಿಯನ್ನು ಬಂಧಿಸಲಾಗುತ್ತದೆ. ಪ್ರಸಕ್ತ ಪ್ರಕರಣ ವಿಚಾರಣೆಯಲ್ಲಿದೆ.
ಘಟನೆ 2: ಒಂದು ಸಮುದಾಯದ ಯುವತಿಯೊಬ್ಬಳು ಮತ್ತೊಂದು ಸಮುದಾಯದ ಕುಟುಂಬದ ಜೊತೆ ಪುತ್ತೂರು ಆಸ್ಪತ್ರೆಗೆ ತೆರಳುತ್ತಾಳೆ. ಆಸ್ಪತ್ರೆ ಆವರಣದಲ್ಲಿ ಕೆಲ ಅಪರಿಚಿತ ವ್ಯಕ್ತಿಗಳು ಆಕೆಯನ್ನು ತಡೆದು ಬೇರೆ ಸಮುದಾಯದವರ ಜೊತೆ ಬಂದಿದ್ದನ್ನು ಪ್ರಶ್ನಿಸುತ್ತಾರೆ. ಈ ಬಗ್ಗೆ ಪುತ್ತೂರುನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 341, 34ರಂತೆ ಪ್ರಕರಣ ದಾಖಲಾಗುತ್ತದೆ. ನಾಲ್ವರು ಶಂಕಿತರಿಗೆ ಸೆಕ್ಷನ್ (41 ಅ) Cr.PC ನಡಿನೋಟಿಸು ನೀಡಲಾಗುತ್ತದೆ.
ಘಟನೆ 3: ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ಆರು ಮಂದಿ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳನ್ನು (ಬೇರೆ ಬೇರೆ ಸಮುದಾಯದ ಯುವಕ, ಯುವತಿಯರು) ಕಾರಿಂಜೇಶ್ವರ ದೇವಸ್ಥಾನದ ಪರಿಸರದಲ್ಲಿ ಅಪರಿಚಿತ ವ್ಯಕ್ತಿಗಳು ತಡೆದು ಪ್ರಶ್ನಿಸುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿ ಪೂಂಜಾಲಕಟ್ಟೆ ಠಾಣೆಯಲ್ಲಿ ಮೂರು ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 143, 147, 341, R/W 149 ನಡಿ ಪ್ರಕರಣ ದಾಖಲಾಗಿ ಪ್ರಸಕ್ತ ತನಿಖೆ ಮುಂದುವರಿದಿದೆ.
ಘಟನೆ 4: ಬೇರೆ ಬೇರೆ ಸಮುದಾಯದ ಯುವಕ - ಯುವತಿ ನೆಲ್ಯಾಡಿ ನದಿ ತೀರದಲ್ಲಿ ಕುಳಿತಿದ್ದಾಗ ಅಲ್ಲಿಗೆ ಆಗಮಿಸಿದ ಇಬ್ಬರು ಅಪಚಿತರು ಅವರನ್ನು ಪ್ರಶ್ನಿಸುತ್ತಾರೆ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 341, 504, 506, R/W 34ರಡಿ ಪ್ರಕರಣ ದಾಖಲಾಗಿ ಪ್ರಕರಣ ತನಿಖೆಯಲ್ಲಿದೆ.
ಘಟನೆ 5: ಸಾಮಾಜಿಕ ಜಾಲತಾಣದ ಮೂಲಕ ಸ್ನೇಹಿತೆಯಾದ ಒಂದು ಸಮುದಾಯದ ಯುವತಿಯೊಬ್ಬಳನ್ನು ಭೇಟಿಯಾಗಲು ರಾಯಚೂರಿನಿಂದ ಮತ್ತೊಂದು ಸಮುದಾಯದ ಇಬ್ಬರು ಯುವಕರು ಪುತ್ತೂರಿಗೆ ಆಗಮಿಸುತ್ತಾರೆ. ಅವರು ಬಸ್‌ನಿಲ್ದಾಣದಲ್ಲಿ ಮಾತನಾಡುತ್ತಿದ್ದ ವೇಳೆ ನಾಲ್ಕೈದು ಮಂದಿ ಯುವಕರು ಆಗಮಿಸಿ ಬೇರೆ ಸಮುದಾಯದ ಯುವತಿ ಜೊತೆ ಮಾತನಾಡಿದ್ದನ್ನು ಆಕ್ಷೇಪಿಸಿ ತರಾಟೆಗೈಯುತ್ತಾರೆ. ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 141, 147, 341, 504, 323, 506, R/W 149ರಡಿ ಪ್ರಕರಣ ದಾಖಲಾಗುತ್ತದೆ. ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದರು. ಪ್ರಸಕ್ತ ಪ್ರಕರಣ ತನಿಖೆಯಲ್ಲಿದೆ.
ಘಟನೆ 6: ಪುತ್ತೂರಿನ ಲಾಡ್ಜ್ ಒಂದರಲ್ಲಿ ಓರ್ವ ಮಹಿಳೆ ಹಾಗೂ ಇತರ ಇಬ್ಬರು ವ್ಯಕ್ತಿಗಳು ತಂಗಿದ್ದರು. ಈ ಸಂದರ್ಭ ಅಲ್ಲಿ ಅಕ್ರಮವಾಗಿ ಮಹಿಳೆಯ ಕೊಠಡಿಗೆ ಪ್ರವೇಶಿಸಿದ ಕೆಲ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸುತ್ತಾರೆ. ಪುತ್ತೂರು ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 147, 323, 504, 509 R/W 149ರಡಿ ಪ್ರಕರಣ ದಾಖಲಾಗುತ್ತದೆ. ಇಬ್ಬರನ್ನು ಬಂಧಿಸಲಾಗಿದ್ದು, ಪ್ರಕರಣ ತನಿಖೆಯಲ್ಲಿದೆ.
ಘಟನೆ 7: ತೊಕ್ಕೊಟ್ಟು ಐಸ್‌ಕ್ರೀಂ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಒಂದು ಸಮುದಾಯದ ಯುವತಿಯನ್ನು ಮೋಟಾರು ಬೈಕ್‌ನಲ್ಲಿ ಬೇರೆ ಸಮುದಾಯದ ಯುವಕ ಕರೆದೊಯ್ಯುತ್ತಿದ್ದ ವೇಳೆ ಉಜ್ಜೋಡಿ ಬಳಿ ಅಪರಿಚಿತ ವ್ಯಕ್ತಿಗಳಿಂದ ತಡೆ. ಅವಾಚ್ಯಶಬ್ದಗಳಿಂದ ನಿಂದಿಸಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇದೇ ಫೆಬ್ರವರಿ 2ರಂದು ಕಂಕನಾಡಿ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 147, 341, 323, 504 ಹಾಗೂ 149ರಡಿ ಪ್ರಕರಣ ದಾಖಲು. ಆರೋಪಿಗಳನ್ನು ದಸ್ತಗಿರಿ ಮಾಡಿ ಜಾಮೀನಿನಲ್ಲಿ ಬಿಡುಗಡೆಯ ಜೊತೆಗೆ ರಾಜಿಯಲ್ಲಿ ಮುಕ್ತಾಯ.
ಘಟನೆ 8: ಮಹಿಳೆಯೊಬ್ಬರು ಇನ್ನೊಂದು ಸಮುದಾಯದ ಸ್ನೇಹಿತರ ಜೊತೆ ಬಸ್ಸಿನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಕಪಿತಾನಿಯೊ ಬಳಿ ಅಪರಿಚಿತ ವ್ಯಕ್ತಿಗಳಿಂದ ಬಸ್ಸಿಗೆ ತಡೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ಮಾರಣಾಂತಿಕ ಹಲ್ಲೆ, ಕೊಲೆಗೆ ಯತ್ನ ನಡೆಸಲಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿ ಕಂಕನಾಡಿ ಠಾಣೆಯಲ್ಲಿ 1-4-2021ರಂದು ಐಪಿಸಿ ಸೆಕ್ಷನ್ 143, 147, 148, 324, 354, 153 (ಎ), 307 ಮತ್ತು 149ರಡಿ ಪ್ರಕರಣ ದಾಖಲು. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳ ಬಂಧಿಸಿ ನ್ಯಾಯಾಂಗ ಬಂಧನ. 2-7-2021ರಂದು ಆರೋಪಿಗಳ ಬಿಡುಗಡೆ. ಪ್ರಕರಣ ನ್ಯಾಯಾಲದಲ್ಲಿ ವಿಚಾರಣೆಯಲ್ಲಿದೆ.
ಘಟನೆ 9: ಕೇರಳ ಮೂಲದ ನಿರ್ದಿಷ್ಟ ಸಮುದಾಯದ ಯುವತಿ ಜೊತೆ ಕಾರಿನಲ್ಲಿ ಯುವಕನೊಬ್ಬ ಮಡಿಕೇರಿಗೆ ತೆರಳುತ್ತಿದ್ದ ವೇಳೆ ಪಂಪ್‌ವೆಲ್ ಬಳಿ ಸಂಘ ಪರಿವಾರದ ತರಾಟೆ. ಕಂಕನಾಡಿ ಪೊಲೀಸರಿಗೆ ಮಾಹಿತಿ ನೀಡಿ, ಅವರನ್ನು ವಿಚಾರಣೆ ನಡೆಸಿದ ಪೊಲೀಸರು ಬುದ್ಧಿವಾದ ಹೇಳಿ ಅವರನ್ನು ಮನೆಗಳಿಗೆ ಕಳುಹಿಸುತ್ತಾರೆ.
ಘಟನೆ 10: ಇಬ್ಬರು ವ್ಯಕ್ತಿಗಳು ಹಾಗೂ ಓರ್ವ ಬೇರೆ ಸಮುದಾಯದ ಮಹಿಳೆ ಬಸ್ಸಿನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಮದುವೆ ಕಾರ್ಯಕ್ರಮಕ್ಕಾಗಿ ಪ್ರಯಾಣಿಸುತ್ತಾರೆ. ಬಿ.ಸಿ.ರೋಡ್ ಬಳಿ ಸಂಘ ಪರಿವಾರದ ಕಾರ್ಯಕರ್ತರು ಬಸ್ ತಡೆದು ಮೂವರನ್ನು ಪ್ರಶ್ನಿಸುತ್ತಾರೆ. ಈ ಸಂದರ್ಭ ಬಸ್ಸಿನಲ್ಲಿದ್ದ ಪ್ರಯಾಣಿಕರು ಠಾಣೆಗೆ ಕರೆ ಮಾಡಿದ ಕಾರಣ ಅಲ್ಲಿಗೆ ಆಗಮಿಸುವ ಪೊಲೀಸರು ಮೂವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಬಳಿಕ ಅವರಿಗೆ ಪ್ರಯಾಣ ಮುಂದುವರಿಸಲು ಅವಕಾಶ ನೀಡುತ್ತಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗುವುದಿಲ್ಲ.
ಘಟನೆ 11: ಬೇರೆ ಬೇರೆ ಸಮುದಾಯದ ಪುರುಷ ಮತ್ತು ಮಹಿಳೆ ಬಸ್‌ನಲ್ಲಿ ಮಂಗಳೂರಿನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವೇಳೆ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರ ಗುಂಪು ಮೂಡುಬಿದಿರೆ ಬಳಿ ಬಸ್ಸನ್ನು ತಡೆದು ಪ್ರಶ್ನಿಸಿ ತರಾಟೆಗೈಯುತ್ತಾರೆ. ಸ್ಥಳಕ್ಕೆ ಭೇಟಿ ನೀಡುವ ಪೊಲೀಸರು ಕಾರ್ಯಕರ್ತರನ್ನು ತಡೆದು ಅವರಿಬ್ಬರ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತಾರೆ. ಈ ಪ್ರಕರಣದ ಬಗ್ಗೆಯೂ ಪ್ರಕರಣ ದಾಖಲಾಗುವುದಿಲ್ಲ.
ಘಟನೆ 12: ರಾ.ಹೆ. 66ರ ಸುರತ್ಕಲ್ ಟೋಲ್‌ಗೇಟ್ ಬಳಿ ಜೀಪಿನಲ್ಲಿ ತೆರಳುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳಿಗೆ ತಂಡದಿಂದ ತಡೆ. ಅವಾಚ್ಯ ಶಬ್ದಗಳಿಂದ ನಿಂದನೆ. ಪೊಲೀಸ್ ಅಧಿಕಾರಿಯ ಸಮ್ಮುಖದಲ್ಲೇ ಹಲ್ಲೆ, ದಾಂಧಲೆ. ಸಹಪಾಠಿಗಳ ಜೊತೆ ಮಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ತಂಡವೊಂದು ವಾಹನ ತಡೆದು ಜೀಪಿನಲ್ಲಿದ್ದ ವಿದ್ಯಾರ್ಥಿಗಳ ಹೆಸರು, ವಿಳಾಸ ಕೇಳಿ ಹಲ್ಲೆ ನಡೆಸಿದೆ. ಅದೇ ದಾರಿಯಾಗಿ ತೆರಳುತ್ತಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರು ಘಟನಾ ಸ್ಥಳಕ್ಕಾಗಮಿಸಿ ಹಲ್ಲೆ ತಡೆಯಲು ಯತ್ನಿಸುತ್ತಾರೆ. ಈ ಬಗ್ಗೆ ಸಂತ್ರಸ್ತರ ಪರ ವಿದ್ಯಾರ್ಥಿ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 341, 323, 504ರಡಿ ಪ್ರಕರಣ ದಾಖಲಿಸಿ ಠಾಣೆಯಲ್ಲೇ ಜಾಮೀನು ಮಂಜೂರು ಆಗಿದ್ದು, ಪ್ರಕರಣ ತನಿಖೆಯಲ್ಲಿದೆ.
ಈ ಮೇಲಿನವು ದ.ಕ. ಜಿಲ್ಲೆಯಲ್ಲಿ ಕಳೆದ ಜನವರಿಯಿಂದೀಚೆಗೆ ನಡೆದ ಅನೈತಿಕ ಪೊಲೀಸ್‌ಗಿರಿಯ ಅಧಿಕೃತ ಪ್ರಕರಣಗಳಾಗಿವೆ. ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕವಾಗಿ ಅಭಿವೃದ್ಧಿ ಪಥದಲ್ಲಿರುವ, ಸೌಹಾರ್ದದ ಬೀಡು, ಬುದ್ಧಿವಂತರ ಜಿಲ್ಲೆ ಎಂದೇ ಕರೆಯಲ್ಪಡುವ ದ.ಕ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಪದೇ ಪದೇ ನಡೆಯುತ್ತಿರುವುದು ಸೌಹಾರ್ದವನ್ನು ಬಯುಸುವ ಜನತೆಗೆ ಕಸಿವಿಸಿಯನ್ನುಂಟುಮಾಡುತ್ತಿದೆ. ಕಳೆದ ಸುಮಾರು ಒಂದು ವರ್ಷದಿಂದೀಚೆಗೆ ಕೊರೋನ ಸಂಕಷ್ಟದ ನಡುವೆಯೂ ಆರ್ಥಿಕವಾಗಿ ಚೇತರಿಸಿಕೊಳ್ಳಲು ಹಪಹಪಿಸುತ್ತಿರುವ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಜಿಲ್ಲೆಯ ಪಾಲಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸುತ್ತಿವೆೆ. ಧರ್ಮಗಳ ಭೇದವಿಲ್ಲದೆ, ಜಾತಿಯ ಹಂಗಿಲ್ಲದೆ, ಪರಸ್ಪರ ಕೊಡು ಕೊಳ್ಳುವ, ಪರಸ್ಪರ ಮನೆಗಳಿಗೆ ಭೇಟಿ ನೀಡಿ ಹಬ್ಬ ಆಚರಿಸುತ್ತಿದ್ದ ದ.ಕ. ಜಿಲ್ಲೆ ಕಳೆದ ಸುಮಾರು ಒಂದೂವರೆ ದಶಕದಿಂದೀಚೆಗೆ ಪದೇ ಪದೇ ಈ ರೀತಿಯ ಪ್ರಕರಣಗಳಿಗೆ ಸಾಕ್ಷಿಯಾಗುತ್ತಿದೆ. ಪರಸ್ಪರ ಅನುಮಾನಿಸುವ, ಅವಮಾನಿಸುವ ಪ್ರಕ್ರಿಯೆಗಳಿಗೆ ಕಾರಣವಾಗುತ್ತಿದೆ. ಅಭದ್ರತೆ ದ.ಕ. ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗುತ್ತಿದೆ.
ಇಂತಹ ಪ್ರಕರಣಗಳು ನಡೆದಾಗ ಪೊಲೀಸರು ತಪ್ಪಿತಸ್ಥರ ವಿರುದ್ಧ ಕಠಿಣ ಸೆಕ್ಷನ್‌ಗಳಡಿ ಪ್ರಕರಣಗಳನ್ನು ದಾಖಲಿಸದಿರುವುದರಿಂದ ಇವು ಪುನರಾವರ್ತನೆಗೊಳ್ಳುತ್ತಿವೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಘಟನೆಯ ನೈಜತೆ ಹಾಗೂ ವಸ್ತುಸ್ಥಿತಿಯನ್ನು ಅರಿತು ಅದಕ್ಕೆ ತಕ್ಕ ಹಾಗೆ ಪ್ರಕರಣ ದಾಖಲಿಸಲಾಗುತ್ತದೆ ಎಂಬುದು ಪೊಲೀಸ್ ಅಧಿಕಾರಿಗಳ ಹೇಳಿಕೆಯಾಗಿದೆ.
ಅಂತರ್‌ರಾಜ್ಯ-ಅಂತರ್‌ರಾಷ್ಟ್ರೀಯ ಹೂಡಿಕೆ, ಪ್ರವಾಸೋದ್ಯಮಕ್ಕೆ ಆತಂಕ!
ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಅನೈತಿಕ ಪೊಲೀಸ್‌ಗಿರಿಯ ಘಟನೆಗಳು ಅಂತರ್‌ರಾಜ್ಯ ಹಾಗೂ ಅಂತರ್‌ರಾಷ್ಟ್ರೀಯ ಹೂಡಿಕೆ, ಪ್ರವಾಸೋದ್ಯ ಮಕ್ಕೆ ಅಡ್ಡಿಯಾಗುತ್ತಿವೆ. ಪಶ್ಚಿಮ ಘಟ್ಟದ ಪ್ರಾಕೃತಿಕ ಸೌಂದರ್ಯ, ಇಲ್ಲಿನ ಬೀಚ್‌ಗಳು, ಇಲ್ಲಿನ ಧಾರ್ಮಿಕ ಕೇಂದ್ರಗಳು ಜಗತ್ತಿನಲ್ಲಿಯೇ ಅತ್ಯುತ್ತಮ ಪ್ರವಾಸಿ ತಾಣಗಳಾಗಿ ಬಿಂಬಿಸಲ್ಪಡುವ ಎಲ್ಲಾ ಅವಕಾಶಗಳನ್ನು ಹೊಂದಿದ್ದರೂ ಇಂತಹ ಘಟನೆಗಳು ಪ್ರವಾಸಿಗರಲ್ಲಿ, ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗುತ್ತಿವೆ.
ನಮ್ಮ ವ್ಯಾಪ್ತಿಯಲ್ಲಿ ಯಾವ ಪ್ರಕರಣ ನಡೆದರೂ ಆ ಘಟನೆಗೆ ತಕ್ಕಂತೆ ನಾವು ಪ್ರಕರಣ ದಾಖಲಿಸಿದ್ದೇವೆ. ಕಳೆದ ಆರು ತಿಂಗಳಿಂದೀಚೆಗೆ ನಮ್ಮ ವ್ಯಾಪ್ತಿಯಲ್ಲಿ ಇಂತಹ ಅನೈತಿಕ ಪೊಲೀಸ್‌ಗಿರಿಗೆ ಸಂಬಂಧಿಸಿ 6 ಪ್ರಕರಣಗಳು ನಡೆದಿದ್ದು, ಅದರಲ್ಲಿ ಕಡಬ ಮತ್ತು ಪುತ್ತೂರಿನಲ್ಲಿ ನಡೆದ ಎರಡು ಪ್ರಕರಣಗಳಲ್ಲಿ ಸ್ವಯಂ ಪ್ರೇರಿತವಾಗಿ ನಾವೇ ಪ್ರಕರಣ ದಾಖಲಿಸಿದ್ದೇವೆ. ಪ್ರಕರಣದ ಗಂಭೀರತೆಯ ಅನುಸಾರವಾಗಿಯೇ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗುತ್ತಿದೆ.
► ಋಷಿಕೇಶ್ ಸೊನಾವಣೆ, ಪೊಲೀಸ್ ವರಿಷ್ಠಾಧಿಕಾರಿ, ದ.ಕ.
ಕಳೆದ ರವಿವಾರ ಆರು ಮಂದಿ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿ ಹಿಂದಿರುಗುತ್ತಿದ್ದಾಗ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಅವರ ವಾಹನವನ್ನು ತಡೆದ ಗುಂಪು, ವಿದ್ಯಾರ್ಥಿಯೊಬ್ಬನನ್ನು ಎಳೆದಾಡಿರುವ ಬಗ್ಗೆ ದೂರು ದಾಖಲಾಗಿದೆ. ಈ ಘಟನೆ ನಡೆದ ವೇಳೆ ನಮ್ಮ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರು ಅದೇ ದಾರಿಯಲ್ಲಿ ಹೋಗುತ್ತಿದ್ದಾಗ ಘಟನೆಯನ್ನು ತಡೆದು ಮುಂಜಾಗ್ರತೆ ವಹಿಸಿದ್ದಾರೆ. ವಿದ್ಯಾರ್ಥಿಯೊಬ್ಬ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಯುವತಿಯರೊಂದಿಗೆ ವಾಹನದಲ್ಲಿ ಅಸಭ್ಯವಾಗಿ ವರ್ತಿಸಿಕೊಂಡು ಸಂಚರಿಸುತ್ತಿದ್ದಾರೆ ಎಂಬ ಮೇರೆಗೆ ವಾಹನ ತಡೆದಿರುವುದಾಗಿ ಆರೋಪಿಗಳು ಹೇಳಿಕೊಂಡಿದ್ದಾರೆ. ಆದರೆ ಅವರೆಲ್ಲರೂ ಕಾಲೇಜು ಸ್ನೇಹಿತರಾಗಿದ್ದು, ಯಾರೂ ಅಸಭ್ಯವಾಗಿ ವರ್ತಿಸಿಲ್ಲ ಎಂಬುದು ತನಿಖೆಯಿಂದ ಕಂಡು ಬಂದಿದೆ.
► ಶಶಿಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು
ಕೋಮು ಸೌಹಾರ್ದವನ್ನು ಕಾಪಾಡುವಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವುದಕ್ಕೆ ಪೂರಕವಾಗಿ ಕರಾವಳಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಹಿಂದೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿದ್ದ ಸಂದರ್ಭ ಎಸ್.ಆರ್.ನಾಯಕ್ ಸರಕಾರಕ್ಕೆ ವರದಿಯೊಂದನ್ನು ಸಲ್ಲಿಸಿದ್ದರು. ಸುರತ್ಕಲ್ ಘಟನೆಗೆ ಸಂಬಂಧಿಸಿ ವಿದ್ಯಾರ್ಥಿಗಳ ವಿರುದ್ಧ ನಡೆದ ಘಟನೆ ಗೂಂಡಾವರ್ತನೆ. ತೀರಾ ಲಘುವಾದ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ. ಆದರೆ ಇದು ಸಾರ್ವಜನಿಕವಾಗಿ ಭಯಭೀತರನ್ನಾಗಿಸುವ ಘಟನೆಯಾಗಿದ್ದು, ಇಂತಹ ಪ್ರಕರಣಗಳು ನಡೆದಾಗ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕಾಗುತ್ತದೆ. ಇಲ್ಲವಾದಲ್ಲಿ ಇಲ್ಲಿ ಹೊರ ರಾಜ್ಯ, ಜಿಲ್ಲೆಗಳಿಂದ ಶಿಕ್ಷಣ, ಉದ್ಯೋಗಕ್ಕಾಗಿ ಬರುವವರು ಭಯದಲ್ಲಿಯೇ ಜೀವಿಸುವಂತಹ ವಾತಾವರಣ ನಿರ್ಮಾಣವಾಗಲಿದೆ’’.
► ದಿನೇಶ್ ಹೆಗ್ಡೆ ಉಳೇಪಾಡಿ, ವಕೀಲರು, ಮಂಗಳೂರು
ಪೊಲೀಸರು ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ರೌಡಿಗಳ ವಿರುದ್ಧ ಕ್ರಮ ಕೈಗೊಳ್ಳದೆ ತೆಪ್ಪಗೆ ಕುಳಿತರೆ, ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಮಾರಕವಾಗಲಿದೆ. ಈಗಲೇ ಐಟಿಯಂಥ ದೊಡ್ಡ ಕಂಪೆನಿಗಳು ಜಿಲ್ಲೆಗೆ ಬರುತ್ತಿಲ್ಲ. ಇರುವ ಕಂಪೆನಿಗಳೂ ಹಿಂದಕ್ಕೆ ಸರಿಯಬಹುದು. ಈಗ ದೇಶ ವಿದೇಶದ ಮಕ್ಕಳು ಇಲ್ಲಿಯ ಶಿಕ್ಷಣ ಸಂಸ್ಥೆಗಳಿಗೆ ಬರುತ್ತಿದ್ದರು. ಈಗಾಗಲೇ ವೃತ್ತಿಪರ ಕೋರ್ಸ್‌ಗಳಿಗೆ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಇದೇ ಮಾದರಿ ಬೀದಿ ಪುಂಡಾಟಿಕೆ ಮುಂದುವರಿದರೆ ಯಾವ ಹೆತ್ತವರು ತಮ್ಮ ಮಕ್ಕಳನ್ನು ಇಲ್ಲಿಗೆ ಕಳಿಸಿಯಾರು?.
► ಯು.ಟಿ.ಖಾದರ್, ಶಾಸಕ, ಮಾಜಿ ಸಚಿವ
‘ಅನೈತಿಕ ಪೊಲೀಸ್‌ಗಿರಿ ಜಿಲ್ಲೆಗೆ ಹೊಸತಲ್ಲ. ದಶಕದಿಂಚೀಚೆಗೆ ಇದು ರಾಜಕೀಯ ಕಾರ್ಯಕ್ರಮದ ಭಾಗವಾಗಿ ನಡೆಯುತ್ತಿದೆ. ಇಲ್ಲಿನ ಘಟನೆಗಳು ಇದೀಗ ರಾಜ್ಯದ ಇತರ ಕಡೆಗಳಿಗೂ ವ್ಯಾಪಿಸುತ್ತಿದೆ. ಅನೈತಿಕ ಪೊಲೀಸ್‌ಗಿರಿ ಅಥವಾ ಮತೀಯ ಗೂಂಡಾಗಿರಿಯನ್ನು ಸಮರ್ಥಿಸುತ್ತಾ ಬಂದ ಅಥವಾ ಅಂತಹ ಕಾರ್ಯಕ್ರಮಗಳ ಮೂಲಕವೇ ಪ್ರವರ್ಧಮಾನಕ್ಕೆ ಬಂದ ಬಿಜೆಪಿ ಆಡಳಿತ ನಡೆಸುತ್ತಿರುವ ಈ ಸಮಯದಲ್ಲಿ ಇಂತಹ ಪ್ರಕರಣಗಳು ಅಚ್ಚರಿಯೇನಲ್ಲ. ಆದರೆ ಸುರತ್ಕಲ್‌ನಲ್ಲಿ ರವಿವಾರ ನಡೆದ ಘಟನೆಯ ಸಂದರ್ಭ ಪೊಲೀಸ್ ಅಧಿಕಾರಿಯೊಬ್ಬರಿದ್ದರು. ಬಹಿರಂಗವಾಗಿ ನಡೆದ ಹಲ್ಲೆ ಪ್ರಯತ್ನ ಘಟನೆಯನ್ನು ಪೊಲೀಸರು ಸಾಂಕೇತಿಕವಾಗಿ ಠಾಣೆಯಲ್ಲಿ ಜಾಮೀನು ನೀಡಿ ಆರೋಪಿಗಳನ್ನು ಮನೆಗೆ ಕಳುಹಿಸುತ್ತಾರೆ. ಬೆಂಗಳೂರಿನಲ್ಲಿ ಆದ ಘಟನೆಯನ್ನು ಮುಖ್ಯಮಂತ್ರಿಯವರೇ ಖಂಡಿಸಿ ಇಂತಹ ಘಟನೆಯನ್ನು ಎಲ್ಲಿಯೂ ಸಹಿಸುವುದಿಲ್ಲ ಎನ್ನುತ್ತಾರೆ. ಆದರೆ ಮಂಗಳೂರಿನ ಘಟನೆಯಲ್ಲಿ ಆರೋಪಿಗಳಿಗೆ ತಕ್ಷಣ ಜಾಮೀನು ಸಿಗುತ್ತದೆ. ಇದು ಒಂದು ಪೂರ್ವನಿಯೋಜಿತ ಕೃತ್ಯ ಎಂದೇ ಭಾಸವಾಗುತ್ತದೆ’’.
► ಮುನೀರ್ ಕಾಟಿಪಳ್ಳ, ರಾಜ್ಯಾಧ್ಯಕ್ಷ ಡಿವೈಎಫ್‌ಐ
‘‘ನಮ್ಮ ಸಮುದಾಯದ ಯುವಕ, ಯುವತಿಯರಿಗೆ ಬೇರೆ ಸಮುದಾಯದವರಿಂದ ತೊಂದರೆ ಯಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಸಂಘ ಪರಿವಾರ ಸಂಘಟನೆಗಳ ಯುವಕರು ಪೊಲೀಸರಿಗೆ ದೂರು ನೀಡಿದರೆ ತಡವಾಗುತ್ತದೆ ಎಂಬ ಆತಂಕದಲ್ಲಿ ಕೆಲವೊಮ್ಮೆ ತಾವೇ ಕಾರ್ಯಾಚರಣೆಗೆ ಮುಂದಾಗುತ್ತಾರೆ. ಈ ಬಗ್ಗೆ ನಮ್ಮ ಜನರೇ ಜಾಗೃತರಾಗಬೇಕು. ಇದನ್ನು ಬೆಂಬಲಿಸುವುದಲ್ಲ. ಆದರೆ ಇಂತಹ ಘಟನೆಗಳು ಯಾಕೆ ನಡೆಯುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ’’.
► ಸಂಜಯ್ ಪ್ರಭು, ವಕ್ತಾರ ಬಿಜೆಪಿ, ದ.ಕ. ಜಿಲ್ಲೆ.
ಇಂತಹ ಪ್ರಕರಣಗಳ ಬಗ್ಗೆ ನಾನು ಹಲವಾರು ಬಾರಿ ಧ್ವನಿ ಎತ್ತಿದ್ದೇನೆ. ಆ ಸಂದರ್ಭ ನನ್ನ ವಿರುದ್ಧ ಅವಹೇಳನಕಾರಿ ಆರೋಪ ಮಾಡಲಾಗುತ್ತದೆ. ದ.ಕ. ಜಿಲ್ಲೆ ಶೈಕ್ಷಣಿಕ ಕೇಂದ್ರ, ಇಲ್ಲಿಗೆ ವಿವಿಧ ರಾಜ್ಯಗಳಿಂದ ಶಿಕ್ಷಣಕ್ಕಾಗಿ ಯುವತಿಯರು ಸೇರಿದಂತೆ ತಮ್ಮ ಮಕ್ಕಳನ್ನು ಇಲ್ಲಿ ಕಳುಹಿಸುತ್ತಾರೆ. ಆದರೆ ನಮ್ಮಲ್ಲಿ ಶೈಕ್ಷಣಿಕ ವೌಲ್ಯಗಳ ಬಗ್ಗೆ ಅರಿವಿಲ್ಲದ ಕೆಲ ಯುವಕರ ದುರ್ವರ್ತನೆಯಿಂದ ನಾವು ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.
► ಪ್ರತಿಭಾ ಕುಳಾಯಿ, ಮಾಜಿ ಕಾರ್ಪೊರೇಟರ್, ಮಂಗಳೂರು.