ವರ್ಣಭೇದದ ವಿರುದ್ಧ ಬ್ಯಾಟ್ ಬೀಸುತ್ತಿರುವ ಟೆನಿಸ್ ಆಟಗಾರ್ತಿ ನವೋಮಿ ಒಸಾಕ

Update: 2021-10-23 19:30 GMT

ಅಂದು ಅಷ್ಟೊಂದು ನಾಚಿಕೆ ಮಿತಭಾಷಿ ಸ್ವಭಾವದ ಈ ಹೊಸ ಟೆನಿಸ್ ಆಟಗಾರ್ತಿ ಇಂದು ಜಗತ್ತಿನಾದ್ಯಂತ ವರ್ಣಭೇದ ಮತ್ತು ಸಾಮಾಜಿಕ ತಾರತಮ್ಯದ ವಿರುದ್ಧ ಹೋರಾಡುತ್ತಿರುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ವರ್ಣ ಭೇದವನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿರುವವರಿಗೆ ತನ್ನ ಟೆನಿಸ್ ಬ್ಯಾಟಿನಲ್ಲಿ ಸರಿಯಾಗಿ ಉತ್ತರಿಸುತ್ತಿದ್ದಾರೆ.
 


ಅದು 2018ರ ಅಮೆರಿಕ ಓಪನ್ ಟೆನಿಸ್‌ನ ಫೈನಲ್ ಪಂದ್ಯ. ಜಪಾನಿನ ನವೋಮಿ ಒಸಾಕ ಎಂಬ ಆಟಗಾರ್ತಿಗೆ ತನ್ನ ಟೆನಿಸ್ ವೃತ್ತಿಯಲ್ಲಿ ಅದು ಬಹಳ ಮುಖ್ಯವಾಗಿದ್ದ ಪಂದ್ಯ. ಆದರೆ ಅಲ್ಲಿ ಇದ್ದಿದ್ದು ಟೆನಿಸ್ ಜಗತ್ತಿನ ದೈತ್ಯ ಪ್ರತಿಭೆ ಮತ್ತು ದಂತಕಥೆ ಅಮೆರಿಕದ ಸೆರೆನಾ ವಿಲಿಯಮ್ಸ್. ಅಂತಹ ದೈತ್ಯ ಪ್ರತಿಭೆ ವಿರುದ್ಧ ಜಪಾನಿನ ನವೋಮಿ ಒಸಾಕ ಅಂದು ತನ್ನ ಅದೃಷ್ಟ ಪರೀಕ್ಷೆಗೆ ನಿಂತಿದ್ದರು. ಟೆನಿಸ್ ಪಂಡಿತರ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿದ ಆ ಆಟದಲ್ಲಿ ನವೋಮಿ, ಸೆರೆನಾ ವಿಲಿಯಮ್ಸ್ ಅವರನ್ನು ಮಣಿಸಿ ಪ್ರಶಸ್ತಿಯನ್ನು ಕೈಯಲ್ಲಿ ಹಿಡಿದರು. ಈ ಗೆಲುವು ರಾತ್ರೋರಾತ್ರಿ ಆಕೆಯ ಜೀವನವನ್ನು ಬದಲಿಸಿತು. ನೋಡಲು ಪುಟ್ಟ ಶಾಲಾ ಬಾಲಕಿಯಂತೆ ಕಾಣುತ್ತಿದ್ದ ಆ ಯುವತಿ ನವೋಮಿ ಅಂದು ಪ್ರೇಕ್ಷಕರನ್ನು ಉದ್ದೇಶಿಸಿ ಕೇವಲ ಎರಡೇ ಎರಡು ಮಾತನಾಡಲು ತಡಬಡಿ ಸಿದ್ದು ಜಗತ್ತಿಗೆ ಇನ್ನೂ ನೆನಪಿದೆ. ಅಂದು ಅಷ್ಟೊಂದು ನಾಚಿಕೆ ಮಿತಭಾಷಿ ಸ್ವಭಾವದ ಈ ಹೊಸ ಟೆನಿಸ್ ಆಟಗಾರ್ತಿ ಇಂದು ಜಗತ್ತಿನಾದ್ಯಂತ ವರ್ಣಭೇದ ಮತ್ತು ಸಾಮಾಜಿಕ ತಾರತಮ್ಯದ ವಿರುದ್ಧ ಹೋರಾಡುತ್ತಿರುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ವರ್ಣ ಭೇದವನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿರುವವರಿಗೆ ತನ್ನ ಟೆನಿಸ್ ಬ್ಯಾಟಿನಲ್ಲಿ ಸರಿಯಾಗಿ ಉತ್ತರಿಸುತ್ತಿದ್ದಾರೆ. ವರ್ಣಭೇದ ನೀತಿ ವಿರುದ್ಧ ಹೋರಾಡುತ್ತಿರುವವರಿಗೆ ಇದು ಒಂದು ರೀತಿಯಲ್ಲಿ ಗಟ್ಟಿ ಬೆಂಬಲ.

     ಐತಿಹಾಸಿಕವಾಗಿ ನೋಡುವುದಾದರೆ ಟೆನಿಸ್ ಆಟವೆಂದರೆ ಅದು ಪಾಶ್ಚಿಮಾತ್ಯ ದೇಶಗಳ ಆಟಗಾರರ ಸಂಪೂರ್ಣ ಹಕ್ಕು ಎಂದು ಭಾವಿಸುತ್ತಾರೆ. ಅದರಲ್ಲೂ ಮಹಿಳೆಯರು ಟೆನಿಸ್‌ನಲ್ಲಿ ಎಂದರೆ ಅದು ಕೇವಲ ಆಸ್ಟ್ರೇಲಿಯಾ, ಅಮೆರಿಕ, ಕೆನಡಾ ಮತ್ತು ಯುರೋಪಿನ ಕೆಲವು ದೇಶಗಳಿಗೆ ಮಾತ್ರ ಸೀಮಿತವಾಗಿದ್ದು ಎನ್ನುವ ಭಾವನೆ ಸಹ ಇದೆ. ಭಾರತದ ಯಾವುದೇ ಮಹಿಳೆ ವಿಶ್ವ ಟೆನಿಸ್ ರಂಗದಲ್ಲಿ ಅಷ್ಟೊಂದು ಸದ್ದು ಮಾಡಿರುವುದು ನೆನಪಿಲ್ಲ. ಇಂತಹವರ ಸಾಲಿಗೆ 2018ರಿಂದ ಒಂದು ಗಟ್ಟಿ ಟೆನಿಸ್ ಪ್ರತಿಭೆ ನವೋಮಿ ರೂಪದಲ್ಲಿ ಕಾಣಿಸಿಕೊಂಡಿದೆ. ಇನ್ನೂ 24 ಹರೆಯದಲ್ಲಿರುವ ತನ್ನ ಎದುರಾಳಿಗಳನ್ನು ಬಲವಾದ ಸರ್ವಿಸ್‌ಗಳಿಂದಲೇ ನವೋಮಿ ಸುಸ್ತು ಮಾಡುತ್ತಿದ್ದಾರೆ. ಈಗಾಗಲೇ ಮೂರು ಪ್ರತಿಷ್ಠಿತ ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಈ ಆಟಗಾರ್ತಿ ಪಡೆದಿದ್ದಾರೆ. ಜಗತ್ತಿನ ಜಾಹೀರಾತು ಪ್ರಪಂಚದ ಐಕಾನ್ ಆಗಿ ಮಿಂಚುತ್ತಿದ್ದಾರೆ. ವರ್ಣಭೇದ ನೀತಿಗೆ ಬಹಳಷ್ಟು ವರ್ಷಗಳ ಇತಿಹಾಸವಿದೆ. ಅದೇ ರೀತಿ ಹಲವಾರು ರಂಗಗಳಲ್ಲಿ ಮಿಂಚುತ್ತಿರುವ ಸೆಲೆಬ್ರಿಟಿಗಳು ವರ್ಣಭೇದ ನೀತಿ ವಿರುದ್ಧ ಬಹಳ ಸಂದರ್ಭಗಳಲ್ಲಿ, ಬಹಳಷ್ಟು ರೀತಿಯಲ್ಲಿ ತಮ್ಮ ಪ್ರತಿಭಟನೆಯನ್ನು ಸಲ್ಲಿಸಿದ್ದಾರೆ ಮತ್ತು ಇಂದಿಗೂ ವರ್ಣಭೇದ ನೀತಿ ವಿರುದ್ಧ ಹೋರಾಡುತ್ತಿದ್ದಾರೆ. ಇದು ಬಾಕ್ಸಿಂಗ್ ಮತ್ತು ಫುಟ್ಬಾಲ್‌ನಲ್ಲಿ ಈಗಾಗಲೇ ಕಂಡುಬಂದಿದೆ. ಇಲ್ಲಿ ನೆನಪಿಡಬೇಕಾದ ಒಂದು ವಿಚಾರವೆಂದರೆ ಸಾಮಾನ್ಯವಾಗಿ ಯಾವ ಸೆಲೆಬ್ರಿಟಿಗಳು ತಮ್ಮ ವೃತ್ತಿಪರ ಆಟವನ್ನು ಬಿಟ್ಟು ಬೇರೆ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅದರಲ್ಲೂ ರಾಜಕೀಯ ವಿಚಾರಗಳಿಗೆ ಅವರು ತಲೆಹಾಕುವುದಿಲ್ಲ. ಈ ರೀತಿ ರಾಜಕೀಯ ವಿಚಾರಗಳಿಗೆ ತಲೆ ಹಾಕಿದ ಹಲವಾರು ಪ್ರತಿಭಾವಂತ ಕ್ರೀಡಾಪಟುಗಳನ್ನು ಕೆಲವು ದೇಶಗಳ ಸರಕಾರಗಳು ಉದ್ದೇಶ ಪೂರ್ವಕವಾಗಿ ಅವರ ವೀಸಾವನ್ನು ತಡೆಹಿಡಿದು ಅವರು ವಿದೇಶಗಳಲ್ಲಿ ಯಾವುದೇ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದಿದ್ದ ಹಲವಾರು ಪ್ರಕರಣಗಳು ನಮ್ಮ ನಡುವೆ ಇನ್ನೂ ಹಸಿರಾಗಿದೆ. ಆದರೆ ಅದಕ್ಕೆಲ್ಲ ಅಪವಾದ ಎನ್ನುವಂತೆ ಜಪಾನಿನ ಈ ಟೆನಿಸ್ ಆಟಗಾರ್ತಿ ನಮ್ಮ ನಿಮ್ಮ ನಡುವೆ ನಿಲ್ಲುತ್ತಾರೆ.

ಹೈಟಿ ಮತ್ತು ಜಪಾನ್ ಮೂಲದ ದಂಪತಿಗೆ ಜನಿಸಿರುವ ನವೋಮಿ ಟೆನಿಸ್ ಆಟಕ್ಕಿಂತ ಹೆಚ್ಚಾಗಿ ಸದ್ಯ ಸಾಮಾಜಿಕ ಬದ್ಧತೆಯಿಂದ ಗುರುತಿಸಿಕೊಳ್ಳುತ್ತಿದ್ದಾರೆ. ಕೊರೋನದಿಂದ ಇಡೀ ವಿಶ್ವವೇ ತತ್ತರಿಸುತ್ತಿದ್ದು ಕ್ರೀಡಾರಂಗ ಅದಕ್ಕೆ ಹೊರತಲ್ಲ. ಇತ್ತೀಚಿನ ಒಂದು ಪಂದ್ಯದಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಆಡಬೇಕಾದ ಸಂದರ್ಭ ಬಂದಾಗ ಇತ್ತೀಚೆಗೆ ವರ್ಣಭೇದ ನೀತಿ ವಿರುದ್ಧ ಹೋರಾಡಿ ಪ್ರಾಣ ಕಳೆದುಕೊಂಡ ಆಫ್ರಿಕನ್ ಅಮೆರಿಕನ್ನರಾದ ಬ್ರೊನ್ನಾ ಟೇಲ ಎಲಿಜಾ ಮೆಕ್ಕ್ಲೇನ್, ಅಹ್ಮದ್ ಅರ್ಬೆರಿ, ಟ್ರೇವೊನ್ ಮಾರ್ಟಿನ್, ಜಾರ್ಜ್ ಫ್ಲಾಯ್ಡಾ, ಫಿಲಾಂಡೊ ಕ್ಯಾಸ್ಟೈಲ್ ಮತ್ತು ತಮಿರ್ ರೈಸ್ ಇವರ ಭಾವಚಿತ್ರಗಳು ಆಕೆಯ ಮಾಸ್ಕ್‌ನಲ್ಲಿ ಇದ್ದಿದ್ದನ್ನು ವಿಶ್ವ ಮೊದಲ ಬಾರಿ ಗಮನಿಸಿತು ಮತ್ತು ಚಕಿತಗೊಂಡಿತು. ಇದು ವರ್ಣಭೇದ ನೀತಿ ವಿರುದ್ಧ ಆಕೆ ವಿಶ್ವಕ್ಕೆ ತೋರಿದ ಒಂದು ಗಟ್ಟಿ ನಿರ್ಧಾರ ಎಂದು ಟೆನಿಸ್ ಪಂಡಿತರು ಹೇಳುತ್ತಾರೆ. ಇಷ್ಟಕ್ಕೆ ನಿಲ್ಲುವುದಿಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಈಕೆ ಅಮೆರಿಕದಲ್ಲಿ ವರ್ಣಭೇದ ನೀತಿಗೆ ಬಲಿಯಾದ ಜಾರ್ಜ್ ಫ್ಲಾಯ್ಡಾ ಸಂಬಂಧ ನಡೆದ ಹಲವಾರು ಪ್ರತಿಭಟನೆಗಳಲ್ಲಿ ಸ್ವತಹ ಭಾಗವಹಿಸಿದ್ದನ್ನು ಸಂಪೂರ್ಣ ವಿಶ್ವವೇ ಗಮನಿಸಿದೆ ಮತ್ತು ಮುಕ್ತವಾಗಿ ಬೆಂಬಲಿಸಿದೆ. ಅದಕ್ಕಿಂತ ಬಹಳ ಮುಖ್ಯವಾದದ್ದು 2020ರ ಸಿನ್ಸಿನಾಟಿ ಓಪನ್ ಟೆನಿಸ್ ಟೂರ್ನಮೆಂಟ್‌ನ ಸಮಯದಲ್ಲಿ ವರ್ಣಭೇದ ನೀತಿ ವಿರುದ್ಧ ಜಾಗತಿಕ ಅರಿವು ಮೂಡಿಸಲು ಅದರಲ್ಲೂ ಮುಖ್ಯವಾಗಿ ಜಾಕೋಬ್ ಬ್ಲೇಕ್ ಎಂಬ ಕಪ್ಪುವರ್ಣದ ವ್ಯಕ್ತಿಯ ಮೇಲಿನ ಪೊಲೀಸ್ ಶೂಟಿಂಗ್ ವಿರುದ್ಧ ತನ್ನ ಪ್ರತಿಭಟನೆಯನ್ನು ದಾಖಲಿಸಲು ನವೋಮಿ ಒಸಾಕ ಈ ಟೂರ್ನಿಯ ಸೆಮಿಫೈನಲ್ ಪಂದ್ಯದಿಂದ ಹೊರಗುಳಿಯಲು ಮುಂದಾಗಿದ್ದರು.

ಈಕೆಯ ಸಾಮಾಜಿಕ ಬದ್ಧತೆಯನ್ನು ಗಮನಿಸಿದ ಟೆನಿಸ್ ವೃತ್ತಿಪರರ ಅಸೋಸಿಯೇಷನ್ (ಎಟಿಪಿ), ಮಹಿಳಾ ಟೆನಿಸ್ ಅಸೋಸಿಯೇಷನ್ (ಡಬ್ಲ್ಯುಟಿಎ), ನ್ಯಾಷನಲ್ ಬಾಸ್ಕೆಟ್ ಬಾಲ್ ಅಸೋಸಿಯೇಷನ್, ಮಹಿಳಾ ಮೇಜರ್ ಲೀಗ್ ಬೇಸ್ ಬಾಲ್ ಮತ್ತು ಸಾಕರ್ ಅಸೋಸಿಯೇಷನ್ ಈಕೆಯ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡಿತ್ತು. ವಿಶ್ವದ ಸುದ್ದಿವಾಹಿನಿಗಳು ಇದಕ್ಕೆ ಪ್ರಾಮುಖ್ಯತೆ ನೀಡಿದವು. ಇದನ್ನು ಗಮನಿಸಿದ ಸಿನ್ಸಿನಾಟಿ ಓಪನ್ಸ್ ಆಯೋಜಕರು ಎಲ್ಲಾ ಪಂದ್ಯಗಳನ್ನು ಒಂದು ದಿನದ ಮಟ್ಟಿಗೆ ಆಕೆಗಾಗಿ ರದ್ದುಗೊಳಿಸಿದ್ದು ವಿಶೇಷವಾಗಿತ್ತು. ಇದು ನವೋಮಿ ಒಸಾಕ ಅವರ ಚಳವಳಿಗೆ ಹೆಚ್ಚಿನ ಗಮನವನ್ನು ಮತ್ತು ಗಂಭೀರತೆಯನ್ನು ತಂದಿತು. ವಿಶ್ವದ ಕೆಲವು ವರ್ಣಭೇದ ನೀತಿ ವಿರುದ್ಧ ಹೋರಾಡುತ್ತಿರುವ ಸರಕಾರೇತರ ಸಂಸ್ಥೆಗಳೊಂದಿಗೆ ಈ ಆಟಗಾರ್ತಿ ಚಟುವಟಿಕೆಯಿಂದ ಗುರುತಿಸಿಕೊಂಡಿದ್ದಾಳೆ. ‘ಬ್ಲಾಕ್ ಲೈವ್ ಮ್ಯಾಟರ್’ ಎಂಬ ಪ್ರಸಿದ್ಧ ಅಂತರ್‌ರಾಷ್ಟ್ರೀಯ ಸರಕಾರೇತರ ಸಂಸ್ಥೆಗೆ ಈಕೆ ಸದಸ್ಯೆ ಕೂಡ. ಜಪಾನ್‌ನಲ್ಲಿ ವರ್ಣಭೇದ ನೀತಿ ವಿರುದ್ಧ ಅರಿವು ಮೂಡಿಸುವ ಕೆಲವು ಜಾಹೀರಾತು ಮತ್ತು ಟಿವಿ ಶೋಗಳಲ್ಲಿ ಈಕೆ ಭಾಗವಹಿಸಿದ್ದಾರೆ.

ಜಪಾನಿನ ಹೆಣ್ಣುಮಕ್ಕಳ ಪ್ರತಿನಿಧಿ ಆಗಿದ್ದಾರೆ ಎನ್ನಬಹುದು. ಈಗಾಗಲೇ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಈ ಆಟಗಾರ್ತಿ ಆಟ ಮತ್ತು ಜಾಹೀರಾತುಗಳಿಂದ ಕೋಟ್ಯಂತರ ಹಣವನ್ನು ಸಂಪಾದಿಸಿದ್ದಾರೆ. ತನ್ನ ಆದಾಯದ ಒಂದು ಭಾಗವನ್ನು ವಿಶ್ವದ ಇಂತಹ ಹಲವಾರು ಸಂಸ್ಥೆಗಳಿಗೆ ಆಕೆ ಮಾನವೀಯ ದೃಷ್ಟಿಯಿಂದ ದಾನ ನೀಡುತ್ತಿದ್ದಾರೆ. ವರ್ಣಭೇದ ನೀತಿ ವಿರುದ್ಧ ಹೋರಾಡುತ್ತಿರುವ ಮತ್ತು ದಾನ ನೀಡುವ ಅಂತರ್‌ರಾಷ್ಟ್ರೀಯ ಕಂಪೆನಿಗಳಿಗೆ ಉಚಿತವಾಗಿ ಮಾಡಲ್ ಆಗಿದ್ದಾರೆ. ಆ ಮೂಲಕ ತನ್ನ ಗಟ್ಟಿ ಸೈದ್ಧಾಂತಿಕ ನಿಲುವನ್ನು ದಾಖಲಿಸಿದ್ದಾರೆ. ಜಪಾನಿನಲ್ಲಿ ನಡೆದ ಕೆಲವೊಂದು ಪರಿಸರ ಸಂಬಂಧಿತ ಹೋರಾಟದಲ್ಲಿ ಭಾಗವಹಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಕೊರೋನ ಸಮಯದಲ್ಲಿ ಜಪಾನಿನಲ್ಲಿ ಉಂಟಾದ ಸಮಸ್ಯೆಗಳು ಮತ್ತು ಅದಕ್ಕೆ ಆಕೆ ಸ್ಪಂದಿಸಿದ ರೀತಿ ಶ್ಲಾಘನೀಯ. ಅಷ್ಟೇ ಅಲ್ಲದೆ ಜಪಾನಿನ ಮತ್ತು ವಿಶ್ವದ ಕೆಲವು ಪತ್ರಿಕೆಗಳಿಗೆ ವರ್ಣಭೇದ ನೀತಿ ಮತ್ತು ತಾರತಮ್ಯದ ವಿರುದ್ಧ ಈಕೆ ಲೇಖನಗಳನ್ನು ಬರೆಯುತ್ತಿರುವುದನ್ನು ಪಂಡಿತರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ತನ್ನ ಹರಿತವಾದ ಭಾಷೆಯಿಂದ ವರ್ಣಭೇದ ನೀತಿ ವಿರುದ್ಧ ಆಕೆ ತನ್ನದೇ ಆದ ಪ್ರತಿಭಟನೆಯನ್ನು ಈ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ನ್ಯಾಯಕ್ಕಾಗಿ ಧ್ವನಿಯ ಪ್ರತಿಪಾದಕರಾದ ವಿಶ್ವ ಮಟ್ಟದ ಬಾಸ್ಕೆಟ್ ಬಾಲ್ ತಾರೆಗಳಾದ ಲೆಬ್ರಾನ್ ಜೇಮ್ಸ್ ಮತ್ತು ಕೋಬ್ ಬ್ರ್ಯಾಂಟ್(ಹೆಲಿಕ್ಯಾಪ್ಟರ್ ಅಫಘಾತದಲ್ಲಿ ಇತ್ತೀಚೆಗೆ ಮೃತ ಪಟ್ಟಿದ್ದಾರೆ) ಅವರಂತಹ ಮಾರ್ಗದರ್ಶಕರನ್ನು ನವೋಮಿ ಕಂಡುಕೊಂಡಿದ್ದಾರೆ. ಅಲ್ಲದೆ ನವೋಮಿ ಒಸಾಕ ಅವರು ಕ್ರೀಡಾಲೋಕದಲ್ಲಿ ಏಶ್ಯದ ಆಟಗಾರರ ಕುರಿತು ಪಾಶ್ಚಿಮಾತ್ಯ ದೇಶಗಳಲ್ಲಿ ಅನುಸರಿಸುವ ವರ್ಣಭೇದ ನೀತಿ ಕುರಿತು ಚೀನಾದ ಕೆಲವು ಪ್ರಮುಖ ಕ್ರೀಡಾ ತಾರೆಗಳೊಂದಿಗೆ ಪ್ರತಿಭಟಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ರೀತಿ ವರ್ಣಭೇದ ನೀತಿಯ ವಿರುದ್ಧ ಹೋರಾಡಲು ಸ್ವಯಂ ಸೇವಾ ಸಂಸ್ಥೆಗಳಿಗೆ ಸಹಾಯ ಮಾಡಲು ದಾನಿಗಳಿಂದ ಹಣ ಸಂಗ್ರಹಿಸುವ ಕೆಲಸದಲ್ಲಿ ಈಕೆ ತೊಡಗಿಕೊಂಡಿದ್ದಾರೆ.

ವಿಶ್ವದ ಯಾವುದೇ ಭಾಗದಲ್ಲಿ ವರ್ಣಭೇದ ನೀತಿ ವಿರುದ್ಧ ನಡೆಯುವ ಹೋರಾಟ ಅಥವಾ ಚಳವಳಿಗಳಿಗೆ ಇವರು ತಮ್ಮದೇ ಖರ್ಚಿನಲ್ಲಿ ಭಾಗವಹಿಸುವುದು ವಿಶೇಷ. ಇವರ ಹೋರಾಟಕ್ಕೆ ವಿಶ್ವದಲ್ಲಿ ಎಷ್ಟು ಬೆಂಬಲವಿದೆಯೋ ಕೆಲವರು ಅದನ್ನು ಅಷ್ಟೇ ವಿರೋಧಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.ಆಸ್ಟ್ರೇಲಿಯನ್ ಓಪನ್ ಟೆನಿಸ್ ಆಟದ ಸಮಯದಲ್ಲಿ ಪಂದ್ಯ ವೀಕ್ಷಣೆ ಮಾಡುತ್ತಿದ್ದ ಕೆಲವರು ಈಕೆಯ ಘನತೆಯನ್ನು ಕಡಿಮೆ ಮಾಡುವಂತಹ ಬರಹಗಳ ಪ್ಲೇಕಾರ್ಡನ್ನು ಹಿಡಿದುಕೊಂಡಿದ್ದರು. ಇದನ್ನು ಗಮನಿಸಿದ ನವೋಮಿ ನೀವು ನಿಮ್ಮ ನಡುವಳಿಕೆಯನ್ನು ಸರಿಪಡಿಸಿಕೊಳ್ಳಬೇಕು ಎನ್ನುವ ಸೂಚನೆಯನ್ನು ಆಟದ ಮೈದಾನದಲ್ಲೇ ನೀಡಿದ್ದರು. ಇದೇ ರೀತಿ ಅಮೆರಿಕದಲ್ಲಿ ನಡೆದಿದ್ದ ಕೆಲವೊಂದು ಪಂದ್ಯಗಳಿಗೂ ಸಹ ಆಯೋಜಕರ ನಿಯಂತ್ರಣ ತಪ್ಪಿ ಕೆಲವರು ಕೀಳು ಭಾಷೆಯ ಪ್ಲೇಕಾರ್ಡನ್ನು ತೋರಿಸಿದ್ದು ನಿಜಕ್ಕೂ ಬೇಸರದ ಸಂಗತಿ. ವರ್ಣಭೇದ ನೀತಿ ವಿರುದ್ಧ ಅಂತಹ ದೊಡ್ಡ ವಿಚಾರದಲ್ಲಿ ಹೋರಾಡುತ್ತಿರುವ ಸಮಯದಲ್ಲಿ ಇಂತಹ ಬೆಳವಣಿಗೆಗಳು ತೀರಾ ಅಸಹನೀಯ ಮತ್ತು ಆಶ್ಚರ್ಯಕರ ಎನ್ನುವುದು ನವೋಮಿ ಅಭಿಪ್ರಾಯ.

ಜಗತ್ತಿನಲ್ಲಿ ಆಗುತ್ತಿರುವ ಕ್ಷಿಪ್ರ ಬದಲಾವಣೆಗಳು ನವೋಮಿಯ ಸಾಮಾಜಿಕ ಜಾಗೃತಿಯನ್ನೂ ಹೆಚ್ಚಿಸಿದೆ. ನವೋಮಿ ಕೇವಲ ಟೆನಿಸ್ ಆಟದಲ್ಲಿ ಮಾತ್ರ ಮುಂದೆ ಇಲ್ಲ. ತನ್ನ ಆಟದ ಜಾಗತಿಕತೆಯನ್ನು ಬಳಸಿಕೊಂಡು ವಿಶ್ವದಲ್ಲಿ ವರ್ಣಭೇದ ನೀತಿ ವಿರುದ್ಧ ತನ್ನದೇ ಆದ ರೀತಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಕೇವಲ ಹಣ, ಅಂತಸ್ತು, ಅಭಿಮಾನಿ ಬಳಗ, ಕುಟುಂಬ, ಟೂರ್ನಮೆಂಟ್ ಮತ್ತು ಸಾಮಾಜಿಕ ಪ್ರತಿಷ್ಠೆಗಳಿಗೆ ಅಂಟಿಕೊಳ್ಳದೆ, ಎಲ್ಲವನ್ನು ಸಹ ಈಕೆ ಸಂಭಾಳಿಸಿಕೊಂಡು ಹೋಗುತ್ತಿರುವುದನ್ನು ಎಲ್ಲರೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

Writer - ಡಾ. ಡಿ.ಸಿ. ನಂಜುಂಡ

contributor

Editor - ಡಾ. ಡಿ.ಸಿ. ನಂಜುಂಡ

contributor

Similar News