ಸರಕಾರಿ ತೈಲ ಕಂಪನಿಗಳು ಘೋಷಿತ ಆರ್ಥಿಕ ಅಪರಾಧಿಗಳ ಜೊತೆ ವ್ಯವಹರಿಸುತ್ತಿವೆ: ಕಾಂಗ್ರೆಸ್ ಆರೋಪ
ಹೊಸದಿಲ್ಲಿ,ಅ.11: ಸರಕಾರವು ಆರ್ಥಿಕ ಅಪರಾಧಿಗಳು ಪಾರಾಗಲು ಅವಕಾಶ ನೀಡುತ್ತಿರುವುದು ಮಾತ್ರವಲ್ಲ,ಅವರೊಂದಿಗೆ ವ್ಯವಹಾರವನ್ನೂ ನಡೆಸುತ್ತಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ. ಸರಕಾರವು ಸ್ಟರ್ಲಿಂಗ್ ಬಯೊಟೆಕ್ ಸಮೂಹಕ್ಕೆ ಸೇರಿದ ಸ್ಟರ್ಲಿಂಗ್ ಆಯಿಲ್ ಎಕ್ಸ್ಪ್ಲೊರೇಷನ್ ಆ್ಯಂಡ್ ಪ್ರೊಡಕ್ಷನ್ ಕಂಪನಿ ಲಿ.(ಸೀಪ್ಕೊ)ನ ಮೂಲಕ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರಿಸಿದೆ ಎಂದು ಅದು ಬೆಟ್ಟು ಮಾಡಿದೆ.
ಕಳೆದ ವರ್ಷದ ಸೆಪ್ಟಂಬರ್ನಲ್ಲಿ ವಿಶೇಷ ನ್ಯಾಯಾಲಯವೊಂದು ಬ್ಯಾಂಕುಗಳಿಂದ 15,000 ಕೋ.ರೂ.ಸಾಲವನ್ನು ಪಡೆದುಕೊಂಡು ವಂಚಿಸಿದ್ದಕ್ಕಾಗಿ ಸ್ಟರ್ಲಿಂಗ್ ಬಯೊಟೆಕ್ ಸಮೂಹದ ಪ್ರವರ್ತಕರಾದ ನಿತಿನ್ ಸಂದೇಸರಾ ಮತ್ತು ಚೇತನ ಸಂದೇಸರಾ ಅವರನ್ನು ಆರ್ಥಿಕ ಅಪರಾಧಿಗಳೆಂದು ಘೋಷಿಸಿತ್ತು.
ಡೀಸೆಲ್,ಪೆಟ್ರೋಲ್ ಮತ್ತು ಅಡಿಗೆ ಅನಿಲ ಬೆಲೆಗಳಲ್ಲಿ ತೀವ್ರ ಏರಿಕೆಯಿಂದ ಭಾರತೀಯರು ತತ್ತರಿಸಿದ್ದರೆ ದೇಶಭ್ರಷ್ಟರು ಪ್ರಗತಿಯನ್ನು ಹೊಂದುತ್ತಿದ್ದಾರೆ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ ಕಾಂಗ್ರೆಸ್ ವಕ್ತಾರ ಗೌರವ ವಲ್ಲಭ್ ಅವರು,ನಿಜವಾದ ‘ವಿಕಾಸ’ ಮತ್ತು ‘ಅಚ್ಚೇ ದಿನ್’ ಕೇವಲ ಸುಸ್ತಿದಾರರು ಮತ್ತು ದೇಶಭ್ರಷ್ಟರಿಗಾಗಿ ಇರುವಂತಿದೆ ಎಂದರು.
2017,ಅಕ್ಟೋಬರ್ನಲ್ಲಿ ಜಾರಿ ನಿರ್ದೇಶನಾಲಯವು ಸ್ಟರ್ಲಿಂಗ್ ಬಯೊಟೆಕ್ ಮತ್ತು ಸಂದೇಸರಾ ಸೋದರರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತ್ತು. ಪ್ರಕರಣ ದಾಖಲಾಗುವುದಕ್ಕೆ ಕೆಲವೇ ಸಮಯದ ಮೊದಲು ನಿತಿನ್,ಚೇತನ್,ಆತನ ಪತ್ನಿ ದೀಪ್ತಿ ಮತ್ತು ಸಹವರ್ತಿ ಹಿತೇಶಕುಮಾರ ನರೇಂದ್ರಭಾಯಿ ಪಟೇಲ್ ಅವರು ದೇಶದಿಂದ ಪರಾರಿಯಾಗಿದ್ದರು.
ಸುದ್ದಿಗೋಷ್ಠಿಯಲ್ಲಿ ಆರ್ಟಿಐ ಉತ್ತರವೊಂದನ್ನು ಪ್ರದರ್ಶಿಸಿದ ವಲ್ಲಭ್,ಅವರನ್ನು ಕಾನೂನಿನ ವಿಚಾರಣೆಗಾಗಿ ಮರಳಿ ತರಲು ಪ್ರಯತ್ನಗಳ ಬದಲು ಸರಕಾರವು ಅವರಿಂದ ಕಚ್ಚಾ ತೈಲವನ್ನು ಖರೀದಿಸುತ್ತಿದೆ. 2018,ಜ.1 ಮತ್ತು 2020,ಮೇ 31ರ ನಡುವೆ ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಸೀಪ್ಕೊ ನೈಜೀರಿಯಾದಿಂದ 5,701.83 ಕೋ.ರೂ.ಮೌಲ್ಯದ ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿವೆ ಎಂದು ಹೇಳಿದರು.
ಮೋದಿ ಸರಕಾರವು ಸಂದೇಸರಾ ಸೋದರರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿಗಳೆಂದು ಪರಿಗಣಿಸಿದೆಯೇ ಮತ್ತು ಪರಿಗಣಿಸಿದ್ದರೆ ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಈಗಲೂ ಅವರೊಂದಿಗೆ ವ್ಯವಹಾರವನ್ನು ಹೇಗೆ ಮುಂದುವರಿಸಿವೆ ಎಂದು ವಲ್ಲಭ್ ಪ್ರಶ್ನಿಸಿದರು.