ದಸರಾದಲ್ಲೂ ಅವಕಾಶ ನೀಡದ ಸರಕಾರ: ಪೌರಾಣಿಕ ರಂಗಭೂಮಿ ಕಲಾವಿದರ ಆಕ್ರೋಶ
ಮೈಸೂರು, ಅ.11: ಎಲ್ಲರನ್ನು ರಂಜಿಸುತ್ತಿದ್ದ ರಂಗಭೂಮಿ ಕಲಾವಿದರ ಬದುಕು ಕತ್ತಲೆಯಲ್ಲೇ ಕೂಡಿದ್ದು, ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಬಂದೊದಗಿದೆ.ದಿನ ನಿತ್ಯದ ಜೀವನಕ್ಕೂ ಅಲ್ಲಿ ಇಲ್ಲಿ ಬೇಡುವ ಪರಿಸ್ಥಿತಿ ಇದ್ದು ಕೊರೋನ ರೋಗಕ್ಕಿಂತ ಬಡತನದ ರೋಗವೇ ಇವರನ್ನು ಹೆಚ್ಚಾಗಿ ಕಾಡುತ್ತಿದೆ.
ಲಾಕ್‌ಡೌನ್ ನಂತರ ಜೀವನ ನಡೆಸುವುದೇ ಕಷ್ಟವಾಗಿದ್ದು, ಪೌರಾಣಿಕ ರಂಗಭೂಮಿ ನಿರ್ದೇಶಕರು, ವಾದ್ಯವೃಂದದವರು ಹಾಗೂ ಹರಿಕಥಾ ಕೀರ್ತನಕಾರರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಪೌರಾಣಿಕ, ಸಾಮಾಜಿಕ ನಾಟಕ, ಸಂಗೀತ, ಹರಿಕಥೆ, ಸಾಂಸ್ಕೃತಿಕ ಕಾರ್ಯಕ್ರಮ, ಮದುವೆ, ಹಬ್ಬ ಹರಿದಿನಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಇವರ ಬದುಕು ಕತ್ತಲೆಯಲ್ಲಿದೆ.
ತಬಲ, ವೀಣೆ, ಹಾರ್ಮೋನಿಯಂ, ಪಿಯಾನೊ, ವಾದ್ಯ ಸೇರಿದಂತೆ ಅನೇಕ ಕಲಾವಿದರು ತಮ್ಮ ಕಲೆಯ ಮೂಲಕ ಎಲ್ಲರನ್ನು ರಂಜಿಸಿಸುತ್ತಿದ್ದರು. ಆದರೆ ಇಂದು ಅವರಿವರ ಮನೆ ಬಾಗಿಲಿಗೆ ತೆರಳಿ ಜೀವನಕ್ಕಾಗಿ ಹಣ ಕೇಳುವ ಪರಿಸ್ಥಿತಿ ಬಂದೊದಗಿದೆ. ಹಳ್ಳಿ, ಪಟ್ಟಣ, ನಗರ ಪ್ರದೇಶ ಸೇರಿದಂತೆ ಅನೇಕ ಕಡೆಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿ ಬರುವ ಹಣದಿಂದ ಹೆಂಡತಿ ಮಕ್ಕಳನ್ನು ಸಾಕುತ್ತಿದ್ದವರಿಗೆ ಲಾಕ್‌ಡೌನ್ ಬದುಕನ್ನೇ ಮಂಕಾಗಿಸಿ ಬಿಟ್ಟಿದೆ. ತಮ್ಮ ಕಲೆಗಳನ್ನು ಉಳಿಸಿ ಬೆಳೆಸಬೇಕು ಎನ್ನುತ್ತಿದ್ದವರು ಈ ಕಲೆ ನಮಗೆ ಸಾಕು ನಮ್ಮ ಮಕ್ಕಳಿಗೆ ಬೇಡ ಎನ್ನುವಷ್ಟರ ಮಟ್ಟಿಗೆ ರೋಸಿ ಹೋಗಿದ್ದಾರೆ.
ದಸರಾ ಬಂತೆಂದರೆ ಒಂದಷ್ಟು ದುಡ್ಡನ್ನು ನೋಡಬಹುದು ಎಂಬ ಇವರ ಕನಸನ್ನು ಸರಕಾರ ನುಚ್ಚು ನೂರು ಮಾಡಿದ್ದು, ಸ್ಥಳೀಯ ಕಲಾವಿದರಿಗೆ ಯಾವುದೇ ಅವಕಾಶ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರು ಜಿಲ್ಲಾ ಪೌರಾಣಿಕ ರಂಗಭೂಮಿ, ವಾದ್ಯವೃಂದ ಹಾಗೂ ಹರಿಕಥಾ ಕೀರ್ತನಾಕಾರರ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರ ಪ್ರಸಾದ್ ಮಾತನಾಡಿ, ರಾಜ ಮಹರಾಜರ ಕಾಲದಿಂದಲೂ ಪೌರಾಣಿಕ ರಂಗಭೂಮಿ ಕಲೆಗೆ ಅತಿ ಹೆಚ್ಚು ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಇತ್ತೀಚಿನ ವರ್ಷಗಳಲ್ಲಿ ಪೌರಾಣಿಕ ರಂಗಭೂಮಿ ಕಲೆಗೆ ಪ್ರೋತ್ಸಾಹ ಇಲ್ಲದಂತಾಗಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2021ರಲ್ಲಿ ಕಡೆಗಣಿಸಿರುವುದು ತುಂಬಾ ಶೋಚನೀಯವಾಗಿದೆ ಎಂದು ಅಳಲನ್ನು ತೋಡಿಕೊಂಡರು.
ಕೊರೋನ ನಂತರ ಕಲಾವಿದರ ಬದುಕು ಮೂರಾಬಟ್ಟಯಾಗಿದೆ. ಈಗ ಸರಕಾರ ಕಾರ್ಯಕ್ರಮ ನಡೆಸಲು ಅವಕಾಶ ನೀಡುತ್ತಿಲ್ಲ. ನಮ್ಮಂತಹ ಕಲಾವಿದರ ಬೆಂಬಲಕ್ಕೂ ನಿಲ್ಲುತ್ತಿಲ್ಲ, ದಸರಾದಲ್ಲಾದರೂ ಕಾರ್ಯಕ್ರಮ ಕೊಡಿ ಎಂದು ಅರ್ಜಿ ಹಾಕಿದ್ದರೂ ಅಧಿಕಾರಿಗಳು ನಮ್ಮನ್ನು ಕಡೆಗಣಿಸಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂದೇ ಒಬ್ಬ ಸಚಿವರನ್ನು ನೇಮಕ ಮಾಡಿದೆ. ಸಾವಿರಾರು ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ್ಯಾರು ಕಲಾವಿದರ ಕಡೆಗೆ ಗಮನ ಹರಿಸುತ್ತಿಲ್ಲ, ಪೌರಾಣಿಕ ರಂಗಭೂಮಿ ಕಲಾವಿದರಾದ ನಾವು ಬದುಕಬಾರದೆ? ಎಂದು ಪ್ರಶ್ನಿಸಿದರು.
ಕೊರೋನ ಮಾರ್ಗ ಸೂಚಿಯಂತೆ ಸರಕಾರ ಮತ್ತು ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆಯೇ? ಹಾಗಿದ್ದ ಮೇಲೆ ನಮ್ಮ ಮೇಲೆ ಏಕೆ ನಿರ್ಬಂಧ ವಿಧಿಸುತ್ತಿದ್ದಾರೆ. ಕೂಡಲೆೀ ಸರಕಾರ ಎಲ್ಲ ಕಾರ್ಯಕ್ರಮಗಳಿಗೂ ಅವಕಾಶ ನೀಡಬೇಕು. ಇದರಿಂದಲಾದರೂ ಅದೆಷ್ಟೋ ಮಂದಿ ಕಲಾವಿದರು ಬದುಕು ಕಂಡುಕೊಳ್ಳುತ್ತಾರೆ ಎಂದು ಸರಕಾರವನ್ನು ಒತ್ತಾಯಿಸಿದರು.
ನಮ್ಮಂತಹ ಅನೇಕ ಕಲಾವಿದರು ಮೈಸೂರು ಪುರಭವನದಲ್ಲಿ ನಿರಂತರವಾಗಿ ಪೌರಾಣಿಕ ನಾಟಕ, ಸೇರಿದಂತೆ ಅನೇಕ ಪ್ರದರ್ಶನಗಳನ್ನು ನೀಡುವ ಮೂಲಕ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಆದರೆ ಕೊರೋನ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಇದನ್ನು ಮುಚ್ಚಲಾಗಿದೆ. ಸರಕಾರ ನಮ್ಮ ಬದುಕಿಗೆ ಯಾವುದೇ ನೆರವು ನೀಡದಿದ್ದರೂ ಪರವಾಗಿಲ್ಲ. ಪುರಭವನದಲ್ಲಿ ಪೌರಾಣಿಕ ನಾಟಕ, ಸಾಂಸ್ಕೃತಿಕ ಪ್ರದರ್ಶನಗಳಿಗೆ ಅವಕಾಶ ಮಾಡಿಕೊಟ್ಟರೆ ಸಾಕು.
- ಜ್ಞಾನೇಶ್, ಕಲಾವಿದರ ಸಂಘದ ಗೌರವಾಧ್ಯಕ್ಷ
ಕಲಾವಿದರಾದ ನಮಗೆ ಜಾತ್ರೆ, ಹಬ್ಬ, ದೇವಸ್ಥಾನ, ಮದುವೆಗಳಲ್ಲೇ ಹೆಚ್ಚು ಅವಕಾಶ ಸಿಗುವುದು. ಸರಕಾರ ಎಲ್ಲವನ್ನು ತೆರವುಗೊಳಿಸಿದೆ. ಆದರೆ ಜಾತ್ರೆ, ಹಬ್ಬಗಳಿಗೆ ಅವಕಾಶ ನೀಡಿಲ್ಲ. ನಮಗೆ ಪ್ರೋತ್ಸಾಹ ಧನ ಎಂದು ಮೂರು ಸಾವಿರ ರೂ. ಕೊಡುವುದಾಗಿ ಹೇಳಿ ಕೇವಲ ಶೇ.50ರಷ್ಟು ಜನರಿಗೆ ಮಾತ್ರ ನೀಡಲಾಗಿದೆ.
-ಷಣ್ಮುಕ ಎಸ್.ಜಿ., ಕಲಾವಿದ
ಕಲೆಯನ್ನೇ ನಂಬಿ ಬದುಕುತ್ತಿದ್ದವರು ಸೆಕ್ಯೂರಿಟಿ ಕೆಲಸಕ್ಕೆ ಹೋಗುತ್ತಿದ್ದಾರೆ. ಕೆಲವರು ಹೊಟೇಲ್‌ಗಳಲ್ಲಿ ಸಪ್ಲೈಯರ್ ಆಗಿದ್ದಾರೆ. ಸರಕಾರ ಕೊರೋನ ನೆಪವೊಡ್ಡಿ ನಮ್ಮನ್ನು ಬೀದಿಯಲ್ಲಿ ನಿಲ್ಲಿಸಿದೆ. ದಯಮಾಡಿ ನಿರ್ಬಂಧವನ್ನು ಸಡಿಲಗೊಳಿಸಿ ಕಾರ್ಯಕ್ರಮಗಳಿಗೆ ಅವಕಾಶ ನೀಡಲಿ.
-ಆರ್.ಸೋಮರಾಜ್, ಕಲಾವಿದ