ತಲೆಹೊರೆ ಕಾರ್ಮಿಕರ ಮೇಲೆ ಮತ್ತಷ್ಟು ಆರ್ಥಿಕ ಹೊರೆ
ಮಂಗಳೂರು, ಅ.1: ಮೀನುಗಾರಿಕೆ, ಅಡಿಕೆ ಸೇರಿದಂತೆ ವಾಣಿಜ್ಯ ವ್ಯವಹಾರಗಳಲ್ಲಿ ಸಕ್ರಿಯವಾಗಿರುವ ಬಂದರು ಜಿಲ್ಲೆ ದಕ್ಷಿಣ ಕನ್ನಡ ತಲೆಹೊರೆ ಕಾರ್ಮಿಕರ ಮೂಲಕ ಸಾವಿರಾರು ಕುಟುಂಬಗಳ ಬದುಕಿಗೆ ಆಶ್ರಯ ನೀಡಿದೆ. ಆದರೆ ಇತರ ಕ್ಷೇತ್ರಗಳಂತೆ ಕೊರೋನ 1ನೇ ಮತ್ತು 2ನೇ ಅಲೆಯ ಲಾಕ್‌ಡೌನ್ ಮಾತ್ರ ತಲೆಹೊರೆ (ಹಮಾಲಿ) ಕಾರ್ಮಿಕರನ್ನು ಹೈರಾಣಾಗಿಸಿದೆ. ಬಹುತೇಕವಾಗಿ ದಿನಕೂಲಿಯ ಆಧಾರದಲ್ಲಿ ದಿನರಾತ್ರಿಯೆನ್ನದೆ ತಲೆ ಮೇಲೆ ಹೊರೆ ಹೊತ್ತು ಹಲವು ವರ್ಷಗಳಿಂದ ತಮ್ಮ ಹಾಗೂ ತಮ್ಮ ಕುಟುಂಬವನ್ನು ಸಲಹುತ್ತಿದ್ದ ಹಮಾಲಿಗಳು ಲಾಕ್‌ಡೌನ್‌ನಿಂದಾಗಿ ತಲೆಯ ಮೇಲೆ ಸಾಲದ ಭಾರವನ್ನೂ ಹೊರುವಂತಾಗಿದೆ.
ದ.ಕ. ಜಿಲ್ಲೆಯಲ್ಲಿ ತಲೆಹೊರೆ ಕಾರ್ಮಿಕರ ಸಂಘ ಅಸ್ತಿತ್ವದಲ್ಲಿದ್ದರೂ ಈ ವಿಭಾಗದಲ್ಲಿ ಅಸಂಘಟಿತರಾಗಿ, ಸಂಘಟನೆಯಲ್ಲಿ ಗುರುತಿಸಿಕೊಳ್ಳದೆ, ಕಾರ್ಮಿಕ ಇಲಾಖೆಯ ಸೌಲಭ್ಯ ಗಳಿಂದ ವಂಚಿತರಾಗಿ ದುಡಿ ಯುತ್ತಿರುವವರೇ ಸಾವಿರಾರು ಸಂಖ್ಯೆ ಯಲ್ಲಿದ್ದಾರೆ. ಅಂದಾಜಿನ ಪ್ರಕಾರ ಸುಮಾರು 500ರಷ್ಟು ಮಂದಿ ಮಾತ್ರ ಸಂಘಟನೆಯಡಿ ಗುರುತಿಸಿಕೊಂಡಿದ್ದರೆ, ಜಿಲ್ಲೆಯಲ್ಲಿ ಸುಮಾರು 5,000ಕ್ಕೂ ಅಧಿಕ ಮಂದಿ ತಲೆಹೊರೆ ಕಾರ್ಮಿಕರಾಗಿ ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಹು ಮುಖ್ಯವಾಗಿ ಬಂದರಿನ ರಖಂ ಹಾಗೂ ಚಿಲ್ಲರೆ ದಿನಸಿ ಅಂಗಡಿಗಳಲ್ಲಿ, ಮಿಲ್‌ಗಳಲ್ಲಿ, ಅಡಿಕೆ ಗೋದಾಮು, ಸಿಮೆಂಟ್ ಕಾರ್ಖಾನೆ, ಮೀನುಗಾರಿಕಾ ಕ್ಷೇತ್ರದಲ್ಲಿ ತಲೆಹೊರೆ ಕಾರ್ಮಿಕರಾಗಿ ದುಡಿಯುವವರ ಸಂಖ್ಯೆ ಅಧಿಕವಾಗಿದೆ.
ಲಾಕ್‌ಡೌನ್ ಸಂದರ್ಭ ಹಮಾಲಿ ಗಳು ಕಾರ್ಯ ನಿರ್ವಹಿಸುತ್ತಿದ್ದ ಬಹು ತೇಕ ಕ್ಷೇತ್ರಗಳು ಕೂಡಾ ಸಂಪೂರ್ಣ ಸ್ತಬ್ಧವಾಗಿದ್ದವು. ಲಾಕ್‌ಡೌನ್ ವೇಳೆ ಮಂಗಳೂರು ಬಂದರು, ಧಕ್ಕೆ ಪ್ರದೇಶದಲ್ಲಿ ದಿನಸಿ, ತರಕಾರಿ ಹಣ್ಣು ಹಂಪಲುಗಳ ವ್ಯವಹಾರಕ್ಕಾಗಿ ತಲೆಹೊರೆ ಕಾರ್ಮಿಕರ ಅಗತ್ಯವಿತ್ತು. ಆದರೆ ಬಂದರು ಪ್ರದೇಶದಲ್ಲಿ ಹಮಾಲಿಗಳಾಗಿ ದುಡಿಯುವವರು ಬಹುತೇಕರು ವಿಟ್ಲ, ಕೊಣಾಜೆ, ಇರಾ, ಬಂಟ್ವಾಳ, ಸುರತ್ಕಲ್ ಸೇರಿದಂತೆ ದ.ಕ. ಜಿಲ್ಲೆಯ ಗ್ರಾಮೀಣ ಪ್ರದೇಶದವರು. ಇವರು ಪ್ರಯಾಣಕ್ಕಾಗಿ ಬಸ್ಸುಗಳನ್ನೇ ಅವಲಂಬಿಸಿದವರು. ಲಾಕ್‌ಡೌನ್ ವೇಳೆ ಬಸ್ಸು ಸಂಚಾರವೂ ಸ್ತಬ್ಧವಾಗಿದ್ದ ಕಾರಣ ತಲೆಹೊರೆ ಕಾರ್ಮಿಕರು ಕಂಗಾಲಾಗುವಂತೆ ಮಾಡಿತ್ತು. ಇತ್ತ ಬಂದರು ಪ್ರದೇಶದಲ್ಲಿ ಅಗತ್ಯ ಸೇವೆಗಳಿಗಾಗಿ ತಲೆ ಹೊರೆ ಕಾರ್ಮಿಕರಾಗಿ ಅಲ್ಲೇ ಲಭ್ಯವಿದ್ದ ಕೆಲ ಹೊರ ರಾಜ್ಯ, ಜಿಲ್ಲೆಗಳ ಕಟ್ಟಡ ಕಾರ್ಮಿಕರನ್ನು ಆಶ್ರಯಿಸಲಾಗಿತ್ತು.
‘‘ದ.ಕ. ಜಿಲ್ಲೆಯಲ್ಲಿ ಹಮಾಲಿಗಳು ಬಹುಮುಖ್ಯವಾಗಿ ಸುಪಾರಿ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಆದರೆ ಲಾಕ್‌ಡೌನ್ ಸಂದರ್ಭ ಅಗತ್ಯ ಸೇವೆಗೆ ಒಳಪಡದ ಸುಪಾರಿ ಕ್ಷೇತ್ರ ಸಂಪೂರ್ಣವಾಗಿ ಬಂದ್ ಆಗಿತ್ತು. ಬಡವರಾಗಿಯೇ ಗುರುತಿಸಿಕೊಂಡಿರುವ ತಲೆ ಹೊರೆ ಕಾರ್ಮಿಕರನ್ನು ಲಾಕ್‌ಡೌನ್ ಮತ್ತಷ್ಟು ಬಡತನಕ್ಕೆ ತಳ್ಳಿದೆ. ಬಡ್ಡಿಯಲ್ಲಿ ಹಣ ಪಡೆದು ಕೆಲವರು ಜೀವನೋಪಾಯ ಮಾಡಿದರೆ, ಮತ್ತೆ ಕೆಲವರು ತಮ್ಮ ಮನೆಯ ಪತ್ನಿ, ಮಕ್ಕಳ ಸಣ್ಣಪುಟ್ಟ ಚಿನ್ನವನ್ನು ಅಡವಿಟ್ಟು ಆ ಹಣದಲ್ಲಿ ಜೀವನ ಸಾಗಿಸಿದ ಪ್ರಸಂಗವೂ ಇದೆ. ಕೆವಲರಿಗೆ ಅವರು ಕೆಲಸ ಮಾಡುವ ಮಾಲಕರು ದಿನಸಿ ಕಿಟ್‌ಗಳನ್ನು ಒದಗಿಸುವ ಕೆಲಸ ಮಾಡಿದ್ದಾರೆ. ಆದರೆ ಅದಾಗಲೇ ಸಾಲದಲ್ಲೇ ಬದುಕುವ ಹಮಾಲಿ ಕಾರ್ಮಿಕರು ಕಳೆದ ಒಂದೂವರೆ ವರ್ಷದಿಂದ ಮತ್ತಷ್ಟು ಸಾಲದ ಹೊರೆಯನ್ನು ಹೊರುವಂತಾಗಿದೆ’’ ಎನ್ನುತ್ತಾರೆ ಹಮಾಲಿ ಕಾರ್ಮಿಕ ಸಂಘಟನೆಯ ಮುಖಂಡ ರಫೀಕ್ ಹರೇಕಳ.
ಹಮಾಲಿ ಕಾರ್ಮಿಕರ ದುಡಿಮೆಯ ಅವಧಿ ಅಂದಾಜು 20ರಿಂದ ಗರಿಷ್ಠ 55 ವರ್ಷ. ಶ್ರಮಜೀವಿಗಳಾಗಿಯೇ ದುಡಿಯುವ ಇವರು ತಲೆ ಮೇಲೆ ಮೂಟೆ ಹೊತ್ತು ಬೆನ್ನು ಬಾಗಿದರೆ, ಕೈಕಾಲು, ಬೆನ್ನು ನೋವು ಇಳಿ ವಯಸ್ಸಿನಲ್ಲಿ ಸಾಮಾನ್ಯವಾಗಿರುತ್ತದೆ. ಇಂತಹ ಶ್ರಮಜೀವಿಗಳಿಗೆ ಲಾಕ್‌ಡೌನ್ ಬರೆ ನೀಡಿರುವ ಸಂಕಷ್ಟ ವಿವರಿಸಲು ಅಸಾಧ್ಯ.
ಹಮಾಲಿ ಕಾರ್ಮಿಕರ ದುಡಿಮೆ ಕೈಕಾಲು ಗಟ್ಟಿ ಇದ್ದಾಗ ಮಾತ್ರ. ತಲೆ ತಲಾಂತರದಿಂದಲೂ ನಮ್ಮ ಈ ವರ್ಗ ಬೆನ್ನುಬಾಗಿಸಿಕೊಂಡೇ ದುಡಿಯುತ್ತಿದೆ. ನಮ್ಮ ಸಮಸ್ಯೆಗಳನ್ನು ಕೇಳುವವರೂ ಇಲ್ಲ, ಸ್ಪಂದಿಸುವವರೂ ಇಲ್ಲ. ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ನಾವು ಸಂಘಟನೆಯ ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳನ್ನು ಪದೇ ಪದೇ ಸಂಪರ್ಕಿಸಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿರುತ್ತೇವೆ. ಈ ನಡುವೆ ಈ ಲಾಕ್‌ಡೌನ್ ಮಾತ್ರ ನಮ್ಮ ಜನರನ್ನು ಬಹುತೇಕವಾಗಿ ಬೀದಿಪಾಲು ಮಾಡಿದೆ. ಸಾಕಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಬೇರೆ ದಾರಿಯಿಲ್ಲದೆ ಇತರ ದಾರಿ ಹಿಡಿದಿದ್ದಾರೆ. ಕಾರ್ಮಿಕ ಇಲಾಖೆಯಿಂದ ದೊರಕುವ ಸೌಲಭ್ಯವನ್ನು ಈ ಸಂದರ್ಭ ಅಧಿಕೃತವಾಗಿ ಗುರುತಿಸಿಕೊಂಡ ಕಾರ್ಮಿಕರಿಗೆ ತಲುಪಿಸುವ ಪ್ರಯತ್ನವನ್ನು ಮಾಡಲಾಗಿದೆ. ಆದರೆ ಹಮಾಲಿಗಳು ಹೆಚ್ಚಾಗಿ ಅಸಂಘಟಿತರಾಗಿಯೇ ಗುರುತಿಸಿಕೊಂಡಿರುವುದರಿಂದ ಲಾಕ್‌ಡೌನ್ ಅವಧಿಯಲ್ಲಿ ಹೆಚ್ಚಿನ ಸಂಕಷ್ಟವನ್ನು ಅನುಭವಿಸಬೇಕಾಯಿತು.
ವಿಲ್ಸನ್, ಮುಖಂಡರು, ತಲೆಹೊರೆ ಕಾರ್ಮಿಕರ ಸಂಘ