ಹವಾಮಾನ ಬದಲಾವಣೆ; ಭಾರತದ ಜಿಡಿಪಿಗೆ ಶೇಕಡ 10ರಷ್ಟು ಹೊಡೆತ: ವರದಿ

Update: 2021-10-28 04:45 GMT
ಫೈಲ್ ಫೋಟೊ 

ಹೊಸದಿಲ್ಲಿ: ಹವಾಮಾನ ಬದಲಾವಣೆಯ ಪರಿಣಾಮಗಳು ತೀವ್ರಗುವ ಕಾರಣದಿಂದ ಭಾರತದ ಜಿಡಿಪಿಗೆ ಶೇಕಡ 10ರಷ್ಟು ಹೊಡೆತ ಬೀಳಲಿದೆ ಎಂದು ಹೊಸ ಹವಾಮಾನ ಪರಿಣಾಮ ವರದಿ ಅಂದಾಜಿಸಿದೆ. ರೋಮ್‌ನಲ್ಲಿ ನಡೆಯುವ ಜಿ-20 ಶೃಂಗಕ್ಕೆ ಪೂರ್ವಭಾವಿಯಾಗಿ ಬಿಡುಗಡೆ ಮಾಡಲಾದ ವರದಿಯ ಪ್ರಕಾರ, ಅಮೆರಿಕ, ಸೌದಿ ಅರೇಬಿಯಾ, ಜಪಾನ್ ಮತ್ತು ದಕ್ಷಿಣ ಕೊರಿಯಾದ ಜಿಡಿಪಿಗೆ ಕೂಡಾ ಶೇಕಡ 10ಕ್ಕಿಂತ ಅಧಿಕ ಹೊಡೆತ ಬೀಳಲಿದೆ.

ಜಿಎಂಸಿಸಿಯ 40ಕ್ಕೂ ಹೆಚ್ಚು ಸಂಶೋಧಕರ ತಂಡ ಈ ಅಧ್ಯಯನ ನಡೆಸಿದ್ದು, ಹವಾಮಾನ ಬದಲಾವಣೆ ಈಗಾಗಲೇ ಜಿ-20 ದೇಶಗಳಿಗೆ ಹೊಡೆತ ನೀಡುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಕಳೆದ 20 ವರ್ಷಗಳಲ್ಲಿ ಜಿ-20 ದೇಶಗಳಲ್ಲಿ ಉಷ್ಣ ಸಂಬಂಧಿ ಸಾವುಗಳು ಶೇಕಡ 15ರಷ್ಟು ಹೆಚ್ಚಿವೆ. ಅಂತೆಯೇ ಕಾಳ್ಗಿಚ್ಚು ಕೆನಡಾದ ಗಾತ್ರದ ಒಂದೂವರೆ ಪಟ್ಟು ಗಾತ್ರದಷ್ಟು ಅರಣ್ಯವನ್ನು ಆಹುತಿ ಪಡೆದಿದೆ ಎಂದು ವರದಿ ವಿವರಿಸಿದೆ.

ಜಿ-20 ದೇಶಗಳು 2050ರ ಒಳಗಾಗಿ ಶೇಕಡ 4ರಷ್ಟು ಹಾಗೂ 2100ರ ಒಳಗಾಗಿ ಶೇಕಡ 8ರಷ್ಟು ಜಿಡಿಪಿ ಕಳೆದುಕೊಳ್ಳಲಿವೆ. ಹೊಗೆಯುಗುಳುವಿಕೆ ಅತ್ಯಧಿಕ ಪ್ರಮಾಣದಲ್ಲೇ ಮುಂದುವರದಿದರೆ (4 ಡಿಗ್ರಿ ಸೆಲ್ಷಿಯಸ್) 2036-2065ರ ಅವಧಿಯಲ್ಲಿ ಉಷ್ಣಗಾಳಿ 25 ಪಟ್ಟು ಸುಧೀರ್ಘವಾಗಲಿದೆ. ಜಾಗತಿಕ ತಾಪಮಾನ 2 ಡಿಗ್ರಿಯಷ್ಟು ಹೆಚ್ಚಿದರೆ ಐದು ಪಟ್ಟು ಸುದೀರ್ಘವಾಗಲಿದೆ ಎಂದು ಹೇಳಲಾಗಿದೆ.

ಹೊಗೆಯುಗುಳುವಿಕೆ ಅಧಿಕ ಮಟ್ಟದಲ್ಲೇ ಇದ್ದರೆ ಭಾರತದಲ್ಲಿ 1.8 ಕೋಟಿ ಮಂದಿ 2050ರ ವೇಳೆಗೆ ನದಿಗಳ ಪ್ರವಾಹಕ್ಕೆ ತುತ್ತಾಗಲಿದ್ದಾರೆ. ಪ್ರಸ್ತುತ ದೇಶದಲ್ಲಿ 13 ಲಕ್ಷ ಮಂದಿ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News