ಇನ್ನೂ ಪಾವತಿಯಾಗದ 2019ನೇ ಸಾಲಿನ ದಸರಾ ಮಹೋತ್ಸವದ 4 ಕೋಟಿ ರೂ.

Update: 2021-09-30 08:21 GMT
ಫೈಲ್ ಫೋಟೊ

ಮೈಸೂರು, ಸೆ.30: 2021ರ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಜ್ಜಾ  ಗುತ್ತಿರುವ ರಾಜ್ಯ ಸರಕಾರ 2019ನೇ ಸಾಲಿನ ದಸರಾ ಮಹೋತ್ಸವದಲ್ಲಿ ನಿಯಮದಂತೆ ವಿವಿಧ ಟೆಂಡರ್ ಪಡೆದು ಕೆಲಸ ಮಾಡಿದ್ದು, ಸುಮಾರು 4 ಕೋಟಿ. ರೂ. ಹಣವನ್ನು ನೀಡಲು ಬಾಕಿ ಇದೆ ಎಂದು ಗುತ್ತಿಗೆದಾರರು, ಕಲಾವಿದರು ಆರೋಪಿಸಿದ್ದಾರೆ.

ಅರಮನೆ ಸಾಂಸ್ಕೃತಿಕ ಕಾರ್ಯಕ್ರಮ, ಯುವ ದಸರಾ, ರೈತರ ದಸರಾ, ಟಾರ್ಚ್ ಲೈಟ್ ಪೆರೇಡ್, ದಸರಾ ಮೆರವಣಿಗೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಸ್ತಬ್ಧ ಚಿತ್ರ, ಲೈಟಿಂಗ್ಸ್, ಶಾಮೀಯಾನ, ಜನರೇಟರ್, ಎಲ್‌ಇಡಿ ಸೇರಿದಂತೆ ವಿವಿಧ ಬಗೆಯ ವರ್ಣರಂಜಿತ ಕೆಲಸಗಳನ್ನು ಮಾಡಿದ್ದ ಅನೇಕರಿಗೆ ಎರಡು ವರ್ಷ ಕಳೆದರೂ ಬರಬೇಕಿರುವ ಹಣವನ್ನು ನೀಡಿಲ್ಲ ಎಂದು ಆರೋಪಿಸಲಾಗಿದೆ.

ದಸರಾ ಮಹೋತ್ಸವದಲ್ಲಿ ಭಾಗವಹಿಸಿ ಸ್ವಲ್ಪ ಮಟ್ಟಿಗೆ ಬದುಕು ಕಟ್ಟಿಕೊಳ್ಳಬಹುದು ಎಂದುಕೊಂಡಿದ್ದವರ ಬದುಕು ಅತಂತ್ರ ಸ್ಥಿತಿಗೆ ತಲುಪಿದ್ದು, ಕೊರೋನ ಸಂಕಷ್ಟದಿಂದ ಎರಡು ವರ್ಷಗಳಿಂದ ದಸರಾ ಮಹೋತ್ಸವದ ಯಾವ ಕೆಲಸಗಳು ಲಭಿಸದೆ ಕಂಗಾಲಾಗಿದ್ದಾರೆ. ತಮಗೆ ಬರಬೇಕಾದ ಹಣವನ್ನು ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಮತ್ತು ಸಂಬಂಧ ಪಟ್ಟ ಅಧಿಕಾರಿಗಳ ಬಳಿಗೆ 2 ವರ್ಷಗಳಿಂದ ಅಲೆದು ಅಲೆದು ಸಾಕಾಗಿ ದಲಿತ ಸಂಘರ್ಷ ಸಮಿತಿಯ ನೆರವಿನೊಂದಿಗೆ ಪ್ರತಿಭಟನೆಗೆ ಮುಂದಾಗಿದ್ದಾರೆ.

ದಸರಾದಲ್ಲಿ ಕೆಲಸ ಮಾಡಿದ ಹೆಸರು ಹೇಳಲಿಚ್ಚಿಸದ ವ್ಯಕ್ತಿಯೊಬ್ಬರು ಮಾತನಾಡಿ, ನಾವು ಟೆಂಡರ್ ಮೂಲಕವೇ 2019ರ ದಸರಾ ಕಾರ್ಯಕ್ರಮವನ್ನು ಪಡೆದಿದ್ದೇವೆ. ಸುಮಾರು 25 ಲಕ್ಷ ರೂ. ಟೆಂಡರ್ ಪಡೆದು ಅವರು ಹೇಳಿದ ಎಲ್ಲ ಕೆಲಸಗಳನ್ನು ಮಾಡಿದ್ದೇವೆ. ಆದರೆ ಇದೂವರೆಗೂ ನಮಗೆ ಹಣ ಬಿಡುಗಡೆ ಮಾಡಿಲ್ಲ, ನಮಗೆ ಬರಬೇಕಿರುವ ಹಣವನ್ನು ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸಿದರೆ ನಮ್ಮ ಫೈಲ್ ಇಲ್ಲ ಎಂದು ಹೇಳುತ್ತಾರೆ. ನಮಗೆ ಆಗಿರುವ ಟೆಂಡರ್, ವರ್ಕ್ ಆರ್ಡರ್ ಎಲ್ಲ ದಾಖಲೆಗಳು ನಮ್ಮ ಬಳಿ ಇದೆ. ಈ ಸಂಬಂಧ ಮುಖ್ಯಮಂತ್ರಿಗೂ ದೂರು ನೀಡಲಾಗಿದೆ. ಆದರೆ ಇದುವರೆಗೂ ನಮಗೆ ಹಣ ಸಂದಾಯವಾಗಿಲ್ಲ ಎಂದು ತಿಳಿಸಿದರು.

ದಸರಾ ಮೆರವಣಿಗೆಗೆ ಗಾಂಧಿ ಸೇರಿದಂತೆ ವಿವಿಧ ಸ್ಥಬ್ದ ಚಿತ್ರಗಳನ್ನು ಮಾಡಿದ್ದೆವು. ಸುಮಾರು 5.50 ಲಕ್ಷ ರೂ. ಬಾಕಿ ಬರಬೇಕಿದ್ದು, ಪ್ರತಿ ದಿನ ಜಿಲ್ಲಾಧಿಕಾರಿಯ ಕಚೇರಿಗೆ ಅಲೆಯುವಂತಾಗಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರೂ ಏನು ಪ್ರಯೋಜನವಾಗಿಲ್ಲ, ಸಚಿವರು ಸಂಬಂಧ ಪಟ್ಟವರಿಗೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ಸೂಚಿಸಿದ್ದರೂ ಅಧಿಕಾರಿಗಳು ಮಾತ್ರ ನಯಾ ಪೈಸೆ ಬಿಡುಗಡೆ ಮಾಡದೆ ಸತಾಯಿಸುತ್ತಿದ್ದಾರೆ. ಸಾಲ ಸೋಲ ಮಾಡಿ ಸ್ತಬ್ಧ ಚಿತ್ರ ನಿರ್ಮಾಣ ಮಾಡಿದ್ದ ನಾವು ಎರಡು ವರ್ಷದಿಂದ ಬಡ್ಡಿ ಕಟ್ಟುವಂತಾಗಿದೆ.

- ಗೋಪಾಲ ಕೃಷ್ಣ, ಮೈಸೂರಿನ ಹಿರಿಯ ಕಲಾವಿದ

Writer - ನೇರಳೆ ಸತೀಶ್ ಕುಮಾರ್

contributor

Editor - ನೇರಳೆ ಸತೀಶ್ ಕುಮಾರ್

contributor

Similar News