ಲಖಬೀರ್ ಸಿಂಗ್ ಹತ್ಯೆ ಪ್ರಕರಣ: ಆತ ಕೆಲಸ ಮಾಡಿದ್ದನೆನ್ನಲಾದ ಗೋಶಾಲೆ ಮೇಲೆ ತನಿಖಾ ತಂಡದ ನಿಗಾ
ಅಮೃತಸರ್: ಸಿಂಘು ಗಡಿ ಸಮೀಪ ಇತ್ತೀಚೆಗೆ ಹತ್ಯೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಲಖಬೀರ್ ಸಿಂಗ್ ಚೀಮಾ ಕಲನ್ ಗ್ರಾಮದಿಂದ ತೆರಳುವ ಮುನ್ನ ಕೊನೆಯದಾಗಿ ಅಲ್ಲಿನ ಗೋಶಾಲೆಯೊಂದರಲ್ಲಿ ಕೆಲಸ ಮಾಡಿದ್ದ ಎಂದು ಹೇಳಲಾಗಿರುವ ಹಿನ್ನೆಲೆಯಲ್ಲಿ ತರನ್ ತರನ್ ಪೊಲೀಸರು ಅಲ್ಲಿನ ಸಿಸಿಟಿವಿ ಕ್ಯಾಮರಾಗಳ ಡಿವಿಆರ್ ಸಂಗ್ರಹಿಸಿದ್ದಾರೆ. ಪ್ರಕರಣದ ಆರೋಪಿ ಸರಬ್‍ಜಿತ್ ಸಿಂಗ್ ಕೂಡ ಸಿಂಘು ಘಟನೆಗಿಂತ ಮುನ್ನ ಹಲವಾರು ಬಾರಿ ಗ್ರಾಮಕ್ಕೆ ಭೇಟಿ ನೀಡಿದ್ದನೆಂದೂ ಹೇಳಲಾಗಿದೆ ಎಂದು indianexpress.com ವರದಿ ಮಾಡಿದೆ.
ಈ ನಡುವೆ, ಪೊಲೀಸರು ತಮಗೆ ಕಿರುಕುಳ ನೀಡುತ್ತಿದ್ದಾರೆ, ಗ್ರಾಮದ ಸರಪಂಚ ಅವನ್ ಕುಮಾರ್ ಅವರನ್ನು ತಪ್ಪುದಾರಿಗೆಳೆದಿದ್ದಾರೆ ಎಂದು ಗೋಶಾಲೆಯ ಮಾಲೀಕ ಬಾಬಾ ದಿಲ್‍ಬಾಗ್ ಸಿಂಗ್ ಆರೋಪಿಸಿದ್ದಾರೆ.
"ಕೆಲ ನಿಹಾಂಗ್ ಜನರು ನನ್ನ ಗೋಶಾಲೆಯಿಂದ ಲಖಬೀರ್‍ನನ್ನು ಕರೆದುಕೊಂಡು ಹೋಗಿದ್ದಾರೆಂದು ಇಲ್ಲಿಗೆ ಬಂದ ಪೊಲೀಸರು ಆರೋಪಿಸಿದ್ದಾರೆ. ಅದು ದೊಡ್ಡ ಸುಳ್ಳು. ಸರಬ್‍ಜಿತ್ ಸಿಂಗ್ ಅಥವಾ ಲಖ್‍ಬೀರ್ ಸಿಂಗ್ ಇಲ್ಲಿಗೆ ಯಾವತ್ತೂ ಬಂದಿರಲಿಲ್ಲ. ಸರಪಂಚ ಅವನ್ ಕುಮಾರ್ ತಪ್ಪು ಮಾಹಿತಿ ನೀಡಿದ್ದಾನೆಂದು ತಿಳಿದಿದೆ" ಎಂದು ಆತ ಹೇಳಿಕೊಂಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥ ವರೀಂದರ್ ಕುಮಾರ್ ಪ್ರತಿಕ್ರಿಯಿಸಿ, "ಕೊಲೆಗೀಡಾದ ಲಖ್‍ಬೀರ್ ಸಿಂಗ್ ಹಾಗೂ ಆರೋಪಿ ಗ್ರಾಮಕ್ಕೆ ಬಂದಿದ್ದರೆಂಬ ವಿಚಾರವನ್ನು ಪರಿಶೀಲಿಸಲಾಗುತ್ತಿದೆ, ಈ ಹಂತದಲ್ಲಿ ಯಾವುದೇ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ" ಎಂದಿದ್ದಾರೆ.