ಜಾತಿ ಕಳವಾಗುತ್ತಿದೆ!

Update: 2021-10-02 19:30 GMT

ಇಂದಿಗೂ ಅಲೆಮಾರಿ ಬುಡಕಟ್ಟು ವರ್ಗಗಳಲ್ಲಿ ಮತ್ತು ದಲಿತ ಜಾತಿಗಳಲ್ಲಿ ಬೆಳಕಿಗೆ ಬಾರದ ಸಾಕಷ್ಟು ಸಣ್ಣ ಪುಟ್ಟ ಜಾತಿಗಳು ನಿಧಾನವಾಗಿ ಕಣ್ಮರೆ ಆಗುತ್ತಿವೆ ಅಥವಾ ಅದನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗುತ್ತಿದೆ. ಶೈಕ್ಷಣಿಕವಾಗಿ ಅತಿಯಾಗಿ ಹಿಂದುಳಿದಿರುವ ಮತ್ತು ಜೀವನವಿಡೀ ಅಲೆಮಾರಿಗಳಾಗಿ ಬದುಕು ಸವೆಸುತ್ತಿರುವ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳಿಗೆ ತಮ್ಮ ಮೂಗಿನ ಕೆಳಗೆ ಬದಲಾವಣೆ ನಡೆಯುತ್ತಿರುವುದು ಗಮನಕ್ಕೆ ಬರುತ್ತಿಲ್ಲ. ಜಾತಿಗಳೇ ಕಣ್ಮರೆಯಾದರೆ ದೂರು ನೀಡುವುದು ಯಾರಿಗೆ?



ಇತ್ತೀಚೆಗೆ ಕೆಲವು ಜಾತಿಗಳು ಅಲ್ಲಲ್ಲಿ ಕಳ್ಳತನವಾಗಿರುವುದು ಬೆಳಕಿಗೆ ಬರುತ್ತಿದೆ. ಕೆಲವು ಅಧ್ಯಯನಗಳ ಪ್ರಕಾರ ನಮ್ಮ ದೇಶದಲ್ಲಿ ಅಂದಾಜು 3,800 ಜಾತಿ/ವರ್ಗಗಳಿವೆ. ಆದರೆ ಯಾರೊಬ್ಬರಿಗೂ ಎಲ್ಲಾ ಜಾತಿ/ವರ್ಗಗಳ ಹೆಸರು ಖಂಡಿತವಾಗಲೂ ನೆನಪಿರುವುದಿಲ.್ಲ ಕೆಲವೊಂದು ಜಾತಿಗಳ ಹೆಸರು ಕೇಳಿದರೆ ಆಶ್ಚರ್ಯವಾಗುತ್ತದೆ. ಏಕೆಂದರೆ ಅದುವರೆಗೆ ನಾವು ಜೀವಮಾನದಲ್ಲೇ ಆ ಜಾತಿಗಳ ಹೆಸರನ್ನು ಕೇಳಿರುವುದಿಲ್ಲ. ನಮ್ಮ ಭಾರತದ ಜಾತಿ ಶ್ರೇಣೀಕೃತ ವ್ಯವಸ್ಥೆಯಲ್ಲಿ ಒಬ್ಬನ ಹೆಗಲ ಮೇಲೆ ಒಬ್ಬ ಕುಳಿತಿದ್ದಾನೆ. ಶೂದ್ರನ ಕೆಳಗೆ ಒಬ್ಬ ಅಸ್ಪಶ್ಯನಿದ್ದಾನೆ. ಅವನ ಕೆಳಗೆ ಅಸ್ಪಶ್ಯರಲ್ಲಿ ಅಸ್ಪಶ್ಯರಾದ ಅಲ್ಪಸಂಖ್ಯಾತ ದಲಿತರಿದ್ದಾರೆ. ಅದಕ್ಕಿಂತ ಚಿಂತಾಜನಕ ಪರಿಸ್ಥಿತಿಯಲ್ಲಿ ಸಮಾಜದ ಕಟ್ಟಕಡೆಯ ಪ್ರತ್ಯೇಕ ವಿಭಾಗದಲ್ಲಿ ನಮ್ಮ ಅಲೆಮಾರಿ ಬುಡಕಟ್ಟು ಜನಾಂಗಗಳು ಇವೆ. ಈ ಪ್ರತಿ ಒಂದು ಜಾತಿ ವ್ಯವಸ್ಥೆಯಲ್ಲಿ ಪುನಃ ಉಪ ಪಂಗಡಗಳು, ಉಪಜಾತಿಗಳು, ಒಳಜಾತಿಗಳು ಕಾಣಿಸಿಕೊಳ್ಳುತ್ತವೆ. ಜಾತಿಯ ಸಾಗರದಲ್ಲಿ ಅದೆಷ್ಟೋ ಜಾತಿಗಳು ಕಾಲನ ಹೊಡೆತಕ್ಕೆ ಸಿಕ್ಕಿ ಮಾಯವಾಗಿವೆ. ಎಷ್ಟೋ ಜಾತಿಗಳು ಹೊಸದಾಗಿ ಹುಟ್ಟಿಕೊಳ್ಳುತ್ತಿವೆ. ಇನ್ನು ಕೆಲವೊಮ್ಮೆ ಬಲಿಷ್ಠ ಜಾತಿಗಳು ದುರ್ಬಲ ಜಾತಿಗಳ ಹೆಸರನ್ನು ಜಾಣ್ಮೆಯಿಂದ ಮಾಯ ಮಾಡಿ ಸರಕಾರದ ಜಾತಿವಾರು ಪಟ್ಟಿಗಳನ್ನು ಪ್ರಶ್ನಿಸುವಂತೆ ಮಾಡುತ್ತಿದ್ದಾರೆ. ಈ ರೀತಿ ಜಾತಿಗಳು ರಾತ್ರೋರಾತ್ರಿ ಮಾಯವಾಗಲು ಕಾರಣ ಹುಡುಕುತ್ತ ಹೋದಂತೆ ಹಲವಾರು ಗಾಬರಿಗೊಳಿಸುವ ಅಂಶಗಳು ಬೆಳಕಿಗೆ ಬರುತ್ತವೆ. ಇದಕ್ಕೆ ಮುಖ್ಯ ಕಾರಣ ಮೀಸಲಾತಿ ಸರಕಾರದ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುವುದು. ಕೆಲವು ಬಲಿಷ್ಠ ಜಾತಿಗಳು ಸರಕಾರದ ಹತ್ತು ಹಲವು ಯೋಜನೆಗಳನ್ನು ಕಬಳಿಸಲು ಈ ರೀತಿ ಮಾಡುತ್ತಿವೆ ಎಂಬ ಆರೋಪವಿದೆ. ಯಾವ ಜಾತಿ ಮತ್ತು ಪಂಗಡಗಳು ತೀರ ದುರ್ಬಲವಾಗಿರುತ್ತವೋ ಅಂತಹ ಜಾತಿಗಳನ್ನು ಕದಿಯುವುದು ಅಥವಾ ಆ ಜಾತಿಯ ಹೆಸರನ್ನು ಸೂಕ್ಷ್ಮವಾಗಿ ಬದಲಾಯಿಸಿ ಪ್ರಮಾಣ ಪತ್ರ ಪಡೆದುಕೊಳ್ಳುವುದು ಇದೆಲ್ಲವು ಇಂದು ಎಗ್ಗಿಲ್ಲದೆ ನಡೆಯುತ್ತಿದೆ.

1980ರ ನಂತರ ನಮ್ಮ ಭಾರತೀಯ ಜಾತಿ ವ್ಯವಸ್ಥೆಯಲ್ಲಿ ಕೆಲವೊಂದು ಸೂಕ್ಷ್ಮ ರೀತಿಯ ಬದಲಾವಣೆಗಳು ಕಂಡೂ ಕಾಣದಂತೆ ಗುಪ್ತಗಾಮಿನಿಯಂತೆ ನಮ್ಮ ಸಮಾಜದಲ್ಲಿ ಪ್ರವಹಿಸುತ್ತಿವೆ. ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಲು ಹುಟ್ಟಿಕೊಂಡ ಕೆಲವೊಂದು ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು ಕೊನೆ ಕೊನೆಗೆ ಜಾತಿಯ ಸಂಕೋಲೆಯಲ್ಲಿ ತಾವೇ ಸಿಲುಕಿಕೊಂಡು ಕೆಲವು ಮೇಲ್ವರ್ಗದ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಇನ್ನೊಂದು ರೀತಿಯಲ್ಲಿ ಜಾತಿ ವ್ಯವಸ್ಥೆಯನ್ನು ಪ್ರೋತ್ಸಾಹಿಸಿ ದುರ್ಬಲ ವರ್ಗವನ್ನು ತುಳಿಯಲು ನಿಂತಿವೆ. ಸೂಕ್ಷ್ಮವಾಗಿ ಇದನ್ನು ಗಮನಿಸುತ್ತಾ ಹೋದರೆ ಇಂತಹ ಹೊಸದೊಂದು ವರ್ಗ ಅಂತಿಮವಾಗಿ ದುರ್ಬಲ ವರ್ಗದವರ ಶೋಷಣೆ ಮಾಡುತ್ತಾ ತಮಗೆ ತಾವೇ ಒಂದು ಸಾಮಾಜಿಕ ವ್ಯವಸ್ಥೆಯನ್ನು ಸೃಷ್ಟಿಸಿಕೊಳ್ಳುತ್ತಾ ನಡೆಯುತ್ತಿದೆಯೇ ಎಂಬ ಶಂಕೆ ಬಲವಾಗುತ್ತಿದೆ. ಬಹುಶಃ ಇಂತಹ ವಿಲಕ್ಷಣ, ವಿಕೃತಿ ಮತ್ತು ವಿಸ್ಮಯಕಾರಿ ಬದಲಾವಣೆಗಳಿಂದ ಶತಮಾನಗಳವರೆಗೆ ಕರುಳಬಳ್ಳಿಗಳ ರೀತಿಯಲ್ಲಿದ್ದ ಕೆಲವೊಂದು ಜಾತಿಗಳು ಪರಸ್ಪರ ದೂರವಾಗಿ ವಿಭಿನ್ನ ಹೆಸರುಗಳಲ್ಲಿ ಸಮಾಜದಲ್ಲಿ ಹೊಸದಾಗಿ ಇನ್ನಷ್ಟು ಜಾತಿಗಳ ಸೃಷ್ಟಿಗೆ ಕಾರಣವಾಗುತ್ತಿವೆ. ನಮ್ಮ ದೇಶದಲ್ಲಿ 1882ರಲ್ಲಿ ಮೊದಲ ಬಾರಿ ವೈಜ್ಞಾನಿಕವಾಗಿ ಜನಗಣತಿ ನಡೆದು ಇದು ನಮಗೆ ಒಂದು ಹಂತದವರೆಗೆ ಅಂದಿನ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ನೀಡಿದ್ದಂತೂ ಸತ್ಯ. ನಂತರ 1901ರಲ್ಲಿ ಎಡ್ಗರ್ ಥರ್ಸ್ಟನ್ ಎಂಬಾತ ಮೊದಲ ಬಾರಿಗೆ ‘ದಕ್ಷಿಣ ಭಾರತದಲ್ಲಿ ಜಾತಿ ಮತ್ತು ವರ್ಗ’ ಎಂಬ ಪುಸ್ತಕದಲ್ಲಿ ಅಂದಿನ ಎಲ್ಲ ಸಣ್ಣಪುಟ್ಟ ಸಮುದಾಯಗಳು ಸೇರಿದಂತೆ ಎಲ್ಲ ಜಾತಿ ಜನಾಂಗದ ಬಗ್ಗೆ ವಿವರವಾಗಿ ದಾಖಲಿಸಿದ್ದಾನೆ. ಆನಂತರ 1937ರಲ್ಲಿ ಎಚ್.ವಿ. ನಂಜುಂಡಯ್ಯನವರು ‘ಮೈಸೂರು ಟ್ರೈಬ್ ಮತ್ತು ಕ್ಯಾಸ್ಟ್’ ಎಂಬ ಪುಸ್ತಕದಲ್ಲಿ ಅಂದಿನ ಮೈಸೂರು ರಾಜ್ಯದ ನೂರಾರು ಸಣ್ಣಪುಟ್ಟ ಜಾತಿ ಸಮುದಾಯಗಳನ್ನು ದಾಖಲಿಸಿದ್ದಾರೆ. ಆಶ್ಚರ್ಯವೆಂದರೆ ಇಂದಿಗೂ ನಮಗೆ ಅಂತಹ ಒಂದು ವೈಜ್ಞಾನಿಕ ಮತ್ತು ಸಮಗ್ರವಾದ ಕೆಲಸವನ್ನು ಯಾವುದೇ ಸಂಶಯವಿಲ್ಲದೆ ಮಾಡಲು ಸಾಧ್ಯವಾಗಿಲ್ಲ. ಕೇವಲ ಜನಗಣತಿ ಬಿಟ್ಟರೆ ನಾವು ಯಾವ ಕೆಲಸವನ್ನೂ ಸರಿಯಾಗಿ ಮಾಡುತ್ತಿಲ್ಲ. ಅದರಲ್ಲೂ 108 ತಪ್ಪುಗಳಿರುತ್ತವೆ!.

ಇತ್ತೀಚೆಗೆ ಭಾರತ ಸರಕಾರ ದೇಶದಲ್ಲಿನ ಎಲ್ಲಾ ಜಾತಿ ಜನಾಂಗಗಳ ಬಗ್ಗೆ ಸಾಂದರ್ಭಿಕ ಮಾಹಿತಿಯನ್ನು ನೀಡುವ ಸಂಪುಟವನ್ನು ಹೊರತಂದಿದೆ. ಅದರಲ್ಲೂ ಕೆಲವು ಸೂಕ್ಷ್ಮ, ಅಲೆಮಾರಿ ಬುಡಕಟ್ಟು ಸಮುದಾಯಗಳು ಕಂಡುಬರುತ್ತಿಲ್ಲ. ಇಂದಿಗೂ ಅವರು ಯಾವುದೇ ಪಟ್ಟಿಯಲ್ಲಿ ಸೇರಿಕೊಳ್ಳದೆ ಮಾನ್ಯತೆ ಮತ್ತು ಸರಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ಮುಂದುವರಿಯುತ್ತಿದ್ದಾರೆ. ಈ ಅಲೆಮಾರಿ, ಅರೆ ಅಲೆಮಾರಿ ಬುಡಕಟ್ಟು ಜನಾಂಗಗಳು ಇಂದಿಗೂ ಸರಕಾರದ ಯಾವ ಪಟ್ಟಿಯಲ್ಲೂ ಕಾಣಿಸುವುದಿಲ್ಲ. ಮತದಾರ ಮತ್ತು ಪಡಿತರ ಪಟ್ಟಿಯಲ್ಲಿ ಸಹ ಕೆಲವರು ಕಾಣುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರಿನಿಂದ ಇವರನ್ನು ಕರೆಯುವುದು. ಇಂದಿಗೂ ಒಂದು ಅಲೆಮಾರಿ ಬುಡಕಟ್ಟನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯ ಹೆಸರುಗಳಿಂದ ಗುರುತಿಸುವುದರಿಂದ ಇವರ ಜಾತಿಗಳ ಹೆಸರನ್ನು ಸುಲಭವಾಗಿ ಬೇರೆಯವರು ಕಳ್ಳತನ ಮಾಡುತ್ತಿದ್ದಾರೆ. ಕೆಲವರು ಹೊಸ ಹೊಸ ಜಾತಿಗಳನ್ನು, ಇನ್ನು ಕೆಲವರು ಜಾತಿಗಳ ಹೆಸರಿನಲ್ಲಿರುವ ಒತ್ತಕ್ಷರಗಳ ಗೊಂದಲವನ್ನು ಬಳಸಿಕೊಂಡು ಅಕ್ರಮವಾಗಿ ತಾವೇ ಮೀಸಲಾತಿ ವ್ಯವಸ್ಥೆಯನ್ನು ಪಡೆಯುತ್ತಿದ್ದಾರೆ.

ಉದಾಹರಣೆಗೆ ಇತ್ತೀಚೆಗೆ ಅಲ್ಪ-ಸ್ವಲ್ಪ ಶಿಕ್ಷಣವನ್ನು ಪಡೆದ ಬುಡ್ಗಜಂಗಮರು ತಮ್ಮ ಪಾಲಿನ ಮೀಸಲಾತಿ ಕೇಳಲು ಹೋದಾಗ ಅವರ ಜಾಗದಲ್ಲಿ ಕೆಲವು ಬೇಡ-ಜಂಗಮರು ತಾವೇ ಬುಡ್ಗಜಂಗಮ ಎಂದು ಸಾಧಿಸಿ ಈಗಾಗಲೇ ಬಂದು ಅಲ್ಲಿ ಕುಳಿತಿದ್ದರು. ಈ ಕಾರಣದಿಂದ ಒಮ್ಮೆ ಅಲೆಮಾರಿ ಬುಡ್ಗ ಜಂಗಮ ಮಹಿಳೆ ದರೋಜಿ ಈರಮ್ಮ ಎಂಬಾಕೆ ಸಾರ್ವಜನಿಕವಾಗಿ ‘‘ಸ್ವಾಮಿ.. ನನ್ನ ಜಾತಿಯು ಕಳ್ಳತನವಾಗಿದೆ ಹುಡುಕಿ ಕೊಡಿ’’ ಎಂದು ಸರಕಾರದ ಮುಂದೆ ಕೋರಿಕೊಂಡಿದ್ದರು. ಇದು ಕೇವಲ ಒಂದು ಉದಾಹರಣೆ ಮಾತ್ರ. ಈ ಸಮಸ್ಯೆ ಎಷ್ಟು ಆಳವಾಗಿ ಇದೆ ಎಂದರೆ ಇಂದು ಕೆಲವು ಅಲೆಮಾರಿ ದುರ್ಬಲ ವರ್ಗದವರು ಸರಕಾರದ ಯಾವುದೇ ರೀತಿಯ ವ್ಯವಸ್ಥೆಯನ್ನೂ ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕೋಲಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಜಾತಿ ಸಂಘಟನೆಗಳ ನಿತ್ಯ ಜಗಳವೇ ಉದಾಹರಣೆ. ಇಂದಿಗೂ ಅಲೆಮಾರಿ ಬುಡಕಟ್ಟು ವರ್ಗಗಳಲ್ಲಿ ಮತ್ತು ದಲಿತ ಜಾತಿಗಳಲ್ಲಿ ಬೆಳಕಿಗೆ ಬಾರದ ಸಾಕಷ್ಟು ಸಣ್ಣ ಪುಟ್ಟ ಜಾತಿಗಳು ನಿಧಾನವಾಗಿ ಕಣ್ಮರೆ ಆಗುತ್ತಿವೆ ಅಥವಾ ಅದನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗುತ್ತಿದೆ. ಶೈಕ್ಷಣಿಕವಾಗಿ ಅತಿಯಾಗಿ ಹಿಂದುಳಿದಿರುವ ಮತ್ತು ಜೀವನವಿಡೀ ಅಲೆಮಾರಿಗಳಾಗಿ ಬದುಕು ಸವೆಸುತ್ತಿರುವ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಅಲೆಮಾರಿ ಸಮುದಾಯಗಳಿಗೆ ತಮ್ಮ ಮೂಗಿನ ಕೆಳಗೆ ಬದಲಾವಣೆ ನಡೆಯುತ್ತಿರುವುದು ಗಮನಕ್ಕೆ ಬರುತ್ತಿಲ್ಲ. ಜಾತಿಗಳೇ ಕಣ್ಮರೆಯಾದರೆ ದೂರು ನೀಡುವುದು ಯಾರಿಗೆ?

ಇದು ಅಷ್ಟಕ್ಕೇ ನಿಲ್ಲುವುದಿಲ್ಲ ಇದರೊಂದಿಗೆ ನಕಲಿ ಜಾತಿ ಸರ್ಟಿಫಿಕೇಟ್‌ಗಳು ಇನ್ನೊಂದು ರೀತಿಯ ಅನ್ಯಾಯವನ್ನು ನಿಜವಾದ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಮಾಡುತ್ತಿವೆ. ಇತ್ತೀಚೆಗೆ ಮಹಾರಾಷ್ಟ್ರದ ಕೆಲವು ವೈದ್ಯಕೀಯ ಕಾಲೇಜುಗಳಲ್ಲಿ ಇಪ್ಪತ್ತಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಉಚ್ಚಾಟಿಸಲಾಗಿದೆ. ಬೇರೆ ಜಾತಿಗೆ ಸೇರಿದ್ದ ಇವರು ನಕಲಿ ಎಸ್ಸಿ/ಎಸ್ಟಿ ಪ್ರಮಾಣ ಪತ್ರ ನೀಡಿ ವೈದ್ಯಕೀಯ ಸೀಟು ಪಡೆದುಕೊಂಡಿದ್ದರು. ಅದರಲ್ಲಿ ಹೆಚ್ಚಿನವರು ಸಮಾಜದ ಗಣ್ಯ ವ್ಯಕ್ತಿಗಳ ಮಕ್ಕಳು.! ಇವರು ಕೇವಲ ಸೀಟನ್ನು ಮಾತ್ರ ಕದಿಯಲಿಲ್ಲ. ನಿಜವಾದ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಸಿಗಬೇಕಾಗಿದ್ದ ಅವಕಾಶವನ್ನು ಕದ್ದು ಅವರ ಜೀವನವನ್ನೇ ಹಾಳು ಮಾಡಿದ್ದಾರೆ. ಅಲ್ಲದೆ ಸರಕಾರಿ ಹುದ್ದೆಗಳು ಮತ್ತು ಚುನಾವಣೆಯಲ್ಲಿಯೂ ನಕಲಿ ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸಿ ಸಮಾಜ ಮತ್ತು ಸಂಬಂಧಪಟ್ಟ ಜಾತಿಗೆ ಅನ್ಯಾಯ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಸ್ಥಳೀಯ ಗ್ರಾಮ ಪಂಚಾಯತ್ ಮತ್ತು ಇತರ ಚುನಾವಣೆಗಳಲ್ಲಿ ಕೆಲವು ಅಭ್ಯರ್ಥಿಗಳು ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಿ ಚುನಾವಣೆಯನ್ನು ಗೆದ್ದು ಬೀಗುತ್ತಿದ್ದಾರೆ. ಈ ರೀತಿ ನಕಲಿ ಜಾತಿ ಪ್ರಮಾಣಪತ್ರಗಳನ್ನು ಪಡೆದುಕೊಂಡಿರುವುದು ಕೊನೆಗೆ ಹೇಗೋ ಬೆಳಕಿಗೆ ಬಂದರೂ ಅದು ನ್ಯಾಯಾಲಯದ ಮೆಟ್ಟಿಲು ಹತ್ತಿ ಸಂಬಂಧಪಟ್ಟವರಿಗೆ ನ್ಯಾಯ ಸಿಗುವಲ್ಲಿ ಎಷ್ಟೋ ವರ್ಷಗಳು ಕಳೆದಿರುತ್ತದೆ. ಇಂತಹ ಕಳ್ಳತನಗಳಿಂದ ಒಂದು ಜನಾಂಗವೇ ಸರಕಾರಿ ಹುದ್ದೆಗಳಿಂದ ವಂಚಿತವಾಗುತ್ತದೆ. ಒಂದು ಮೀಸಲು ಚುನಾವಣಾ ಕ್ಷೇತ್ರ ತನ್ನ ನಿಜವಾದ ಅಭ್ಯರ್ಥಿಯನ್ನು ಕಳೆದುಕೊಳ್ಳುತ್ತದೆ. ಇತ್ತೀಚೆಗೆ ಮಹಾರಾಷ್ಟ್ರದ ಒಂದು ಟಿವಿ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಓರ್ವ ಮಹಿಳೆ ತಾನು ಹತ್ತನೇ ತರಗತಿಗೆ ಬಂದಾಗ ತಾನು ಎಸ್ಟಿ ಸಮುದಾಯಕ್ಕೆ ಸೇರಿದ ಬಾಲಕಿ ಎಂದು ತಿಳಿದು ಬಂತಂತೆ. ಅಲ್ಲಿಯವರೆಗೂ ತಾನು ಯಾವ ಜಾತಿ ಎಂದು ಆಕೆಗೆ ತಿಳಿದಿರಲಿಲ್ಲ! ಕಾನೂನುಬದ್ಧವಾಗಿ ಸಿಗಬೇಕಾಗಿದ್ದ ಯಾವ ಸವಲತ್ತುಗಳೂ ಆಕೆಗೆ ಸಿಕ್ಕಿರಲಿಲ್ಲ.

ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಸಾಂವಿಧಾನಿಕ ಮತ್ತು ಮೀಸಲಾತಿ ಅವಕಾಶವನ್ನು ನೀಡಿದೆ. ಆದರೆ ಇನ್ನಷ್ಟು ಬೇಕು ಎನ್ನುವ ಆಸೆ ಮತ್ತು ಆತುರದಲ್ಲಿ ಸಣ್ಣ ಪುಟ್ಟ ಸಮುದಾಯಗಳನ್ನು ಅವಕಾಶಗಳಿಂದ ವ್ಯವಸ್ಥಿತವಾಗಿ ದೂರ ಇಡಲಾಗುತ್ತಿದೆ. ಇವರ ಧ್ವನಿ ಆಳುವ ವರ್ಗಕ್ಕೆ ಕೇಳಿಸುತ್ತಿಲ್ಲ. ಕೇಳಿದರೂ ಅವರೂ ಸುಮ್ಮನಿದ್ದಾರೆ. ಏಕೆಂದರೆ ಇಂತಹ ಪ್ರತಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಗಳ ಜನಸಂಖ್ಯೆ ರಾಜ್ಯದಲ್ಲಿ ಅಬ್ಬಬ್ಬಾ ಅಂದರೆ 500ರಿಂದ 1,000 ಅಷ್ಟೇ. ಈ ಜನಗಳ ಮತಬ್ಯಾಂಕ್ ಯಾರಿಗೂ ಬೇಡವಾಗಿದೆ. ಅತಿಯಾಗಿ ಕಳ್ಳತನ ಆಗುತ್ತಿರುವುದು ಇವರ ಜಾತಿಗಳೇ. ಇಂತಹ ಕಳ್ಳರೊಂದಿಗೆ ಅಧಿಕಾರಿಶಾಹಿ ವರ್ಗ ಸಹ ಸೇರಿಕೊಂಡಿದೆ ಎಂಬ ಗುಮಾನಿ ಇದೆ. ಇಂತಹ ಸೂಕ್ಷ್ಮ ಅತಿಸೂಕ್ಷ್ಮ ವರ್ಗಕ್ಕೆ ಸೇರಿದ ಅಭ್ಯರ್ಥಿಯೊಬ್ಬ ತನಗೆ ಜಾತಿ ಪ್ರಮಾಣ ಪತ್ರ ಬೇಕೆಂದು ಕೇಳಿದಾಗ ತಹಶೀಲ್ದಾರ್ ಕಚೇರಿ ಹತ್ತಿದಾಗ ಅಲ್ಲಿ ತನ್ನ ಜಾತಿಯ ಬಗ್ಗೆ ಉಂಟಾಗಿರುವ ಬದಲಾವಣೆ ಕಂಡು ಶಾಕ್ ಆಗುವುದಂತೂ ಖಂಡಿತ. ಪ್ರತಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ವರ್ಗಗಳಲ್ಲಿ ಇಂದಿನವರೆಗೂ ಆಂದೋಲನ ಮತ್ತು ಒಗ್ಗೂಡುವಿಕೆ ಸಾಧ್ಯವಾಗಿಲ್ಲ. ಇತ್ತೀಚೆಗೆ ಈ ಸಮುದಾಯಗಳು ಸಂಘ ಸಂಸ್ಥೆಗಳು ಕಟ್ಟಿಕೊಂಡು ತಮ್ಮ ಅಸ್ತಿತ್ವಕ್ಕಾಗಿ ಹೋರಾಟವನ್ನು ಆರಂಭಿಸಿವೆ. ಆದರೆ ಇದು ತುಂಬಾ ತಡವಾಯಿತು ಅನಿಸುತ್ತಿದೆ. ಏಕೆಂದರೆ ಅವರ ಹೆಸರಿನಲ್ಲಿ ಬೇರೆ ಯಾರೋ ಲಾಭ ಮಾಡಿಕೊಂಡಾಗಿರಬಹುದು.

Writer - ಡಾ. ಡಿ.ಸಿ. ನಂಜುಂಡ

contributor

Editor - ಡಾ. ಡಿ.ಸಿ. ನಂಜುಂಡ

contributor

Similar News