ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಜೆಪಿಯ ಮಾಜಿ ನಾಯಕ ಬಾಬುಲ್ ಸುಪ್ರಿಯೋ

Update: 2021-10-19 09:32 GMT

ಕೋಲ್ಕತಾ:ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಜಿ ನಾಯಕ ಬಾಬುಲ್ ಸುಪ್ರಿಯೋ ಮಂಗಳವಾರ ದಿಲ್ಲಿಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ನಂತರ ಅಸನ್ಸೋಲ್ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಸುಪ್ರಿಯೋ ಅವರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೆ ಸೇರಿದ ಕೆಲವೇ ದಿನಗಳಲ್ಲಿಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.

ಇಬ್ಬರೂ ಇನ್ನು ಮುಂದೆ ಟಿಎಂಸಿಯ ಭಾಗವಾಗಿರದ ಕಾರಣ ಸುವೇಂದು  ಅಧಿಕಾರಿ ತನ್ನ ತಂದೆ ಹಾಗೂ  ಸಹೋದರನ ಬಳಿ ತಮ್ಮ  ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ತಿಳಿಸಬೇಕು ಎಂದು ಸುಪ್ರಿಯೋ ಸಲಹೆ ನೀಡಿದರು.

ಟಿಎಂಸಿ ಟಿಕೆಟ್ ನಲ್ಲಿ ಸಂಸತ್ ಸದಸ್ಯರಾಗಿರುವ ಸುವೇಂದು ಅವರ ತಂದೆ ಹಾಗೂ ಸಹೋದರ ಬಿಜೆಪಿ ಸೇರದಿದ್ದರೂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ.

ಪಶ್ಚಿಮ ಬಂಗಾಳದಲ್ಲಿ ಅಸೆಂಬ್ಲಿ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಸುವೇಂದು ಅಧಿಕಾರಿಯು ಟಿಎಂಸಿಯಿಂದ ಬಿಜೆಪಿಗೆ ಸೇರಿದ್ದರು.

ಬಿಜೆಪಿ ಟಿಕೆಟ್ ಮೇಲೆ ಆಯ್ಕೆಯಾಗಿರುವುದರಿಂದ  ಆ ಸ್ಥಾನದಲ್ಲಿರುವುದು ನೈತಿಕತೆಯಲ್ಲ ಎಂದು ಇತ್ತೀಚೆಗೆ ಟಿಎಂಸಿಗೆ ಸೇರಿದ ನಂತರ ಸುಪ್ರಿಯೋ ಅವರು ಹೇಳಿದ್ದರು.

ಬಿರ್ಲಾ ಅವರೊಂದಿಗೆ ಅಪಾಯಿಂಟ್ಮೆಂಟ್ ಪಡೆದ ತಕ್ಷಣ ರಾಜೀನಾಮೆ ನೀಡುವುದಾಗಿ ಸುಪ್ರಿಯೋ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News