ಕವಿಗಳು ಕಂಡ ಗಾಂಧೀಜಿ

Update: 2021-10-01 18:33 GMT

ತನ್ನನ್ನು ತಾನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿಕೊಂಡ ಭಾರತದ ಗಾಂಧಿ - ಜಗತ್ತಿನಲ್ಲೆಲ್ಲೂ ಇರಲಾರ. ಆದ್ದರಿಂದಲೇ ಭಾರತದ ಗಾಂಧಿ ಪರಿವರ್ತನೆಯಾಗಿ ‘ಗಾಂಧಿ’ ಎನ್ನುವುದು ಜಗತ್ತಿನಲ್ಲೇ ಮಾನವೀಯತೆಯ, ಸ್ವಾತಂತ್ರ್ಯದ ಸಂಕೇತವಾಗಿರುವುದು ಕೂಡಾ ಸತ್ಯ. ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾದ ಗಾಂಧಿ, ಅಮೆರಿಕದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ - ಅಮೆರಿಕದ ಗಾಂಧಿ ಎಂದು ಕರೆಯಲ್ಪಡುವುದು ಕೂಡಾ ಗಾಂಧೀಜಿಯವರು ಹಿಂಸಾತ್ಮಕವಾದ ದಾರಿಯನ್ನು ತೊರೆದು ಜಗತ್ತಿಗೆ ಅಹಿಂಸೆಯ ಮೂಲಕ ಎಲ್ಲವನ್ನೂ ಸಾಧಿಸಬಹುದು ಎನ್ನುವುದಕ್ಕೆ ರೂಪಕವಾಗಿದ್ದಾರೆ.


ಸ್ವಾತಂತ್ರ್ಯೋತ್ತರದಲ್ಲಿ ಹುಟ್ಟಿ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಾರಂಭದ ವರ್ಷಗಳಲ್ಲಿ ಸುಮಾರು ಹದಿನಾರು ವರ್ಷ ನಾನು ಶಿಕ್ಷಣವನ್ನು ಪಡೆದ ದಿನಗಳು ಸೇರಿಕೊಂಡಂತೆ ಬುದ್ಧಿ ಬಂದ ದಿನಗಳಿಂದ ಮನೆಯಲ್ಲಿ ದೇವರ ಮಂಟಪದೊಳಗೆ ಬೊಚ್ಚು ಬಾಯಿಯ ಗಾಂಧಿ ಅಜ್ಜ ದೇವರಾಗಿಯೇ ಗೋಚರಿಸಿದ್ದ. ಅವನ ಭಾವಚಿತ್ರಕ್ಕೂ ಅಪ್ಪಹೂ ಇಡುತ್ತಿದ್ದರು. ಹೊರಗೆ ಪಡಸಾಲೆಯ ದೊಡ್ಡ ಬಾಗಿಲ ಮೇಲೆ ನಗುಮುಖದ ಗಾಂಧೀಜಿಯ ದೊಡ್ಡ ಭಾವಚಿತ್ರ ಬಂದವರನ್ನು ಸ್ವಾಗತಿಸುವಂತಿತ್ತು. ಆ ಭಾವಚಿತ್ರಕ್ಕೆ ಆಗಸ್ಟ್ 15, ಅಕ್ಟೋಬರ್ 2 ಮತ್ತು ಜನವರಿ 30ರಂದು ತ್ರಿವರ್ಣದಿಂದ ಕೂಡಿದ ಖಾದಿಯ ನೂಲಿನ ಹಾರಗಳನ್ನು ಬದಲಾಯಿಸುವ ಮೂಲಕ ಸ್ವಾತಂತ್ರ್ಯೋತ್ಸವದ ಹುತಾತ್ಮ ಗಾಂಧೀಜಿ, ಗಾಂಧಿ ಜಯಂತಿ ಹಾಗೂ ಗಾಂಧೀಜಿಯವರ ಪುಣ್ಯತಿಥಿಯನ್ನು ಅವರ ಜೀವಮಾನದ ಕೊನೆಯವರೆಗೂ ಆಚರಿಸುತ್ತಿದ್ದರು. ಇದಕ್ಕೆ ಕಾರಣ ಅವರು ತನ್ನ ವಿದ್ಯಾರ್ಥಿ ಜೀವನದಲ್ಲಿ ಮೊತ್ತಮೊದಲಿಗೆ ಮಂಗಳೂರಿನ ಅಂದಿನ ಕೇಂದ್ರ ಮೈದಾನ (ಇಂದಿನ ನೆಹರೂ ಮೈದಾನ)ದಲ್ಲಿ ತನ್ನ ಶಿಕ್ಷಕರು ಹಾಗೂ ಗೆಳೆಯರಿಬ್ಬರ ಜತೆಗೆ ಗಾಂಧೀಜಿಯವರನ್ನು ನೋಡಿದ್ದು, ಕೇಳಿದ್ದಾಗಿತ್ತು.

ಅಂದಿನಿಂದ ಸ್ವದೇಶಿ ಚಳವಳಿಯ ಹಿನ್ನೆಲೆಯಲ್ಲಿ ಸತ್ಯಾಗ್ರಹಿಯಾಗಿ ಚರಕದಲ್ಲಿ ನೂಲುವ ವ್ರತವನ್ನು ಕೈಗೊಂಡಿದ್ದರಂತೆ. ಜೀವನದ ಕೊನೆಯವರೆಗೂ ಖಾದೀಧಾರಿಗಳಾಗಿದ್ದವರು. ನಮ್ಮ ಮನೆಯಲ್ಲಿದ್ದ ಚರಕ ಹಾಗೂ ಈಗಲೂ ಇರುವ ಸತ್ಯಾಗ್ರಹಿಯ ಚೀಲ ಹಾಗೂ ಗಾಂಧಿ ಟೊಪ್ಪಿಗೆ ಎಂದೇ ಹೆಸರಾದ ಟೊಪ್ಪಿಗೆ ಕೇವಲ ಅಪ್ಪನ ನೆನಪಾಗಿ ಉಳಿಯದೆ ಅದು ಸತ್ಯಾಗ್ರಹಿ ಗಾಂಧೀಜಿಯನ್ನು ನನಗೆ ಸದಾ ನೆನಪಿಸುತ್ತದೆ. ಹೀಗೆ ಬಾಲ್ಯದಲ್ಲಿಯೇ ಗಾಂಧೀಜಿಯ ಬಗೆಗೆ ವಿಶೇಷವಾದ ಗೌರವ ಬೆಳೆಸಿಕೊಂಡಿದ್ದ ನನಗೆ ಅವರ ಕುರಿತಾದ ಪುಸ್ತಕಗಳನ್ನು ಓದಲೂ ಅಪ್ಪನ ಸಂಗ್ರಹದಲ್ಲಿ ಸಾಕಷ್ಟು ಇದ್ದುವು. ಆಗ ಅದು ಎಷ್ಟು ಅರ್ಥವಾಗಿತ್ತೋ ತಿಳಿಯದು. ಆದರೂ ಗಾಂಧೀಜಿಯೆಂದರೆ ಮನೆಯಲ್ಲಿ, ಶಾಲೆಯಲ್ಲಿ, ಸಮಾಜದಲ್ಲಿ ರಾಷ್ಟ್ರಪಿತನೆಂಬ ಗೌರವ ಇದ್ದುದು ನಮ್ಮ ಮನಸ್ಸಿನಲ್ಲಿ ಬೇರೂರಿತ್ತು. ಸುಮಾರು 16 ವರ್ಷಗಳ ನನ್ನ ಶಾಲಾ-ಕಾಲೇಜುಗಳ ದಿನಗಳಲ್ಲಿ ಇದಕ್ಕೆ ಎಂದೂ ಅಡ್ಡಿಯಾಗುವ ಭಾವನೆಗಳನ್ನು ಕೇಳಲಿಲ್ಲ, ನೋಡಿರಲಿಲ್ಲ. ಆದರೆ ಯಾವಾಗ ನಾನು 70ರ ದಶಕದಲ್ಲಿ ಕಾಲೇಜಲ್ಲಿ ಅಧ್ಯಾಪನಕ್ಕೆ ತೊಡಗಿದೆನೋ ಆಗ ಎದುರಾದ ಸಮಸ್ಯೆ ಬಹಳ ವಿಚಿತ್ರವಾಗಿತ್ತು. ವಿದ್ಯಾರ್ಥಿಗಳಲ್ಲಿ ಗುಣವಂತನಾಗಿ ಸಜ್ಜನನಾಗಿದ್ದ ಹುಡುಗರನ್ನು ಗಾಂಧಿ ಎನ್ನುವುದು, ಥರ್ಡ್‌ಕ್ಲಾಸಲ್ಲಿ ಪಾಸಾಗುವ ವಿದ್ಯಾರ್ಥಿಗಳನ್ನು ಗಾಂಧಿ ಕ್ಲಾಸಲ್ಲಿ ಪಾಸಾದ ಎಂದು ಹೇಳುವುದು ಸಾಮುದಾಯಿಕ ಕಾಯಿಲೆಯಾಗಿ ಹರಡುತ್ತಿತ್ತು ಎನ್ನುವುದನ್ನು ಈಗ ನೆನಪಿಸಿಕೊಳ್ಳುತ್ತಿದ್ದೇನೆ. ಇದಕ್ಕಿಂತ ನೇರವಾದ ಕಹಿ ಅನುಭವ ಎಂದರೆ ಗಾಂಧೀಜಿಯವರ ಜೀವನದ ಘಟನೆಗಳಿದ್ದ ನ್ಯಾಯಾಧೀಶರೂ ಲೇಖಕರೂ ಆದ ಕೋ. ಚೆನ್ನಬಸಪ್ಪರವರು ಬರೆದಿರುವಂತಹ ಪಠ್ಯಪುಸ್ತಕ ‘ಗಾಂಧೀ ಜೀವನದ ಕಿಡಿಗಳು’ ಎಂಬ ಪಠ್ಯವನ್ನು ತರಗತಿಯಲ್ಲಿ ಪಾಠ ಮಾಡಲು ಬಿಡದೇ ಇದ್ದ ವಿದ್ಯಾರ್ಥಿಯೊಬ್ಬನು ಸದಾ ಗಾಂಧಿ ವಿರೋಧಿಯಾಗಿ ನನ್ನ ನೆನಪಲ್ಲಿ ಇಂದಿಗೂ ಉಳಿದಿದ್ದಾನೆ. ಮಾತ್ರವಲ್ಲ, ಅವನು ಗಾಂಧೀಜಿಯ ಹತ್ಯೆಯ ಹಿಂದಿನ ಸಂಕೇತವಾಗಿಯೂ ನೆನಪಾಗುತ್ತಾನೆ. ಅವನು ಹಾಗಿರುವುದಕ್ಕೆ ಅವನೇ ಕೊಟ್ಟಿರುವ ಕಾರಣ ಗಾಂಧೀಜಿಯವರು ದೇಶ ಇಬ್ಭಾಗವಾಗುವುದಕ್ಕೆ ಕಾರಣರು. ಜೊತೆಗೆ ಅವರಿಗೆ ಮುಸ್ಲಿಮರೆಂದರೆ ವಿಶೇಷ ಪ್ರೀತಿ ಎಂದು ವಾದಿಸುತ್ತಿದ್ದ. ಆತನಿಗೆ ಮುಸ್ಲಿಮರೆಂದರೆ ಅದೇನೋ ಅಸಹನೆ. ಹಾಗಂತ ಅವನ ತರಗತಿಯಲ್ಲಿದ್ದ ಮುಸ್ಲಿಮ್ ವಿದ್ಯಾರ್ಥಿಗಳ ನಡುವೆ ಅಂತಹ ಅಸಹನೆ ಇದ್ದಂತೆ ಇರಲಿಲ್ಲ.

ಅಷ್ಟರಮಟ್ಟಿಗೆ ಶಿಕ್ಷಣ ಸಂಸ್ಥೆಯ ಸಭ್ಯತೆಯನ್ನು ರೂಢಿಸಿಕೊಂಡಿದ್ದ. ಹೀಗೆ ಸಮಾಜದಲ್ಲಿ ಅದರಲ್ಲೂ ವಿದ್ಯಾರ್ಥಿ ಸಮುದಾಯವೆಂಬ ಯುವಜನತೆಯಲ್ಲಿ ಹರಡುತ್ತಿದ್ದ ಕಾಯಿಲೆ ಇಂದು ಯಾವ ಸ್ಥಿತಿ ತಲಪಿದೆ ಎನ್ನುವುದು ದೇಶದ ಹಿನ್ನೆಲೆಯಲ್ಲಿ, ರಾಜಕೀಯ ಪಕ್ಷಗಳ ಧೋರಣೆಗಳಲ್ಲಿ, ಕ್ರಿಯೆಗಳಲ್ಲಿ ವ್ಯಕ್ತವಾಗುತ್ತಿರುವುದನ್ನು ನಾವೆಲ್ಲಾ ತಿಳಿದೇ ಇದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಯಾಕೆ ಮುಖ್ಯರಾಗುತ್ತಾರೆ ಎನ್ನುವುದನ್ನು ತಿಳಿಸಿಕೊಡುವ ಅನೇಕ ಪುಸ್ತಕಗಳು, ಅವರ ಸಮಕಾಲೀನರಿಂದ ಮಾತ್ರವಲ್ಲದೆ ಇಂದಿನವರೆಗೂ ಗಾಂಧೀಜಿಯ ಬಹುಮುಖ ವ್ಯಕ್ತಿತ್ವದ ಕುರಿತ ಕೃತಿಗಳ ಸಂಖ್ಯೆಯನ್ನು ಗಮನಿಸಿದರೆ ಅದು ವಿಶ್ವ ದಾಖಲೆಯೇ ಸರಿ. ನಮ್ಮ ದೇಶದ ಎಲ್ಲಾ ಭಾಷೆಗಳಲ್ಲಿ ಮಾತ್ರವಲ್ಲ ಜಗತ್ತಿನ ಬಹುತೇಕ ಭಾಷೆಗಳಲ್ಲಿ ಪ್ರಕಟವಾಗಿರುವುದು ಪ್ರಕಟವಾಗುತ್ತಿರುವುದನ್ನು ನೋಡಿದರೆ ಜಗತ್ತಿನಲ್ಲಿ ಹೀಗೆ ಚರ್ಚಿಸಲ್ಪಟ್ಟ, ವಿಮರ್ಶಿಸಲ್ಪಟ್ಟ ಒಬ್ಬ ವ್ಯಕ್ತಿ ಇನ್ನೊಬ್ಬನಿರಲಾರ ಎನ್ನುವುದೇ ವಿಶೇಷವಾದುದು. ಹಾಗೆಯೇ ತನ್ನನ್ನು ತಾನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿಕೊಂಡ ಭಾರತದ ಗಾಂಧಿ - ಜಗತ್ತಿನಲ್ಲೆಲ್ಲೂ ಇರಲಾರ. ಆದ್ದರಿಂದಲೇ ಭಾರತದ ಗಾಂಧಿ ಪರಿವರ್ತನೆಯಾಗಿ ‘ಗಾಂಧಿ’ ಎನ್ನುವುದು ಜಗತ್ತಿನಲ್ಲೇ ಮಾನವೀಯತೆಯ, ಸ್ವಾತಂತ್ರ್ಯದ ಸಂಕೇತವಾಗಿರುವುದು ಕೂಡಾ ಸತ್ಯ. ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾದ ಗಾಂಧಿ, ಅಮೆರಿಕದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ - ಅಮೆರಿಕದ ಗಾಂಧಿ ಎಂದು ಕರೆಯಲ್ಪಡುವುದು ಕೂಡಾ ಗಾಂಧೀಜಿಯವರು ಹಿಂಸಾತ್ಮಕವಾದ ದಾರಿಯನ್ನು ತೊರೆದು ಜಗತ್ತಿಗೆ ಅಹಿಂಸೆಯ ಮೂಲಕ ಎಲ್ಲವನ್ನೂ ಸಾಧಿಸಬಹುದು ಎನ್ನುವುದಕ್ಕೆ ರೂಪಕವಾಗಿದ್ದಾರೆ. ನಾನು ಕಲಿತ ಬೆಸೆಂಟ್ ಪ್ರೌಢ ಶಾಲೆಯಲ್ಲಿನ ಗಾಂಧಿ ಜಯಂತಿಯ ಆಚರಣೆ ಬಹುವಿಶಿಷ್ಟವಾದುದು. ಆ ನೆನಪಲ್ಲಿ ಪ್ರಾಂಶುಪಾಲೆಯಾದಾಗ ನಮ್ಮ ಹೈಸ್ಕೂಲು ವಿದ್ಯಾರ್ಥಿಗಳಿಗೆ ಅದೇ ರೀತಿ ಸರ್ವಧರ್ಮಗಳ ಪ್ರಾರ್ಥನೆಯೊಂದಿಗೆ ಸರ್ವೋದಯದ ದಿನವನ್ನಾಗಿ ಗಾಂಧಿ ಜಯಂತಿಯನ್ನು ಆಚರಿಸಿದರೆ, ಕಾಲೇಜಿನ ವಿದ್ಯಾರ್ಥಿಗಳಿಗೆ ಶ್ರಮದಾನದ ದಿನವನ್ನಾಗಿ ಆಚರಿಸಿದ ನೆನಪುಗಳನ್ನು ಇಂದು ಮೆಲುಕು ಹಾಕುವುದರಲ್ಲಿ ನಿಜವಾದ ಸಂತೃಪ್ತಿಯಿದೆ.

ಗಾಂಧೀಜಿಯವರ ಶತಮಾನೋತ್ಸವದ ಹಿನ್ನೆಲೆಯಲ್ಲಿ 1969ರಲ್ಲಿ ರಾಷ್ಟ್ರೀಯ ಸೇವಾಯೋಜನೆ(ಎನ್.ಎಸ್.ಎಸ್.ಯೋಜನೆ)ಯನ್ನು ಅಂದಿನ ಕೇಂದ್ರ ಸರಕಾರ ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳಲ್ಲಿ ಪ್ರಾರಂಭಿಸಿ ಯುವಜನತೆಯಲ್ಲಿ ‘ಶ್ರಮಯೇವ ಜಯತೇ’ ಎಂಬ ತಿಳಿವನ್ನು ಪ್ರಾಯೋಗಿಕವಾಗಿ ಅನುಷ್ಠಾನದಲ್ಲಿ ತಂದಿರುವುದು ಮತ್ತು ಅದರ ವೈಯಕ್ತಿಕ ಪ್ರಯೋಜನವನ್ನು ಸರಳವಾದ ಜೀವನಶೈಲಿಯೊಂದಿಗೆ ಉತ್ತಮ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಮುಖಿಗಳಾಗಿ ಬಾಳುತ್ತಿರುವ ಅನೇಕರನ್ನು ಕಂಡಿರುವ ಕಾಣುತ್ತಿರುವ ನನಗೆ ಗಾಂಧೀಜಿ ಇಂತಹವರ ಬದುಕಿನ ಮೂಲಕ ಚಿರಂಜೀವಿಯಾಗಿ ಕಾಣಿಸುತ್ತಿದ್ದಾರೆ. ಗಾಂಧೀಜಿಯವರ ಕುರಿತಾದ ಕವಿತೆಗಳನ್ನು ಪಾಠ ಮಾಡಿದ ಸಂದರ್ಭಗಳು ಅವಿಸ್ಮರಣೀಯ. ಆ ಕವಿತೆಗಳಲ್ಲಿ ಆಯಾಯ ಕವಿಗಳು ಗಾಂಧೀಜಿಯನ್ನು ಹೇಗೆಲ್ಲಾ ಭಾವಿಸಿದ್ದರು. ಅವೆಲ್ಲಾ ಸುಳ್ಳೇ? ಅಥವಾ ಗಾಂಧೀಜಿ ಎನ್ನುವ ವ್ಯಕ್ತಿತ್ವವು ಅವಮಾನಿಸಿದರೆ ಅವಮಾನಿತವಾಗುವುದೇ ಎಂಬ ಪ್ರಶ್ನೆ ನನ್ನಲ್ಲಿ ಮೂಡಿದಾಗ ಉತ್ತರವಾಗಿ ಜೀವನದ ಏರು ವಯಸ್ಸಿನಲ್ಲಿ ದಕ್ಷಿಣ ಆಫ್ರಿಕಾದಲ್ಲಿನ ಗಾಂಧೀಜಿಯವರ ಕಾರ್ಯವೈಖರಿ, ದೇಶಕ್ಕೆ ಮರಳಿದ ಬಳಿಕ ಅವರ ಹೋರಾಟದ ಬಹುವಿಧಾನಗಳು, ಅವರ ವೈಯಕ್ತಿಕ ಬದುಕಿನ ರೀತಿ ನೀತಿಗಳು ಆಶ್ಚರ್ಯ ಹುಟ್ಟಿಸುವಂತಹವುಗಳು ಎನ್ನುವುದನ್ನು ಅವರ ‘ಸತ್ಯಶೋಧನೆ’ ಎನ್ನುವ ಆತ್ಮಚರಿತ್ರೆಯೊಂದಿಗೆ ಸಾಕಷ್ಟು ವಿದ್ವಾಂಸರ ಕೃತಿಗಳಿಂದ ತಿಳಿದುಕೊಂಡಿದ್ದೇನೆ. ಅವರು ಅಸಾಮಾನ್ಯ ಮಾನವನೆಂಬುದಕ್ಕೆ ಅವರ ಬದುಕೇ ಸಾಕ್ಷಿ. ಅಂತೆಯೇ ಅವರು ಮನುಷ್ಯ ಮಾತ್ರರೇ ಹೊರತು ದೇವರಲ್ಲ ಎನ್ನುವುದನ್ನೂ ನಾವು ಒಪ್ಪಿಕೊಳ್ಳಬೇಕಾಗಿದೆ. ಯಾಕೆಂದರೆ ಯಾವೊಬ್ಬ ಮನುಷ್ಯನೂ ಪರಿಪೂರ್ಣನಲ್ಲ. ಆದರೆ ತನ್ನ ದೌರ್ಬಲ್ಯಗಳನ್ನು ಮೀರುವ ಪ್ರಯತ್ನಗಳನ್ನು ಮಾಡುತ್ತಾ, ತನ್ನ ತಪ್ಪುಗಳಿಗೆ ಸಾರ್ವಜನಿಕವಾಗಿ ಕ್ಷಮೆ ಕೋರುವ ಗುಣಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲದ ಸಾಮಾನ್ಯರಿಗೆ ತಮ್ಮ ದೌರ್ಬಲ್ಯಗಳ ಅರಿವೇ ಇರುವುದಿಲ್ಲ. ಮಾಡಿದ ತಪ್ಪುಗಳ ಬಗೆಗೆ ಪಶ್ಚಾತ್ತಾಪವೇ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜಕೀಯವಾಗಿ ಅವರ ಕೆಲವೊಂದು ನಿರ್ಧಾರಗಳು ಅನೇಕರಿಗೆ ಅಸಮಾಧಾನ, ಭಿನ್ನಾಭಿಪ್ರಾಯಗಳನ್ನು ಉಂಟು ಮಾಡಿರುವುದನ್ನು ತಿಳಿದ ಗಾಂಧೀಜಿ ಸ್ವಾತಂತ್ರ್ಯೋತ್ತರ ಭಾರತದ ಯಾವ ಪದವಿಯನ್ನೂ ಸ್ವೀಕರಿಸದೆ ಇರುವ ನಿರ್ಧಾರವನ್ನು ಬೇರೆ ಯಾರಿಂದಲಾದರೂ ತೆಗೆದುಕೊಳ್ಳುವುದು ಸಾಧ್ಯವಾಗಿತ್ತೇ? ಎನ್ನುವ ಪ್ರಶ್ನೆಗೆ ಉತ್ತರ ಎಲ್ಲಿದೆ. ಅವರು ಬಯಸಿದ ರಾಮಾಯಣದ ರಾಮ ಭರತರ ಮನೋಧರ್ಮದ್ದು. ಆ ಕಾರಣಗಳಿಂದ ಗಾಂಧೀಜಿ ಜಗತ್ತಿನ ಮಹಾನುಭಾವರಲ್ಲಿ ಒಬ್ಬರಾಗಿದ್ದಾರೆ.

ರಾಮರಾಜ್ಯದ ಕನಸು ನನಸಾಗದೆ ಇರುವ ವರ್ತಮಾನವನ್ನು ಅರಿತ ಗಾಂಧೀಜಿ ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ಸರ್ವೋದಯದ ಗ್ರಾಮರಾಜ್ಯವನ್ನು ಕಟ್ಟುವ ಕಾರ್ಯದಲ್ಲಿ ಮಾರ್ಗದರ್ಶಕರಾಗುತ್ತಾರೆ. ಗಾಂಧೀಜಿಯವರನ್ನು ಕಳೆದುಕೊಂಡ ಆಕಸ್ಮಿಕ ಕ್ಷಣಗಳು ನಮ್ಮ ಕವಿಗಳನ್ನು ತಲ್ಲಣಗೊಳಿಸಿದ ಬಗೆ, ಹಾಗೆಯೇ ಗಾಂಧೀಜಿಯನ್ನು ಕುರಿತು ಕವಿತೆಗಳನ್ನು ರಚಿಸಿದ ಕವಿಗಳ ಗಡಣವೇ ಕನ್ನಡದಲ್ಲಿ ಇದೆ. ‘ಇನ್ನಿನಿಸು ನೀ ಮಹಾತ್ಮಾ ಬದುಕಬೇಕಿತ್ತು’ ಎಂದ ರಾಷ್ಟ್ರಕವಿ ಗೋವಿಂದ ಪೈಗಳು ಮುಂದುವರಿದು... ‘ಸ್ವಾರ್ಥಪರರಾಗಿಹೆವು ದೇವರಿಲ್ಲೆಮಗಿಂದು, ಸೋದರತೆ ಇಲ್ಲ, ಮುಂದಿನದಿಲ್ಲ ಗೊಡವೆ! ಧರ್ಮಬಾಹಿರರೆಮ್ಮನೆತ್ತಲಿನ್ನಾರೆಂದು ತೋಚದೆ, ಮಹಾತ್ಮ, ನಿನಗಿಂತು ಮೊರೆಯಿಡುವೆ ಗಾಳಿ ಕಾಣದೆ ಬೀಸಿ ಉಸುರುಗೊಳಿಪಂತೆ, ತಾರ ನವಜೀವನವ ನಮ್ಮನುಳಿಪಂತೆ!’  ಎಂದು ಗಾಂಧೀಜಿಯ ಹತ್ಯೆಯ ದಾರುಣ ಸಂದರ್ಭದಲ್ಲಿ ಮೊರೆಯಿಡುತ್ತಾರೆ. ಆ ಮೊರೆ ಇಂದಿಗೂ ಪ್ರಸ್ತುತವೇ ಆಗಿದೆ. ವಿಕಟಕವಿ ಟಿ.ಪಿ. ಕೈಲಾಸಂರವರು ಇಂಗ್ಲಿಷಲ್ಲಿ ಬರೆದ ಕವಿತೆಯನ್ನು ಜಿ.ಪಿ. ರಾಜರತ್ನಂ ಹೀಗೆ ಅನುವಾದಿಸಿದ್ದಾರೆ. ‘ಒಂದು ಹಿಡಿಮೂಳೆ ಚಕ್ಕಳ ಅಷ್ಟೆ; ಅದಕೆ ಸುರಿ ಮೂರು ನಾಲ್ಕೋ ಚಮಚ ರಕ್ತ, ಮಾಂಸ, ಜೊತೆಗಿರಿಸು ಪಾಪವಂ ನೆರೆತೊರೆದ ಕಡಲಿನಾಳದ ಮನಸ, ನೆರೆಬಂದ ಕಡಲಿನೊಳ್ ಪ್ರೇಮವಂ ತುಂಬಿದೆದೆಯ; ಹಚ್ಚು-ಮೊರಕಿವಿಯೆರಡ, ಎರಡು ಪಿಳಿಪಿಳಿ ಕಣ್ಣ; ಹಾಲು ಹಸುಳೆಯ ಮಂದಹಾಸವನು ಲೇಪಿಸದಕೆ, ಒಳಗಿರಿಸು, ಜೇನು ನಗುವವೊಲಿನಿಯ ನಾಲಿಗೆಯ ಮೇಣ್ ಹಿಮಗಿರಿಯ ಮೀರಿಸಿ ನಿಮಿರ್ದ ಹಿರಿಯಾತ್ಮವ... ಅವನೆ ಕಾಣ್! ಲೋಕತಾರಕ! ನಮ್ಮ ಬಾಪೂ’ ಮೇರುಸದೃಶವಾದ ಆತ್ಮಬಲ ಹೊಂದಿದ ಗಾಂಧೀಜಿಯ ಶರೀರವೇನೂ ದಷ್ಟಪುಷ್ಟವಾದ ಅಂಗಸಾಧನೆಯದಲ್ಲ, ಜೀವನದ ಸಾಧನೆಗೆ ದೇಹಬಲಕ್ಕಿಂತ ಆತ್ಮಬಲವೇ ಮುಖ್ಯ ಎನ್ನುವುದಕ್ಕೆ ಸಂಕೇತವಾದ ಎಂಬಂತೆ ಕೈಲಾಸಂ ಅವರು ಚಿತ್ರಿಸಿರುವುದು ಅಪೂರ್ವವಾದುದು ಎನ್ನುತ್ತಾರೆ. ಡಿ.ವಿ.ಜಿ.ಯವರು ‘ಸತ್ಯಪಾಲನೆಯೊಂದ ಮನದೊಳಿರಿಸಿ ಕಾಯಕಷ್ಟವ ಸಹಿಸಿ ವೈರಿಗಣಮಂ ಕ್ಷಮಿಸಿ ಸರ್ವಸಮತೆಯ ಗಳಿಸಿ ಶಮವನರಸಿ ಸ್ವಾತ್ಮಶಿಕ್ಷಣಮೇ ಸ್ವರಾಜ್ಯಮೆನ್ನುವುದ ವಚಿಸಿ ದೇಶಸೇವೆಯನೀಶಸೇವೆಯೆನಿಸಿ॥ 

ಎಂದು ಪ್ರಶ್ನಿಸುತ್ತಾರೆ. ಆತ್ಮಶಿಕ್ಷಣವೇ ಸ್ವರಾಜ್ಯ ಎನ್ನುವುದಕ್ಕೆ ಗಾಂಧಿ ಬದುಕೇ ಸಾಕ್ಷಿ ಎನ್ನುವ ಡಿ.ವಿ.ಜಿ.ಯವರು ಧರ್ಮ ಮತ್ತು ಸಂಸ್ಕೃತಿ, ರಾಜಕಾರಣಗಳ ಬಗ್ಗೆ ಬರೆದ ಘನವಿದ್ವಾಂಸರು ಎನ್ನುವುದನ್ನು ಮರೆಯಬಾರದಲ್ಲ. ಸ್ವರಾಜ್ಯವೆಂದರೆ ತನ್ನ ಮನಸ್ಸಿಗೆ ಗುಲಾಮನಾಗದ ಆತ್ಮ ಶಿಕ್ಷಣ ಎನ್ನುವುದು ಬಹುಮುಖ್ಯ ವಿಚಾರ. ರಾಷ್ಟ್ರಕವಿ ಕುವೆಂಪುರವರು - ‘ಬಾಳು ಪಾವನವಾದುದೀತನಿಂ ಭೂಮಿಯಲಿ! ಓ ಮಹಾತ್ಮನೆ, ನಿನ್ನ ಸಾನ್ನಿಧ್ಯತೀರ್ಥದಲಿ ಮಾನವನ ಮೋಹಮದಮಾತ್ಸರ್ಯಗಳು ಮಿಂದು ಪ್ರೇಮದಿ ಪುನೀತವಾಗಿಹವು! ಸುಮೂಹರ್ತದಲಿ ಭಾರತಾಂಬೆಯ ಸಿರಿವಸಿರಿನಿಂದಲೈ ತಂದು ಧರ್ಮದಲಿ ನೆಚ್ಚು ಗೆಡುತಿದ್ದೆಮಗೆ ನೀನಿತ್ತೆ, ಪ್ರಚ್ಛನ್ನ ಕಲ್ಕಿಯೇ ದೃಢಭಕ್ತಿಯನ್ನು ಮತ್ತೆ!’ ಧರ್ಮದಿಂದ ದೂರ ಸರಿಯುತ್ತಿದ್ದ ಜನತೆಗೆ ನಿಜವಾದ ಧರ್ಮದ ಅರಿವನ್ನು ಬದುಕಿ ತೋರಿದ ಪ್ರಚ್ಛನ್ನ ಕಲ್ಕಿ ಎಂದು ಸಾರಿದ್ದಾರೆ. ಸನಾತನಿಗಳು ಬುದ್ಧನನ್ನು ಪ್ರಚ್ಛನ್ನ ಬುದ್ಧನೆಂದು ಋಣಾತ್ಮಕವಾಗಿ ಭಾವಿಸಿದರೂ ಆತ ಮಾನವ ಧರ್ಮವನ್ನು ಪರಿಶುದ್ಧಗೊಳಿಸಿದಾತನಾದರೆ ಗಾಂಧೀಜಿಯು ಪ್ರಚ್ಛನ್ನ ಕಲ್ಕಿಯಾಗಿ ಧರ್ಮಕ್ಕೆ ಹೊಸ ವ್ಯಾಖ್ಯಾನ ಬರೆದ ಅವತಾರ ಪುರುಷ ಎಂದಿರುವುದು ಗಾಂಧೀಜಿಯನ್ನು ಕುರಿತಾದ ಕಲಿಪುರುಷ ಎನ್ನುವ ಟೀಕೆಗೆ ಉತ್ತರವಾದಂತೆ ಇದೆ. ಸರ್ವಸಮತೆಯ ಧರ್ಮದ ಬಗೆಗೆ ಮತ್ತೆ ದೃಢವಾಗುವಂತೆ ಮಾಡಿದ ಗಾಂಧೀಜಿ ಈ ಭಾರತದಲ್ಲೇ ಹುಟ್ಟಿರುವುದು ನಮ್ಮ ಭಾಗ್ಯ ಎನ್ನುತ್ತಾರೆ. ವರಕವಿ ಬೇಂದ್ರೆಯವರು ‘ಅದ್ಭುತವು ಅದ್ಭುತವು ವಿಶ್ವಕದ್ಭುತವು ಸತ್ಯಶರಣನ ಸಂದ ಮರಣದದ್ಭುತವು ಮಣಿಹ ಸಂದಿತು; ದೇಹ ಕೆಳಗೆ ಇಟ್ಟ; ಧ್ಯೇಯವನೆ ನಕ್ಷತ್ರ ಮಾಡಿಬಿಟ್ಟ; ಎಂಥ ನಗು! ಎಂಥ ಮಗು! ಎಂಥ ಮನುಜ! ನಮ್ಮಂತೆ ಕಂಡರೂ ದೇವತನುಜ ಗಾಂಧಿಯೆಂಬುದು ಹೆಸರೆ? ಮುಪ್ಪಿನಾಕೃತಿಯೆ? ಗಾಂಧಿಯೆಂಬುದು ನಿಖರ ದಿವ್ಯ ಕೃತಿಯೆ! ಕಡ್ಡಿಯಲುಗದು ಅಕಸ್ಮಾತ್ತಿನಿಂದ ಗುಡ್ಡ ಉರುಳಿತೇನು ಗುಂಡಿನಿಂದ?’  ಎಂದು ಪ್ರಶ್ನಿಸುವ ಬೇಂದ್ರೆಯವರು ಗಾಂಧಿ ಎನ್ನುವ ವ್ಯಕ್ತಿಯಲ್ಲ ಕೃತಿ ಎನ್ನುವುದು ಈ ಜಗತ್ತಿನಿಂದ ಎಂದೂ ಅಗಲುವುದಿಲ್ಲ ಎನ್ನುವುದು ಐತಿಹಾಸಿಕ ಸತ್ಯ. ತೀನಂಶ್ರೀಯವರು ‘ಇಳೆಗಹಿಂಸೆಯ ಪರಮ ತತ್ವವನು ತೋಳೆತ್ತಿ ಉಸಿರ ಬಲವುಳ್ಳನಕ ಸಾರಿದ ಗುರು; ದರ್ಪವನು ಧೈರ್ಯದಲಿ, ಶಸ್ತ್ರವನು ಸಹನೆಯಲಿ, ಶಠತೆಯನು ಸತ್ಯದಲಿ ಜಯಿಸಿದ ಕಲಿ...; ನೆಲದ ನಡೆವಳಿಕೆಯಲಿ ನಾಕದೌನ್ನತ್ಯವನು ಮೇಳವಿಸಿ ತೋರಿದ ಪವಾಡಪುರುಷ; ಪ್ರೇಮ ಸಂಸ್ಥಾಪನೆಯ ವಿಶ್ವಜಿದ್ಯಜ್ಞದಲಿ ಪ್ರಾಣ ಪೂರ್ಣಾಹುತಿಯನಿತ್ತ ದಾನಿ; ಭಾರತದ ಭಾಗ್ಯರವಿ; ದೀನದಲಿತರ ರಕ್ಷೆ; ವಿಮಲ ಧರ್ಮದ ವಾಣಿ; ಜನತೆಯಂತಃಸಾಕ್ಷಿ; ಸರ್ವೋದಯದ ಸೂತ್ರಧಾರ ಗಾಂಧಿ!’ ಎಂದು ಹೇಳುತ್ತಾ ಸರ್ವರ ಏಳಿಗೆಯ ಸೂತ್ರಧಾರ ಎನ್ನುವುದು ಸಾರ್ವಕಾಲಿಕ ಸತ್ಯ ಎನ್ನುವ ಅರಿವು ನಮಗಿಂದು ಆಗಬೇಕಾಗಿದೆ.

ನವ್ಯ ಕಾವ್ಯ ನೇತಾರರಾದ ಗೋಪಾಲಕೃಷ್ಣ ಅಡಿಗರು ‘ಗಾಂಧಿ, ಗಾಂಧಿ.. ಗಾಂಧಿ, ಗಾಂಧಿ, ಗಾಂಧಿ’ ಎಂದು ಗಾಂಧಿಯ ನಾಮವನ್ನು ಸಾರುತ್ತಾ ಕನವರಿಸುತ್ತೇನೆ ಎನ್ನುತ್ತಾರೆ ತನ್ನ ಸುದೀರ್ಘವಾದ ‘ಗಾಂಧಿ’ ಎನ್ನುವ ಕವನದಲ್ಲಿ. ‘ಭಾರತದ ತಂದೆ ಗಾಂಧಿ’ ಎನ್ನುವ ಕವಿತೆಯಲ್ಲಿ ಅಡಿಗರು ಹೀಗನ್ನುತ್ತಾರೆ. ‘ನಿನ್ನನರಿತು ನೋಡಲೂ ನಿನ್ನ ಕುರಿತು ಹಾಡಲೂ ಕೋಟಿಕೋಟಿ ಜನದ ಮನದ ವ್ಯಥೆಯನೆಲ್ಲ ತೋಡಲೂ ಅಯ್ಯೋ, ನಾ ಅಪಾತ್ರ, ತಂದೆ; ಬರಡು ನೆಲದ ಬೀಜ ನಾನು, ಮರದ ಫಲದ ವರವ ಕನಸು ಕಾಣುವಂಥ ದೀನನು. ಶಕ್ತಿಹೀನ, ಭಕ್ತಿಹೀನ, ಮಹಾಮ್ಲಾನನು. ನಮ್ಮಂತೆಯೆ ಬಾಳಿ ಕೂಡ ನಮ್ಮ ಗುರಿಯ ಗಿರಿಯ ಕೋಡ ಏರಿ ನಿಂತೆ ನೀನು ಹೆಜ್ಜೆ ಹೆಜ್ಜೆ ಮೇಲಕೇರುತ; ಶಿಖರದಲ್ಲಿ ನಿಂತು ಕೂಡ ಮರೆಯಲಿಲ್ಲ ನಮ್ಮನು, ತೊರೆಹರಿಯಿತು ನಿನ್ನ ಹೃದಯ ತೊಳೆಯಲೆಂದು ನಮ್ಮನು; ತೋಳನೆರಡನೆತ್ತಿ ನೀನು ಮೊರೆದೆ ದಿಕ್ಕುದಿಕ್ಕಿಗೆ; ‘ಧರ್ಮದಿಂದ ಅರ್ಥ, ಕಾಮ; ಶರಣಾಗಿರಿ ಧರ್ಮಕೆ; ಬದುಕಿಸುವುದ ಕಲಿತು ಬದುಕಿ, ಎದೆ ಎದೆಯೊಳು ಒಲವ ಬೆದಕಿ; ಕಟ್ಟಿಕೊಳ್ಳಬೇಡಿ ನಿಮ್ಮ ನಡುವೆ ಸಣ್ಣ ಗೋಡೆಯ, ಕಿತ್ತೊಗೆಯಿರಿ ಮನುಪುತ್ರರೆ, ನಿಮ್ಮ ನಖವ, ದಾಡೆಯ; ಹಿಡಿದು ನಡೆಯಿರಣ್ಣ ನೀವು ಸೋದರತೆಯ ಹಾದಿಯ’ - ಎಂದೆ ನೀನು; ಅಂತೆ ನಡೆದೆ; ನಡೆಯು ನುಡಿಯ ಮೀರಿತು; ನಮ್ಮ ಕಣಸುಹಾಳೆಗಳಲಿ ನಿನ್ನ ಮಾತು ಸೇರಿತು.... ‘ಅಳಿದರೇನು, ಉಳಿದರೇನು ನಮ್ಮಂಥ ಕನಿಷ್ಠರು? ನರಲೋಕದ ನತದೃಷ್ಟರು, ಶ್ರೇಯಃಪಥಭ್ರಷ್ಟರು? ನೀನು - ಎಲ್ಲೊ ಒಮ್ಮೆ ನೆಲದ ತಪದ ಪುಣ್ಯಪಾಕಕೆ ಮೊಳೆತು ಬರುವ ದೇವಬೀಜ; ಯುಗಯುಗಗಳ ಶೋಕಕೆ ಬರುವ ಶಾಂತಿ ತೇಜ; ಬುದ್ಧಕ್ರಿಸ್ತ ರತ್ನಮಾಲೆಗೆ ಸೇರಿದಂಥ ರತ್ನರಾಜ; ಇನ್ನು ಇಂಥದೆಲ್ಲಿದೆ, ನಮ್ಮ ತಂದೆ, ನಮ್ಮ ಗಾಂಧಿ, ನಮ್ಮ ಬಂಧುವಲ್ಲವೆ?... ಏಳುವವರೆ ಏಳಿ; ಎದ್ದು ಹಿಡಿಯಿರವನ ಪಥವನು ಬಾಳುವವರೆ, ಇದ್ದು ಬಾಳಿ ಅವನ ವೀರವ್ರತವನು ಏಳುವವರೆ, ಏರಿ ಅವನು ಏರಿದಂಥ ರಥವನು ಮುಟ್ಟುವವರೆ, ಮುಟ್ಟಿ ಅವನು ತೋರಿದಂಥ ಗುರಿಯನು ಪಡೆಯುವವರೆ, ಪಡೆಯಿರವನ ಆತ್ಮದಮರ ಸಿರಿಯನು ಅವನ ದಾರಿಯೊಂದೆ ದಾರಿ; ಉಳಿದುದೆಲ್ಲ ಹಳುವವು; ಅವನ ಗುರಿಯೆ ಗುರಿಯು, ಉಳಿದುದೆಲ್ಲ ವಿಫಲ ಚಪಲವು!’ 

ಇಂದು ದೇಶದ ಪ್ರಜಾಪ್ರಭುತ್ವವಿರಲಿ ಸರ್ವೋದಯದ ಸಮಬಾಳು ಇರಲಿ ಅಥವಾ ಮಾನವ ಧರ್ಮದ ಉನ್ನತಿಕೆಯಿರಲಿ ಇವುಗಳಿಗೆ ಗಾಂಧೀಜಿಯ ಆತ್ಮದ ಸಿರಿಯೇ ದಾರಿಯಾಗಿದೆ ಎನ್ನುವುದನ್ನು ಅಡಿಗರು ದೃಢವಾಗಿ ನಂಬಿ ಸಾರಿದ್ದಾರೆ. ಜತೆಗೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಗಾಂಧಿಯನ್ನು ಕುರಿತು ‘ನೀನೊಬ್ಬ ವಿಚಿತ್ರ ಮನುಷ್ಯ ಎಲ್ಲವನ್ನೂ ಅಂಗಡಿ ತೆರೆದು ಬೆಲೆ ಕಟ್ಟ ಬರದ ಈ ಮಂದಿಯ ಮುಂದೆ ಹರಾಜಿಗಿಟ್ಟೆ... ಎಲ್ಲವನ್ನೂ ಕಟ್ಟಿಕೊಂಡೆ, ಆದರೂ ಏಕಾಂಗಿಯಾಗಿಯೇ ತೋರಿದೆ. ನೋಡುವುದಕ್ಕೆ ಏಕಾಂಗಿಯಾದರೂ ಜನಗಣಮನ ಅಧಿನಾಯಕನಾಗಿ ನಡೆದೆ’ 

ಎನ್ನುತ್ತ ಗಾಂಧೀಜಿಯ ಬದುಕು ತೆರೆದ ಬದುಕು ಅಲ್ಲಿ ಆತ್ಮವಂಚನೆಗೆ ಅವಕಾಶವಿಲ್ಲ ಎನ್ನುವುದನ್ನು ಸಾರುತ್ತ ನಾವು ಎಂತಹ ಆತ್ಮ ವಂಚಕರು ಎನ್ನುವುದನ್ನು ನಿರ್ವಂಚನೆಯಿಂದ ವಿವರಿಸುವ ಕವಿ ಭಾರತದ ಜನಗಣದ ಮನೋಭೂಮಿಕೆಯ ಅಧಿನಾಯಕ ಎಂದು ಕರೆದಿದ್ದಾರೆ. ನವ್ಯಕವಿ ಗಂಗಾಧರ ಚಿತ್ತಾಲರು ‘ಮಹಾತ್ಮ’ ಎನ್ನುವ ಕವಿತೆಯಲ್ಲಿ ‘ನಿನ್ನ ನೆತ್ತರು ನೆಲಕ್ಕೆ ಚೆಲ್ಲಿದಂದು ಮಣ್ಣು ನಡುಗಿತು, ಹಗಲ ಹೂ ಬಾಡಿತು. ನರನು ಕೆರಳುವ ಹುಂಬ, ಬಾಳು ಯೂಪಸ್ತಂಭ ಉತ್ತಮರ ಬಲಿ ಇಲ್ಲಿ - ಬಾನಾಡಿತು. ಮನುಕುಲದ ರಕ್ತಮಯ ಇತಿಹಾಸ ಕೂಗಿತ್ತು’ - ಎಂದು ಮನುಕುಲದ ದಾರುಣ ಇತಿಹಾಸವನ್ನು ಅನುಭವಿಸುತ್ತ ಈ ನೆಲ ನಂದನವನವಾಗಲು ಏನು ಬೇಕು ಎನ್ನುವುದನ್ನು ಹೀಗೆ ಹೇಳುತ್ತಾರೆ. ‘ತಿಳಿವು ತುಂಬಿದ ಕಣ್ಣು, ಒಲವು ತುಂಬಿದ ಎದೆಯು ಛಲವನರಿಯದ ಬದುಕು-ಇಷ್ಟೆ ಸಾಕು.’ 

ಎನ್ನುವ ಕವಿಯ ಈ ಸರಳ ಸೂತ್ರವನ್ನು ಮರೆತ ಮನುಕುಲವು ಹಾಲಾಹಲದ ಕೋಲಾಹಲದಲ್ಲಿ ಮುಳುಗಿ ಮಗ್ನವಾಗಿದೆ. ಗಾಂಧೀಜಿಯ ಕಾಲದಲ್ಲೂ ವರ್ತಮಾನದಲ್ಲೂ ಗಾಂಧೀಜಿಯ ದಾರಿ ಶಾಂತಿ ಸಮರಸದಾಗಿದ್ದು ಬತ್ತಿದ ಎದೆಗಳಲ್ಲಿಯೂ ತಿಳಿವಿನ ತೇವವನ್ನು ಚಿಮ್ಮಿಸಿತ್ತು ಎನ್ನುವ ಕವಿ, ಗಾಂಧಿ ಎನ್ನುವುದು �

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News